ವಿಧಾನಸೌಧ, ವಿಕಾಸೌಧದಲ್ಲಿ ಇಲಿ, ಹೆಗ್ಗಣ ಹಿಡಿಯುವ ಹೊಣೆ ಯಾರಿಗೆ?

ಇಲಿ, ಹೆಗ್ಗಣಗಳ ಕಾಟ ಯಾರಿಗಿಲ್ಲ ಹೇಳಿ? ಆದರೆ ಇಲ್ಲಿ ಇಲಿ ಹಿಡಿಯಲು ಗುತ್ತಿಗೆ ನೀಡಿದ್ದರೂ ಉಪಟಳ ಮಾತ್ರ ನಿಂತಿಲ್ಲ. ಹೀಗಾಗಿ ಇದಕ್ಕೊಂದು ಅಂತಿಮ ಹಾಡಲೇಬೇಕು ಎಂದು ನಿರ್ಧರಿಸಿರುವ ಸರ್ಕಾರ, ಸರ್ಕಾರಿ ನಿಗಮವೊಂದಕ್ಕೆ ಇದರ ಹೊಣೆ ಹೊರಿಸಲು ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಿದೆ

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಮತ್ತು ವಿ ವಿ ಟವರ್‌ನಲ್ಲಿರುವ ಸರ್ಕಾರಿ ಕಚೇರಿಗಳು ಮತ್ತು ಕೊಠಡಿಗಳಲ್ಲಿ ಬೇರೂರಿರುವ ಇಲಿ ಮತ್ತು ಹೆಗ್ಗಣಗಳನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಬೇಟೆಯಾಡಲಿದೆ. ಇದುವರೆಗೂ ಗುತ್ತಿಗೆ ಪಡೆದಿದ್ದ ಖಾಸಗಿ ಏಜೆನ್ಸಿಗಳು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಕಾರಣ ಹಾಗೂ ಮಿತವ್ಯಯ ಸಾಧಿಸುವ ಉದ್ದೇಶದಿಂದ ಇಲಿ, ಹೆಗ್ಗಣ ಬೇಟೆಯಾಡುವ ಜವಾಬ್ದಾರಿಯನ್ನು ಉಗ್ರಾಣ ನಿಗಮಕ್ಕೆ ವಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿವೆ. ಹಾಗೆಯೇ ಇಲಿ ಹಿಡಿಯಲು ಭರಿಸುವ ವೆಚ್ಚವೂ ದುಪ್ಪಟ್ಟುಗೊಳ್ಳಲಿದೆ.

ಈಗಾಗಲೇ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಜೊತೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಉಗ್ರಾಣ ನಿಗಮದಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಈ ಹೊಣೆಗಾರಿಕೆ ಬೇಡ ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರಾದರೂ, ಉಗ್ರಾಣ ನಿಗಮವೇ ಈ ಕೆಲಸ ನಿರ್ವಹಿಸಲಿ ಎಂದು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ, ಬೇರೆ ದಾರಿ ಇಲ್ಲದೆಯೇ ಉಗ್ರಾಣ ನಿಗಮ ಸದ್ಯದಲ್ಲೇ ಪ್ರಸ್ತಾವನೆಯನ್ನು ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

“ಮುಕ್ತ ಟೆಂಡರ್‌ ಕರೆದರೆ ಖಾಸಗಿ ಏಜೆನ್ಸಿ ಹೆಚ್ಚು ದರವನ್ನು ನಮೂದಿಸಿರುತ್ತೆ. ಹೀಗಾಗಿ, ಸರ್ಕಾರಿ ಸಂಸ್ಥೆಯಾಗಿರುವ ಉಗ್ರಾಣ ನಿಗಮಕ್ಕೆ 4(ಜಿ) ವಿನಾಯಿತಿ ನೀಡಿ, ಇಲಿ, ಹೆಗ್ಗಣ ಬೇಟೆ ಕಾರ್ಯಾಚರಣೆ ಜವಾಬ್ದಾರಿ ವಹಿಸಲಾಗುವುದು. ಈ ಕೆಲಸಕ್ಕೆ ವಾರ್ಷಿಕವಾಗಿ ನಿಗಮಕ್ಕೆ ೧೫ರಿಂದ ೧೮ ಲಕ್ಷ ರೂ ಅನುದಾನ ನೀಡಲಿದೆ,” ಎಂದು ಪರಿಷತ್‌ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಹೊರಗುತ್ತಿಗೆ ವಾಹನಗಳಿಗೆ ಬ್ರೇಕ್‌; ಸರ್ಕಾರಿ ಅಧಿಕಾರಿಗಳಿಗಿನ್ನು ಓಲಾ, ಉಬರ್‌ ಸೇವೆ?

