ಟ್ವಿಟರ್ ಸ್ಟೇಟ್ | ಕೇಂದ್ರ ಸಚಿವ ಅಕ್ಬರ್ ಕುತ್ತಿಗೆ ಬಿಗಿಯುತ್ತಿದೆ #MeToo ಕುಣಿಕೆ

ಭಾರತೀಯ ಪತ್ರಕರ್ತೆಯರು ಆರಂಭಿಸಿದ #MeToo ಅಭಿಯಾನದಿಂದ ಸಚಿವ ಎಂ ಜೆ ಅಕ್ಬರ್ ಬಚಾವಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಈಗಾಗಲೇ ಹತ್ತು ಮಂದಿ ಮಹಿಳೆಯರು ವೃತ್ತಿಪರಿಸರದಲ್ಲಿ ಎಂ ಜೆ ಅಕ್ಬರ್ ಪ್ರದರ್ಶಿಸಿದ ಲಂಪಟತನದ ಬಗ್ಗೆ ಟ್ವಿಟರ್ ಮತ್ತು ಮಾಧ್ಯಮಗಳಲ್ಲಿ ಬರೆದಿದ್ದಾರೆ

ಈಗಿನ ಕೇಂದ್ರ ಸಚಿವ ಎಂ ಜೆ ಅಕ್ಬರ್ ಮೇಲೆ ಐದು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯದ ಆರೋಪವೊಂದು ದೆಹಲಿ ಪೊಲೀಸರಿಗೆ ಬಂದಿತ್ತು. ಎಂ ಜೆ ಅಕ್ಬರ್‌ರ ಆಪ್ತ ಕಾರ್ಯದರ್ಶಿ ಈ ದೂರು ಕೊಟ್ಟಿದ್ದರು. ದೂರು ಕೊಟ್ಟ ಮರುದಿನ ಮಹಿಳೆಯ ದೂರನ್ನು ಮ್ಯಾಜಿಸ್ಟ್ರೇಟ್ ಮುಂದೆ ರೆಕಾರ್ಡ್ ಮಾಡುವಂತೆ ದೆಹಲಿ ಪೊಲೀಸರು ಸೂಚಿಸಿದ್ದರು. ಆದರೆ, ಮರುದಿನ ಮಹಿಳೆ ತನ್ನ ದೂರನ್ನು ಹಿಂತೆಗೆದುಕೊಂಡಿದ್ದರು. ಅಲ್ಲಿಗೆ ಎಂ ಜೆ ಅಕ್ಬರ್ ಬಚಾವಾಗಿದ್ದರು. ಈ ಬಗ್ಗೆ ಪತ್ರಕರ್ತೆ ಸುಪರ್ಣಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಆದರೆ, ಈಗ ಭಾರತೀಯ ಪತ್ರಕರ್ತೆಯರು ಆರಂಭಿಸಿದ ‘ಮೀಟೂ’ ( #MeToo ) ಅಭಿಯಾನದಿಂದ ಎಂ ಜೆ ಅಕ್ಬರ್ ಬಚಾವಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಈಗಾಗಲೇ ಸುಮಾರು ಹತ್ತು ಮಂದಿ ಮಹಿಳೆಯರು ಅಕ್ಬರ್ ಅವರು ವೃತ್ತಿಪರಿಸರದಲ್ಲಿ ತೋರಿಸಿದ ಲಂಪಟತನದ ಬಗ್ಗೆ ಟ್ವಿಟರ್ ಮತ್ತು ಮಾಧ್ಯಮಗಳಲ್ಲಿ ಬರೆದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ಅಕ್ಬರ್‌ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ವಿವರ ನೀಡಿಲ್ಲ. ಸದ್ಯ ಅಕ್ಬರ್ ನೈಜೀರಿಯಾದ ಲಾಗೋಸ್‌ನಲ್ಲಿ ಮಹಾತ್ಮ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದು, ಭಾನುವಾರದೊಳಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಪ್ರವಾಸದ ಅವಧಿಯನ್ನು ಕಡಿತಗೊಳಿಸಿ ಬೇಗನೆ ಮರಳುವಂತೆ ಅಕ್ಬರ್‌ಗೆ ಸೂಚಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಸಚಿವ ಎಂ ಜೆ ಅಕ್ಬರ್ ಮೇಲೆ ಲೈಂಗಿಕ ಲಂಪಟತನ ಪ್ರದರ್ಶಿಸಿದ ಮತ್ತೊಂದು ಆರೋಪ

