ಪೇಟೆ ರಕ್ತದೋಕುಳಿ; ಒಂದೇ ದಿನದಲ್ಲಿ ₹3 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು ನಾಶ

ಅಮೆರಿಕದ ದೈತ್ಯ ಟೆಕ್ ಕಂಪನಿಗಳ ಷೇರು ಕುಸಿತದ ಪರಿಣಾಮ ವಿಶ್ವದ ಬಹುತೇಕ ಷೇರುಪೇಟೆ ತತ್ತರಿಸಿದವು. ದೇಶೀಯ ಪೇಟೆಯಲ್ಲಿ ರಕ್ತದೋಕುಳಿಯೇ ನಡೆಯಿತು. ದಿನದ ವಹಿವಾಟಿನಲ್ಲಿ ಕೊಂಚ ಚೇತರಿಕೆ ಕಂಡುಬಂದರೂ ಒಂದೇ ದಿನ 3 ಲಕ್ಷ ಕೋಟಿ ರು. ಸಂಪತ್ತು ನಾಶವಾಗಿದೆ!

ಅಮೆರಿಕದ ಟೈಕ್ ದೈತ್ಯ ಕಂಪನಿಗಳ ಷೇರು ದರ ಕುಸಿತದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣದಿಂದಾಗಿ ಗುರುವಾರ ಹೂಡಿಕೆದಾರರು ಭಾರಿ ನಷ್ಟಕ್ಕೀಡಾದರು. ಬಾಂಬೆ ಷೇರು ವಿನಿಮಯ ಪೇಟೆಯಲ್ಲಿ ಲಿಸ್ಟಾಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು 3 ಲಕ್ಷ ಕೋಟಿ ರುಪಾಯಿಗಳಷ್ಟು ಕುಸಿದು ಹೂಡಿಕೆದಾರರಿಗೆ ನಷ್ಟ ಉಂಟುಮಾಡಿದೆ.

ಬಿಎಸ್ಇ ಅಂಕಿ-ಅಂಶಗಳ ಪ್ರಕಾರ, ದಿನದ ವಹಿವಾಟಿನಲ್ಲಾದ ಹೂಡಿಕೆದಾರರ ಒಟ್ಟು ಸಂಪತ್ತು ನಾಶ 3,05,625.87 ಕೋಟಿ ರುಪಾಯಿಗಳು. ಈಗ ಬಿಎಸ್ಇಯಲ್ಲಿ ಲಿಸ್ಟಾಗಿರುವ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು 1,34,59,695.82 ಕೋಟಿಗೆ ತಗ್ಗಿದೆ.

ದಿನದ ಆರಂಭದಲ್ಲಿ 1,000 ಅಂಶ ಕುಸಿದಿದ್ದ ಸೆನ್ಸೆಕ್ಸ್, ದಿನದ ವಹಿವಾಟಿನಲ್ಲಿ ಏಳಿರಿತ ಕಂಡು 759 ಅಂಶ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. 34,001ಕ್ಕೆ ಸ್ಥಿರಗೊಂಡು ನಿರ್ಣಾಯಕ ಮಟ್ಟ ಕಾಯ್ದುಕೊಂಡಿದೆ. 300 ಅಂಶ ಕುಸಿದಿದ್ದ ನಿಫ್ಟಿ 225.45 ಅಂಶ ಕುಸಿತದೊಂದಿಗೆ 10,234.65ಕ್ಕೆ ಸ್ಥಿರಗೊಂಡಿದೆ.

