ಎಚ್ಎಎಲ್‌ ಸಾಮರ್ಥ್ಯ, ಕೊಡುಗೆ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಸಂವಾದ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅ.13 (ಶನಿವಾರ) ಕಬ್ಬನ್‌ ಪಾರ್ಕ್‌ ಬಳಿ ಇರುವ ಎಚ್ಎಎಲ್‌ ಕಾರ್ಪೋರೇಟ್‌ ಕಚೇರಿ ಬಳಿ ‘ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ಎಎಲ್‌ ಕೊಡುಗೆ’ ಎಂಬ ಶೀರ್ಷಿಕೆಯಡಿ ಸಂವಾದ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅ.13ರಂದು (ಶನಿವಾರ) ಕಬ್ಬನ್‌ ಪಾರ್ಕ್‌ ಬಳಿ ಇರುವ ಎಚ್ಎಎಲ್‌ ಸಂಸ್ಥೆಯ ಕಾರ್ಪೋರೆಟ್‌ ಕಚೇರಿ ಬಳಿ ‘ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ಎಎಲ್‌ ಕೊಡುಗೆ’ ಎಂಬ ಶೀರ್ಷಿಕೆಯಡಿ ಸಂವಾದ ನಡೆಸಲಿದ್ದಾರೆ. ಎಚ್‌ಎಎಲ್‌ ಸಂಸ್ಥೆಯ ಈಗಿನ ಹಾಗೂ ಮಾಜಿ ನೌಕರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಹೇಳಿದ್ದಾರೆ. ಇದೇ ವೇಳೆ, ರಾಹುಲ್‌ ಗಾಂಧಿ ಅವರು ಎಚ್‌ಎಎಲ್‌ ಸಂಸ್ಥೆಯ ಆವರಣದಲ್ಲಿಯೇ ನೌಕರರೊಂದಿಗೆ ಸಂವಾದ ನಡೆಸಲಿದ್ದಾರೆ. ಆ ನಂತರ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ವರದಿಗಳನ್ನು ದಿನೇಶ್‌ ಗುಂಡೂರಾವ್‌ ತಳ್ಳಿಹಾಕಿದ್ದಾರೆ.

ರಾಹುಲ್‌ ಗಾಂಧಿ ಬೆಂಗಳೂರು ಭೇಟಿ ಬಗ್ಗೆ ಮಾತನಾಡಿರುವ ದಿನೇಶ್‌ ಗುಂಡೂ ರಾವ್‌, “ರಾಹುಲ್‌ ಭೇಟಿಯನ್ನು ಕರ್ನಾಟಕ ಕಾಂಗ್ರೆಸ್‌ ಆಯೋಜಿಸಿಲ್ಲ. ಸಂವಾದ ಸಭೆಗೂ ಕೆಪಿಸಿಸಿಗೂ ಯಾವುದೇ ಸಂಬಂದವಿಲ್ಲ. ‘ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ಎಎಲ್‌ ಕೊಡುಗೆ’ ಎಂಬ ಶೀರ್ಷಿಕೆಯಡಿ ಸಂವಾದ ನಡೆಯುತ್ತಿದೆ. ಸಂವಾದ ಕಾರ್ಯಕ್ರಮಕ್ಕೆ ಎಚ್‌ಎಎಲ್‌ ಸಂಸ್ಥೆಯ ಮಾಜಿ ಮತ್ತು ಹಾಲಿ 100 ನೌಕರರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದ ಹೊಣೆಯನ್ನು ರಾಹುಲ್‌ ಗಾಂಧಿ ಅವರ ಕಾರ್ಯಾಲಯವೇ ಹೊತ್ತುಕೊಂಡಿದೆ,” ಎಂದು ದಿನೇಶ್‌ ಗುಂಡೂ ರಾವ್‌ ತಿಳಿಸಿದ್ದಾರೆ. “ರಾಹುಲ್‌ ಭೇಟಿ ವೇಳೆ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಆಯೋಜಿಸಲು ಉದ್ದೇಶಿಸಲಾಗಿತ್ತು. ರಾಹುಲ್‌ ಅವರಿಗೆ ಸಮಯದ ಅಭಾವವಿರುವ ಕಾರಣ ಸಾರ್ವಜನಿಕ ಸಭೆಯ ಆಲೋಚನೆ ಕೈಬಿಡಲಾಯಿತು,” ಎಂದು ಹೇಳಿದ್ದಾರೆ.