ಆದರೆ, ಈವರೆಗೆ ಅಕ್ಬರ್ ಮೇಲೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಹಾಗೂ ಅಧಿಕೃತ ದೂರುಗಳು ಬಾರದೆ ಇರುವ ಕಾರಣ ತಕ್ಷಣವೇ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂದು ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ, ಎಂ ಜೆ ಅಕ್ಬರ್ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ಎಂದು ವಿರೋಧ ಪಕ್ಷಗಳು ಹೇಳಿವೆ. ಆದರೆ, ಅಕ್ಬರ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿಯ ಮಹಿಳಾ ಸಚಿವರು ಮತ್ತು ಪಕ್ಷದ ಮಹಿಳಾ ಮುಖಂಡರು ಅಕ್ಬರ್ ಕುರಿತ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಪ್ರತಿಕ್ರಿಯಿಸಿ, “ಎಂ ಜೆ ಅಕ್ಬರ್ ಮೇಲಿನ ಆರೋಪಗಳ ವಿಚಾರಣೆ ಆಗಬೇಕಿದೆ. ಅಧಿಕಾರದಲ್ಲಿರುವ ವ್ಯಕ್ತಿಗಳು ಇಂತಹ ಕೃತ್ಯಗಳನ್ನು ನಡೆಸುವುದು ಸಾಮಾನ್ಯವಾಗಿ ಕೇಳಿಬರುತ್ತದೆ. ಇದು ಮಾಧ್ಯಮ, ರಾಜಕೀಯ ವಲಯ ಮತ್ತು ಇತರ ಕಂಪನಿಗಳಲ್ಲೂ ನಡೆಯುತ್ತದೆ. ಈಗ ಮಹಿಳೆಯರು ತಮ್ಮ ಅನುಭವಗಳನ್ನು ಹೇಳಿಕೊಳ್ಳಲು ಆರಂಭಿಸಿರುವ ಕಾರಣದಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು,” ಎಂದು ಹೇಳಿದ್ದಾರೆ.

ಈ ಮಧ್ಯೆ, ಎಂ ಜೆ ಅಕ್ಬರ್ ಅವರ ವಿದೇಶಾಂಗ ಖಾತೆಯಲ್ಲಿ ಹಿರಿಯ ಸಚಿವರಾಗಿರುವ ಸುಷ್ಮಾ ಸ್ವರಾಜ್, ತಮ್ಮ ಖಾತೆಯ ಕಿರಿಯ ಸಚಿವರ ಬಗ್ಗೆ ಅಭಿಪ್ರಾಯ ನೀಡಲು ನಿರಾಕರಿಸಿದ್ದಾರೆ. ಮಾಧ್ಯಮಗಳು ಸುಷ್ಮಾ ಸ್ವರಾಜ್‌ರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು ಉತ್ತರಿಸದೆ ಮುಂದೆ ಸಾಗಿದ್ದಾರೆ. ಬಿಜೆಪಿಯ ಮತ್ತೊಬ್ಬ ಪ್ರಮುಖರಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಇದೇ ಪ್ರಶ್ನೆಯನ್ನು ಇಟ್ಟಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುತ್ತಿರುವ ಮಹಿಳೆಯರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ಅಕ್ಬರ್‌ ಮೇಲಿನ ದೂರುಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. “ಅವರ ಬಗ್ಗೆ ಪ್ರತಿಕ್ರಿಯಿಸಲು ನಾನು ಸೂಕ್ತ ವ್ಯಕ್ತಿಯಲ್ಲ,” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಿಜೆಪಿಯ ಮತ್ತೊಬ್ಬ ನಾಯಕಿ, ಜವಳಿ ಸಚಿವೆ ಸ್ಮೃತಿ ಇರಾನಿ, “ಮಹಿಳೆಯರು ಲಂಪಟರನ್ನು ಎದುರಿಸಲು ವೃತ್ತಿ ಮಾಡುವುದಿಲ್ಲ. ಅವರಿಗೆ ಕನಸುಗಳು ಮತ್ತು ಗೌರವಯುತ ಜೀವನದ ಅವಕಾಶಗಳ ಆಶಯಗಳಿರುತ್ತವೆ. ಸದ್ಯ ಲಂಪಟರ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವ ಮಹಿಳೆಯರಿಗೆ ನ್ಯಾಯ ಸಿಗಲಿದೆ ಎನ್ನುವ ಆಶಯ ನನ್ನದು,” ಎಂದಿದ್ದಾರೆ. ಆದರೆ, ತಮ್ಮ ಸರ್ಕಾರದ ಸಚಿವ ಅಕ್ಬರ್‌ ಮೇಲಿನ ಆರೋಪಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ. “ತಮ್ಮ ಮೇಲಿನ ಆರೋಪಗಳ ಬಗ್ಗೆ ಸ್ವತಃ ಅಕ್ಬರ್ ಅವರೇ ಸೂಕ್ತ ಉತ್ತರ ನೀಡಬಲ್ಲರು,” ಎಂದು ಪ್ರಶ್ನೆಗೆ ನೇರ ಉತ್ತರ ನೀಡದೆ ತಪ್ಪಿಸಿಕೊಂಡರು.

ಕಾಂಗ್ರೆಸ್‌ನಿಂದ ಇತ್ತೀಚೆಗೆ ಬಿಜೆಪಿ ಸೇರಿರುವ ಹಿರಿಯ ಮಹಿಳಾ ರಾಜಕಾರಣಿ ಆರ್ ಬಿ ಜೋಶಿ ಅವರು ಪ್ರತಿಕ್ರಿಯಿಸಿ, “ಇಲ್ಲಿ ರಾಜಿನಾಮೆಯ ಪ್ರಶ್ನೆ ಬರುವುದಿಲ್ಲ. ನಾನು ಒಬ್ಬರ ಮೇಲೆ ಆರೋಪ ಹೊರಿಸಿದರೆ, ಅದು ಸಾಬೀತಾಗಬೇಕು. ಪ್ರತಿ ಮಹಿಳೆಗೂ ಆರೋಪಿಸುವ ಹಕ್ಕಿದೆ. ಅದು ತನಿಖೆಯಾಗಬೇಕು. ಮಹಿಳೆಯರು ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. ಪುರುಷನಿಗೂ ಈಗ ತನ್ನ ಸಮರ್ಥನೆಗೆ ಅವಕಾಶ ಸಿಗಬೇಕು,” ಎಂದು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More