ರಫೇಲ್‌ ಒಪ್ಪಂದ ಕುರಿತ ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ರಫೇಲ್‌ ಯುದ್ದ ವಿಮಾನ ಖರೀದಿ ಮತ್ತು ಬೆಲೆಗೆ ಸಂಬಂಧಿಸಿದ ಮಾಹಿತಿ ನೀಡುವುದು ಬೇಕಿಲ್ಲ. ಆದರೆ, ರಫೇಲ್‌ ಒಪ್ಪಂದ ಮಾಡಿಕೊಳ್ಳುವ ನಿರ್ಧಾರವನ್ನು ಹೇಗೆ ಕೈಗೊಳ್ಳಲಾಯಿತು ಎಂಬ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ

ರಾಷ್ಟ್ರ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ರಫೇಲ್‌ ಒಪ್ಪಂದ ಕುರಿತ ವಿವರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ‌ ಸೂಚಿಸಿದೆ. ರಫೇಲ್‌ ಯುದ್ದವಿಮಾನ ಖರೀದಿ ಮತ್ತು ಬೆಲೆಗೆ ಸಂಬಂಧಿಸಿದ ಮಾಹಿತಿ ನೀಡುವುದು ಬೇಕಿಲ್ಲ. ಆದರೆ, ರಫೇಲ್‌ ಒಪ್ಪಂದವನ್ನು ಮಾಡಿಕೊಳ್ಳುವ ಸಂಬಂಧ ಹೇಗೆ ನಿರ್ಧಾರ ಕೈಗೊಳ್ಳಲಾಯಿತು ಎನ್ನುವುದರ ಬಗೆಗಿನ ವಿವರಗಳನ್ನು ಇದೇ ತಿಂಗಳು 29 ರೊಳಗೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ಕೇಂದ್ರಕ್ಕೆ ಆದೇಶಿಸಿದೆ.

ಕೇಂದ್ರ ಸರ್ಕಾರ ಫ್ರಾನ್ಸ್‌ ದೇಶದೊಂದಿಗೆ ಮಾಡಿಕೊಂಡ ರಫೇಲ್‌ ಒಪ್ಪಂದದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ರಫೇಲ್‌ ಒಪ್ಪಂದದ ಕುರಿತ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅ.10 ರಂದು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್‌ ಮತ್ತು ಕೆ ಎಂ ಜೋಸೆಫ್‌ ಅವರನ್ನು ಒಳಗೊಂಡ ಪೀಠವು, “ರಫೇಲ್‌ ಒಪ್ಪಂದದ ನಿರ್ಧಾರಗಳನ್ನು ಹೇಗೆ ಕೈಗೊಳ್ಳಲಾಯಿತು ಎಂಬ ವಿವರಗಳನ್ನಷ್ಟೇ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಲಿ. ವಿಮಾನ ಖರೀದಿ ಬೆಲೆ ನಿಗದಿ ಕುರಿತ ಯಾವುದೇ ಮಾಹಿತಿ ತನಗೆ ಬೇಡ,” ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ತಾನು ಪರಿಗಣಿಸುತ್ತಿಲ್ಲ ಎಂದೂ ಪೀಠ ಹೇಳಿದೆ.

ರಫೇಲ್‌ ಒಪ್ಪಂದ ಕುರಿತ ವಿವರ ನೀಡುವಂತೆ ಸುಪ್ರೀಂ ಕೋರ್ಟ್ಗೆ‌ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿರೋಧಿಸಿದ್ದ ಕೇಂದ್ರ ಸರ್ಕಾರ, ವಿರೋದ ಪಕ್ಷಗಳು ರಾಜಕೀಯ ಲಾಭಕ್ಕೋಸ್ಕರ ಈ ರೀತಿಯ ನಡೆ ಅನುಸರಿಸುತ್ತಿವೆ ಎಂದು ಆರೋಪಿಸಿತ್ತು. ಆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮಾತನಾಡಿರುವ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್, “ರಫೇಲ್‌ ಒಪ್ಪಂದ ಕುರಿತ ಸಮಸ್ಯೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು. ಇಂತಹ ಸಮಸ್ಯೆಯನ್ನು ನ್ಯಾಯಲಯದ ಮೂಲಕ ಬಗೆಹರಿಸಲಾಗದು,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ರಫೇಲ್‌ ವಿವಾದ | ಮೋದಿ ಪರ ಭೈರಪ್ಪ ವಕಾಲತ್ತು ಏನನ್ನು ಬಿಂಬಿಸುತ್ತದೆ?

ಇದೇ ವೇಳೆ ರಫೇಲ್‌ ಒಪ್ಪಂದದ ವಿಚಾರವಾಗಿ ಯಾವುದೇ ನೋಟಿಸ್‌ ಜಾರಿ ಮಾಡದೇ ಕೇವಲ ಒಪ್ಪಂದ ಕುರಿತ ವಿವರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಹೇಳಿದ್ದಾರೆ.

ಫ್ರಾನ್ಸ್‌ ದೇಶದಿಂದ ರು. 59 ಸಾವಿರ ಕೋಟಿ ಬೆಲೆಯ ಹಾರಾಟಕ್ಕೆ ಸಜ್ಜುಗೊಂಡಿರುವ 36 ಯುದ್ದ ವಿಮಾನಗಳನ್ನು ಕೊಂಡುಕೊಳ್ಳುವ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಕೇಂದ್ರ ಸರ್ಕಾರ ಆ ಒಪ್ಪಂದದ ಬಗೆಗಿನ ವಿವರಗಳನ್ನು ಬಹಿರಂಗಪಡಿಸಿಬೇಕೆಂದು ಎಂ ಎಲ್‌ ಶರ್ಮಾ ಎಂಬುವವರು ಸಾರ್ವಜನಿಕ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಶರ್ಮಾ ಸಲ್ಲಿಸಿರುವ ಅರ್ಜಿ ರಾಜಕೀಯ ಪ್ರೇರಿತವೆಂಬ ವಾದವನ್ನು ಕೇಂದ್ರ ಸರ್ಕಾರದ ಪರ ವಕೀಲರು ಮಂಡಿಸಿದ್ದರು. ಇದೇ ವಿಚಾರವಾಗಿ ಆರ್‌ಟಿಐ ಕಾರ್ಯಕರ್ತ ತೆಹಸೀನ್‌ ಪೂನಾವಾಲ್‌ ಅವರು ತಾವು ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ಹಿಂಪಡೆದುಕೊಂಡಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More