ವಲಸಿಗ ಕಾರ್ಮಿಕರು ಗುಜರಾತ್ ತೊರೆಯುತ್ತಿದ್ದಂತೆ ಕೈಗಾರಿಕಾ ಉತ್ಪಾದನೆಯಲ್ಲಿ ಭಾರಿ ಕುಸಿತ

ಅತ್ಯಾಚಾರ ಪ್ರಕರಣದ ಬಳಿಕ ಗುಜರಾತಿನಲ್ಲಿ ಆರಂಭವಾದ ವಲಸಿಗ ವಿರೋಧಿ ಅಭಿಯಾನ ತಾರಕಕ್ಕೇರಿದೆ. ವಲಸಿಗ ಕಾರ್ಮಿಕರು ರಾಜ್ಯ ತೊರೆಯಲು ಆರಂಭಿಸಿದ್ದು, ಇದು ಗುಜರಾತಿನ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಕುರಿತು ‘ದಿ ವೈರ್’ ಪ್ರಕಟಿಸಿದ ವರದಿಯ ಭಾವಾನುವಾದ ಇಲ್ಲಿದೆ

ಗುಜರಾತಿನಲ್ಲಿ ವಲಸಿಗ ಕಾರ್ಮಿಕರ ಮೇಲಿನ ಹಿಂಸಾಚಾರ ಹೆಚ್ಚಿದ್ದು, ಅವರು ರಾಜ್ಯ ತೊರೆಯುತ್ತಿದ್ದಾರೆ. ಪರಿಣಾಮವಾಗಿ, ದೀಪಾವಳಿಗೂ ಮೊದಲಿನ ಅವಧಿಯಲ್ಲಿ ರಾಜ್ಯದ ಕೈಗಾರಿಕಾ ಉತ್ಪಾದನೆ ಶೇ.15ರಿಂದ ಶೇ.20ರಷ್ಟು ಕುಸಿತ ಕಂಡಿದೆ. ಗುಜರಾತ್ ಕಾರ್ಮಿಕ ವಲಯದ ಶೇ.70ರಷ್ಟಿರುವ ಸುಮಾರು ಒಂದು ಕೋಟಿ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶದಿಂದ ಬಂದವರು. ಅವರು ಗುಜರಾತ್ ಆರ್ಥಿಕತೆಯ ಬೆನ್ನೆಲುಬು ಕೂಡ.

ಸೆ.28ರಂದು ಬಿಹಾರದ ಕಾರ್ಮಿಕನೊಬ್ಬ ಗುಜರಾತಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಸೆರೆಸಿಕ್ಕ ಬಳಿಕ ಅಲ್ಲಿ ವಲಸಿಗ ವಿರೋಧಿ ಅಭಿಯಾನವೊಂದು ಆರಂಭವಾಯಿತು. ಅಂದಿನಿಂದ ಅ.3ರವರೆಗೆ ಕನಿಷ್ಠ 42 ದಾಳಿಗಳು ವರದಿಯಾಗಿವೆ. ರಕ್ಷಣೆ ಸಿಗದೆ ಬೆದರಿದ, ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಬಂದಿದ್ದ ವಲಸಿಗ ಕಾರ್ಮಿಕರು ವಾಪಸಾಗಲು ಆರಂಭಿಸಿದರು. ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಅವರಿಗೆ ಸೇರಿದ ಗುಜರಾತ್ ಕ್ಷತ್ರಿಯ ಸೇನೆಯ ಸದಸ್ಯರೂ ಸೇರಿದಂತೆ ದಾಳಿ ನಡೆಸಿದ 342 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಹಿಂದೂಸ್ತಾನ್ ಟೈಮ್ಸ್’ ವರದಿ ಪ್ರಕಾರ, ಅಹಮದಾಬಾದ್, ಮೆಹ್ಸಾನಾ, ಸಬರ್ ಕಾಂತ ಜಿಲ್ಲೆಗಳ ಸಣ್ಣ ಕೈಗಾರಿಕೆಗಳ ಕಾರ್ಮಿಕ ಸಮೂಹ ರಾಜ್ಯ ತೊರೆದಿದೆ ಅಥವಾ ಕೆಲಸಕ್ಕೆ ಹಾಜರಾಗುತ್ತಿಲ್ಲ. ಪರಿಣಾಮವಾಗಿ, ಕೈಗಾರಿಕಾ ಉತ್ಪಾದನೆಯ ಮಹತ್ವದ ಹೊತ್ತಿನಲ್ಲಿ ಭಾರಿ ಕುಸಿತ ಉಂಟಾಗಿದೆ. ಟಾಟಾ ನ್ಯಾನೊ ಕಾರ್ಖಾನೆ ಗುಜರಾತಿಗೆ ಸ್ಥಳಾಂತರಗೊಂಡ ಬಳಿಕ 2008ರಲ್ಲಿ ಸ್ಥಾಪನೆಯಾದ ಸಾನಂದ್ ಇಂಡಸ್ಟ್ರಿಯಲ್ ಎಸ್ಟೇಟ್ ದೊಡ್ಡ ವಲಸಿಗ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿತು. “ಇಲ್ಲಿ ಕೆಲಸ ಮಾಡುತ್ತಿರುವ 20,000 ಕಾರ್ಮಿಕರಲ್ಲಿ ಕನಿಷ್ಠ 10,000 ಜನರು ವಲಸಿಗರು,” ಎಂದು ಪತ್ರಿಕೆಗೆ ತಿಳಿಸಿರುವ ಎಸ್ಟೇಟ್ ಅಧ್ಯಕ್ಷ ಅಜಿತ್ ಶಾ, "ಸುಮಾರು 3,000 ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆ ಅಥವಾ ಅವರ ಮನೆಗಳಲ್ಲಿ ಉಳಿದಿದ್ದಾರೆ. ಇದರಿಂದ ಒಟ್ಟು ಉತ್ಪಾದನೆಯಲ್ಲಿ ಸುಮಾರು ಶೇ.15-20ರಷ್ಟು ಕುಸಿತವಾಗಿದೆ," ಎಂದಿದ್ದಾರೆ.

