ಸಚಿವ ಎಂ ಜೆ ಅಕ್ಬರ್ ಮೇಲೆ ಲೈಂಗಿಕ ಲಂಪಟತನ ಪ್ರದರ್ಶಿಸಿದ ಮತ್ತೊಂದು ಆರೋಪ

‘ಫೋರ್ಸ್‌’ ಮ್ಯಾಗಜೀನ್‌ನ ಕಾರ್ಯಕಾರಿ ಸಂಪಾದಕಿ ಗಜಾಲಾ ವಹಾಬ್ ವೃತ್ತಿಜೀವನದ ಆರಂಭದ ದಿನಗಳಲ್ಲಿ ಎಂ ಜೆ ಅಕ್ಬರ್ ಸಂಪಾದಕರಾಗಿದ್ದ ‘ಏಷ್ಯನ್ ಏಜ್’ನಲ್ಲಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯವನ್ನು ‘ದಿ ವೈರ್‌’ನಲ್ಲಿ ಬರೆದಿದ್ದಾರೆ. ಆ ಲೇಖನದ ಭಾವಾನುವಾದ

#MeToo ಅಭಿಯಾನ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ೬ರಂದು ನಾನು ಟ್ವೀಟ್ ಮಾಡಿ, “ಎಂ ಜೆ ಅಕ್ಬರ್ ವಿಚಾರವಾಗಿ ಇನ್ನೂ ಯಾರೂ ಯಾಕೆ ಏನೂ ಬರೆದುಕೊಂಡಿಲ್ಲ” ಎಂದು ಹೇಳಿದ್ದೆ. ತಕ್ಷಣವೇ ೧೯೯೪ರಲ್ಲಿ ಎಂ ಜೆ ಅಕ್ಬರ್ ಸಂಪಾದಕರಾಗಿದ್ದ ‘ಏಷ್ಯನ್ ಏಜ್‌’ನಲ್ಲಿ ನಾನು ಇಂಟರ್ನ್ ಆಗಿ ಸೇರಿದ ಸಂದರ್ಭದ ನನ್ನ ಸ್ನೇಹಿತರು, ಮಾಜಿ ಸಹೋದ್ಯೋಗಿಗಳು ನನ್ನನ್ನು ಸಂಪರ್ಕಿಸಿದ್ದರು. “ನಿಮ್ಮ ಅಕ್ಬರ್ ಕತೆಯನ್ನು ಏಕೆ ನೀವು ಬರೆಯಬಾರದು” ಎಂದು ನನ್ನನ್ನು ಒತ್ತಾಯಿಸಿದರು. ಎರಡು ದಶಕಗಳ ಹಿಂದಿನ ವಿವರಗಳನ್ನು ಬರೆದುಕೊಳ್ಳುವುದು ಗೌರವಯುತ ಕೆಲಸವೇ ಎಂದು ನಾನು ಯೋಚಿಸುತ್ತಿದ್ದೆ. ಆದರೆ ಸಂದೇಶಗಳು ಪದೇ ಪದೇ ಈ ಬಗ್ಗೆ ಕೇಳಲರಾಂಭಿಸಿದಾಗ ನಾನು ಸ್ವಲ್ಪ ಆಲೋಚಿಸಿದೆ.

ವಾರಾಂತ್ಯದಲ್ಲಿ ನಾನು ಎಂ ಜೆ ಅಕ್ಬರ್ ಅಧಿಕಾರಾವಧಿಯಲ್ಲಿ ಎದುರಿಸಿದ ಬರ್ಬರ ಆರು ತಿಂಗಳನ್ನು ಮತ್ತೆ ನೆನಪಿಸಿಕೊಂಡೆ. ನಾನು ಬಹಳ ಹಿಂದೆ ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ಅಡಗಿಸಿಟ್ಟ ಈ ವಿವರಗಳು ಮತ್ತೆ ನೆನಪಿಸಿಕೊಳ್ಳುವಾಗ ಮೈ ಜುಮ್ಮೆಂದಿತ್ತು. ಕೆಲವು ವಿವರಗಳನ್ನು ಬರೆಯುವಾಗ ನನ್ನ ಕಣ್ಣಾಲಿಗಳು ಒದ್ದೆಯಾಗಿದ್ದವು. ನಾನು ಸ್ವತಃ ಸಂತ್ರಸ್ತೆ ಎಂದು ಕರೆದುಕೊಳ್ಳುವುದಿಲ್ಲ, 1997ರ ಆ ಆರು ತಿಂಗಳು ನನ್ನ ಜೀವನದಲ್ಲಿ ಅತೀ ಕಡಿಮೆ ಪ್ರಾಮುಖ್ಯತೆ ಕೊಡುವ ಕ್ಷಣಗಳು. ಅದು ನನ್ನ ವ್ಯಕ್ತಿತ್ವವನ್ನು ಯಾವುದೇ ರೀತಿಯಲ್ಲಿಯೂ ವಿವರಿಸುವುದಿಲ್ಲ. ಹೀಗಾಗಿ ನಾನು ಟ್ವೀಟ್‌ನಲ್ಲಿ ಮತ್ತೇನೂ ಹೇಳಲು ಬಯಸಲಿಲ್ಲ. ಅದೊಂದು ರೀತಿಯಲ್ಲಿ, ನಾವು ಆದರ್ಶವೆಂದು ತಿಳಿದ ವ್ಯಕ್ತಿಯಲ್ಲಿ ಪ್ರಾಣಿಗಳಲ್ಲಿ ಕಾಣುವ ಮೂಲ ಗುಣಗಳು ಇದ್ದವು ಮತ್ತು ಅದನ್ನು ಜಗತ್ತಿಗೆ ಹೇಳುವ ಮತ್ತೊಬ್ಬ ವ್ಯಕ್ತಿ ನಾನಾಗಲು ಬಯಸಲಿಲ್ಲ. ಆದರೆ ನನ್ನ ಮೇಲೆ ಸ್ನೇಹಿತರಿಂದ ಒತ್ತಡಗಳು ಹೆಚ್ಚಾದವು. ನಾನು ಈ ವಿವರಗಳನ್ನು ಬಹಿರಂಗಪಡಿಸುವುದರಿಂದ ಇತರರೂ ತಮ್ಮ ಅನುಭವ ಹೇಳಿಕೊಳ್ಳಲು ಪ್ರೇರಣೆಯಾಗಬಹುದು ಎಂದು ಕೆಲವರು ಸಲಹೆ ನೀಡಿದರು. ಹೀಗಾಗಿ, ನನ್ನ ಕತೆ ಇಲ್ಲಿದೆ.

