‘ದಿ ಕ್ವಿಂಟ್’ ಮಾಧ್ಯಮ ಸಂಸ್ಥೆ ಮೇಲೆ ಐಟಿ ದಾಳಿ; ಎಡಿಟರ್ಸ್ ಗಿಲ್ಡ್ ಕಳವಳ

ರಾಘವ್ ಬಹ್ಲ್ ಅವರು ಮುಂಬೈನಲ್ಲಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಗುರುವಾರ ಬೆಳಗ್ಗೆ ನೋಯ್ಡಾದಲ್ಲಿರುವ ‘ದಿ ಕ್ವಿಂಟ್’ ಕಚೇರಿ ಮತ್ತು ರಾಘವ್ ಬಹ್ಲ್ ಅವರ ನಿವಾಸದ ಮೇಲೆ 12ಕ್ಕೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ

ಭಾರತದ ಮಾಧ್ಯಮ ಕ್ಷೇತ್ರದ ಹೆಸರಾಂತ ಉದ್ಯಮಿ ರಾಘವ್ ಬಹ್ಲ್ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದೆ. ರಾಘವ್ ಅವರು ಮುಂಬೈನಲ್ಲಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಗುರುವಾರ ಬೆಳಗ್ಗೆ ನೋಯ್ಡಾದಲ್ಲಿರುವ 'ದಿ ಕ್ವಿಂಟ್’ ಮಾಧ್ಯಮ ಕಚೇರಿ ಮತ್ತು ರಾಘವ್ ಅವರ ನಿವಾಸದ ಮೇಲೆ 12ಕ್ಕೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಘಟನೆ ಬಗ್ಗೆ ‘ಎಡಿಟರ್ ಗೈಡ್’ಗೆ ಪ್ರತಿಕ್ರಿಯೆ ನೀಡಿರುವ ರಾಘವ್ ಬಹ್ಲ್ , "ನಾನು ಇಂದು (ಗುರುವಾರ) ಬೆಳಗ್ಗೆ ಮುಂಬೈನಲ್ಲಿದ್ದ ಸಂದರ್ಭದಲ್ಲಿ, 12ಕ್ಕೂ ಅಧಿಕ ಐಟಿ ಅಧಿಕಾರಿಗಳು ದೆಹಲಿಯಲ್ಲಿರುವ ನನ್ನ ಕ್ವಿಂಟ್ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿದ್ದಾರೆ. ನಾನು ಇದೀಗ ದೆಹಲಿಗೆ ವಾಪಸಾಗುತ್ತಿದ್ದೇನೆ. ನಾವು ಯಾವುದೇ ತೆರಿಗೆ ವಂಚನೆ ಮಾಡಿಲ್ಲ. ಸರಿಯಾದ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಲಾಗುತ್ತಿದೆ," ಎಂದು ತಿಳಿಸಿದ್ದಾರೆ.

ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳನ್ನು ಹೊಂದಿರುವ ಸಾಧ್ಯತೆ ಇರುವ ಯಾವುದೇ ಇಮೇಲ್ ಮತ್ತು ಫೈಲ್‌ಗಳನ್ನು ನೋಡಕೂಡದು ಮತ್ತು ಕಾಪಿ ಮಾಡಕೂಡದು ಎಂದು ತಾವು ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ. “ಒಂದು ವೇಳೆ ಇದನ್ನು ಮೀರಿದರೆ, ನಾವು ಪ್ರಬಲವಾದ ಅಸ್ತ್ರವನ್ನೇ ಬಳಕೆ ಮಾಡಬೇಕಾಗುತ್ತದೆ. ನನ್ನ ಈ ಮನವಿಗೆ ಎಡಿಟರ್ ಗಿಲ್ಡ್ ಬೆಂಬಲ ನೀಡುವ ನೀರೀಕ್ಷೆಯಲ್ಲಿದ್ದೇನೆ. ಕಚೇರಿಯಲ್ಲಿರುವ ದಾಖಲಾತಿಗಳ ಫೋಟೋಗಳನ್ನು ತೆಗೆಯದಂತೆ ನೋಡಿಕೊಳ್ಳಿ,” ಎಂದು ರಾಘವ್ ಬಹ್ಲ್ ಹೇಳಿದ್ದಾರೆ.