“ಅಹಮದಾಬಾದ್ ಮತ್ತು ಉತ್ತರ ಗುಜರಾತಿನಲ್ಲಿ ಮಾತ್ರ ಈ ದಾಳಿಗಳು ವರದಿಯಾಗಿದ್ದು, ಕಛ್, ಸೌರಾಷ್ಟ್ರ, ಮಧ್ಯ ಹಾಗೂ ದಕ್ಷಿಣ ಗುಜರಾತಿನಲ್ಲಿ ಕೈಗಾರಿಕೆಗಳು ಹರಡಿವೆ,” ಎಂದು ಗುಜರಾತ್ ಕೈಗಾರಿಕಾ ಮತ್ತು ವಾಣಿಜ್ಯ ಮಹಾಮಂಡಳದ (ಜಿಸಿಸಿಐ) ಅಧ್ಯಕ್ಷ ಜಾಮಿನ್ ವಾಸಾ ತಿಳಿಸಿದ್ದಾರೆ. "ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಭಾಗಗಳು ರಾಜ್ಯದ ಆರ್ಥಿಕತೆಯ ಚಾಲನಾ ಶಕ್ತಿ. ಅಹಮದಾಬಾದ್ ಮತ್ತು ಉತ್ತರ ಗುಜರಾತಿನಲ್ಲಿ ಮಾತ್ರ ಹಿಂಸಾಚಾರ ನಡೆದಿತ್ತು. ಅದೂ ಮೊದಲ ಎರಡು, ಮೂರು ದಿನ ಮಾತ್ರ. ಇದರಿಂದ ಸುಮಾರು ಶೇ.15ರಷ್ಟು ಉತ್ಪಾದನೆಯ ಮೇಲೆ ಪರಿಣಾಮ ಬೀರಿರಬಹುದು. ಇದು ಉಳಿದ ವಲಯಗಳ ಮೇಲೆ ಪ್ರಭಾವ ಬೀರಿರುವುದು ವರದಿಯಾಗಿಲ್ಲ,'' ಎಂದೂ ಅವರು ಹೇಳಿದ್ದಾರೆ.

“ಇಷ್ಟಾದರೂ ಬೃಹತ್ ಕೈಗಾರಿಕೆಗಳಿಗೆ ಹಿಂಸಾಚಾರದ ಪರಿಣಾಮ ತಟ್ಟಿಲ್ಲ. ಏಕೆಂದರೆ, ಮುಂಜಾಗ್ರತೆ ಕ್ರಮವಾಗಿ ಆ ಕೈಗಾರಿಕೆಗಳು ಸರ್ಕಾರದಿಂದ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದವು,” ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇದನ್ನೂ ಓದಿ : ಗುಜರಾತಿನಲ್ಲಿ ಹಿಂದಿ ಭಾಷಿಕ ಕಾರ್ಮಿಕರ ಮೇಲೆ ನಡೆದ ದಾಳಿಗಳಿಗೆ ರಾಜಕೀಯ ಬಣ್ಣ

ಈ ಮಧ್ಯೆ, ಹಿಂಸಾಚಾರ ಮತ್ತು ಕಾರ್ಮಿಕರ ವಲಸೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಹಿಂಸಾಚಾರವನ್ನು ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಿದ್ದಂತೆ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಿಡಿದೆದ್ದಿದ್ದಾರೆ. ಟ್ವಿಟರ್‌ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಅವರು, “ಕಾಂಗ್ರೆಸ್ ಅಧ್ಯಕ್ಷರು ನಿಜವಾಗಿಯೂ ಹಿಂಸಾಚಾರಕ್ಕೆ ವಿರುದ್ಧವಾಗಿದ್ದರೆ ಅವರು ತಮ್ಮ ಪಕ್ಷದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದಿದ್ದಾರೆ.

ಇತ್ತ, ಕಾಂಗ್ರೆಸ್ ಗುಜರಾತ್ ಘಟಕದ ಅಧ್ಯಕ್ಷ ಅಮಿತ್ ಚಾವ್ಡಾ, “ಬಿಜೆಪಿಗರು ಕ್ಷುಲ್ಲಕ ಚುನಾವಣಾ ಲಾಭಕ್ಕಾಗಿ ಹಿಂಸಾಚಾರ ಪ್ರಚೋದಿಸುತ್ತಿದ್ದಾರೆ,” ಎಂದಿದ್ದಾರೆ. ಕಾಂಗ್ರೆಸ್ ಸದಸ್ಯರೇ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರಲ್ಲ ಎಂಬ ಪ್ರಶ್ನೆಗೆ, “ಕಾಂಗ್ರೆಸ್‌ನವರು ಹಿಂಸಾಚಾರದಲ್ಲಿ ತೊಡಗಿಲ್ಲ. ಬಿಜೆಪಿ ವಿನಾಕಾರಣ ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ,” ಎಂದು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More