ಪಾಲುದಾರರ ಆಯ್ಕೆ ಮುಕ್ತವಾಗಿತ್ತೆಂದು ಸ್ಪಷ್ಟನೆ ನೀಡಿದ ಡಸಾಲ್ಟ್‌ ಏವಿಯೇಶನ್‌

ರಫೇಲ್ ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್‌ ಜೊತೆಗಿನ ಪಾಲುದಾರಿಕೆ ಕಡ್ಡಾಯವಾಗಿತ್ತು ಎಂದು ಡಸಾಲ್ಟ್‌ ಏವಿಯೇಶನ್‌ ತಿಳಿಸಿದ್ದಾಗಿ ಎಂದು ಫ್ರಾನ್ಸ್‌ ಮೂಲದ ಸ್ವತಂತ್ರ ತನಿಖಾ ನಿಯತಕಾಲಿಕೆ ‘ಮೀಡಿಯಾ ಪಾರ್ಟ್’ ವರದಿ ಮಾಡಿತ್ತು. ಆದರೆ ಈ ವರದಿಯನ್ನು ಡಸಾಲ್ಟ್‌ ಏವಿಯೇಶನ್‌ ಅಲ್ಲಗಳೆದಿದೆ

ರಫೇಲ್‌ ಒಪ್ಪಂದದಲ್ಲಿ ಪಾಲುದಾರರ ಆಯ್ಕೆ ಮುಕ್ತವಾಗಿತ್ತು. ತಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದು ಡಸಾಲ್ಟ್‌‌ ಏವಿಯೇಶನ್‌ ಹೇಳಿದೆ. ರಫೇಲ್ ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್‌ ಜೊತೆಗಿನ ಪಾಲುದಾರಿಕೆ ಕಡ್ಡಾಯವಾಗಿತ್ತು ಎಂದು ಡಸಾಲ್ಟ್‌ ಏವಿಯೇಶನ್‌ ತಿಳಿಸಿದ್ದಾಗಿ ಎಂಬ ಫ್ರಾನ್ಸ್‌ ಮೂಲದ ಸ್ವತಂತ್ರ ತನಿಖಾ ನಿಯತಕಾಲಿಕೆ ‘ಮೀಡಿಯಾ ಪಾರ್ಟ್’ ವರದಿಯನ್ನು ಡಸಾಲ್ಟ್‌ ಏವಿಯೇಶನ್‌ ಅಲ್ಲಗಳೆದಿದೆ. ‘ಮೀಡಿಯಾ ಪಾರ್ಟ್‌’ ವರದಿಯು, “ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆಯೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳವುದು ಕಡ್ಡಾಯ ಮತ್ತು ಅನಿವಾರ್ಯವಾಗಿತ್ತು ಎಂದು ಡಸಾಲ್ಟ್‌ ಏವಿಯೇಶನ್‌ ಸಂಸ್ಥೆಯ ಆಂತರಿಕ ದಾಖಲೆಗಳಿಂದ ತಿಳಿದುಬಂದಿದೆ,” ಎಂದಿತ್ತು.

ಮೇ 11, 2017ರಂದು ಡಸಾಲ್ಟ್‌ ಏವಿಯೇಶನ್‌ ಸಂಸ್ಥೆಯಲ್ಲಿ ನಡೆದ ಆಂತರಿಕ ಸಭೆಯಲ್ಲಿ‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲೋಯಿಕ್‌ ಸೆಗಲೆನ್, “ರಫೇಲ್‌ ಯುದ್ಧವಿಮಾನ ರಫ್ತು ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್‌ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದು ಕಡ್ಡಾಯ ಮತ್ತು ಅನಿವಾರ್ಯವಾಗಿತ್ತು,” ಎಂಬ ಮಾಹಿತಿ ತಮ್ಮ ನೌಕರರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ದಾಖಲೆ ಆಧರಿಸಿ ವರದಿ ಪ್ರಕಟಿಸಿಲಾಗಿತ್ತು.

‘ಮೀಡಿಯಾ ಪಾರ್ಟ್‌’ ವರದಿಯನ್ನು ತಳ್ಳಿಹಾಕಿರುವ ಡಸಾಲ್ಟ್‌ ಏವಿಯೇಶನ್, “ಭಾರತದೊಂದಿಗಿನ ರಫೇಲ್‌ ಒಪ್ಪಂದದಲ್ಲಿ ಪಾಲುದಾರರ ಆಯ್ಕೆ ಸ್ವತಂತ್ರವಾಗಿತ್ತು,” ಎಂದು ಗುರುವಾರ ಸ್ಪಷ್ಟಪಡಿಸಿದೆ. ಆ ವಿಚಾರವಾಗಿ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಡಸಾಲ್ಟ್‌ ಏವಿಯೇಶನ್‌, “ಪಾಲುದಾರರ ಆಯ್ಕೆ ವಿಚಾರದಲ್ಲಿ ಡಸಾಲ್ಟ್‌ ಏವಿಯೇಶನ್‌ ಸ್ವತಂತ್ರವಾಗಿತ್ತು. ಆ ಮೂಲಕ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಸಮೂಹದೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲಾಯಿತು. ಫೆ.10, 2017ರಂದು ಡಸಾಲ್ಟ್‌ ರಿಲಯನ್ಸ್‌ ಏರೋಸ್ಪೇಸ್‌ ಲಿಮಿಟೆಡ್ (ಡಿಆರ್‌ಎಎಲ್‌‌)‌ ಎಂಬ ಸಹಭಾಗಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಭಾರತದೊಂದಿಗಿನ ರಫೇಲ್‌ ಪಾಲುದಾರಿಕೆ ಒಪ್ಪಂದಕ್ಕೆ ಬಿಟಿಎಸ್‌ಎಲ್‌, ಡಿಇಎಫ್‌ಎಸ್‌ವೈಎಸ್‌, ಕೈನೆಟಿಕ್‌, ಮಹೀಂದ್ರ, ಮೈನಿ, ಸ್ಯಾಮ್‌ಟೆಲ್ ಕಂಪನಿಗಳು ಸಹ ಸಹಿ ಮಾಡಿವೆ,” ಎಂದು ಸ್ಪಷ್ಟಪಡಿಸಿದೆ.