ಇನ್ನೊಂದೆಡೆ, “ನನ್ನ ಪತ್ನಿ ಮತ್ತು ತಾಯಿ ಮನೆಯಲ್ಲೇ ಇದ್ದು, ಅವರು ಯಾರೊಂದಿಗೂ ಮಾತನಾಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ,” ಎಂದು ರಾಘವ್ ಬಹ್ಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಐಟಿ ದಾಳಿಗೆ ಕಳವಳ ವ್ಯಕ್ತಪಡಿಸಿರುವ ಎಡಿಟರ್ಸ್ ಗಿಲ್ಡ್, "ತೆರಿಗೆ ಅಧಿಕಾರಿಗಳು ಕಾನೂನಿನ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸಬೇಕೇ ಹೊರತು, ಸರ್ಕಾರದ ಕಾರ್ಯವೈಖರಿಯ ಬಗ್ಗೆ ಟೀಕೆ ಮಾಡುವವರನ್ನು ಬೆದರಿಸಲು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬಾರದು. ಐಟಿ ಅಧಿಕಾರಿಗಳ ಈ ದಾಳಿ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದ್ದು, ಸರ್ಕಾರ ಇಂತಹ ಪ್ರಯತ್ನಗಳಿಂದ ದೂರವಿರಬೇಕು,” ಎಂದಿದೆ.

ಮಾಧ್ಯಮಗಳನ್ನು ನಿಯಂತ್ರಿಸುವ ಸಾಧನವಾಗಿ ಐಟಿ ದಾಳಿಯನ್ನು ನಡೆಸಲಾಗುತ್ತಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, “ನಾವು ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಂಬಿಕೆ ಇಟ್ಟಿದ್ದೇವೆ. ಯಾವುದೇ ಮಾಧ್ಯಮ ಸಂಸ್ಥೆ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅದಕ್ಕೆ ಅವರೇ ಜವಾಬ್ದಾರರು,” ಎಂದಿದ್ದಾರೆ.

ಬೆಂಗಳೂರಿನಲ್ಲಿರುವ ‘ದಿ ನ್ಯೂಸ್ ಮಿನಿಟ್’ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದು ಐಟಿ ಕಾಯ್ದೆಯ ಸೆಕ್ಷನ್ 133ಎ ಅಡಿಯಲ್ಲಿ ಕೈಗೊಂಡಿರುವ ಸರ್ವೆಯೇ ಹೊರತು, ಐಟಿ ದಾಳಿಯಲ್ಲ ಎಂದು ತೆರಿಗೆ ಅಧಿಕಾರಿಗಳು ತಿಳಿಸಿರುವುದಾಗಿ ‘ದಿ ನ್ಯೂಸ್ ಮಿನಿಟ್’ ಸಿಬ್ಬಂದಿ ಹೇಳಿದ್ದಾರೆ.

‘ಕ್ವಿಂಟ್’ ಕಚೇರಿ ಮೇಲೆ ನಡೆದಿರುವ ಐಟಿ ದಾಳಿಗೆ ಪ್ರಮುಖ ಸಂಪಾದಕರು ವಿರೋಧ ವ್ಯಕ್ತಪಡಿಸಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.

ರಾಘವ್ ಬಹ್ಲ್ ಅವರು ‘ಕ್ವಿಂಟ್’ ನ್ಯೂಸ್ ಪೋರ್ಟಲ್ ಮತ್ತು ನೆಟ್‌ವರ್ಕ್ 18 ಮಾಧ್ಯಮ ಸಮೂಹದ ಸ್ಥಾಪಕರಾಗಿದ್ದು, ಭಾರತದ ಮಾಧ್ಯಮ ಲೋಕದ ಖ್ಯಾತ ಉದ್ಯಮಿ ಎನಿಸಿಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More