‘ಮ್ಯಾಟ್’ ಮೂಲಕ ಇಲಿ ಬೇಟೆಯಾಡಲು ಸರ್ಕಾರ ಆರಂಭದಲ್ಲಿ ಚಿಂತಿಸಿತ್ತಾದರೂ, ಒಂದೊಂದು ಮ್ಯಾಟ್‌ಗೆ ೭೦೦ ರು. ದರ ಇರುವ ಕಾರಣಕ್ಕಾಗಿ ಸದ್ಯಕ್ಕೆ ಮ್ಯಾಟ್‌ ಖರೀದಿ ವಿಚಾರವನ್ನು ಮುಂದೂಡಿದೆ ಎಂದು ತಿಳಿದುಬಂದಿದೆ. “ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಮತ್ತು ವಿ ವಿ ಟವರ್‌ನಲ್ಲಿ ಅಂದಾಜು ೯೦೦ ಕೊಠಡಿಗಳಿವೆ. ಒಂದೊಂದು ಕೊಠಡಿಯಲ್ಲಿ ಕನಿಷ್ಠ ಮೂರ್ನಾಲ್ಕು ಮ್ಯಾಟ್‌ ಹಾಕಬೇಕು. ಇದರಿಂದ ವರ್ಷಕ್ಕೆ ೭೫ ಲಕ್ಷ ರು. ಬೇಕು. ಉಗ್ರಾಣ ನಿಗಮದಲ್ಲಿ ನಿಪುಣ ಸಿಬ್ಬಂದಿ ಇರುವ ಕಾರಣ ಅವರಿಗೇ ಈ ಕೆಲಸ ವಹಿಸಿದರೆ ಕಡಿಮೆ ಖರ್ಚಿನಲ್ಲಿ ಇಲಿ ಹಿಡಿಯಬಹುದು,” ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇಲಿ, ಹೆಗ್ಗಣ ಬೇಟೆಗೆ ವರ್ಷಕ್ಕೆ ೬ರಿಂದ ೭ ಲಕ್ಷ ರು. ಖರ್ಚಾಗುತ್ತಿದ್ದರೂ ಗರಿಷ್ಠ ಪ್ರಮಾಣದಲ್ಲಿ ಇಲಿ ಹಿಡಿಯುತ್ತಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಇಲಿ ಹಿಡಿಯಲು ಅಂದಾಜು ೨೫ ಲಕ್ಷ ರು. ಖರ್ಚಾಗಿದೆ. ಆದರೆ, ಎಷ್ಟು ಸಂಖ್ಯೆಯಲ್ಲಿ ಇಲಿಗಳನ್ನು ಹಿಡಿಯಲಾಗಿದೆ, ಸತ್ತ ಇಲಿಗಳೆಷ್ಟು ಎಂಬ ಖಚಿತ ಲೆಕ್ಕವನ್ನಿಟ್ಟಿಲ್ಲ.

2013-14ರಲ್ಲಿ 3 ಲಕ್ಷದ 49 ಸಾವಿರ ರು., 2014-15 ರಲ್ಲಿ ಸುಮಾರು 4 ಲಕ್ಷದ 96 ಸಾವಿರ ರು. ಹಾಗೂ 2015-16ನೇ ಸಾಲಿಗೆ ಮತ್ತೆ 4 ಲಕ್ಷದ 96 ಸಾವಿರ ರು.ಗಳನ್ನು ಖರ್ಚು ಮಾಡಲಾಗಿದೆ. ೨೦೧೬-೧೭ ಮತ್ತು ೨೦೧೭-೧೮ನೇ ಸಾಲಿನ ಈವರೆಗೆ ಎಷ್ಟು ಖರ್ಚಾಗಿದೆ ಎಂಬ ವಿವರ ತಿಳಿದುಬಂದಿಲ್ಲ.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More