#MeToo ಅಭಿಯಾನಕ್ಕೆ ಸರ್ಕಾರದ ಬೆಂಬಲ, ಪ್ರಕರಣಗಳ ವಿಚಾರಣೆಗೆ ಸಮಿತಿ ರಚನೆಗೆ ತೀರ್ಮಾನ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ಸಾರ್ವಜನಿಕವಾಗಿ ವಿಚಾರಣೆ ನಡೆಸುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಈ ಬೆಳವಣಿಗೆ ಮಹತ್ವದ್ದು ಎನ್ನಲಾಗಿದೆ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ಸಾರ್ವಜನಿಕವಾಗಿ ವಿಚಾರಣೆ ನಡೆಸುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಭಾರತದಲ್ಲಿ ನಡೆಯುತ್ತಿರುವ #MeToo ಅಭಿಯಾನಕ್ಕೆ ಇದೀಗ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ನಾಲ್ವರು ನಿವೃತ್ತ ನ್ಯಾಯಾಧೀಶರಿಂದ #MeToo ಪ್ರಕರಣಗಳ ವಿಚಾರಣೆ ನಡೆಸಲು ಸಮಿತಿ ರಚಿಸುವುದಾಗಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. #MeToo ಅಭಿಯಾನದಿಂದ ಹೊರಬಂದ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ರಚಿಸುವ ಪ್ರಸ್ತಾವದ ಬಗ್ಗೆ ಸಚಿವರು ವಿವರಿಸಿದ್ದು, "ತನಗಾದ ಕಿರುಕುಳದ ಬಗ್ಗೆ ಮಹಿಳೆ ನೀಡಿರುವ ದೂರಿನ ಹಿಂದಿನ ನೋವು ಮತ್ತು ಅಘಾತವನ್ನು ನಾನು ನಂಬುತ್ತೇನೆ. ಕೆಲಸ ಮಾಡುವ ಸ್ಥಳದಲ್ಲಿನ ಲೈಂಗಿಕ ಕಿರುಕುಳವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವೇ ಇಲ್ಲ," ಎಂದವರು ಹೇಳಿದ್ದಾರೆ.

ಹಲವು ವರ್ಷಗಳ ಹಿಂದಿನ ಲೈಂಗಿಕ ದೌರ್ಜನ್ಯದ ಕುರಿತಂತೆ ಮಹಿಳೆಯರು ಈಗ ಬಹಿರಂಗವಾಗಿ ಹೇಳಿಕೊಳ್ಳುವುದರ ಹಿಂದೆ ದುರುದ್ದೇಶವಿದೆ ಎಂಬ ಆರೋಪ ಪುರುಷಪ್ರಧಾನ ಮನಸ್ಥಿತಿಗಳಿಂದ ಕೇಳಿಬರುತ್ತಿದ್ದು, ಇದಕ್ಕೆ ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ, “ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ದಾಖಲಿಸುವುದಕ್ಕೆ ಸಮಯದ ಮಿತಿಯಿಲ್ಲ. ದೌರ್ಜನ್ಯ ನಡೆದು ಎಷ್ಟೇ ವರ್ಷಗಳಾಗಿದ್ದರೂ ದೂರು ನೀಡಬಹುದು. ಕೆಲವರು ಅನಿವಾರ್ಯ ಕಾರಣಗಳಿಂದ ಆ ಸಂದರ್ಭದಲ್ಲಿ ದೂರು ನೀಡದೆ ಇದ್ದಿರಬಹುದು. ಅವರ ಮೇಲೆ ಒತ್ತಡವಿರಬಹುದು. ಅಂಥ ಸಂದರ್ಭದಲ್ಲಿ ವರ್ಷಗಳೇ ಕಳೆದ ನಂತರವೂ ದೂರು ನೀಡಬಹುದು ಮತ್ತು ಈ ದೂರನ್ನು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲೂ ತಿರಸ್ಕರಿಸುವಂತಿಲ್ಲ,” ಎಂದು ಮನೇಕಾ ಗಾಂಧಿ ಹೇಳಿದ್ದರು.

#MeToo ಅಭಿಯಾನದಲ್ಲಿ ಹೊರಬಂದಿರುವ ಪ್ರಕರಣಗಳು ಯಾವಾಗ ನಡೆದಿದ್ದವು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವುಗಳೆಲ್ಲವೂ ತಡವಾಗಿ ಬೆಳಕಿಗೆ ಬಂದಿದ್ದು, ಎಲ್ಲ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ತಾವು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧವಾಗಿದ್ದು, ಇಂತಹ ಪ್ರಕರಣಗಳ ವಿಚಾರಣೆಗಾಗಿಯೇ ನಾಲ್ವರು ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸುವುದಾಗಿ ಅವರು ಹೇಳಿದ್ದಾರೆ.

