10 ವರ್ಷದ ಲೋಕಾಯುಕ್ತ ತನಿಖೆ ವಿಫಲ; ಆರೋಪಿ ಕೆಎಎಸ್ ಅಧಿಕಾರಿ ದೋಷಮುಕ್ತ!

ಅವ್ಯವಹಾರ ಪ್ರಕರಣವೊಂದರ ಕುರಿತು ಕೆಎಎಸ್ ಅಧಿಕಾರಿ ವಿರುದ್ಧ ದೂರು ಸಲ್ಲಿಕೆಯಾದ ನಂತರ ೧೦ ವರ್ಷಗಳವರೆಗೆ ಲೋಕಾಯುಕ್ತದಲ್ಲಿ ವಿಚಾರಣೆ ನಡೆದಿದೆ. ಈ ಕುರಿತಾದ ವರದಿ ಆಧರಿಸಿ ಸರ್ಕಾರ ೨ ವರ್ಷದವರೆಗೆ ಕ್ರಮ ಕೈಗೊಂಡಿರಲಿಲ್ಲ. ಈಗ ಅಧಿಕಾರಿಯನ್ನು ದೋಷಮುಕ್ತಗೊಳಿಸಲಾಗಿದೆ

ರೇಣುಕಾ ಯಲ್ಲಮ್ಮ ದೇವಸ್ಥಾನದ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಯಲ್ಲಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಎಸ್‌ ಅಧಿಕಾರಿ ವಿರುದ್ಧ ಲೋಕಾಯುಕ್ತ ಸಂಸ್ಥೆ ಮಾಡಿದ್ದ ಇಲಾಖೆ ವಿಚಾರಣೆ ಶಿಫಾರಸನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಇಲಾಖೆ ವಿಚಾರಣೆ ಕೈಬಿಡುವ ಬಗ್ಗೆ ಆರೋಪಿ ಅಧಿಕಾರಿಯ ಕೋರಿಕೆಯನ್ನು ಪುರಸ್ಕರಿಸಿದೆ.

ವಿಶೇಷವೆಂದರೆ, ಈ ಪ್ರಕರಣದ ಕುರಿತು ದಾಖಲಾಗಿದ್ದ ದೂರಿನ ಕುರಿತು ೧೦ ವರ್ಷ ತನಿಖೆ ನಡೆದಿದೆ. ಹಾಗೆಯೇ, ಪ್ರಕರಣ ಕುರಿತು ಉಪ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್ ಆನಂದ್ ಅವರು ವರದಿ ಸಲ್ಲಿಸಿದ ೨ ವರ್ಷದ ನಂತರ ಅಧಿಕಾರಿ ವಿರುದ್ಧ ಪ್ರಕರಣವನ್ನು ಸರ್ಕಾರ ಮುಕ್ತಾಯಗೊಳಿಸಿದೆ.

ಆರೋಪ ಮುಕ್ತಗೊಳಿಸಿ ೨೦೧೮ರ ಅಕ್ಟೋಬರ್‌ ೬ರಂದು ಆದೇಶ ಹೊರಡಿಸಲಾಗಿದೆ. ಮುಜುರಾಯಿ ಇಲಾಖೆಯ ಈ ಅಭಿಪ್ರಾಯವನ್ನು ಹಿಂದಿನ ಸಚಿವ ರುದ್ರಪ್ಪ ಲಮಾಣಿ ಅವರು ಅನುಮೋದಿಸಿರುವುದು ಮತ್ತೊಂದು ವಿಶೇಷ.

ಬೆಳಗಾವಿಯ ಸವದತ್ತಿ ತಾಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನದ ಆಡಳಿತಾಧಿಕಾರಿ ಆಗಿದ್ದ ಎಂ ಆರ್‌ ಹಿರೇಮಠ್‌‌ ಅವರ ದುರಾಡಳಿತದಿಂದ ದೇವಸ್ಥಾನಕ್ಕೆ ೫೩ ಲಕ್ಷ ರು. ನಷ್ಟವಾಗಿದೆ ಎಂದು ಮತ್ತೊಬ್ಬ ಕೆಎಎಸ್‌ ಅಧಿಕಾರಿ ವೈ ಎಸ್‌ ಪಾಟೀಲ್ ಅವರು ಲೋಕಾಯುಕ್ತಕ್ಕೆ ೨೦೦೬ರಲ್ಲಿ ದೂರು ಸಲ್ಲಿಸಿದ್ದರು. ಈ ವೇಳೆಯಲ್ಲಿ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದರು ಹಾಗೂ ಪತ್ರಿ ಬಸವನಗೌಡ ಉಪ ಲೋಕಾಯುಕ್ತರಾಗಿದ್ದರು. ಪತ್ರಿ ಬಸವನಗೌಡ ಅವರ ನಂತರ ಮಜಗೆ ಅವರು ಉಪ ಲೋಕಾಯುಕ್ತರಾಗಿದ್ದರು. ನಿವೃತ್ತ ನ್ಯಾಯಮೂರ್ತಿ ಎನ್ ಆನಂದ್ ಅವರು ಉಪ ಲೋಕಾಯುಕ್ತರಾದ ನಂತರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.