೧೯೮೯ರಲ್ಲಿ ನಾನು ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾಗ ನನ್ನ ತಂದೆ ಎಂಜೆ ಅಕ್ಬರ್ ಬರೆದ ‘ರಯಟ್ ಆಫ್ಟರ್ ರಯಟ್’ ಎನ್ನುವ ಪುಸ್ತಕದ ಪ್ರತಿಯನ್ನು ಕೊಟ್ಟಿದ್ದರು. ನಾನು ಅದನ್ನು ಓದಲು ಎರಡು ದಿನಗಳನ್ನು ತೆಗೆದುಕೊಂಡಿದ್ದೆ. ನಂತರ ನಾನು ‘ಇಂಡಿಯಾ ದ ಸೀಜ್ ವಿತಿನ್: ಚಾಲೆಂಜಸ್ ಟು ಎ ನೇಷನ್, ಯುನಿಟಿ ಮತ್ತು ‘ನೆಹರು: ದ ಮೇಕಿಂಗ್ ಆಫ್ ಇಂಡಿಯಾ’ ಪುಸ್ತಕವನ್ನು ಓದಿದೆ. ಹೀಗಾಗಿ ನಾನು ‘ಫ್ರೀಡಂ ಅಟ್ ಮಿಡ್‌ನೈಟ್, ‘ಓ ಜೆರುಸಲೇಮ್’ ಮತ್ತು ‘ಈಸ್ ಪ್ಯಾರಿಸ್ ಬರ್ನಿಂಗ್’ ಪುಸ್ತಕವನ್ನು ಬದಿಗೆ ಸರಿಸಿದೆ. ನನಗೆ ಹೊಸ ಅಚ್ಚುಮೆಚ್ಚಿನ ಲೇಖಕ ಸಿಕ್ಕಿದ್ದರು.

ನಾನು ಪತ್ರಕರ್ತೆಯಾಗಲು ಬಯಸುವುದಕ್ಕಿಂತ ಮೊದಲೇ ಅಕ್ಬರ್ ಅವರ ಪುಸ್ತಕಗಳಿಂದಾಗಿ ಬರವಣಿಗೆಗಳು ಗೊತ್ತಿದ್ದವು ಮತ್ತು ಪತ್ರಿಕೋದ್ಯಮ ಆಸಕ್ತಿಯಿಂದ ಪ್ಯಾಶನ್ ಆಗಿ ಬದಲಾಯಿತು. ಹೀಗಾಗಿ ನನ್ನ ಗುರಿಯನ್ನು ಕಣ್ಣ ಮುಂದಿಟ್ಟು ಪ್ರೌಢ ಶಿಕ್ಷಣ ಮುಗಿದ ಮೇಲೆ ಪತ್ರಿಕೋದ್ಯಮದ ಪದವಿ ಪಡೆಯಲು ಸೇರಿಕೊಂಡೆ. ೧೯೯೪ರಲ್ಲಿ ದೆಹಲಿಯ ‘ದಿ ಏಷ್ಯನ್ ಏಜ್‌’ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಾಗ ಪತ್ರಿಕೋದ್ಯಮದ ಬಗ್ಗೆ ಉತ್ತಮ ಕಲಿಕೆಗಾಗಿ ಅದೃಷ್ಟವೇ ಇಲ್ಲಿಗೆ ಕರೆ ತಂದಿದೆ ಎಂದುಕೊಂಡಿದ್ದೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಭಾರತೀಯ ಮಾಧ್ಯಮದ #MeTooಗೆ ಕೇಂದ್ರ ಸಚಿವ ಅಕ್ಬರ್ ಹೆಸರು ಸೇರ್ಪಡೆ

ಆದರೆ ಕಲಿಕೆ ಪಕ್ಕಕ್ಕಿಟ್ಟು ಬಿಡೋಣ. ನನ್ನ ಭ್ರಮೆಯೆಲ್ಲವೂ ಕಳೆದು ಹೋಯಿತು. ಅಕ್ಬರ್ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾ ಹೋದರು. ಬಹಳ ಹಗುರವಾಗಿ ನಡೆದುಕೊಳ್ಳುತ್ತಿದ್ದರು. ಅವರು ಕಚೇರಿಯಲ್ಲಿ ಕಿರುಚುತ್ತಿದ್ದರು, ಕುಡಿಯುತ್ತಿದ್ದರು. ನೀನು ಸಣ್ಣ ಪಟ್ಟಣದ ಹುಡುಗಿ ಎಂದು ನನ್ನ ಸಹೋದ್ಯೋಗಿಯೊಬ್ಬರು ನನಗೆ ಹೇಳಿದ್ದರು. ಹೀಗಾಗಿ ನಾನು ನನ್ನ ಸಣ್ಣ ಪಟ್ಟಣದ ಮನಸ್ಸನ್ನು ನುಂಗಿಕೊಂಡೆ ಮತ್ತು ಎಲ್ಲವನ್ನೂ ಕಚೇರಿಯ ಸಂಸ್ಕೃತಿ ಎಂದುಕೊಂಡು ಒಪ್ಪಿಕೊಂಡೆ. ಅಕ್ಬರ್‌ ಯುವ ಉಪಸಂಪಾದಕರ ಜೊತೆಗೆ ಲಲ್ಲೆಗರೆಯುವುದು, ಸ್ಪಷ್ಟವಾಗಿ ಕಾಣುವಂತೆ ತಾರತಮ್ಯ ತೋರುವುದು ಮತ್ತು ಕೆಟ್ಟ ತಮಾಷೆಗಳನ್ನು ಸಹಿಸಿದೆ. ಏಷ್ಯನ್ ಏಜ್‌ನ ದೆಹಲಿ ಕಚೇರಿಯನ್ನು ಜನರು ಅಕ್ಬರ್‌ನ ‘ಹರೇಂ’ (ಪತ್ನಿಯರ ಕೋಣೆ) ಎಂದು ಕರೆಯುತ್ತಿರುವುದನ್ನೂ ಕೇಳಿದೆ. ಅಲ್ಲಿ ಬಹಳಷ್ಟು ಚಿಕ್ಕ ವಯಸ್ಸಿನ ಯುವಕರು ಮತ್ತು ಯುವತಿಯರು ಕೆಲಸ ಮಾಡುತ್ತಿದ್ದರು. ಉಪ ಸಂಪಾದಕರು/ ವರದಿಗಾರರ ಜೊತೆಗೆ ಅಕ್ಬರ್‌ನ ಪ್ರೇಮ ಸಲ್ಲಾಪಗಳು ಮತ್ತು ವ್ಯವಹಾರಗಳ ಬಗ್ಗೆಯೂ ಆಗಾಗ್ಗೆ ಕೇಳಿ ಬರುತ್ತಿತ್ತು. ಏಷ್ಯನ್‌ ಏಜ್‌ನ ಪ್ರತೀ ಪ್ರಾದೇಶಿಕ ಕಚೇರಿಯಲ್ಲಿ ಅವರಿಗೆ ಒಬ್ಬ ಮಹಿಳಾ ಸಂಗಾತಿ ಇದ್ದರು ಎನ್ನುವುದನ್ನೂ ಕೇಳಿದ್ದೆ. ಈ ಕಚೇರಿ ಸಂಸ್ಕೃತಿಗೆ ಅಳವಡಿಸಿಕೊಳ್ಳುವುದು ನನಗೆ ಬಹಳ ಕಷ್ಟವಾಗಿತ್ತು. ಆದರೆ ನನ್ನ ಮೇಲೆ ಅವರು ಹೆಚ್ಚು ಗಮನಕೊಡದಿದ್ದ ಕಾರಣ ನನಗೆ ಬಿಸಿ ತಟ್ಟಲಿಲ್ಲ.