ಹಲವು ವರ್ಷಗಳ ಹಿಂದೆ ನಡೆದಿರುವ ಲೈಂಗಿಕ ಪ್ರಕರಣಗಳ ವಿಚಾರಣೆಗಾಗಿ ಕಾನೂನಿನಲ್ಲಿ ಸಮಯದ ಮಿತಿ ತೆಗೆದುಹಾಕುವಂತೆ ಕಾನೂನು ಆಯೋಗಕ್ಕೆ ಪತ್ರ ಬರೆದಿರುವುದಾಗಿಯೂ ಮನೇಕಾ ಗಾಂಧಿ ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ ಜೆ ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ವಿಚಾರಣೆ ನಡೆಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಒಟ್ಟಾರೆ, ಲೈಂಗಿಕ ದೌರ್ಜನ್ಯದ ವಿರುದ್ಧದ #MeToo ಆಂದೋಲನದ ವಿಶ್ವಾದ್ಯಂತ ದೊಡ್ಡ ಸಂಚನಲವನ್ನೇ ಸೃಷ್ಟಿಸಿದ್ದು, ಚಿತ್ರತಾರೆಯರು ಸೇರಿದಂತೆ ನಾನಾ ಕ್ಷೇತ್ರದ ಸೆಲೆಬ್ರಿಟಿಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಬಯಲಿಗೆಳೆಯುವ ಮೂಲಕ, ತಮಗಾದ ಕಹಿ ಅನುಭವಗಳನ್ನೂ ಹೊರಹಾಕುತ್ತಿದ್ದಾರೆ.

ಅದರಲ್ಲೂ, ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್ ವಿರುದ್ಧ ದೂರು ನೀಡಿದ್ದೆ ತಡ, ಭಾರತದಲ್ಲಿ #MeToo ಅಭಿಯಾನ ಬೃಹದಾಕಾರದಲ್ಲಿ ಬೆಳೆಯುತ್ತಲೇ ಇದ್ದು, ದೊಡ್ಡ-ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಗಳು ಹೇಗೆ ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದರು ಎಂಬುದು ಇದೀಗ ಬಯಲಾಗುತ್ತಿದೆ.

ಇನ್ನೊಂದೆಡೆ #MeToo ಆಂದೋಲನಕ್ಕೆ ಬಾಲಿವುಡ್‌ನ ಇನ್ನೊಬ್ಬ ನಟ ಗುರಿಯಾಗಿದ್ದು, ತಮ್ಮ ವಿರುದ್ಧ ಮೂವರು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಹೋರಿಸಿದ್ದರ ಹಿನ್ನೆಲೆಯಲ್ಲಿ ನಿರ್ದೇಶಕ ಸಾಜಿದ್ ಖಾನ್ ತಾವು ನಿರ್ದೇಶಿಸುತ್ತಿರುವ ‘ಹೌಸ್‌ಫುಲ್ 4’ ಚಿತ್ರದ ನಿರ್ದೇಶಕನ ಪಟ್ಟದಿಂದ ಕೆಳಗಿಳಿದಿದ್ದಾರೆ. ಸತ್ಯಾಂಶ ಹೊರಬರುವವರೆಗೂ ತಾವು ನಿರ್ದೇಶಕರ ಹುದ್ದೆಯಿಂದ ಕೆಳಗಿಳಿಯುವುದಾಗಿ ಅವರು ಹೇಳಿದ್ದಾರೆ.

ಇನ್ನು, ಸಾಜಿದ್ ಖಾನ್ ಅವರ ನಿರ್ಧಾರಕ್ಕೆ ಮುನ್ನವೇ ನಟ ಅಕ್ಷಯ್ ಕುಮಾರ್ ಕೂಡ ‘ಹೌಸ್‌ಪುಲ್ 4’ ಚಿತ್ರದ ಶೂಟಿಂಗ್ ರದ್ದುಪಡಿಸಿದ್ದರು. ವಿಚಾರಣೆ ಮುಗಿಯುವವರೆಗೂ ಚಿತ್ರೀಕರಣ ಮಾಡದಂತೆ ನಿರ್ಮಾಪಕರ ಬಳಿ ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಸಾಜಿದ್ ವರ್ತನೆಯ ಕುರಿತಂತೆ ಅಚ್ಚರಿ ವ್ಯಕ್ತಪಡಿಸಿರುವ ನೃತ್ಯ ಸಂಯೋಜಕಿ ಫರಾ ಖಾನ್, ಈ ಘಟನೆ ನಮ್ಮ ಕುಟುಂಬಕ್ಕೆ ಅಚ್ಚರಿ ಹಾಗೂ ಅಘಾತವನ್ನು ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ನಟ ಪರ್ಹಾನ್ ಅಖ್ತರ್ ಕೂಡ ಸಾಜಿದ್ ವರ್ತನೆಯ ಕುರಿತಂತೆ ಬೇಸರ ವ್ಯಕ್ತಪಡಿಸಿದ್ದು, “ಸಾಜಿದ್ ವಿಚಾರ ನನಗೆ ಅಚ್ಚರಿ ತಂದಿದೆ. ಇಂತಹ ವರ್ತನೆಯನ್ನು ಸಾಜಿದ್ ಅವರಿಂದ ನಿರೀಕ್ಷಿಸಿರಲಿಲ್ಲ,” ಎಂದು ಟ್ವೀಟ್ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More