ತೀವ್ರ ಕುಸಿತದ ನಂತರ ಕೊಂಚ ಚೇತರಿಸಿಕೊಂಡ ಷೇರುಪೇಟೆ, ರುಪಾಯಿ ಚೇತರಿಕೆ

ವಾಲ್ ಸ್ಟ್ರೀಟ್‌ನಲ್ಲಿ ಟೆಕ್ನಾಲಜಿ ಕಂಪನಿಗಳ ಷೇರು ಕುಸಿತ ಜಾಗತಿಕವಾಗಿ ವ್ಯಾಪಿಸಿದ್ದು, ಬಹುತೇಕ ಷೇರುಪೇಟೆಗಳು ತೀವ್ರವಾಗಿ ಕುಸಿದಿವೆ. ದೇಶೀಯ ಪೇಟೆಯಲ್ಲಿ ಆರಂಭ ರಕ್ತದೋಕುಳಿ ನಂತರ ಚೇತರಿಕೆ  ಕಂಡು ಬಂತು. 1000 ಅಂಶ ಕುಸಿದಿದ್ದ ಸೆನ್ಸೆಕ್ಸ್ 550 ಅಂಶಗಳಷ್ಟು ಚೇತರಿಸಿಕೊಂಡಿತು

ಜಾಗತಿಕ ಷೇರುಪೇಟೆಗಳಲ್ಲಿ ತೀವ್ರಗತಿಯಲ್ಲಿ ರಕ್ತದೋಕುಳಿ ನಡೆದಿದೆ. ಆಪಲ್, ಅಲ್ಫಾಬಿಟ್ ಸೇರಿದಂತೆ ಟೆಕ್ನಾಲಜಿ ಕಂಪನಿಗಳ ಕುಸಿತದೊಂದಿಗೆ ಆರಂಭವಾದ ರಕ್ತದೋಕುಳಿ ಜಾಗತಿಕವಾಗಿ ವ್ಯಾಪಿಸಿದೆ. ನ್ಯಾಸ್ಡಾಕ್ ಕಾಂಪೋಸಿಟ್, ಡೌವ್ ಜೋನ್ಸ್ ತೀವ್ರ ಕುಸಿತ ದಾಖಲಿಸಿದ್ದರೆ, ಇತ್ತ ಏಷ್ಯಾ ಮಾರುಕಟ್ಟೆಯಲ್ಲಿ ತೈವಾನ್ ಇಂಡೆಕ್ಸ್ ಶೇ.6.50ರಷ್ಟು ಕುಸಿದಿದೆ. ನಿಕ್ಕಿ, ಕೊಪ್ಸಿ, ಹ್ಯಾಂಗ್ಶೆಂಗ್ ತಲಾ ಶೇ.4ರಷ್ಟು ಕುಸಿದಿವೆ.

ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಮಾಡಿದ ಪರಿಣಾಮ, ಹೂಡಿಕೆದಾರರು ಹೆಚ್ಚು ರಿಸ್ಕ್ ಇರುವ ಷೇರುಪೇಟೆಯಿಂದ ಹೂಡಿಕೆ ಹಿಂಪಡೆದು ಡಾಲರ್ ಮೇಲಿನ ಆಕರ್ಷಕ ಗಳಿಕೆಯತ್ತ ಮುಖ ಮಾಡುತ್ತಿದ್ದಾರೆ. ಇದು ಜಾಗತಿಕ ಪೇಟೆಗಳು ಕುಸಿಯಲು ಕಾರಣವಾಗಿದೆ.

ಕಚ್ಚಾ ತೈಲ ಕಳೆದ ನಾಲ್ಕು ದಿನಗಳಲ್ಲಿ ಶೇ.8ರಷ್ಟು ಇಳಿದಿದೆ. ಬ್ರೆಂಟ್ ಕ್ರೂಡ್ 81 ಡಾಲರ್‌ಗೆ, ಡಬ್ಲ್ಯೂಟಿಐ ಕ್ರೂಡ್ 72 ಡಾಲರ್‌ಗೆ ಇಳಿದಿದ್ದು, ಮತ್ತಷ್ಟು ಕುಸಿಯುವ ನಿರೀಕ್ಷೆ ಇದೆ. ದೇಶೀಯ ಪೇಟೆಯಲ್ಲೂ ಪೆಟ್ರೋಲ್, ಡಿಸೇಲ್ ದರ ಇಳಿಕೆ ನಿರೀಕ್ಷಿಸಲಾಗಿದೆ.

ಸೆಪ್ಟೆಂಬರ್ ತಿಂಗಳು ಮತ್ತು ಅಕ್ಟೋಬರ್ ತಿಂಗಳ ಮೊದಲ ಹತ್ತು ದಿನಗಳು ದೇಶೀಯ ಷೇರುಪೇಟೆ ಪಾಲಿಗೆ ದುಸ್ವಪ್ನವಾಗಿ ಕಾಡಿವೆ. ಇಡೀ ವರ್ಷದಲ್ಲಿ ಗಳಿಸಿದ್ದ ಏರಿಕೆಯು ಕಳೆದ ಮೂವತ್ತು ದಿನಗಳಲ್ಲಿ ನಶಿಸಿಹೋಗಿದೆ.

