ರುಪಾಯಿ ಚೇತರಿಕೆ ಪರಿಣಾಮ; ದಾಖಲೆ ಪ್ರಮಾಣದಲ್ಲಿ ಮರುಜಿಗಿದ ಷೇರುಪೇಟೆ

ಗುರುವಾರದ ವಹಿವಾಟಿನಲ್ಲಿ 1000 ಅಂಶಗಳಷ್ಟು ಕುಸಿದಿದ್ದ ಸೆನ್ಸೆಕ್ಸ್ ವಾರಾಂತ್ಯದ ವಹಿವಾಟಿನಲ್ಲಿ ಅಷ್ಟೇ ತ್ವರಿತವಾಗಿ ಜಿಗಿದಿದೆ. 732 ಅಂಶ ಜಿಗಿದು, ಎರಡು ವರ್ಷಗಳಲ್ಲೇ ಏಕದಿನದ ಗರಿಷ್ಠ ಏರಿಕೆ ದಾಖಲಿಸಿತು. ರುಪಾಯಿ 57 ಪೈಸೆ ಚೇತರಿಸಿಕೊಂಡು 74ರ ನಿರ್ಣಾಯಕ ಮಟ್ಟದಿಂದ ಕೆಳಕ್ಕಿಳಿದಿದೆ

ಕುಸಿದಷ್ಟೇ ತ್ವರಿತವಾಗಿ ಷೇರುಪೇಟೆ ಚೇತರಿಸಿಕೊಂಡಿದೆ. ಗುರುವಾರದ ವಹಿವಾಟಿನಲ್ಲಿ 1,000 ಅಂಶದಷ್ಟು ಕುಸಿದಿದ್ದ ಸೆನ್ಸೆಕ್ಸ್, 300 ಅಂಶಗಳಷ್ಟು ಕುಸಿದಿದ್ದ ನಿಫ್ಟಿ ವಾರಾಂತ್ಯದ ವಹಿವಾಟಿನಲ್ಲಿ ತ್ವರಿತವಾಗಿ ಜಿಗಿದಿವೆ. ಸೆನ್ಸೆಕ್ಸ್ 732 ಅಂಶ ಏರಿಕೆಯೊಂದಿಗೆ 34,733ಕ್ಕೆ ಏರಿದರೆ, ನಿಫ್ಟಿ 237 ಅಂಶದೊಂದಿಗೆ 10,472ಕ್ಕೆ ಏರಿತು. ಸತತ ಕುಸಿತದ ಹಾದಿಯಲ್ಲಿದ್ದ ರುಪಾಯಿಯು ಡಾಲರ್ ವಿರುದ್ಧ 57 ಪೈಸೆ ಚೇತರಿಕೆ ಕಂಡು, 73.56ಕ್ಕೆ ಏರಿತು. ನಿರ್ಣಾಯಕ ಮಟ್ಟವಾದ 74ರಿಂದ ಕೆಳಕ್ಕಿಳಿದು ಸ್ಥಿರತೆ ಕಂಡುಕೊಂಡಿದೆ.

ಮಾರುಕಟ್ಟೆ ತಜ್ಞರ ಪ್ರಕಾರ, ರುಪಾಯಿ ಮತ್ತು ಷೇರುಪೇಟೆಗಳು ಇನ್ನೂ ಸಂಕಷ್ಟಗಳಿಂದ ಪೂರ್ಣ ಪ್ರಮಾಣದಲ್ಲಿ ಪಾರಾಗಿಲ್ಲ. ವಾರಾಂತ್ಯದ ವಹಿವಾಟಿನ ಚೇತರಿಕೆಯು ತಾತ್ಕಾಲಿಕವಾಗಿದೆ. ಅಂತಾರಾಷ್ಟ್ರೀಯ ತೈಲ ದರ ಮತ್ತು ಅಮೆರಿಕ-ಚೀನಾ ವ್ಯಾಪಾರ ಸಮರದ ಕರಿನೆರಳು ನಿಚ್ಚಳವಾಗಿರುತ್ತದೆ. ಅದರರ್ಥ, ಷೇರುಪೇಟೆ ಮತ್ತಷ್ಟು ಕುಸಿತ ದಾಖಲಿಸಬಹುದು. ರುಪಾಯಿ ಸಹ ಬರುವ ದಿನಗಳಲ್ಲಿ 75ರ ಗಡಿ ಮುಟ್ಟಬಹುದು.

