ದೇಶ ಅಭಿವೃದ್ಧಿಯಾಗುತ್ತಿದೆ ಆದರೆ, ಉದ್ಯೋಗಗಳೇ ಸೃಷ್ಟಿಯಾಗುತ್ತಿಲ್ಲ! 

ಭಾರತದ ಜಿಡಿಪಿ ಸರಾಸರಿ ಶೇ.7ರಷ್ಟು ಅಭಿವೃದ್ಧಿಯಾಗುತ್ತಿದೆ. ಆದರೆ, ಅದಕ್ಕೆ ಪೂರಕವಾಗಿ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ತತ್ಪರಿಣಾಮ ಶಿಕ್ಷಿತವರ್ಗದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ ಎನ್ನುತ್ತದೆ ಅಜೀಮ್ ಪ್ರೇಮ್ಜಿ ವಿವಿಯ ಅಮಿತ್ ಬಸೋಲ್ ಅವರ ಸಂಶೋಧನಾ ವರದಿ. ವಿವರ ಇಲ್ಲಿದೆ

ವಿಶ್ವದ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ವಿಸ್ತರಿಸುತ್ತಿರುವ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿರುವ ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಯ ಮೂಲ ಆಧಾರವಾಗಿರುವ ಉದ್ಯೋಗ ಸೃಷ್ಟಿಯೇ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಅಭಿವೃದ್ಧಿಗೆ ಪೂರಕವಾಗಿ ಉದ್ಯೋಗ ಸೃಷ್ಟಿಯಾಗದೇ ಇದ್ದರೆ ದೀರ್ಘಕಾಲದಲ್ಲಿ ಅಭಿವೃದ್ಧಿ ಸುಸ್ಥಿರವಾಗಿರಲಾರದು.

ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿರುವ ಸಂಶೋಧನೆ ಪ್ರಕಾರ, ದೇಶದ ಆರ್ಥಿಕ ಅಭಿವೃದ್ಧಿ ಶೇ.7ರಷ್ಟಿದ್ದರೂ ಉದ್ಯೋಗ ಸೃಷ್ಟಿಯಲ್ಲಿನ ಬೆಳವಣಿಗೆಯು ಶೇ.1ಕ್ಕಿಂತ ಕಡಮೆ ಇದೆ. ಆದರೆ, ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಆರ್ಥಿಕ ಅಭಿವೃದ್ಧಿ ಶೇ.3-4ರಷ್ಟಿದ್ದಾಗಲೂ ಉದ್ಯೋಗ ಸೃಷ್ಟಿಯ ಬೆಳವಣಿಗೆಯು ಶೇ.2ಕ್ಕಿಂತಲೂ ಹೆಚ್ಚಿತ್ತು.

ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ನಡುವಿನ ಅಸಮತೋಲನದಿಂದಾಗಿ 2015ರಲ್ಲಿ ನಿರುದ್ಯೋಗ ಪ್ರಮಾಣವು ಶೇ.5ಕ್ಕೆ ಮುಟ್ಟಿತ್ತು. ಇದು 20 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ನಿರುದ್ಯೋಗವಾಗಿತ್ತು ಎಂದು ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಸಂಶೋಧನೆ ಉಲ್ಲೇಖಿಸಿ ಬ್ಲೂಮ್‌ ಬರ್ಗ್‌ ವರದಿ ಮಾಡಿದೆ.

ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಪರಸ್ಪರ ಪೂರಕವಾಗಿ ಬೆಳವಣಿಗೆ ಆಗದಿರುವುದಕ್ಕೆ ಮುಖ್ಯ ಕಾರಣ ಉತ್ತಮ ಕೆಲಸ ಮತ್ತು ಕುಶಲ ಕೆಲಸದ ನಡುವೆ ಹೊಂದಾಣಿಕೆಯಿಲ್ಲದಿರುವುದು ಎಂದು ಸಂಶೋಧನೆ ನಡೆಸಿರುವ ಅಜಿಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಿಬರಲ್ ಸ್ಟಡೀಸ್ ನ ಪ್ರಾಧ್ಯಾಪಕ ಅಮಿತ್ ಬಸೋಲ್ ತಿಳಿಸಿದ್ದಾರೆ. ದೇಶದ 467 ದಶಲಕ್ಷ ಸಂಖ್ಯೆ ಕಾರ್ಮಿಕ ಶಕ್ತಿಯಲ್ಲಿ ನಿಯಮಿತವಾಗಿ ವೇತನ ಪಡೆಯುವ ಉತ್ತಮ ಕೆಲಸ ಇರುವವರ ಪ್ರಮಾಣ ಶೇ.17ರಷ್ಟು ಮಾತ್ರ.

ತ್ವರಿತ ಅಭಿವೃದ್ಧಿಯು ಜನರಲ್ಲಿ ಆಕಾಂಕ್ಷೆಗಳನ್ನು ಬಿತ್ತಿದೆ. ಆದರೆ, ಆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪೂರಕವಾದ ಉತ್ತಮ ಕೆಲಸವನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಕೇವಲ ಉದ್ಯೋಗ ಸೃಷ್ಟಿಯ ಬಗ್ಗೆಯಷ್ಟೇ ಅಲ್ಲ ಉತ್ತಮ ಉದ್ಯೋಗ ಸೃಷ್ಟಿಯ ಬಗ್ಗೆಯೂ ಇದು ಅನ್ವಯವಾಗುತ್ತದೆ ಎಂದು ‘ಸ್ಟೇಟ್ ಆಫ್ ಇಂಡಿಯಾ ವರ್ಕಿಂಗ್ 2018’ ಎಂಬ ಸಂಶೋಧನಾ ಪ್ರಬಂಧದಲ್ಲಿ ಅಮಿತ್ ಬಸೋಲ್ ಹೇಳಿದ್ದಾರೆ.

1990ರಲ್ಲಿ ಆರ್ಥಿಕ ಉದಾರೀಕರಣ ನೀತಿ ಜಾರಿಗೆ ತಂದ ನಂತರದಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ವನ್ನ (ಜಿಡಿಪಿ) ಅಭಿವೃದ್ಧಿ ಸರಾಸರಿ ಶೇ.7ರಷ್ಟಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದ ಜಿಡಿಪಿ ಶೇ.8.2ಕ್ಕೆ ಜಿಗಿದಿದ್ದು, ಜಗತ್ತಿನ ಅತಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಹ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಶೇ.7.3ರಷ್ಟಾಗಲಿದೆ ಎಂದು ಅಂದಾಜು ಮಾಡಿದ್ದು, ಜಾಗತಿಕವಾಗಿ ತ್ವರಿತಗತಿಯಲ್ಲಿ ಅಭಿವೃದ್ಧಿಹೊಂದುತ್ತಿರುವ ದೇಶವೆಂಬ ಹೆಗ್ಗಳಿಕೆಯನ್ನು ಭಾರತ ಕಾಯ್ದುಕೊಳ್ಳಲಿದೆ. ಇಷ್ಟಾದರೂ ಭಾರತದ ಯುವಕರು ಮತ್ತು ಶಿಕ್ಷಿತ ವರ್ಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಉದ್ಯೋಗ ಅರಸುತ್ತಿರುವ 23 ದಶಲಕ್ಷ ಯುವಕರ ಪೈಕಿ ಮೂರನೇ ಒಂದು ಭಾಗದಷ್ಟು ಪದವೀಧರರು ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ನಿರುದ್ಯೋಗ; ಕೇಂದ್ರದ ವಿರುದ್ಧ ಹರಿಹಾಯಲು ದಾರಿಯಾದ ಗಡ್ಕರಿ ಹೇಳಿಕೆ