ಏಷ್ಯನ್ ಏಜ್‌ಗೆ ಸೇರಿ ಮೂರು ವರ್ಷವಾಗುತ್ತಾ ಬಂದಾಗ ಈ ಕಚೇರಿ ಸಂಸ್ಕೃತಿಯ ಬಿಸಿ ನನಗೂ ತಗಲಿತು. ಆತನ ಕಣ್ಣು ನನ್ನ ಮೇಲೆ ಬಿತ್ತು. ನನ್ನ ದುಸ್ವಪ್ನ ಆರಂಭವಾಯಿತು. ನನ್ನ ಡೆಸ್ಕ್ ಅನ್ನು ಅವರ ಕ್ಯಾಬಿನ್‌ ಪಕ್ಕಕ್ಕೇ ಬದಲಿಸಲಾಯಿತು. ಅವರ ಡೆಸ್ಕ್‌ಗೆ ನೇರ ಎದುರು ನಾನು ಕುಳಿತುಕೊಳ್ಳುತ್ತಿದ್ದೆ. ಹಾಗೆ, ಅವರು ತಮ್ಮ ಕೋಣೆಯ ಬಾಗಿಲನ್ನು ಸ್ವಲ್ಪವೇ ತೆರೆದಿಟ್ಟರೂ ನನಗೆ ಅವರ ಮುಖ ಕಾಣುತ್ತಿತ್ತು. ಅವರು ತಮ್ಮ ಡೆಸ್ಕ್‌ನಲ್ಲಿ ಕುಳಿತು ಸದಾ ನನ್ನ ಮೇಲೆ ಕಣ್ಣಿಡುತ್ತಿದ್ದರು. ಆಗಾಗ್ಗೆ ಏಷ್ಯನ್ ಏಜ್ ಇಂಟ್ರಾನೆಟ್ ನೆಟ್ವರ್ಕ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು. ನಂತರ ನನ್ನ ಅಸಹಾಯಕತೆಯನ್ನು ಬಳಸಿಕೊಂಡು ತಮ್ಮ ಕೋಣೆಗೆ ಕರೆಯುತ್ತಿದ್ದರು. ನಾನು ಒಳಗೆ ಹೋಗುತ್ತಲೇ ಕೋಣೆಯ ಬಾಗಿಲು ಮುಚ್ಚಿರುತ್ತಿತ್ತು. ಸಂಭಾಷಣೆ ಸದಾ ಖಾಸಗಿಯಾಗಿರುತ್ತಿತ್ತು. ನನ್ನ ಕುಟುಂಬದ ಹಿನ್ನೆಲೆ ಮತ್ತು ದೆಹಲಿಯಲ್ಲಿ ನಾನು ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಏಕಾಂಗಿಯಾಗಿ ಹೇಗೆ ಜೀವನ ನಡೆಸುತ್ತಿದ್ದೇನೆ ಎನ್ನುವ ವಿವರದ ಸುತ್ತ ಮಾತುಕತೆ ಇರುತ್ತಿತ್ತು.

ಕೆಲವೊಮ್ಮೆ, ಆತ ತನ್ನ ವಾರದ ಅಂಕಣವನ್ನು ಬರೆಯುವಾಗ ನನ್ನನ್ನು ಎದುರು ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಅವರಿಗೆ ಶಬ್ದಕೋಶದಿಂದ ಏನಾದರೂ ಶಬ್ದಗಳ ಅಗತ್ಯವಿದ್ದರೆ ನಾನು ನೆರವು ನೀಡಬೇಕಾಗಿತ್ತು. ಆ ಶಬ್ದಕೋಶ ಕ್ಯಾಬಿನ್‌ನ ಮತ್ತೊಂದು ತುದಿಯಲ್ಲಿದ್ದ ಸಣ್ಣ ಮಣೆಯಂತಹ ಕುರ್ಚಿಯ ಮೇಲೆ ಇತ್ತು. ಅದರ ಬಳಿಗೆ ಹೋಗಿ ಪರಿಶೀಲಿಸುವ ಬಳಿ ನನ್ನನ್ನು ಪರಿಶೀಲಿಸುವಂತೆ ಹೇಳುತ್ತಿದ್ದರು. ಆ ಶಬ್ದಕೋಶವನ್ನು ತೆಗೆದುಕೊಳ್ಳಬೇಕಾದರೆ ಅಕ್ಬರ್‌ಗೆ ಬೆನ್ನು ಮಾಡಿ ಬಾಗಬೇಕಿತ್ತು ಅಥವಾ ಮೊಣಕಾಲಿನಲ್ಲಿ ಕುಳಿತು ತೆಗೆದುಕೊಳ್ಳಬೇಕಾಗಿತ್ತು. ಒಮ್ಮೆ ೧೯೯೭ರಲ್ಲಿ ಹಾಗೆ ನಾನು ಅರ್ಧ ಕುಳಿತು ಶಬ್ದಕೋಶದಲ್ಲಿ ಹುಡುಕುತ್ತಿದ್ದಾಗ ಆತ ನನ್ನ ಹಿಂದೆ ಬಂದು ಸೊಂಟವನ್ನು ಹಿಡಿದುಕೊಂಡರು. ನಾನು ಭಯಗೊಂಡು ಎದ್ದು ನಿಲ್ಲಲು ಪ್ರಯತ್ನಪಟ್ಟೆ. ಆತ ತಮ್ಮ ಕೈಯನ್ನು ನನ್ನ ಎದೆಯಿಂದ ನಿತಂಬದವರೆಗೆ ತಂದರು. ಆತನ ಕೈಗಳನ್ನು ಹಿಂದಕ್ಕೆ ತಳ್ಳಲು ನಾನು ಪ್ರಯತ್ನಪಟ್ಟೆ. ಆದರೆ ಅವುಗಳು ನನ್ನ ಸೊಂಟಕ್ಕೆ ಸುತ್ತಿಕೊಂಡಿದ್ದವು. ಬೆರಳುಗಳು ನನ್ನ ಎದೆಯನ್ನು ಸವರುತ್ತಿದ್ದವು.