ರಾಹುಲ್‌ ಸಂವಾದ ಸಭೆಯ ಬಗ್ಗೆ ‘ಹಿಂದೂಸ್ತಾನ್‌ ಟೈಮ್ಸ್‌’ನೊಂದಿಗೆ ಮಾತನಾಡಿರುವ ಆಲ್‌ ಇಂಡಿಯಾ ಎಚ್ಎಎಲ್‌ ಟ್ರೇಡ್‌ ಯುನಿಯನ್‌ ಕೊಆರ್ಡಿನೇಶನ್‌ ಕಮಿಟಿಯ ಪ್ರಧಾನ ಕಾರ್ಯದರ್ಶಿ ಸೂರ್ಯದೇವ್‌ ಚಂದ್ರಶೇಖರ್‌, “ನೌಕರರೊಂದಿಗೆ ಸಂವಾದ ಸಭೆ ಆಯೋಜಿಸಬೇಕೆಂದು ಕಾಂಗ್ರೆಸ್‌ ಪಕ್ಷ ಎಚ್‌ಎಎಲ್‌ ಒಕ್ಕೂಟವನ್ನು ಕೇಳಿಕೊಂಡಿದೆ,” ಎಂದು ತಿಳಿಸಿದ್ದಾರೆ. “ಎಚ್‌ಎಎಲ್‌ ಕಚೇರಿ ಹೊರಗೆ ಆಯೋಜಿಸಲಾಗಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲು ಕಾಂಗ್ರೆಸ್‌ನ ಕೆಲ ನಾಯಕರು ನಮ್ಮನ್ನು ಕೇಳಿಕೊಂಡಿದ್ದಾರೆ. ಆ ಬಗ್ಗೆ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಇಂತಹ ಮನವಿಗಳಿಗೆ ನಮ್ಮ ಬೆಂಬಲವಿರುವುದಿಲ್ಲ,” ಎಂದು ಸೂರ್ಯದೇವ್‌ ಚಂದ್ರಶೇಖರ್ ಹೇಳಿದ್ದಾರೆ.

ಇದನ್ನೂ ಓದಿ : ಎಚ್‌ಎಎಲ್‌ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆಗಳು ಏನನ್ನು ಸೂಚಿಸುತ್ತವೆ?

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಚ್‌ಎಎಲ್‌ ಸಂಸ್ಥೆಯ ವಕ್ತಾರ ಗೋಪಾಲ್‌ ಸುತಾರ್‌, “ಕಾಂಗ್ರೆಸ್‌ ಪಕ್ಷವು ಎಚ್‌ಎಎಲ್‌ ಆವರಣದಲ್ಲಿ ಸಭೆ ನಡೆಸಲು ಯಾವುದೇ ಅನುಮತಿ ತೆಗೆದುಕೊಂಡಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರ ರಫೇಲ್‌ ಯುದ್ಧವಿಮಾನ ಒಪ್ಪಂದವನ್ನು ಎಚ್‌ಎಎಲ್‌ ಸಂಸ್ಥೆಗೆ ನೀಡುವ ಬದಲು ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ಗೆ ನೀಡಿದ್ದನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ಹಿಂದೆ ಪ್ರಶ್ನಿಸಿದ್ದರು. ರಾಹುಲ್‌ ಗಾಂಧಿ ಅವರಿಗೆ ಪ್ರತ್ಯುತ್ತರ ನೀಡುವ ಭರದಲ್ಲಿ ಎಚ್‌ಎಎಲ್‌ ಸಾಮರ್ಥ್ಯ ಕೊರತೆಯ ಬಗ್ಗೆ ನಿರ್ಮಲಾ ಸೀತಾರಾಮನ್‌ ಮಾತನಾಡಿದ್ದರು. ಎಪ್ಪತ್ತು ವರ್ಷಗಳ ಇತಿಹಾಸ ಹೊಂದಿರುವ ದೇಶದ ಪ್ರತಿಷ್ಠಿತ ಸಂಸ್ಥೆಯೊಂದರ ಸಾಮರ್ಥ್ಯ ಕುರಿತ ನಿರ್ಮಲಾ ಸೀತಾರಾಮನ್‌ ಹೇಳಿಕೆಗಳಿಗೆ ಎಚ್ಎಎಲ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ವರ್ಗದಿಂದ ಆಕ್ರೋಶ ವ್ಯಕ್ತವಾಗಿತ್ತು. ಎಚ್‌ಎಎಲ್‌ನಂತಹ ಗೌರವಾನ್ವಿತ ಕಂಪನಿಯ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ, ನಾಳೆ ಕಬ್ಬನ್‌ ಪಾರ್ಕ್‌ ಬಳಿ ಇರುವ ಎಚ್‌ಎಎಲ್‌ ಕಾರ್ಪೋರೆಟ್‌ ಕಚೇರಿ ಹೊರಗೆ ನಡೆಯಲಿರುವ ಸಂವಾದ ಕುತೂಹಲ ಕೆರಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More