ಬುಧವಾರ ತೀವ್ರ ಚೇತರಿಕೆ ಪಡೆದಿದ್ದ ದೇಶೀಯ ಷೇರುಪೇಟೆಯು ಗುರುವಾರದ ಆರಂಭದಲ್ಲಿ ನಿನ್ನೆಯ ಗಳಿಕೆಯ ದುಪ್ಪಟ್ಟು ಇಳಿಕೆ ದಾಖಲಿಸಿದೆ. ವಿಸ್ತೃತ ಮಾರುಕಟ್ಟೆಯ ಎಲ್ಲ ಸೂಚ್ಯಂಕಗಳು ಇಳಿಜಾರಿನಲ್ಲಿವೆ. ರಿಯಾಲ್ಟಿ, ಆಟೋ, ಮೆಟಲ್, ಟೆಕ್, ಪಿಎಸ್ಯು ಬ್ಯಾಂಕ್, ಪ್ರೈವೆಟ್ ಬ್ಯಾಂಕ್, ಎಫ್ಎಂಸಿಜಿ ಸೂಚ್ಯಂಕಗಳು ಶೇ.3ರಷ್ಟು ಕುಸಿತ ದಾಖಲಿಸಿವೆ. ಉಳಿದ ಸೂಚ್ಯಂಕಗಳು ಶೇ.1ರಿಂದ 3ರಷ್ಟು ಕುಸಿದಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕುಸಿತದ ಪರಿಣಾಮ ದೇಶೀಯ ತೈಲ ಮಾರಾಟ ಕಂಪನಿಗಳಾದ ಎಚ್ಪಿಸಿಎಲ್, ಒಎನ್‌ಜಿಸಿ, ಗೇಲ್ ಕೊಂಚ ಏರಿವೆ. ಕಚ್ಚಾ ತೈಲ ಬೆಲೆ ಕುಸಿತದಿಂದ ಇಂಧನ ವೆಚ್ಚ ತಗ್ಗುವ ನಿರೀಕ್ಷೆಯಲ್ಲಿ ಏವಿಯೇಷನ್ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ. ಇಂಧನ ವೆಚ್ಚ ಏರಿಕೆಯಿಂದ ಬಹುತೇಕ ಎಲ್ಲ ಕಂಪನಿಗಳ ಷೇರುಗಳು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದ್ದವು.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಬಹುತೇಕ ಕುಸಿದಿವೆ. ಆಟೋ, ಎಫ್ಎಂಸಿಜಿ ಮತ್ತಿತರ ವಲಯದ ಷೇರುಗಳು ಕುಸಿದಿವೆ. ಹಬ್ಬದ ದಿನಗಳಲ್ಲಿ ಭರ್ಜರಿ ವಹಿವಾಟು ನಿರೀಕ್ಷಿಸುವ ಸಾಧ್ಯತೆ ಇಲ್ಲವೆಂಬ ವರದಿಗಳು ಈ ವಲಯದ ಷೇರುಗಳ ಮಾರಾಟ ಒತ್ತಡ ಹೆಚ್ಚಿಸಿವೆ.

ಇದನ್ನೂ ಓದಿ : ರುಪಾಯಿ ಕುಸಿತ; 2 ದಿನದಲ್ಲಿ 1000 ಅಂಶ ಇಳಿದ ಸೆನ್ಸೆಕ್ಸ್, ರಕ್ತದೋಕುಳಿ ಆರಂಭ

ಬುಧವಾರ 18 ಪೈಸೆಯಷ್ಟು ಚೇತರಿಸಿಕೊಂಡಿದ್ದ ರುಪಾಯಿ ಗುರುವಾರದ ಆರಂಭದ ವಹಿವಾಟಿನಲ್ಲೇ 30 ಪೈಸೆಯಷ್ಟು ಕುಸಿದಿತ್ತು. 74.44ರ ಆಜುಬಾಜಿನಲ್ಲಿ ವಹಿವಾಟಾಗಿ, ಮತ್ತೆ 74.18ಕ್ಕೆ ಚೇತರಿಸಿಕೊಂಡಿತು. ಕಚ್ಚಾ ತೈಲ ದರ ಕುಸಿದರೂ ಡಾಲರ್ ಮೇಲಿನ ಬೇಡಿಕೆ ಜಿಗಿದಿರುವ ಕಾರಣ ರುಪಾಯಿ ಕುಸಿತ ಸದ್ಯಕ್ಕೆ ನಿಲ್ಲುವ ಸಾಧ್ಯತೆ ಕ್ಷೀಣಿಸಿದೆ.

ದಿನದ ವಹಿವಾಟಿನ ಅಂತ್ಯದ ವೇಳೆಗೆ ಜಾಗತಿಕ ಪೇಟೆಗಳು ಚೇತರಿಸಿಕೊಂಡರೆ ದೇಶಿಯ ಪೇಟೆಯಲ್ಲೂ ಚೇತರಿಕೆ ನಿರೀಕ್ಷಿಸಲಾಗಿದೆ. ಆರಂಭದಲ್ಲಿನ ಮಾರಾಟ ಒತ್ತಡ ಕೊಂಚ ತಗ್ಗಿದ್ದು ಸೆನ್ಸೆಕ್ಸ್ 500 ಅಂಶಗಳಷ್ಟು ಚೇತರಿಸಿಕೊಂಡಿತು. 300 ಅಂಶ ಕುಸಿದಿದ್ದ ನಿಫ್ಟಿ 150 ಅಂಶ, 750 ಅಂಶ ಕುಸಿದಿದ್ದ ಬ್ಯಾಂಕೆಕ್ಸ್ 350 ಅಂಶ ಚೇತರಿಸಿಕೊಂಡಿತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More