ಕೋಣೆಯ ಬಾಗಿಲು ಮುಚ್ಚಿದ್ದಲ್ಲದೆ, ಆತನ ಬೆನ್ನು ಅದಕ್ಕೆ ಅಡ್ಡವಾಗಿತ್ತು. ಆ ಕೆಲ ಕ್ಷಣಗಳ ಕಾಲ ನಾನು ಭಯದಿಂದ ಬೆವೆತು ಹೋದೆ. ನನ್ನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಬಂದು ಹೋದವು. ಅಂತಿಮವಾಗಿ ಆತ ನನ್ನನ್ನು ಬಿಟ್ಟರು. ಈ ಎಲ್ಲಾ ಸಂದರ್ಭದಲ್ಲಿ ಆತನ ಮುಖದಲ್ಲಿ ಒಂದು ಕಪಟ ನಗು ಇತ್ತು. ನಾನು ಕ್ಯಾಬಿನ್‌ನಿಂದ ಹೊರಗೆ ಹೋಗಿ ಶೌಚಾಲಯದಲ್ಲಿ ನಿಂತು ಕಣ್ಣೀರನ್ನು ಒರೆಸಲು ಪ್ರಯತ್ನಿಸಿದೆ. ಈ ಭಯ ಮತ್ತು ಖಾಸಗಿತನದ ಉಲ್ಲಂಘನೆಯಿಂದ ನಾನು ಸಂಪೂರ್ಣ ಉಡುಗಿ ಹೋದೆ. ಇದು ಮತ್ತೊಮ್ಮೆ ಆಗಬಾರದು ಎಂದು ಸ್ವಯಂ ನಿರ್ಧರಿಸಿದೆ. ನಾನು ಆತನ ಮತ್ತೊಬ್ಬ ಸಂಗಾತಿಯಾಗಬಾರದು ಎಂದು ಆಂತರಿಕವಾಗಿ ಪ್ರತಿರೋಧ ತಂದುಕೊಂಡಿದೆ. ಆದರೆ ದುಸ್ವಪ್ನ ಆಗಷ್ಟೇ ಆರಂಭವಾಗಿತ್ತು.

ಮರುದಿನ ಆತ ನನ್ನನ್ನು ತನ್ನ ಕ್ಯಾಬಿನ್‌ಗೆ ಕರೆದರು. ನಾನು ಬಾಗಿಲನ್ನು ಸಣ್ಣಗೆ ಬಡಿದು ಒಳ ಪ್ರವೇಶಿಸಿದೆ. ಆತ ಬಾಗಿಲ ಬಳಿಯೇ ನಿಂತಿದ್ದರು. ನಾನು ಪ್ರತಿಕ್ರಿಯಿಸುವ ಮೊದಲೇ ಬಾಗಿಲು ಮುಚ್ಚಿ ತನ್ನ ದೇಹ ಮತ್ತು ಬಾಗಿಲ ನಡುವೆ ನನಗೆ ಅಡ್ಡವಾಗಿ ನಿಂತರು. ನಾನು ಅದುರಿ ಹೋದೆ. ಆದರೆ ಆತ ನನ್ನನ್ನು ಹಿಡಿದು ಮುತ್ತಿಡಲು ಬಾಗಿದರು. ನಾನು ಬಾಯಿ ಮುಚ್ಚಿಕೊಂಡು ಮತ್ತೊಂದು ಕಡೆಗೆ ಮುಖ ತಿರುಗಿಸಲು ಪ್ರಯತ್ನಿಸಿದೆ. ಆದರೆ ನನ್ನ ಪ್ರಯತ್ನ ಫಲಿಸಲಿಲ್ಲ. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆತ ನಿಂತಿದ್ದರು. ಭಯದಿಂದ ನನಗೆ ಮಾತೇ ಹೊರಡಲಿಲ್ಲ. ನಾನು ಬಾಗಿಲಿಗೆ ಒತ್ತುತ್ತಾ ಹೋದಂತೆ ಆತ ನನ್ನನ್ನು ಬಿಟ್ಟುಬಿಟ್ಟರು ಕಣ್ಣಲಿ ನೀರು ತುಂಬಿಕೊಂಡು ನಾನು ಕಚೇರಿಯಿಂದ ಹೊರಗೆ ಓಡಿದೆ. ಪಾರ್ಕಿಂಗ್ ಸ್ಥಳದ ಕಡೆಗೆ ಹೋಗಿ ಏಕಾಂತ ಸ್ಥಳದಲ್ಲಿ ನೆಲದ ಮೇಲೆ ಕುಳಿತು ಅಳಲಾರಂಭಿಸಿದೆ.

ನನ್ನ ಇಡೀ ಜೀವನ ಕಣ್ಣ ಮುಂದೆ ಬಂತು. ಆಗ್ರಾದಿಂದ ದೆಹಲಿಗೆ ಬಂದು ವಿದ್ಯಾಭ್ಯಾಸ ಮಾಡಿ ಕೆಲಸಕ್ಕೆ ಸೇರಿದ ಕುಟುಂಬದ ಮೊದಲ ಸದಸ್ಯೆಯಾಗಿದ್ದೆ ನಾನು. ಹಿಂದಿನ ಮೂರು ವರ್ಷಗಳಲ್ಲಿ ನಾನು ದೆಹಲಿಯಲ್ಲಿ ಕೆಲಸ ಮಾಡಲೆಂದು ಹಲವು ಹೋರಾಟಗಳನ್ನು ಮಾಡಬೇಕಾಗಿತ್ತು. ನನ್ನ ಕುಟುಂಬದ ಮಹಿಳೆಯರು ವಿದ್ಯಾಭ್ಯಾಸ ಮಾಡಿದ್ದರೂ ಹೊರಗೆ ಉದ್ಯೋಗ ನಿಭಾಯಿಸಿರಲಿಲ್ಲ. ಸಣ್ಣ ಪಟ್ಟಣದ ಉದ್ಯಮ ಕುಟುಂಬಗಳಲ್ಲಿ ಯುವತಿಯರು ವಿದ್ಯಾಭ್ಯಾಸದ ನಂತರ ಮದುವೆಯಾಗಿ ಜೀವನ ಕಂಡುಕೊಳ್ಳುತ್ತಿದ್ದರು. ಹೀಗಾಗಿ ಈ ಪುರುಷವಾದಿ ಸಮಾಜದ ವಿರುದ್ಧ ನಾನು ಹೋರಾಡಿ ಉದ್ಯೋಗಕ್ಕೆ ಸೇರಿದ್ದೆ. ನಾನೇ ಸಂಪಾದನೆ ಮಾಡಬೇಕೆಂದು ತಂದೆಯ ಬಳಿ ಹಣವನ್ನೂ ಪಡೆಯುತ್ತಿರಲಿಲ್ಲ. ನನಗೆ ಸಾಧನೆ ಮಾಡಿ ಗೌರವಾನ್ವಿತ ಪತ್ರಕರ್ತೆಯಾಗಬೇಕಿತ್ತು. ನಾನು ಎಲ್ಲವನ್ನೂ ಬಿಟ್ಟು ಸೋತು ಮನೆಗೆ ವಾಪಾಸಾಗುವಂತಿರಲಿಲ್ಲ.

