ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ 9 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಮಂಡ್ಯದವರೇ ಅಭ್ಯರ್ಥಿ: ಎಚ್‌ಡಿಡಿ

ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಥಳೀಯರನ್ನೇ ಅಭ್ಯರ್ಥಿಯಾಗಿಸಲಾಗುವುದು, ನಮ್ಮ ಕುಟುಂಬದವರು ಸ್ಪರ್ಧೆ ಮಾಡುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ ಹೇಳಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಶಿವಮೊಗ್ಗದಲ್ಲಿ ಜೆಡಿಎಸ್‌ ಯುವ ಮುಖಂಡ ಮಧು ಬಂಗಾರಪ್ಪ ಅವರನ್ನು ಹುರಿಯಾಳಾಗಿಸುವ ಯೋಚನೆಯಿದೆ. ಆದರೆ, ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಕಾಂಗ್ರೆಸ್‌ಗೂ ಅಭ್ಯರ್ಥಿ ಹುಡುಕುವಂತೆ ಹೇಳಲಾಗಿದೆ ಎಂದರು.

ಉಗ್ರಸಂಘಟನೆಯ ನಂಟಿನ ಶಂಕೆ- ಜಮ್ಮು ಕಾಶ್ಮೀರದಲ್ಲಿ ಮೂವರು ವಿದ್ಯಾರ್ಥಿಗಳ ಬಂಧನ

ಕಾಶ್ಮೀರದ ಗಝ್ವಾಲ್ ಉಲ್ ಹಿಂದ್ (ಎಜಿಹೆಚ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯ ಮೇರೆಗೆ ಮೂರು ಮಂದಿ ವಿದ್ಯಾರ್ಥಿಗಳನ್ನು ಜಲಂಧರ್ ಕಾಲೇಜಿನ ವಿದ್ಯಾರ್ಥಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿರುವ ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ವಶಪಡಿಕೊಳ್ಳಲಾಗಿದೆ. ಬಂಧಿತ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜಲಂಧರ್ ನ ಹೊರವಲಯದಲ್ಲಿರುವ ಶಹಾಪುರ್ ನ ಕಾಲೇಜು ಹಾಸ್ಟೇಲ್ ಮೇಲೆ ದಾಳಿ ನಡೆಸಿರುವ ಪೊಲೀಸರು ಝಹೀದ್‌ ಗುಲ್‌ಜಾರ್‌, ಮೊಹಮ್ಮದ್‌ ಇದ್ರಿಸ್‌ ಶಾ, ನದೀಮ್‌ ಮತ್ತು ಯೂಸುಫ್ ರಫೀಕ್‌ ಭಟ್‌ ನನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಪೊಲೀಸ್ ಮಹಾ ನಿರ್ದೇಶಕ ಸುರೇಶ್ ಅರೋರಾ, ಬಂಧಿತರ ಚಲನವಲನ, ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಯಿತು ಎಂದಿದ್ದಾರೆ.

ಸಂಸ್ಕಾರಿ ನಟ ಅಲೋಕ್‌ನಾಥ್ ರ ಮೇಲೆ ಮತ್ತೊಂದು ಲೈಂಗಿಕ ಕಿರುಕುಳ ಆರೋಪ‌

ಬಾಲಿವುಡ್ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಂಸ್ಕಾರಿ ಎಂದೇ ಜನಪ್ರಿಯರಾಗಿದ್ದ ನಟ ಅಲೋಕ್‌ನಾಥ್ ನಿರ್ಮಾಪಕಿ ವಿನಿತಾ ನಂದಾ ಮೇಲಿನ ಲೈಂಗಿಕ ಕಿರುಕುಳದ ‌ಆಪಾದನೆ ಎದುರಿಸುತ್ತಿರುವಾಗಲೇ, ಅಲೋಕ್‌ನಾಥ್ ಮತ್ತೊಂದು ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ, ಇದೀಗ ನಟಿ ಸಂಧ್ಯಾ ಮೃದುಲ್,‌ ಝೀ ಟೆಲಿಫಿಲ್ಮ್‌ ಚಿತ್ರೀಕರಣದ ಸಂದರ್ಭದಲ್ಲಿ ನಟ ಅಲೋಕ್ ಅವರು ಹೋಟೆಲ್‌ನಲ್ಲಿ ತಾವು ತಂಗಿದ್ದ ರೂಮಿಗೆ ನುಗ್ಗಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು, ಚಿತ್ರೀಕರಣದ ಮುಗಿದ ನಂತರವೂ ನನಗೆ ಕರೆ ಮಾಡಿ ತೊಂದರೆ ನೀಡಿದ್ದರು ಎಂದು ಹೇಳುವ ಮೂಲಕ ಅಲೋಕ್‌ನಾಥ್‌ ತಮ್ಮ ಮೇಲೆ ನಡೆಸಿದ್ದ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ.

ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡ ಹಿರಿಯ ವಕೀಲ ತುಷಾರ್ ಮೆಹ್ತಾ

ಹಿರಿಯ ವಕೀಲ ತುಷಾರ್ ಮೆಹ್ತಾ ಅವರು ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ 2014ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತುಷಾರ್ ಮೆಹ್ತಾ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಗಿತ್ತು. ಡಿಸೆಂಬರ್ ತಿಂಗಳಿನಲ್ಲಿ ರಂಜತ್ ಕುಮಾರ್ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಸಾಲಿಸಿಟರ್ ಜನರಲ್ ಹುದ್ದೆ ತೆರವುಗೊಂಡಿತ್ತು. ಇದೀಗ ತುಷಾರ್ ಮೆಹ್ತಾ ಈ ಹುದ್ದೆಗೆ ನೇಮಕಗೊಂಡಿದ್ದಾರೆ. ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ, ಜಮ್ಮು ಕಾಶ್ಮೀರದ 370ನೇ ವಿಶೇಷ ಸ್ಥಾನಮಾನ ಹೀಗೆ ಹಲವು ಪ್ರಕರಣಗಳಲ್ಲಿ ಮೆಹ್ತಾ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಆಸ್ಟ್ರೇಲಿಯಾ ಮಣಿಸಿದ ಭಾರತ ಸೆಮಿಫೈನಲ್‌ಗೆ

ಮಲೇಷ್ಯಾದ ಜೋಹರ್ ಬಹ್ರುವಿನಲ್ಲಿ ನಡೆಯುತ್ತಿರುವ ಕಿರಿಯರ ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾವನ್ನು ೫-೪ ಗೋಲುಗಳಿಂದ ಮಣಿಸಿದ ಭಾರತ ತಂಡ, ಉಪಾಂತ್ಯಕ್ಕೆ ಧಾವಿಸಿತು. ಭಾರತದ ಪರ ಗುರುಸಾಹಿಬ್‌ಜಿತ್ ಸಿಂಗ್ (೫ನೇ ನಿ) ಗೋಲು ಬಾರಿಸಿದರೆ, ೧೧, ೧೪ ಮತ್ತು ೧೫ನೇ ನಿಮಿಷದಲ್ಲಿ ಹಸ್ಪ್ರೀತ್ ಸಿಂಗ್, ಮನ್‌ದೀಪ್ ಸಿಂಗ್ ಹಾಗೂ ಮನ್‌ದೀಪ್ ಮೊರ್ ಹಾಗೂ ವಿಷ್ಣುಕಾಂತ್ ಸಿಂಗ್ ತಲಾ ಒಂದೊಂದು ಗೋಲು ಹೊಡೆದರು. ಮೊದಲ ಕ್ವಾರ್ಟರ್‌ನಲ್ಲೇ ೪-೦ ಮುನ್ನಡೆ ಸಾಧಿಸಿದ ಭಾರತದ ಪರ ಶಿಲಾನಂದ್ ಲಕ್ರಾ (೪೩ನೇ ನಿ.) ಐದನೇ ಗೋಲು ದಾಖಲಿಸಿದರು. ಶುಕ್ರವಾರ (ಅ.೧೨) ನಡೆಯಲಿರುವ ಐದನೇ ಪಂದ್ಯದಲ್ಲಿ ಭಾರತ, ಬ್ರಿಟನ್ ವಿರುದ್ಧ ಸೆಣಸಲಿದೆ.

#MeToo ಅಭಿಯಾನಕ್ಕೆ ಬ್ಯಾಡ್ಮಿಂಟನ್ ತಾರೆ ಸಿಂಧು ಬೆಂಬಲ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಲೈಂಗಿಕ ಶೋಷಣೆಯ ವಿರುದ್ಧದ # ಮಿ ಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂದು ಮಾತನಾಡಿರುವ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, "ಗೌರವಕ್ಕೆ ಹೆದರಿಕೊಂಡು ತಮಗಾದ ಕಿರುಕುಳದ ಬಗ್ಗೆ ಹೇಳಿಕೊಳ್ಳದವರು ಈಗ ಧೈರ್ಯವಾಗಿ ಮುಂದೆ ಬಂದು ತಾವನುಭವಿಸಿದ ಕಿರುಕುಳದ ಕುರಿತು ಹೇಳಿಕೊಳ್ಳುತ್ತಿರುವುದನ್ನು ನಾನು ಗೌರವಿಸುತ್ತೇನೆ,'' ಎಂದು ನವದೆಹಲಿಯಲ್ಲಿಂದು ನಡೆದ ಕಾರ್ಯಕ್ರಮವೊಂದರ ವೇಳೆ ಸಿಂಧು ತಿಳಿಸಿದರು. ಏತನ್ಮಧ್ಯೆ, ಆಯ್ಕೆ ವಿಷಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಮುಖ್ಯಸ್ಥರೊಬ್ಬರು ತನಗೆ ಮಾನಸಿಕ ಕಿರುಕುಳ ನೀಡಿದ್ದರೆಂಬ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಹೇಳಿಕೆಗೆ ಪ್ರತಿಕ್ರಿಯಿಸಲು ಇದೇ ವೇಳೆ ಸಿಂಧು ನಿರಾಕರಿಸಿದರು.

