ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಸತ್ಯಾಗ್ರಹ ನಿರತ ಪರಿಸರವಾದಿ ಡಿ ಜಿ ಅಗರ್ವಾಲ್ ನಿಧನ

ಪರಿಸರವಾದಿ ಜಿ ಡಿ ಅಗರ್ವಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೂನ್ 22ರಿಂದ ಗಂಗಾ ನದಿ ಉಳಿವಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 86 ವರ್ಷದ ಅಗರ್ವಾಲ್, ರಿಷಿಕೇಶದಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾನ್ಪುರದ ಐಐಟಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದ ಅಗರ್ವಾಲ್, ನಿವೃತ್ತಿಯ ಬಳಿಕ ಸನ್ಯಾಸತ್ವ ಸ್ವೀಕರಿಸಿದ್ದರು. ಗಂಗಾ ನದಿಯ ಎಲ್ಲ ಉಪನದಿಗಳ ಜಲವಿದ್ಯುತ್ ಯೋಜನೆಗಳ ನಿರ್ಮಾಣ ನಿಲ್ಲಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹದಲ್ಲಿ ಅಗರ್ವಾಲ್ ನಿರತರಾಗಿದ್ದರು.

ಮತ್ತೆ ವಿವಾದಕ್ಕೆ ಸಿಲುಕಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ

“ನಾವಿರುವುದು ರಾಜಕಾರಣ ಮಾಡಲು. ಸಮಾಜಸೇವೆ ಮಾಡಲು ಅಲ್ಲ,” ಎಂದು ಹೇಳುವ ಮೂಲಕ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತ್ತೊಮ್ಮೆ ವಿವಾದಕ್ಕೆ ಈಡಾಗಿದ್ದಾರೆ. ಗುರುವಾರ ಶಿರಸಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, “ನಾವು ಬಂದಿರುವುದು ರಾಜಕಾರಣ ಮಾಡಲು. ಸಮಾಜಸೇವೆ ಮಾಡಲು ಅಲ್ಲ. ನಾವು ತಾಲೂಕು ಪಂಚಾಯ್ತಿ ಅಧ್ಯಕ್ಷರಾಗುವುದು, ಶಾಸಕರಾಗುವುದು, ಸಂಸದರಾಗುವುದು ರಾಜಕಾರಣ ಮಾಡಲು. ಮಾಧ್ಯಮದವರು ನನ್ನ ಹೇಳಿಕೆಯನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಲಿ,” ಎಂದು ಹೇಳಿದ್ದಾರೆ.

ತಿತ್ಲಿ ಚಂಡಮಾರುತದ ಅಬ್ಬರಕ್ಕೆ ನಲುಗಿದ ಆಂಧ್ರಪ್ರದೇಶ; 8 ಬಲಿ

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾಕ್ಕೆ ಅಪ್ಪಳಿಸಿರುವ ತಿತ್ಲಿ ಚಂಡಮಾರುತದಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ಇದುವರೆಗೂ 8 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಒಂದೇ ಸಮನೆ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರಿ ಮಳೆಗೆ ರಸ್ತೆಗಳು ಕೊಚ್ಚಿಹೋಗಿದ್ದು, ಭೂಕುಸಿತದಿಂದಾಗಿ ಜನತೆ ಕಂಗಾಲಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಹಲವು ಕಡೆ ಧಾರಾಕಾರ ಮಳೆಯಾಗಿದ್ದು, ಮರಗಳು ಧರಾಶಾಹಿಯಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಾಚರಣೆಯ ಕುರಿತಂತೆ ಮಾಹಿತಿ ಪಡೆಯುತ್ತಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಶ್ರೀಕಾಕುಳಂ ಜಿಲ್ಲೆಯಲ್ಲಿ ಎನ್‌ಡಿಆಎರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಮಸೀದಿಯಲ್ಲಿ ಪ್ರಾರ್ಥನೆಗೂ ಮಹಿಳೆಯರಿಗೆ ಅವಕಾಶ ನೀಡಿ: ಕೇರಳ ಮಹಿಳಾ ವೇದಿಕೆ