ನನ್ನ ಸಹೋದ್ಯೋಗಿ ಸಂಜರಿ ಚಟರ್ಜೀ ನನ್ನ ಹಿಂದೆಯೇ ಪಾರ್ಕಿಂಗ್ ಸ್ಥಳದ ಕಡೆಗೆ ಹಿಂಬಾಲಿಸಿ ಬಂದಿದ್ದರು. ನಾನು ಕೋಣೆಯಿಂದ ಮುಖ ಕೆಳಗೆ ಮಾಡಿ ಓಡಿ ಬಂದಿದ್ದನ್ನು ಆಕೆ ನೋಡಿದ್ದರು. ಆಕೆ ಸ್ವಲ್ಪ ಹೊತ್ತು ನನ್ನ ಬಳಿ ಕುಳಿತರು. ಈ ಬಗ್ಗೆ ಸೀಮಾ ಮುಸ್ತಾಫಾ ಬಳಿ ಏಕೆ ಹೇಳಬಾರದು ಎಂದು ಸಲಹೆ ನೀಡಿದರು. ಆಕೆ ಅಕ್ಬರ್ ಬಳಿ ಮಾತನಾಡಬಹುದು. ಆಕೆಗೆ ತಿಳಿದಿದೆ ಎಂದು ಅರಿವಾದರೆ ಅಕ್ಬರ್ ಹಿಂದೆ ಸರಿಯಬಹುದು ಎಂದು ಅವರು ಸಮಾಧಾನ ನೀಡಿದರು. ಆಗ ಸೀಮಾ ನಮ್ಮ ವಿಭಾಗ ಮುಖ್ಯಸ್ಥರಾಗಿದ್ದರು. ನಾವಿಬ್ಬರೂ ಮರಳಿ ಕಚೇರಿಗೆ ಬಂದೆವು. ನಾನು ಸೀಮಾ ಮುಸ್ತಾಫ ಬಳಿಗೆ ಹೋಗಿ ನನ್ನ ಕತೆ ಹೇಳಿದೆ. ಆಕೆ ನಾನು ಹೇಳಿದ್ದನ್ನು ಕೇಳಿದರು. ಅಚ್ಚರಿ ಪಡಲಿಲ್ಲ. ನಾನೇ ನಿರ್ಧರಿಸಬೇಕು ಎಂದು ಹೇಳಿದರು. ಮುಂದೇನು ಎನ್ನುವುದನ್ನು ಸ್ವತಃ ನಿರ್ಧರಿಸುವಂತೆ ಸಲಹೆ ನೀಡಿದರು. ಅದು ೧೯೯೭ರಲ್ಲಿ ನಡೆದ ಪ್ರಕರಣ. ನಾನು ಏಕಾಂಗಿಯಾಗಿದ್ದೆ, ಗೊಂದಲದಲ್ಲಿದ್ದೆ, ಅಸಹಾಯಕಳಾಗಿದ್ದೆ ಮತ್ತು ಅತಿಯಾಗಿ ಭಯಪಟ್ಟಿದ್ದೆ.

ಕೊನೆಗೆ ನಾನು ನನ್ನ ಡೆಸ್ಕ್‌ಗೆ ಮರಳಿ ಏಷ್ಯನ್‌ ಏಜ್ ನೆಟ್‌ವೇರ್ ಸಂದೇಶ ವ್ಯವಸ್ಥೆ ಮೂಲಕ ಅಕ್ಬರ್ ಅವರಿಗೆ ಒಂದು ಸಂದೇಶ ಕಳುಹಿಸಿದೆ. ಲೇಖಕರಾಗಿ ಅವರ ಮೇಲೆ ನನಗೆ ಅತೀವ ಗೌರವವಿದೆ. ಆದರೆ ಅವರ ಈಗಿನ ನಡವಳಿಕೆ ನನ್ನ ಮನಸ್ಸಿನಲ್ಲಿರುವ ಅವರ ವರ್ಚಸ್ಸನ್ನು ಕೆಳಗಿಳಿಸುತ್ತಿದೆ ಎಂದು ಹೇಳಿದೆ. ಇನ್ನೊಮ್ಮೆ ಹಾಗೆ ವರ್ತಿಸಬಾರದು ಎಂದೂ ಹೇಳಿದೆ.

ಸಂದೇಶ ಸಿಕ್ಕ ತಕ್ಷಣವೇ ಅವರು ನನ್ನನ್ನು ತಮ್ಮ ಕೋಣೆಗೆ ಕರೆದರು. ಅವರು ಕ್ಷಮೆಯಾಚಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ನಾನಿದ್ದೆ. ಆದರೆ ನನ್ನ ಆಲೋಚನೆ ತಪ್ಪಾಗಿತ್ತು. ನನ್ನ ಪ್ರತಿಭಟನೆಗೆ ನೋವು ವ್ಯಕ್ತಪಡಿಸಿದರು. ನನ್ನ ಪ್ರತಿಯಾಗಿ ಆತನ ಭಾವನೆಗಳು ನಿಜವಾದುದಲ್ಲ ಎಂದು ನಾನು ಹೇಳುತ್ತಿರುವುದರಿಂದ ಅವರಿಗೆ ಬಹಳ ಅವಮಾನವಾಗಿದೆ ಎಂದು ನನಗೆ ಪಾಠ ಮಾಡಿದರು.

ನಾನು ಆ ರಾತ್ರಿ ಮನೆಗೆ ಬರುವಾಗ ಕಚೇರಿ ವಾತಾವರಣ ನಿಯಂತ್ರಣ ಕಳೆದುಕೊಳ್ಳಲಿದೆ ಎನ್ನುವುದು ನನಗೆ ಅರಿವಾಗಿ ಹೋಗಿತ್ತು. ನಾನು ಮತ್ತೊಂದು ಕೆಲಸ ಹುಡುಕಬೇಕಿತ್ತು. ಹೀಗಾಗಿ ನಾನು ಉದ್ಯೋಗಕ್ಕಾಗಿ ಪ್ರಯತ್ನಿಸಲಾರಂಭಿಸಿದೆ. ಏಷ್ಯನ್ ಏಜ್ ಕಚೇರಿಯ್ಲಲಿ ಕಳೆದ ಪ್ರತೀ ಕ್ಷಣವೂ ನನಗೆ ಭೀಕರವಾಗಿತ್ತು. ಪ್ರತೀ ಬಾರಿ ಆತ ಕೋಣೆಗೆ ಕರೆದಾಗ ಸಾವಿರ ಸಲ ಸತ್ತು ಹೋಗಿದ್ದೆ. ನಾನು ಆತನ ಕೋಣೆಗೆ ಹೋಗುವಾಗ ಸ್ವಲ್ಪ ಬಾಗಿಲು ತೆರೆದು ಡೋರ್ ನಾಬ್ ಮೇಲೆ ಕೈಯಿಟ್ಟೇ ಇರುತ್ತಿದ್ದೆ. ಇದು ಆತನಿಗೆ ಅಚ್ಚರಿ ಹುಟ್ಟಿಸಿತ್ತು. ಕೆಲವೊಮ್ಮೆ ಆತ ಬಾಗಿಲ ಬಳಿಗೆ ನಡೆದುಬಂದು ನನ್ನ ಕೈ ಮೇಲೆ ಕೈ ಇಡುತ್ತಿದ್ದರು. ಕೆಲವೊಮ್ಮೆ ತನ್ನ ದೇಹವನ್ನು ನನ್ನ ದೇಹಕ್ಕೆ ತಾಕಿಸುತ್ತಿದ್ದರು. ಕೆಲವೊಮ್ಮೆ ತನ್ನ ನಾಲಗೆಯಿಂದ ನನ್ನ ಮುಚ್ಚಿದ ತುಟಿಗಳ ಮೇಲೆ ಒರೆಸುತ್ತಿದ್ದ. ಪ್ರತೀ ಬಾರಿ ನಾನು ಆತನನ್ನು ದೂಡಿ ಕೋಣೆಯಿಂದ ಹೊರಗೆ ಹೋಗುತ್ತಿದ್ದೆ.