ಚೇತರಿಸಿಕೊಂಡ ಷೇರುಪೇಟೆ, ಸೆನ್ಸೆಕ್ಸ್ 461 ಅಂಶ ಜಿಗಿತ

ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ಒತ್ತಡದಲ್ಲಿರುವ ಸಾಲಗಳನ್ನು ಖರೀದಿಸಲು ಸ್ಟೇಟ್ ಬ್ಯಾಂಕ್ ಇಂಡಿಯಾ ಹೆಚ್ಚುಹಣ ಮೀಸಲಿರಿಸಿದ ಪರಿಣಾಮ ಬಹುತೇಕ ಎನ್ಬಿಎಫ್ಸಿ ಕಂಪನಿಗಳು ದಿನದ ವಹಿವಾಟಿನಲ್ಲಿ ಜಿಗಿದವು. ಐಟಿ, ಫಾರ್ಮ ಹೊರತು ಪಡಿಸಿ ಬಹುತೇಕ ಸೂಚ್ಯಂಕಗಳು ಏರಿಕೆ ಕಂಡವು. ಸೆನ್ಸೆಕ್ಸ್ 461 ಅಂಶ, ನಿಫ್ಟಿ 159 ಅಂಶ ಏರಿಕೆ ದಾಖಲಿಸಿದವು. ಸತತ ಒತ್ತಡದಲ್ಲಿದ್ದ ರುಪಾಯಿ 18 ಪೈಸೆಗಳಷ್ಟು ಚೇತರಿಕೆ ಕಂಡಿದೆ. ಆದರೆ, 74ರ ಮೇಲ್ಮಟ್ಟದಲ್ಲೇ ವಹಿವಾಟಾಗಿ 74.22ಕ್ಕೆ ಸ್ಥಿರಗೊಂಡಿದೆ. ರಿಯಾಲ್ಟಿ ವಲಯದ ಬಹುತೇಕ ಷೇರುಗಳು ಶೇ.3ರಿಂದ 10ರಷ್ಟು ಜಿಗಿದಿವೆ. ಚಿನ್ನ 100 ರುಪಾಯಿ ಏರಿದ್ದು 31450ರ ಆಜುಬಾಜಿನಲ್ಲಿ ವಹಿವಾಟಾಗಿದೆ.

ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ ಸ್ಥಾನದಿಂದ ಕೆಳಗಿಳಿದ ನಿರ್ದೇಶಕ ಅನುರಾಗ್ ಕಶ್ಯಪ್

ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ ಮಂಡಳಿಯ ಸದಸ್ಯ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಬುಧವಾರ ಹೇಳಿದ್ದಾರೆ. ಎಂಎಎಂಐ ಸದಸ್ಯರಾಗಿರುವ ಅನುರಾಗ್ ಕಶ್ಯಪ್, ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ನಿರ್ದೇಶಕ ವಿಕಾಸ್ ಬೆಹ್ಲ್ ಅವರನ್ನು ರಕ್ಷಿಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಎಂಐ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು ಕಳಂಕ ಮುಕ್ತನಾಗಿ ಬಂದ ನಂತರ ನಾನು ಸದಸ್ಯತ್ವ ಪುನಃ ಸ್ವೀಕರಿಸುತ್ತೇನೆ ಎಂದಿದ್ದಾರೆ.

ವಾಡಿಯಾ ವಿರುದ್ಧ ಪ್ರೀತಿ ಜಿಂಟಾ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣ ವಜಾಗೊಳಿಸಿದ ಕೋರ್ಟ್‌

ಉದ್ಯಮಿ ನೆಸ್‌ ವಾಡಿಯಾ ವಿರುದ್ಧ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ವಜಾಗೊಳಿಸಿ ಬಾಂಬೆ ಹೈಕೋರ್ಟ್‌ ಆದೇಶ ಹೊರಡಿಸಿದೆ. 2014 ರಲ್ಲಿ ಮುಂಬೈನ ವಾಂಖೇಡೆ ಸ್ಟೇಡಿಯಮ್‌ನಲ್ಲಿ ಸಾರ್ವಜನಿಕವಾಗಿ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ತಮ್ಮ ಮಾಜಿ ಪ್ರಿಯಕರ ನೆಸ್‌ ವಾಡಿಯಾ ಮೇಲೆ ಪ್ರೀತಿ ಜಿಂಟಾ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ನೆಸ್‌ ವಾಡಿಯಾ ಅರ್ಜಿ ಸಲ್ಲಿಸಿದ್ದರು. ವಾಡಿಯಾ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ರಂಜಿತ್‌ ಮೋರೆ ಮತ್ತು ಭಾರತಿ ಡೋಂಗ್ರೆ ಅವರು ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More