ಗುರುವಾರ‌ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಫ್ರಾನ್ಸ್‌ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಡಸಾಲ್ಟ್‌ ಏವಿಯೇಶನ್‌ ನೀಡಿರುವ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ. ಫ್ರಾನ್ಸ್ ಭೇಟಿ ಸಂದರ್ಭದಲ್ಲಿ‌ ನಿರ್ಮಲಾ ಸೀತಾರಾಮನ್‌ ಅವರು 36 ಯುದ್ಧವಿಮಾನ ತಯಾರಿಕೆ ಕಾರ್ಯವನ್ನು ಪರೀಕ್ಷಿಸಿ ಹಾಗೂ ಅವುಗಳ ಆಮದು ಬಗೆಗಿನ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಭಾರತೀಯ ವಾಯುಪಡೆಗೆ 36 ಯುದ್ಧವಿಮಾನ ಹಸ್ತಾಂತರಿಸಲು 58 ಸಾವಿರ ಕೋಟಿ ರು.ಗಳ ಒಪ್ಪಂದವಾಗಿದೆ.

ಇದನ್ನೂ ಓದಿ : ರಫೇಲ್‌ ಹಗರಣದಲ್ಲಿ ಮೋದಿ ನೇರ ಹೊಣೆಗಾರರು: ಶೌರಿ, ಸಿನ್ಹಾ, ಭೂಷಣ್ ಆರೋಪ

ರಿಲಯನ್ಸ್‌ ಜೊತೆಗಿನ ಪಾಲುದಾರಿಕೆ ಒಪ್ಪಂದ ಕಡ್ಡಾಯವಾಗಿತ್ತು ಎಂಬ ‘ಮೀಡಿಯಾ ಪಾರ್ಟ್‌’ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಮತ್ತು ರಿಲಯನ್ಸ್‌ ಸಮೂಹದ ಒಡೆಯ ಅನಿಲ್‌ ಅಂಬಾನಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಉದ್ಯಮಿ ಅನಿಲ್‌ ಅಂಬಾನಿಯವರ ಚೌಕಿದಾರ,” ಎಂದು ಕರೆದಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಭ್ರಷ್ಟರೆಂದು ಉಲ್ಲೇಖಿಸಿರುವ ರಾಹುಲ್‌ ಗಾಂಧಿ, “ನಷ್ಟದಲ್ಲಿರುವ ಅನಿಲ್‌ ಅಂಬಾನಿ ಅವರ ಜೇಬಿಗೆ 30 ಸಾವಿರ ಕೋಟಿ ರು. ತುಂಬಿಸಲು ಪ್ರಧಾನಿ ಮೋದಿಯವರು ರಫೇಲ್‌ ಒಪ್ಪಂದ ಬಳಸಿಕೊಂಡಿದ್ದಾರೆ. ಅವರು ಭ್ರಷ್ಟರಾಗಿದ್ದು, ಅವರ ವಿರುದ್ಧ ತನಿಖೆಯಾಗಬೇಕು. ಇಂತಹ ಸನ್ನಿವೇಶದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತುರಾತುರಿಯಲ್ಲಿ ಫ್ರಾನ್ಸ್‌ಗೆ ತೆರಳುವ ಅವಶ್ಯಕತೆ ಏನಿತ್ತು?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, “ಪ್ರಧಾನಿ ಮೋದಿಯವರು ಅನಿಲ್‌ ಅಂಬಾನಿ ಅವರ ಚೌಕಿದಾರ. ಅನಿಲ್‌ ಅಂಬಾನಿಯವರಿಗೆ ‌ಸಹಾಯ ಮಾಡಲು ಅವರು ಪ್ರಧಾನಿಯಾಗಿದ್ದಾರೆ. ತಮ್ಮ ಆರೋಪಗಳಿಗೆ ಉತ್ತರ ನೀಡಲು ಆಗದಿದ್ದರೆ ಮೋದಿ ರಾಜಿನಾಮೆ ನೀಡಲಿ,” ಎಂದು ಒತ್ತಾಯಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More