ನನಗೆ ನೆರವಾಗುತ್ತಿದ್ದ ಸಹೋದ್ಯೋಗಿ ನನಗಾಗಿ ಒಂದು ನೆರವಿನ ಹಸ್ತ ಚಾಚಿದ್ದಳು. ಆತ ಕೋಣೆಗೆ ಕರೆದ ತಕ್ಷಣವೇ ಒಂದು ನಿಮಿಷ ಕಳೆದು ಆಕೆ ಏನೋ ಕಾರಣ ನೀಡಿ ಒಳಗೆ ಬರುತ್ತಿದ್ದಳು. ಆಕೆ ನನಗೆ ಸುರಕ್ಷಾ ಕವಚವಾಗಿದ್ದರು. ಆದರೆ ಇದು ಸಣ್ಣ ಮಟ್ಟಿಗಿನ ಸುರಕ್ಷೆಯಾಗಿತ್ತು. ದೈಹಿಕವಾಗಿ ತಮ್ಮ ಕೆಲಸ ಆಗುತ್ತಿಲ್ಲ ಎಂದು ಕಂಡ ಕೂಡಲೇ ಭಾವಾನಾತ್ಮಕ ತಂತ್ರಗಳನ್ನು ಬಳಸಲು ಆರಂಭಿಸಿದರು. ಒಂದು ಸಂಜೆ ಆತ ನನ್ನನ್ನು ತಮ್ಮ ಕೋಣೆಗೆ ಕರೆದು ಅಜ್ಮೀರ್ ದರ್ಗಾಗೆ ಹೋಗಿ ಆತನಿಗೆ ನೂಲು ಕಟ್ಟುವಂತೆ ಬೇಡಿಕೊಂಡರು. ಆ ಕೆಲಸಕ್ಕೆ ಇನ್ಯಾರನ್ನೂ ನಂಬಲು ಸಾಧ್ಯವಿಲ್ಲ ಎಂದರು. ಆದರೆ ನಾನು ಅಜ್ಮೀರ್‌ಗೆ ಹೋಗಿದ್ದೇನೆಂದು ಹೇಳಿ ಮನೆಯಲ್ಲಿಯೇ ಉಳಿದೆ. ಆದರೆ ಆತ ನನ್ನ ಸುಳ್ಳನ್ನು ಕಂಡುಹಿಡಿದು ಧಾರ್ಮಿಕವಾಗಿ ನಾನು ತಪ್ಪು ಮಾಡಿದ್ದೇನೆ ಎಂದು ಹೇಳಲಾರಂಭಿಸಿದರು. ನಾನು ಬಹಳ ಸಂಕಷ್ಟಕರವಾದ ಭಾವನೆಗಳಿಂದ ತೊಳಲಾಡುತ್ತಿದ್ದೆ. ನಾನು ತಪ್ಪು ಮಾಡಿದ ಭಾವನೆಯೂ ಸೇರಿತು. ನಾನು ಅಭದ್ರ ಭಾವನೆಯಲ್ಲಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಭಯಭೀತಳಾಗಿದ್ದೆ. ಕಚೇರಿ ಸ್ವತಂತ್ರ ಎಂದು ನನಗೆ ಅನಿಸಲಿಲ್ಲ. ಅದೊಂದು ಯಾತನಾಮಯ ಕೋಣೆಯಾಗಿತ್ತು. ಅಲ್ಲಿಂದ ಹೊರ ಹೋಗಲೇಬೇಕಿತ್ತು. ಆದರೆ ನನಗೆ ದಾರಿಯೇ ಕಾಣಲಿಲ್ಲ. ಮತ್ತೊಂದು ಉದ್ಯೋಗ ಸಿಕ್ಕಲ್ಲಿ ಗೌರವಯುತವಾಗಿ ಕೆಲಸ ಬಿಡಬಹುದು ಎನ್ನುವ ಮೂರ್ಖತನದಲ್ಲಿ ನಾನಿದ್ದೆ.

ತನ ದೈಹಿಕ ದೌರ್ಜನ್ಯಗಳನ್ನು ವಿರೋಧಿಸುವುದನ್ನು ನಾನು ಮುಂದುವರಿಸುತ್ತಿದ್ದಂತೆ ಆತ ನನ್ನ ರಕ್ಷಣಾ ಕವಚ ತೆಗೆಯಲು ಮತ್ತೊಂದು ದಾರಿ ಹುಡುಕಿದ. ಏಷ್ಯನ್ ಏಜ್‌ನಲ್ಲಿ ವಾರದ ಅಂಕಣ ಬರೆಯುತ್ತಿದ್ದ ಟ್ಯಾರೆಟ್ ಕಾರ್ಡ್ ರೀಡರ್ ವೀನು ಸ್ಯಾಂಡಲ್‌ ರಾತ್ರೋರಾತ್ರಿ ಅಕ್ಬರ್‌ನ ಖಾಸಗಿ ಜ್ಯೋತಿಷಿಯಾಗಿ ಬದಲಾಗಿದ್ದರು. ಒಂದು ಭಯಾನಕ ಅಪರಾಹ್ನದಂದು ಆತ ನನ್ನ ರಕ್ಷಣಾ ಕವಚವಾಗಿದ್ದ ಸಹೋದ್ಯೋಗಿಯನ್ನು ಕಚೇರಿಯಿಂದ ಹೊರಗೆ ಕಳುಹಿಸಿದ್ದರು. ಆ ಮೂಲಕ ನನ್ನ ಮೇಲೆ ಆಕ್ರಮಣಕ್ಕೆ ತಯಾರಿ ನಡೆಸಿದ್ದರು. ವೀನು ನನ್ನ ಡೆಸ್ಕ್‌ ಬಳಿ ಬಂದು ಅಕ್ಬರ್ ನಿಜವಾಗಿಯೂ ನನ್ನನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಿದರು. ನನ್ನ ಬಗ್ಗೆ ಎಷ್ಟು ಕಾಳಜಿ ತೋರಿಸುತ್ತಿದ್ದಾರೆ ಎನ್ನುವುದನ್ನು ಪ್ರದರ್ಶಿಸಲು ಆತನಿಗೆ ಸಮಯ ಕೊಡಬೇಕು ಎಂದೂ ಸಲಹೆ ನೀಡಿದರು.