ಗುರುವಾರದ ವಹಿವಾಟಿನಲ್ಲಿ 74.12ಕ್ಕೆ ಸ್ಥಿರಗೊಂಡಿದ್ದ ರುಪಾಯಿ, ಶುಕ್ರವಾರ ಆರಂಭದಲ್ಲೇ ತೀವ್ರ ಚೇತರಿಕೆ ಕಂಡು 73.74ಕ್ಕೆ ವಹಿವಾಟು ಆರಂಭಿಸಿತು. ನಂತರ ಮತ್ತಷ್ಟು ಚೇತರಿಸಿಕೊಂಡು 73.56ಕ್ಕೆ ಸ್ಥಿರಗೊಂಡಿತು. ರುಪಾಯಿ ಜಿಗಿತವು ಷೇರುಪೇಟೆಗೆ ಉತ್ತೇಜನ ನೀಡಿತು. ಗುರುವಾರದ ವಹಿವಾಟಿನಲ್ಲಿ ಕುಸಿದಿದ್ದ ಬಹುತೇಕ ಷೇರುಗಳು ಹೆಚ್ಚು ಆಕರ್ಷಕ ಎನಿಸಿದ್ದರಿಂದ ತ್ವರಿತ ಖರೀದಿ ಒತ್ತಡ ಬಂತು. ದಿನವಿಡೀ ಪೇಟೆ ಏರುಹಾದಿಯಲ್ಲೇ ಸಾಗಿತು.

ನಿಫ್ಟಿ ಐಟಿ ಸೂಚ್ಯಂಕ ಶೇ.1ರಷ್ಟು ಕುಸಿಯಿತು. ಅದರ ಹೊರತಾಗಿ ವಿಸ್ತೃತ ಮಾರುಕಟ್ಟೆಯ ಎಲ್ಲ ಸೂಚ್ಯಂಕಗಳು ಜಿಗಿದಿವೆ. ನಿಫ್ಟಿ ಮೆಟಲ್, ನಿಫ್ಟಿ ಆಟೋ, ನಿಫ್ಟಿ ರಿಯಾಲ್ಟಿ, ನಿಫ್ಟಿ ಎನರ್ಜಿ, ನಿಫ್ಟಿ ಸಿಪಿಎಸ್ಇ ಶೇ.3-4ರಷ್ಟು ಜಿಗಿದವು. ಉಳಿದ ಸೂಚ್ಯಂಕಗಳು ಶೇ.1-3ರಷ್ಟು ಏರಿವೆ. ಗುರುವಾರ ಉತ್ತಮ ಫಲಿತಾಂಶ ಪ್ರಕಟಿಸಿದ್ದ ಟಿಸಿಎಸ್, ರುಪಾಯಿ ಕುಸಿತದ ಪರಿಣಾಮ ಶೇ.4ರಷ್ಟು ಕುಸಿಯಿತು. ಮೈಂಡ್ ಟ್ರೀ, ಎಚ್ಸಿಎಲ್ ಟೆಕ್, ಎನ್ಐಐಟಿ ಟೆಕ್, ಟೆಕ್ ಮಹಿಂದ್ರ ಶೇ.1-3ರಷ್ಟು ಕುಸಿದವು. ಶೇ.5ರಷ್ಟು ಕುಸಿದಿದ್ದ ಇನ್ಫೊಸಿಸ್ ದಿನದ ಅಂತ್ಯದ ವೇಳೆಗೆ ಚೇತರಿಸಿಕೊಂಡಿತು.