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರೇರಣೆ ಪಡೆದಿರುವ ಮುಸ್ಲಿಂ ಸಮುದಾಯದ ಮಹಿಳೆಯರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಸೀದಿಗೆ ಮಹಿಳೆಯ ಪ್ರವೇಶವಕಾಶಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟಿನಲ್ಲಿ ಹಿಂದೂ ಮಹಾಸಭಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದಾದ ಬಳಿಕ ದೇಶದಲ್ಲಿರುವ ಎಲ್ಲ ಮಸೀದಿಗಳಿಗೂ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಮುಸ್ಲಿಂ ಮಹಿಳಾ ವೇದಿಕೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಕ್ಕೆ ಸಿದ್ಧತೆ ನಡೆಸಿದೆ. ಎನ್ಐಎಸ್ಎ ಎಂಬ ಪ್ರಗತಿಪರ ಮಹಿಳಾ ಸಂಘಟನೆ, ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಸೀದಿಗೆ ತೆರಳಿ ಪ್ರಾರ್ಥನೆ ಮಾಡುವುದಕ್ಕೆ ಮತ್ತು ಮಹಿಳೆಯರನ್ನು ಇಮಾಮ್‌ಗಳನ್ನಾಗಿ ನೇಮಕ ಮಾಡಬೇಕೆಂದೂ ಬೇಡಿಕೆ ಇಟ್ಟಿದೆ.

ಟಿಸಿಎಸ್ 2ನೇ ತ್ರೈಮಾಸಿಕ ನಿವ್ವಳ ಲಾಭ ಶೇ.23ರಷ್ಟು ಏರಿಕೆ

ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದ ನಿವ್ವಳ ಲಾಭ ಶೇ.23ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ 7,901 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ 6,646 ಕೋಟಿ ರುಪಾಯಿ ನಿವ್ವಳ ಲಾಭಗಳಿಸಿತ್ತು. 2ನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 36,541 ಕೋಟಿಗೆ ಏರಿದೆ. ಕಳೆದ ವರ್ಷ ಈ ಅವಧಿಯಲ್ಲಿ 30,451 ಕೋಟಿಗಳಾಗಿತ್ತು. ಟಿಸಿಎಸ್ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 4 ರುಪಾಯಿ ಮಧ್ಯಂತರ ಲಾಭಾಂಶ ಘೋಷಿಸಿದೆ. ವಹಿವಾಟು ಲಾಭಾಂಶವು ಶೇ.26.5ರಷ್ಟಿದೆ ಎಂದು ಟಿಸಿಎಸ್ ಎಂಡಿ ಮತ್ತು ಸಿಇಒ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ.

ಕ್ರಿಕೆಟಿಗ ಮಾಲಿಂಗ ವಿರುದ್ಧ ಲೈಂಗಿಕ ಶೋಷಣೆ ಆರೋಪ

ಶ್ರೀಲಂಕಾ ತಂಡದ ಹಿರಿಯ ವೇಗದ ಬೌಲರ್ ಲಸಿತ್ ಮಾಲಿಂಗ ಹೆಸರು #MeToo ಅಭಿಯಾನದಲ್ಲಿ ಕೇಳಿಬಂದಿದೆ. ಅನಾಮಧೇಯ ಮಹಿಳೆಯೊಬ್ಬರ ಈ ಆರೋಪವನ್ನು ಶ್ರೀಪಾದ ಎಂಬುವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ಮಾಲಿಂಗ, ಮುಂಬೈನ ಹೋಟೆಲೊಂದರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಮಾಲಿಂಗ ೧೦ ವರ್ಷಗಳ ಕಾಲ ಆಡಿದ್ದಾರೆ. ಏತನ್ಮಧ್ಯೆ, ಶ್ರೀಲಂಕಾದ ಅರ್ಜುನ ರಣತುಂಗ ವಿರುದ್ಧವೂ ಬುಧವಾರದಂದು ಇದೇ ರೀತಿಯ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು.