ಆ ಪ್ರಾಣಿಯ ಬಗ್ಗೆ ನನಗೆ ಅಸಹ್ಯವೆನಿಸಿತು. ಇದು ನಿಜವಾಗಲು ಸಾಧ್ಯವಿದೆಯೆ? ಒಬ್ಬ ಯುವತಿಯನ್ನು ಆಕರ್ಷಿಸಲು ಜ್ಯೋತಿಷಿಯನ್ನು ನೇಮಿಸಿಕೊಳ್ಳುವಂತಹ ವ್ಯಕ್ತಿಯೇ ಆತ? ಆ ಸಮಯದಲ್ಲಿ ನನಗೆ ಯಾವುದೂ ನಿಖರವಾಗಿ ಆಲೋಚಿಸುವ ಶಕ್ತಿ ಇರಲಿಲ್ಲ. ಆತನನ್ನು ಪ್ರತಿರೋಧಿಸುತ್ತಾ ಹೋದಂತೆ ಏನಾಗಲಿದೆ? ಆತ ನನ್ನ ಮೇಲೆ ಅತ್ಯಾಚಾರ ಮಾಡುವರೆ? ನನಗೆ ಹಾನಿ ಮಾಡುವರೆ? ನಾನು ಪೊಲೀಸ್‌ಗೆ ದೂರು ಕೊಡುವ ಬಗ್ಗೆ ಆಲೋಚಿಸಿದರೂ ಭಯ ಪಟ್ಟಿದ್ದೆ. ಆತ ಸೇಡು ತೀರಿಸಿಕೊಂಡರೆ ಏನು ಮಾಡುವುದು? ನನ್ನ ಹೆತ್ತವರಿಗೆ ಹೇಳುವ ಬಗ್ಗೆಯೂ ಆಲೋಚಿಸಿದೆ. ಆದರೆ ಹಾಗೆ ಮಾಡಿದಲ್ಲಿ ಇನ್ನೂ ಆರಂಭದ ಹಂತದಲ್ಲಿದ್ದ ವೃತ್ತಿಜೀವನ ಮುಗಿದೇ ಹೋಗುತ್ತಿತ್ತು.

ಹಲವು ದಿನ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದ ಮೇಲೆ ಏಷ್ಯನ್ ಏಜ್‌ನಲ್ಲೇ ಇದ್ದುಕೊಂಡು ಮತ್ತೊಂದು ಕೆಲಸ ಹುಡುಕುವುದು ಸಾಧ್ಯವಿಲ್ಲ ಎನ್ನುವುದು ನನಗೆ ಅರಿವಾಯಿತು. ನಾನು ತಕ್ಷಣವೇ ಕೆಲಸ ಬಿಡಬೇಕು ಎಂದುಕೊಂಡೆ. ಹೀಗಾಗಿ ನಾನು ಧೈರ್ಯ ತಂದುಕೊಂಡು ರಾಜೀನಾಮೆ ನೀಡುತ್ತಿರುವ ವಿಚಾರ ಆತನಿಗೆ ತಿಳಿಸಿದೆ. ಆತ ಸಮತೋಲನ ಕಳೆದುಕೊಂಡರು. ನಾನು ಚೇರ್‌ ಮೇಲೆ ಕುಳಿತಂತೆ ನನ್ನ ಮೇಲೆ ಬಿದ್ದರು. ಭಾವನಾತ್ಮಕವಾಗಿ ಮಾತನಾಡುತ್ತಾ ನನ್ನನ್ನು ಗಟ್ಟಿಯಾಗಿ ಹಿಡಿದು '‘ನನ್ನನ್ನು ಬಿಟ್ಟು ಹೋಗಬೇಡ” ಎಂದು ಹೇಳಲಾರಂಭಿಸಿದರು. ನಾನು ನಡುಗುವ ದೇಹದ ಜೊತೆಗೆ ಕೋಣೆಯಿಂದ ಹೊರಗೆ ಬಂದೆ. ಇದು ನನ್ನ ಜೀವನದ ಪ್ರತೀ ಆಯಾಮದ ಮೇಲೂ ಪರಿಣಾಮ ಬೀರಬಹುದಾದ ಮುಗಿಯದ ದುಸ್ವಪ್ನವಾಗಿ ಬದಲಾಗುತ್ತಿತ್ತು. ನಾನು ನಿದ್ರೆ ಕಳೆದುಕೊಂಡೆ. ನಾನು ಸ್ನೇಹಿತರ ಜೊತೆಗೆ ಓಡಾಡುವ ಆಸಕ್ತಿಯನ್ನೂ ಕಳೆದುಕೊಂಡಿದ್ದೆ.

ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಅಕ್ಬರ್ ಅಹಮದಾಬಾದ್‌ನಲ್ಲಿ ಹೊಸ ಆವೃತ್ತಿಯನ್ನು ಆರಂಭಿಸುವ ವಿಚಾರ ತಿಳಿಸಿ, ಅಲ್ಲಿಗೆ ವರ್ಗ ಮಾಡಿಕೊಳ್ಳುವಂತೆ ಸೂಚಿಸಿದರು. ನನ್ನ ಹೆತ್ತವರು ಅಲ್ಲಿಗೆ ವರ್ಗವಾಗಲು ಬಿಡುವುದಿಲ್ಲ ಎನ್ನುವ ನನ್ನ ಪ್ರತಿಭಟನೆಯನ್ನು ಅಲಕ್ಷಿಸಿ ಆತ ಯೋಜನೆಯನ್ನು ರೂಪಿಸಲಾರಂಭಿಸಿದರು. ನನಗೆ ಅಹಮದಾಬಾದ್‌ನಲ್ಲಿ ವಸತಿ ಸೌಕರ್ಯ ಕಲ್ಪಿಸಿದರು. ಎಲ್ಲವನ್ನೂ ಸಂಸ್ಥೆಯೇ ನೋಡಿಕೊಳ್ಳುತ್ತಿತ್ತು. ಆತ ಅಲ್ಲಿಗೆ ಬಂದಾಗಲೆಲ್ಲ ನನ್ನ ಜೊತೆಗೇ ಇರುವವರಿದ್ದರು.