ರುಪಾಯಿ ಚೇತರಿಕೆಯ ಜೊತೆಗೆ ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಚೇತರಿಕೆ, ಏಷ್ಯಾದ ಬಹುತೇಕ ಪೇಟೆಗಳ ಶೇ.2ರಷ್ಟು ಏರಿಕೆ, ವಾರವಿಡೀ ಕುಸಿದ ಕಚ್ಚಾ ತೈಲ ದರವು ದೇಶೀಯ ಪೇಟೆ ಜಿಗಿಯಲು ಕಾರಣವಾಗಿದೆ.

ಶುಕ್ರವಾರದ ವಹಿವಾಟಿನಲ್ಲಿ ಕಚ್ಚಾ ತೈಲ ದರ ಮತ್ತೆ ಏರುಹಾದಿಗೆ ಸರಿದಿದೆ. ಆದರೆ, ವಾರವಿಡೀ ಬ್ರೆಂಟ್ ಕ್ರೂಡ್ 86.50 ಡಾಲರಿನಿಂದ 80 ಡಾಲರಿಗೆ ಕುಸಿದಿತ್ತು. ಶುಕ್ರವಾರ 81 ಡಾಲರಿಗೆ ಏರಿಕೆಯಾಗಿದೆ. ಆದರೆ, ನಾಲ್ಕು ದಿನಗಳ ವಹಿವಾಟಿನಲ್ಲಿ ಶೇ.10ರಷ್ಟು ಕುಸಿತ ದಾಖಲಿಸಿದ್ದು, ದೇಶೀಯ ಪೇಟೆಗೆ ಉತ್ತೇಜನ ನೀಡಿದೆ.

ಇದನ್ನೂ ಓದಿ : ಕೇಂದ್ರದ ಮಧ್ಯಪ್ರವೇಶದಿಂದಲೂ ಸ್ಥಿರಗೊಳ್ಳದ ರುಪಾಯಿ; ಪೇಟೆಯಲ್ಲಿ ರಕ್ತದೋಕುಳಿ

ವಾರಾಂತ್ಯದಲ್ಲಿ ಕಚ್ಚಾ ತೈಲ ದರ ಮತ್ತೆ ಏರಿಕೆಯಾದರೆ ಸೋಮವಾರದ ವಹಿವಾಟಿನಲ್ಲಿ ಷೇರುಪೇಟೆ ಕುಸಿಯಬಹುದು, ರುಪಾಯಿ ಸಹ ಮತ್ತೆ ಕುಸಿತ ದಾಖಲಿಸಬಹುದು. ಆದರೆ, ಕಚ್ಚಾ ತೈಲ ದರ 80ರ ಆಜುಬಾಜಿನಲ್ಲಿ ಸ್ಥಿರವಾದರೆ ಪೇಟೆಯಲ್ಲಿ ಮತ್ತಷ್ಟು ಖರೀದಿ ಉತ್ಸಾಹ ಚಿಮ್ಮಲಿದೆ. ಅದು ರುಪಾಯಿ ಚೇತರಿಕೆಗೂ ಕಾರಣವಾಗಲಿದೆ.

ಡಾಲರ್ ಏರಿಕೆಯಿಂದಾಗಿ ಚಿನಿವಾರ ಪೇಟೆಯಲ್ಲಿ ಚಿನ್ನದ ಹೊಳಪು ಹೆಚ್ಚಿದೆ. 10 ಗ್ರಾಮ್ ಚಿನ್ನ 32,000 ರುಪಾಯಿ ಸಮೀಪಿಸಿದೆ. ಆದರೆ, ವಾರಾಂತ್ಯದ ವಹಿವಾಟಿನಲ್ಲಿ 116 ರುಪಾಯಿ ಕುಸಿದು 31,875ರುಪಾಯಿಗೆ ಸ್ಥಿರಗೊಂಡಿದೆ. ಬರುವ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಲಿದೆ. ಬೆಳ್ಳೆಯ ದರ ಬೆಳಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More