ಈ ದೂರಿನ ಕುರಿತು ೧೦ ವರ್ಷಗಳ ಕಾಲ ವಿಚಾರಣೆ ನಡೆದ ನಂತರ, ಅಂದರೆ, ೨೦೧೬ರ ಅಕ್ಟೋಬರ್ ೨೪ರಂದು ಎಂ ಆರ್‌ ಹಿರೇಮಠ್‌ ಅವರ ವಿರುದ್ಧದ ಕರ್ತವ್ಯಲೋಪ ಆರೋಪ ಸಾಬೀತುಪಡಿಸಿ ೧೨(೩) ಅಡಿಯಲ್ಲಿ ವರದಿ ಸಲ್ಲಿಕೆಯಾಗಿತ್ತು. ಈ ವರದಿಯನ್ನು ೨ ವರ್ಷಗಳವರೆಗೂ ಇರಿಸಿಕೊಂಡಿದ್ದ ಸರ್ಕಾರ, ಆಪಾದಿತ ಅಧಿಕಾರಿ ವಿರುದ್ಧ ಮಾಡಿದ್ದ ಶಿಫಾರಸನ್ನು ತಿರಸ್ಕರಿಸಿ ಆದೇಶ ಹೊರಡಿಸಿರುವುದು ಲೋಕಾಯುಕ್ತಕ್ಕೆ ಹಿನ್ನಡೆಯಾಗಿದೆ.

ಆರೋಪಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಶಿಫಾರಸ್ಸನ್ನು ಸರ್ಕಾರ ತಿರಸ್ಕರಿಸಿ ಹೊರಡಿಸಿರುವ ಆದೇಶದ ಪ್ರತಿ
ಇದನ್ನೂ ಓದಿ : ‘ಬಿ’ ರಿಪೋರ್ಟ್ ಹಾಕುವುದರಲ್ಲಿ ಲೋಕಾಯುಕ್ತ ಪೊಲೀಸರು ನಿಸ್ಸೀಮರು!

“ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನ ಯಲ್ಲಮ್ಮನ ಗುಡ್ಡದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಯಲ್ಲಿ ಯಾವುದೇ ರೀತಿಯಲ್ಲೂ ಅವ್ಯವಹಾರ ಆದ ಬಗ್ಗೆ ವರದಿಯಾಗಿಲ್ಲ. ಈ ಕಾಮಗಾರಿಯಿಂದ ದೇವಸ್ಥಾನಕ್ಕಾಗಲೀ ಅಥವಾ ಸರ್ಕಾರಕ್ಕಾಗಲೀ ಆರ್ಥಿಕವಾಗಿ ನಷ್ಟವಾಗಿರುವುದಿಲ್ಲ. ಕೆಎಎಸ್ ಅಧಿಕಾರಿ ಎಂ ಆರ್‌ ಹಿರೇಮಠ್‌ ಅವರ ವಿರುದ್ಧ ದೋಷಾರೋಪಣಾ ಪಟ್ಟಿ ತಯಾರಿಸಲು ಯಾವುದೇ ಪೂರಕ ಅಂಶಗಳು, ಪುಷ್ಟೀಕರಿಸುವ ದಾಖಲೆಗಳು ಇಲ್ಲ. ಹೀಗಾಗಿ, ಇವರ ವಿರುದ್ಧದ ಆರೋಪಗಳಿಗೆ ಇಲಾಖೆ ವಿಚಾರಣೆ ನಡೆಸಲು ಉದ್ದೇಶಿಸಿರುವ ಪ್ರಸ್ತಾವನೆಯನ್ನು ಕೈಬಿಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯ ಮಾಡಿಕೊಳ್ಳುವಂತೆ ಕೋರಲಾಗಿದೆ,” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಮುಜರಾಯಿ ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ

ಯಾತ್ರಿ ನಿವಾಸದ ಕಟ್ಟಡ ಸ್ಥಳವನ್ನು ಆರೋಪಿ ಅಧಿಕಾರಿ ಬದಲಾಯಿಸಿದ್ದರು. ಅನುಮೋದಿತ ಪರಿಷ್ಕೃತ ನಕ್ಷೆಯಂತೆ ಕಟ್ಟಡವನ್ನು ನಿರ್ಮಿಸಿರಲಿಲ್ಲ. ಅಲ್ಲದೆ, ಹೆಚ್ಚುವರಿಯಾಗಿ ೫೩ ಲಕ್ಷ ರು. ಮೊತ್ತಕ್ಕೆ ಅನುಮೋದನೆ ದೊರೆತಿರಲಿಲ್ಲ. ಆದರೂ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಆದರೆ, ಈ ಆರೋಪವನ್ನು ಆರೋಪಿ ಅಧಿಕಾರಿ ಹಿರೇಮಠ್‌ ಅವರು ನಿರಾಕರಿಸಿದ್ದರಲ್ಲದೆ, ಆರೋಪಗಳನ್ನು ಕೈಬಿಡಲು ಕೋರಿದ್ದರು.

