ರಫೇಲ್ ಡೀಲ್ | ಡಸಾಲ್ಟ್ ಕಂಪನಿಯ ದಾಖಲೆಗಳು ಹೇಳುತ್ತಿರುವುದೇನು?

ರಫೇಲ್ ಒಪ್ಪಂದ ಏರ್ಪಡಲು ರಿಲಯನ್ಸ್ ಜೊತೆ ಹೊಂದಾಣಿಕೆ ಅನಿವಾರ್ಯವಾಗಿತ್ತು ಎಂದು ಡಸಾಲ್ಟ್‌ ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಈ ಹಿಂದೆ ನೀಡಿದ್ದ ವಿವರ ಬಹಿರಂಗವಾಗಿದೆ. ಇದು ನಿಜವೇ ಆಗಿದ್ದರೆ ಮೋದಿ ಸರ್ಕಾರದ ಪಾಲಿಗೆ ನುಂಗಲಾರದ ತುತ್ತಾಗಲಿದೆ

ರಫೇಲ್ ಒಪ್ಪಂದ ಕುದುರಬೇಕೆಂದರೆ ಅನಿಲ್ ಅಂಬಾನಿ ಅವರ ‘ರಿಲಯನ್ಸ್ ಡಿಫೆನ್ಸ್’ ಕಂಪನಿಯನ್ನು ತನ್ನ ಸಹಪಾಲುದಾರನನ್ನಾಗಿ ಮಾಡಿಕೊಳ್ಳುವುದು ಕಡ್ಡಾಯ ಆಗಿದ್ದರಿಂದ ಫ್ರಾನ್ಸಿನ ಯುದ್ಧವಿಮಾನ ತಯಾರಿಕೆಗಳ ದೈತ್ಯ ಡಸಾಲ್ಟ್ ಅನಿವಾರ್ಯವಾಗಿ ಸಮ್ಮತಿ ಸೂಚಿಸಿತು ಎಂದು ಫ್ರೆಂಚ್ ಜಾಲತಾಣ ‘ಮೀಡಿಯಾ ಪಾರ್ಟ್’ ಪ್ರಕಟಿಸಿರುವ ವರದಿ ಮತ್ತೊಮ್ಮೆ ಹೇಳಿದೆ.

ಡಸಾಲ್ಟ್ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಅದು ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, ಒಪ್ಪಂದ ಏರ್ಪಡಲು ಈ ರಾಜಿ ಅನಿವಾರ್ಯವಾಗಿತ್ತು. ಈ ವರದಿ ನಿಜವೇ ಆಗಿದ್ದರೆ, “ರಿಲಯನ್ಸ್ ಡಿಫೆನ್ಸ್ ಆಯ್ಕೆಯಲ್ಲಿ ತನ್ನದೇನೂ ಪಾತ್ರವಿಲ್ಲ,” ಎಂದು ಈ ಹಿಂದೆ ಹೇಳಿದ್ದ ನರೇಂದ್ರ ಮೋದಿ ಅವರ ಸರ್ಕಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಲಿದೆ. ಡಸಾಲ್ಟ್ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಯ್ಕ್ ಸೆಗಾಲೆನ್ ಅವರು 2017ರಲ್ಲಿ ನಾಗ್ಪುರದ ತನ್ನ ಕಂಪನಿ ಪ್ರತಿನಿಧಿಗಳಿಗೆ ಪ್ರಸ್ತುತಪಡಿಸಿದ್ದ ವಿವರಗಳನ್ನು ಉಲ್ಲೇಖಿಸಿದೆ. ಅದರಲ್ಲಿ ಸೆಗಾಲೆನ್, “ಭಾರತಕ್ಕೆ ರಫೇಲ್ ರಫ್ತು ಮಾಡಬೇಕೆಂದರೆ ರಿಲಯನ್ಸ್ ಕಂಪನಿಯನ್ನು ಸಹಪಾಲುದಾರನನ್ನಾಗಿ ಮಾಡಿಕೊಳ್ಳುವುದು ಅನಿವಾರ್ಯ ಮತ್ತು ಕಡ್ಡಾಯವಾಗಿದೆ,” ಎಂದಿದ್ದಾರೆ.