ಅತ್ತ, ಪೇಟೆಯಲ್ಲಿ ಷೇರು ಕುಸಿಯುತ್ತಿದ್ದಂತೆ ಚಿನಿವಾರಪೇಟೆಯಲ್ಲಿ ಚಿನ್ನಕ್ಕೆ ಹೊಳಪು ಬಂದಿತ್ತು. ಚಿನ್ನ 350 ರುಪಾಯಿ ಏರಿ, 31,710 ರುಪಾಯಿಗೆ ಸ್ಥಿರಗೊಂಡಿದೆ. ದಿನದ ಆರಂಭದಲ್ಲಿ 74.40ರ ಮಟ್ಟಕ್ಕೆ ಕುಸಿದಿದ್ದ ರುಪಾಯಿ, ನಂತರ ಚೇತರಿಸಿಕೊಂಡು 74.12ಕ್ಕೆ ವಹಿವಾಟು ಅಂತ್ಯಗೊಳಿಸಿತು. ಆದರೆ, ನಿರ್ಣಾಯಕ ಮಟ್ಟ 74ರ ಕೆಳಕ್ಕಿಳಿಯುವುದು ಸಾಧ್ಯವಾಗಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತ್ವರಿತವಾಗಿ ಕುಸಿದ ಪರಿಣಾಮ, ದೇಶೀಯ ತೈಲ ಮಾರುಕಟ್ಟೆ ಕಂಪನಿಗಳ ಷೇರುಗಳು ಜಿಗಿದವು. ಬಿಎಸ್ಇ ಆಯಿಲ್ ಸೂಚ್ಯಂಕ ಶೇ.3ರಷ್ಟು ಏರಿತು. ಎಚ್ಪಿಸಿಎಲ್ ಶೇ.15ರಷ್ಟು ಏರಿತು. ಐಒಸಿ, ಬಿಪಿಸಿಎಲ್, ಗೇಲ್ ಶೇ.4-6ರಷ್ಟು ಜಿಗಿದವು. ಒಎನ್ಜಿಸಿ, ಕ್ಯಾಸ್ಟ್ರಾಲ್ ಶೇ.3ರಷ್ಟು ಏರಿದವು. ನಿಫ್ಟಿ ಸಿಪಿಎಸ್ಇ, ನಿಫ್ಟಿ ಸಿಪಿಇ ಮತ್ತು ನಿಫ್ಟಿ ಎನರ್ಜಿ ಸೂಚ್ಯಂಕದ ಹೊರತಾಗಿ ಉಳಿದೆಲ್ಲ ಸೂಚ್ಯಂಕಗಳು ಕುಸಿದವು.

ಇದನ್ನೂ ಓದಿ : ಪೇಟೆಯಲ್ಲಿ ರಕ್ತದೋಕುಳಿ: ಸೆನ್ಸೆಕ್ಸ್ 1000, ನಿಫ್ಟಿ 350 ಅಂಶ ಕುಸಿತ

ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಗರಿಷ್ಠ ಅಂದರೆ ಶೇ.5.20ರಷ್ಟು ಕುಸಿತ ದಾಖಲಿಸಿತು. ನಿಫ್ಟಿ ಮೆಟಲ್ ಶೇ.4ರಷ್ಟು ಇಳಿದರೆ, ನಿಫ್ಟಿ 100 ಲಿಕ್ವಿಡ್ 15, ನಿಫ್ಟಿ ಮಿಡ್ ಕ್ಯಾಪ್, ನಿಫ್ಟಿ ಐಟಿ, ನಿಫ್ಟಿ ಫಾರ್ಮ, ನಿಫ್ಟಿ ಫೈನಾನ್ಷಿಯಲ್, ನಿಫ್ಟಿ ರಿಯಾಲ್ಟಿ, ನಿಫ್ಟಿ ಸರ್ವೀಸಸ್, ನಿಫ್ಟಿ ಆಟೋ, ನಿಫ್ಟಿ ಮಿಡ್ಕ್ಯಾಪ್ , ನಿಫ್ಟಿ 200, ನಿಫ್ಟಿ ಬ್ಯಾಂಕ್, ನಿಫ್ಟಿ ಸ್ಮಾಲ್ ಕ್ಯಾಪ್, ನಿಫ್ಟಿ ಇನ್ಪ್ರಾಶೇ.2-3ರಷ್ಟು ಕುಸಿದವು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ.4-6ರಷ್ಟು ಕುಸಿದವು. ಮೆಟಲ್ ವಲಯದ ಜೆಎಸ್ಪಿಎಲ್, ಟಾಟಾ ಸ್ಟೀಲ್, ವೇದಾಂತ, ಹಿಂಡಾಲ್ಕೊ ಶೇ.5-8ರಷ್ಟು ಕುಸಿತ ದಾಖಲಿಸಿವೆ. ಗುರುವಾರ ಪೇಟೆ ಕುಸಿತದೊಂದಿಗೆ 2018ರಲ್ಲಿ ಗಳಿಸಿದ್ದ ಎಲ್ಲ ಏರಿಕೆಯನ್ನು ಕಳೆದುಕೊಂಡಂತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More