ಹಾಲಿವುಡ್ ನಟ ವಿಲ್‌ ಸ್ಮಿತ್‌ ತಾಜ್‌ಮಹಲ್‌ ಭೇಟಿ

ಜನಪ್ರಿಯ ಹಾಲಿವುಡ್‌ ನಟ ವಿಲ್‌ ಸ್ಮಿತ್‌ ಭಾರತಕ್ಕೆ ಬಂದಿದ್ದಾರೆ. ಕರಣ್ ಜೋಹರ್ ನಿರ್ದೇಶನದ ‘ಸ್ಟೂಡೆಂಟ್ ಆಫ್‌ ದಿ ಯಿಯರ್‌ 2’ ಸಿನಿಮಾದ ಹಾಡಿಗೆ ಸ್ಮಿತ್ ಹೆಜ್ಜೆ ಹಾಕಲಿದ್ದಾರೆ ಎನ್ನುವುದು ವಿಶೇ‍ಷ. ಸಿನಿಮಾ ಶೂಟಿಂಗ್‌ಗೆ ಬಂದಿರುವ ಅವರು ತಾಜ್‌ಗೆ ಭೇಟಿ ನೀಡಿ ಭವ್ಯ ಮಹಲಿನ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ‘ಸ್ಟೂಡೆಂಟ್‌ ಆಫ್‌ ದಿ ಯಿಯರ್‌ 2’ ಶೂಟಿಂಗ್‌ ಸೆಟ್‌ನಲ್ಲಿರುವ ಫೋಟೋ ಟ್ವೀಟ್ ಮಾಡಿದ್ದರು. ‘ಹಿಚ್‌’, ‘ಐ ಆಮ್ ಲೆಜೆಂಡ್‌’, ‘ರೊಬೋಟ್‌’, ‘ಮೆನ್ ಇನ್‌ ಬ್ಲಾಕ್‌’ ಸರಣಿಗಳು, ಬಯೋಪಿಕ್‌ಗಳಾದ ‘ಅಲಿ’, ‘ದಿ ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌’ ಮತ್ತು ‘ಕನ್‌ಕ್ಯೂಷನ್‌’ ಹಾಲಿವುಡ್‌ ಚಿತ್ರಗಳು ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿವೆ.

ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಕನ್ನಡಿಗ ಸುನಿಲ್ ಅನುಮಾನ

ಎಡ ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಕನ್ನಡಿಗ ಎಸ್ ವಿ ಸುನೀಲ್ ಮುಂಬರುವ ಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಸ್ಟಾರ್ ಸ್ಟ್ರೈಕರ್ ಸುನೀಲ್ ಅಲಭ್ಯತೆಯು ಭಾರತ ತಂಡಕ್ಕೆ ಭಾರೀ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಐದು ವಾರಗಳ ವಿಶ್ರಾಂತಿ ಅಗತ್ಯವೆಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಸುನಿಲ್ ಈ ಬಾರಿಯ ವಿಶ್ವಕಪ್‌ನಲ್ಲಿ ಆಡುವುದು ಬಹುತೇಕ ಅನಿಶ್ಚಿತತೆಯಿಂದ ಕೂಡಿದೆ. ನವೆಂಬರ್ ೨೮ರಿಂದ ಡಿಸೆಂಬರ್ ೧೬ರವರೆಗೆ ಒಡಿಶಾದ ಭುವನೇಶ್ವರದಲ್ಲಿ ವಿಶ್ವಕಪ್ ಹಾಕಿ ಪಂದ್ಯಾವಳಿ ಜರುಗಲಿದೆ.

ಭಾರತ ಏಕದಿನ ತಂಡಕ್ಕೆ ರಿಷಭ್ ಪಂತ್ ಪದಾರ್ಪಣೆ

ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಪಂದ್ಯ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಹದಿನಾಲ್ಕು ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್‌ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಭ್‌ ಪಂತ್‌ಗೆ ಸ್ಥಾನ ಕಲ್ಪಿಸಲಾಗಿದೆ. ದಿನೇಶ್ ಕಾರ್ತಿಕ್ ಬದಲಿಗೆ ಈ ದೆಹಲಿ ಆಟಗಾರನಿಗೆ ಸ್ಥಾನ ಕಲ್ಪಿಸಲಾಗಿದೆ. ಇಂದು ಎಂಎಸ್‌ಕೆ ಪ್ರಸಾದ್ ನೇತೃತ್ವದ ಭಾರತೀಯ ಕ್ರಿಕೆಟ್ ಆಯ್ಕೆಸಮಿತಿ ತಂಡವನ್ನು ಪ್ರಕಟಿಸಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಕಟಿತ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಂ ಎಸ್ ಧೋನಿ (ವಿಕೆಟ್‌ ಕೀಪರ್), ರಿಷಭ್ ಪಂತ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮದ್ ಶಮಿ, ಖಲೀಲ್ ಅಹಮದ್ ಹಾಗೂ ಶಾರ್ದೂಲ್ ಠಾಕೂರ್.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More