ನನ್ನ ಭಯ ಗಗನಕ್ಕೇರಿತು. ಆ ಕ್ಷಣದಲ್ಲಿ ಶುದ್ಧ ಭಯದಲ್ಲಿ ಮನಸ್ಸಿನೊಳಗೇ ಶಾಂತಿ ಕಂಡುಕೊಳ್ಳುವ ಇಚ್ಛಾಶಕ್ತಿ ಬೆಳೆಸಿಕೊಂಡೆ. ನಾನು ಪ್ರತಿಭಟಿಸುವುದನ್ನು ನಿಲ್ಲಿಸಿದೆ. ನಿಧಾನವಾಗಿ ನಂತರದ ಕೆಲವು ವಾರಗಳಲ್ಲಿ ನಾನು ನನ್ನ ಡೆಸ್ಕ್‌ನಲ್ಲಿದ್ದ ವಸ್ತುಗಳನ್ನು, ಪುಸ್ತಕ ಇತ್ಯಾದಿಗಳನ್ನು ಸ್ವಲ್ಪ ಸ್ವಲ್ಪವೇ ಮನೆಗೆ ವರ್ಗಾಯಿಸಿದೆ. ಹಾಗೆ ಅಹಮದಾಬಾದ್‌ಗೆ ನಾನು ತೆರಳಬೇಕಾಗಿದ್ದ ಸಂಜೆ ನನ್ನ ಡೆಸ್ಕ್ ಸಂಪೂರ್ಣ ಖಾಲಿ ಮಾಡಿಕೊಂಡೆ. ನನ್ನ ರಾಜೀನಾಮೆ ಪತ್ರವಿದ್ದ ಸೀಲ್ ಮಾಡಿದ ಕವರನ್ನು ಅಕ್ಬರ್‌ನ ಕಾರ್ಯದರ್ಶಿಗೆ ಕೊಟ್ಟು ನಾನು ಸಾಮಾನ್ಯ ಸಮಯಕ್ಕೇ ಕಚೇರಿ ತೊರೆದು ಹೋದೆ. ಮರುದಿನ ಸಂಜೆ ಆ ಪತ್ರವನ್ನು ಅಕ್ಬರ್‌ಗೆ ಕೊಡುವಂತೆ ಕಾರ್ಯದರ್ಶಿಯನ್ನು ವಿನಂತಿಸಿಕೊಂಡೆ. ನಾನು ಅಹಮದಾಬಾದ್‌ಗೆ ವಿಮಾನ ಹತ್ತಿಲ್ಲ ಎನ್ನುವುದು ತಿಳಿದ ನಂತರವೇ ನನ್ನ ರಾಜೀನಾಮೆ ವಿಚಾರ ಅಕ್ಬರ್‌ಗೆ ತಿಳಿಯುವ ವ್ಯವಸ್ಥೆ ಮಾಡಿದ್ದೆ.

ಮರುದಿನ ನಾನು ಮನೆಯಲ್ಲಿಯೇ ಉಳಿದೆ. ಆ ಸಂಜೆ ಅಕ್ಬರ್ ನನ್ನ ಮನೆಯ ದೂರವಾಣಿಗೆ ಕರೆ ಮಾಡಿದರು. ಕಚೇರಿಯಿಂದ ನನ್ನ ದೂರವಾಣಿ ಸಂಖ್ಯೆಯನ್ನು ಆತ ತೆಗೆದುಕೊಂಡಿದ್ದರು. ಆತ ಕೋಪದಿಂದ ಮತ್ತು ಭಾವನಾತ್ಮಕವಾಗಿ ಕಿರುಚಾಡಿ ಮಾತನಾಡಿದರು. ನನಗೆ ಭಯವಾಗಿತ್ತು. ಆತ ಮನೆಗೆ ಬಂದರೆ ಏನು ಮಾಡುವುದು? ರಾತ್ರಿಯಿಡೀ ನಾನು ಎಚ್ಚರವಾಗಿಯೇ ಇದ್ದೆ. ಮರುದಿನ ಬೆಳಿಗ್ಗೆ ಮೊದಲ ರೈಲು ಹಿಡಿದು ನಾನು ಹೆತ್ತವರ ಬಳಿಗೆ ಹೋದೆ. ಮನೆಯಲ್ಲಿ ಯಾರೂ ನನ್ನನ್ನು ಏನೂ ಕೇಳಲಿಲ್ಲ. ಎಲ್ಲವೂ ಸರಿಯಿಲ್ಲ ಎನ್ನುವುದು ಹೆತ್ತವರಿಗೆ ಅರಿವಾಗಿತ್ತು. ಕೆಲಸಕ್ಕೆ ಸೇರುವ ವಿಚಾರದ ಹೊರಾಟ ಬಹಳ ಹಿಂದೆಯೇ ಅಂತ್ಯವಾಗಿತ್ತು. ಕೆಲವು ವಾರಗಳ ಕಾಲ ನಾನು ಮನೆಯಲ್ಲಿಯೇ ಉಳಿದೆ. ನಂತರ ನಾನು ಮತ್ತೆ ದೆಹಲಿಗೆ ಉದ್ಯೋಗಕ್ಕೆ ಮರಳುತ್ತೇನೆ ಎಂದು ತಂದೆಗೆ ಹೇಳಿದೆ. ಅವರು ಪ್ರತಿಭಟಿಸಲಿಲ್ಲ. ಹೊಸ ಕೆಲಸ ಹುಡುಕು ಎಂದಷ್ಟೇ ಹೇಳಿದರು. ನನಗೆ ಅಳುವೇ ಬಂದು ಹೋಯಿತು.

ಕಳೆದ ೨೧ ವರ್ಷಗಳಲ್ಲಿ ನಾನು ಇದೆಲ್ಲವನ್ನೂ ಹಿಂದೆ ಬಿಟ್ಟಿದ್ದೇನೆ. ನಾನು ಸಂತ್ರಸ್ತೆ ಎಂದು ಹೇಳಲು ಬಯಸುವುದಿಲ್ಲ. ಒಬ್ಬ ರಾಕ್ಷಸನ ಲಂಪಟತನ ನನ್ನ ವೃತ್ತಿಜೀವನವನ್ನು ಮುಳುಗಿಸಲು ಸಾಧ್ಯವಿಲ್ಲ. ಆಗಾಗ್ಗೆ ದುಸ್ವಪ್ನಗಳು ಬರುತ್ತಿದ್ದದ್ದು ನಿಜ. ಇನ್ನು ಮುಂದೆ ಆ ದುಸ್ವಪ್ನಗಳೂ ನಿಲ್ಲಬಹುದು.

ಗಜಾಲಾ ವಹಾಬ್ ಅವರ ಈ ಅನುಭವ ಬರಹದ ಬಗ್ಗೆ ‘ದಿ ವೈರ್‌’ ಸಂಸ್ಥೆ ಎಂ ಜೆ ಅಕ್ಬರ್ ಅವರ ಅಭಿಪ್ರಾಯ ಕೇಳಿದೆ. ಆದರೆ ಅವರು ಪ್ರತಿಕ್ರಿಯಿಸಿಲ್ಲ.

(ಗಜಾಲಾ ವಹಾಬ್ ‘ಫೋರ್ಸ್‌’ ಮ್ಯಾಗಜೀನ್‌ನ ಕಾರ್ಯಕಾರಿ ಸಂಪಾದಕರು ಮತ್ತು ‘ಡ್ರಾಗನ್ ಆನ್ ಅವರ್ ಡೋರ್‌ಸ್ಟೆಪ್: ಮ್ಯಾನೇಜಿಂಗ್ ಚೈನಾ ಥ್ರೂ ಮಿಲಿಟರಿ ಪವರ್’ ಪುಸ್ತಕದ ಸಹಲೇಖಕರು.)

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More