ಕರ್ನಾಟಕ ಲೋಕಾಯುಕ್ತಕ್ಕೆ ಪೊಲೀಸ್‌ ಅಧಿಕಾರವನ್ನು ನೀಡುವುದೂ ಸೇರಿದಂತೆ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ದೃಢ ಹೆಜ್ಜೆಗಳನ್ನಿರಿಸುತ್ತಿಲ್ಲ. ಇಲಾಖೆ ವಿಚಾರಣೆ ಪ್ರಕರಣಗಳಲ್ಲಿ ಶಿಸ್ತುಕ್ರಮ ಜರುಗಿಸಲು ಶಿಫಾರಸು ಆಗಿರುವ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಲೂ ಮುಂದಾಗುತ್ತಿಲ್ಲ. ಆಪಾದಿತ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಮಾಡುತ್ತಿರುವ ಶಿಸ್ತುಕ್ರಮದ ಶಿಫಾರಸುಗಳನ್ನು ತಿರಸ್ಕರಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಲೋಕಾಯುಕ್ತ ತನಿಖಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಕಲಂ ೧೨(೩) ಅಡಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ನಂತರ ಸಚಿವರುಗಳ ಹಸ್ತಕ್ಷೇಪ ಈಗಲೂ ಮುಂದುವರಿದಿದೆ. ಸಂಬಂಧಿಸಿದ ಸಚಿವರು ಆಪಾದಿತ ಅಧಿಕಾರಿಗಳ ರಕ್ಷಣೆಗೆ ಬಹಿರಂಗವಾಗಿ ನಿಲ್ಲುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಭ್ರಷ್ಟಾಚಾರ, ಕರ್ತವ್ಯಲೋಪ, ಅಧಿಕಾರ ಮತ್ತು ಹಣಕಾಸಿನ ದುರುಪಯೋಗ ಕುರಿತು ದಾಖಲಾಗುವ ದೂರುಗಳನ್ನಾಧರಿಸಿ ಹತ್ತಾರು ವರ್ಷಗಳಿಂದಲೂ ನಡೆದಿದ್ದ ತನಿಖೆಗಳನ್ನು ನಿಷ್ಫಲಗೊಳಿಸುತ್ತಿದ್ದಾರೆ. ಅಲ್ಲದೆ, ಆಪಾದಿತ ಅಧಿಕಾರಿಗಳಿಂದಲೇ ಹೇಳಿಕೆ ಪಡೆದು ಆರೋಪಗಳಿಂದ ಮುಕ್ತಗೊಳಿಸುತ್ತಿರುವುದು ಲೋಕಾಯುಕ್ತ ತನಿಖೆಯನ್ನೇ ಅಣಕಿಸುವಂತಿದೆ.

“ಲೋಕಾಯುಕ್ತ ಸಂಸ್ಥೆ ನಡೆಸುವ ತನಿಖೆ, ವಿಚಾರಣೆಗಳಿಗೆ ಈವರೆಗೂ ಕಾಲಮಿತಿ ನಿಗದಿ ಮಾಡಿಲ್ಲ. ಹೀಗಾಗಿಯೇ ದೂರಿನ ಕುರಿತಾದ ವಿಚಾರಣೆಗಳು ಕೆಲವೊಮ್ಮೆ ೧೦ ವ‍ರ್ಷಗಳಾದರೂ ಪೂರ್ಣಗೊಳ್ಳುವುದಿಲ್ಲ. ೨೦೧೩ಕ್ಕಿಂತ ಮೊದಲು, ಹಲವು ಪ್ರಕರಣಗಳನ್ನು ಬಂಡಲ್‌ಗಳನ್ನಾಗಿ ಮಾಡಿ ಕಟ್ಟಿಡುತ್ತಿದ್ದರು. ೨೦೧೩ರ ನಂತರ ತನಿಖೆ, ವಿಚಾರಣೆ ಪ್ರಕರಣಗಳ ಕುರಿತು ವರದಿ ಸಲ್ಲಿಕೆಯಾಗುತ್ತಿದೆ,” ಎನ್ನುತ್ತಾರೆ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಯೊಬ್ಬರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More