ಯುವ ಶ್ರಮಿಕವರ್ಗಕ್ಕೆ ಉತ್ತಮ ಅವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿರುವುದು ಪ್ರಧಾನಿ ನರೇಂದ್ರ ಮೋದಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮರು ಆಯ್ಕೆ ಆಗುವುದಕ್ಕೆ ಅಡ್ಡಿಯಾಗಲಿದೆ. ಜತೆಗೆ ಈಗಿನ ಆರ್ಥಿಕ ಅಭಿವೃದ್ಧಿ ವೇಗವನ್ನು ಕಾಯ್ದುಕೊಳ್ಳಲು ಇದು ಅಡಚಣೆಯಾಗಲಿದೆ. ಭಾರತದ ಉದ್ಯೋಗ ಪರಿಸ್ಥಿತಿ ಮತ್ತು ಕಾರ್ಮಿಕ ವರ್ಗದ ಸ್ಥಿತಿಗತಿಯೂ ಸದಾ ಭಾರತದಲ್ಲಿ ಸುದ್ದಿಗೆ ಗ್ರಾಹಸವಾಗುತ್ತದೆ. ಉದ್ಯೋಗ ಸೃಷ್ಟಿಸುವಲ್ಲಿ ಪ್ರಸಕ್ತ ಸರ್ಕಾರದ ಸಾಧನೆಯು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂದು ಸಂಶೋಧನಾ ವರದಿ ತಿಳಿಸಿದೆ.

ವರದಿಯಲ್ಲಿನ ಇತರ ಪ್ರಮುಖ ಅಂಶಗಳು: 2015ರಲ್ಲಿ ಭಾರತದ 467 ದಶಲಕ್ಷ ಕಾರ್ಮಿಕಶಕ್ತಿಯ ಪೈಕಿ ಶೇ.46.6ರಷ್ಟು ಸ್ವ ಉದ್ಯೋಗಿಗಳು. 32.8 ರಷ್ಟು ದಿನಗೂಲಿ ಕಾರ್ಮಿಕರು. ಶೇ.17ರಷ್ಟು ಮಾತ್ರ ನಿಯಮಿತವಾಗಿ ವೇತನ ಪಡೆಯುವ ಉತ್ತಮ ಕೆಲಸದಲ್ಲಿರುವವರು. ಉಳಿದವರು ಗುತ್ತಿಗೆ ಕಾರ್ಮಿಕರು. ನಿಯಮಿತವಾಗಿ ವೇತನದ ಜತೆಗೆ ಎಲ್ಲಾ ಸೌಲಭ್ಯವನ್ನು ಪಡೆಯುತ್ತಿರುವ ಕಾರ್ಮಿಕರ ಪೈಕಿ ಶೇ.10ರಷ್ಟು ಉತ್ಪಾದನಾ ವಲಯದಲ್ಲಿ, ಶೇ.28ರಷ್ಟು ಸೇವಾವಲಯದಲ್ಲಿ ಮತ್ತು 1ರಷ್ಟು ನಿರ್ಮಾಣವಲಯದಲ್ಲಿದ್ದಾರೆ. ಆದರೆ, ಕಳೆದ ಮೂರು ದಶಕಗಳಲ್ಲಿ ಈ ಕಾರ್ಮಿಕರ ವೇತನ ಅತ್ಯಂತ ಕಡಮೆ ಇದೆ. ಬೆಳೆಯುತ್ತಿರುವ ಜಿಡಿಪಿಗೆ ಪೂರಕವಾಗಿ ಕಾರ್ಮಿಕರ ವೇತನವು ಹೆಚ್ಚಳವಾಗುತ್ತಿಲ್ಲ. ಆದರೆ, ಮ್ಯಾನೇಜರ್ ಮತ್ತು ಮೇಲ್ಮಟ್ಟದವರ ವೇತನ ತ್ವರಿತವಾಗಿ ಏರುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More