‘ಮೀಡಿಯಾ ಪಾರ್ಟ್’ ಬಿಡುಗಡೆ ಮಾಡಿರುವ ಡಸಾಲ್ಟ್ ದಾಖಲೆಗಳ ಎರಡು ಮುಖ್ಯ ಪ್ಯಾರಾಗಳು ಹೀಗಿವೆ: “ನಿಜಕ್ಕೂ ಹೇಳಬೇಕೆಂದರೆ ಇದೊಂದು ಸುಳ್ಳು ಉದ್ಘಾಟನಾ ಕಾರ್ಯಕ್ರಮ. ಸಾಂಕೇತಿಕವಾಗಿ ಮೊದಲ ಅಡಿಗಲ್ಲನ್ನು ನಾಗಪುರದಲ್ಲಿ ಹಾಕಲಾಗಿದೆ. ಆದರೆ, ಇದು ಡಸಾಲ್ಟ್ ರಿಲಯನ್ಸ್ ಕಂಪನಿಯ ಭವಿಷ್ಯದ ಕಾರ್ಖಾನೆಗೆ ಹಾಕಲಾದ ಅಡಿಗಲ್ಲು.” ‘ಮೀಡಿಯಾ ಪಾರ್ಟ್’ ಪತ್ರಕರ್ತರೊಂದಿಗೆ ಮಾತನಾಡಿರುವ ಡಸಾಲ್ಟ್ ಕಂಪನಿಯ ಸಿಬ್ಬಂದಿಯೊಬ್ಬರು, ರಫೇಲ್‌ಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಡೆದ ಈ ಜಂಟಿ ಉದ್ಯಮ ಅನಿವಾರ್ಯ ಮತ್ತು ಕಡ್ಡಾಯವಾದ ರಾಜಿಯಿಂದ ಆದದ್ದು ಎಂದಿದ್ದಾರೆ.

ಅಂಬಾನಿ ಜೊತೆಗಿನ ನಂಟು ವಾಸ್ತವವಾಗಿ ರಫೇಲ್ ಒಪ್ಪಂದಕ್ಕೆ ಪ್ರತಿಯಾಗಿ ನಡೆದ ರಾಜಿಯಾಗಿತ್ತು ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ. ಇದನ್ನು ‘ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್’ ಕುರಿತು ತಮ್ಮ ಸಿಬ್ಬಂದಿಗೆ ವಿವರಗಳನ್ನು ನೀಡುವ ಸಭೆಯಲ್ಲಿ ಸೆಗಾಲೆನ್ ಸ್ಪಷ್ಟವಾಗಿ ಹೇಳಿದ್ದಾರೆ. “ರಫೇಲ್ ಒಪ್ಪಂದ ಕುದುರಿಸಲು ಇದು ಅನಿವಾರ್ಯ ಮತ್ತು ಕಡ್ಡಾಯವಾಗಿತ್ತು,” ಎಂದು ‘ಮೀಡಿಯಾ ಪಾರ್ಟ್’ ತಿಳಿಸಿದೆ.

ಈಗ ಬಿಡುಗಡೆಯಾಗಿರುವ ದಾಖಲೆಗಳು ಈ ಹಿಂದೆ ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್ ನೀಡಿದ್ದ, “ರಿಲಯನ್ಸ್ ಆಯ್ದುಕೊಳ್ಳದೆ ನಮಗೆ ಬೇರೆ ದಾರಿ ಇರಲಿಲ್ಲ,” ಎಂಬ ಹೇಳಿಕೆಗೆ ಪೂರಕವಾಗಿರುವುದು ಗಮನಾರ್ಹ.

ಸ್ವತಂತ್ರ ಆಯ್ಕೆ ಎಂದ ಡಸಾಲ್ಟ್

ಆದರೆ, ರಿಲಯನ್ಸ್ ತನ್ನ ಸ್ವತಂತ್ರ ಆಯ್ಕೆ ಎಂದು ಡಸಾಲ್ಟ್ ಗುರುವಾರ ಪುನರುಚ್ಚರಿಸಿದೆ. “ಒಪ್ಪಂದದಂತೆ ಸಹ ಪಾಲುದಾರಿಕೆ ಮಾಡಿಕೊಳ್ಳಬೇಕಾಗಿದ್ದರಿಂದ ಜಂಟಿ ಉದ್ಯಮದಲ್ಲಿ ತೊಡಗಲು ಡಸಾಲ್ಟ್ ಮುಂದಾಯಿತು. ರಿಲಯನ್ಸ್ ಜೊತೆ ಕಂಪನಿ ಮುಕ್ತವಾಗಿ ಒಪ್ಪಂದ ಮಾಡಿಕೊಂಡಿತ್ತು. ತನ್ನ ಸಹಪಾಲುದಾರ ರಿಲಯನ್ಸ್ ಡಿಫೆನ್ಸ್ ಏರೋಸ್ಪೇಸ್ ಲಿಮಿಟೆಡ್ 2017ರ ಫೆಬ್ರವರಿ 10ರಂದು ಸ್ಥಾಪನೆಯಾಗಿತ್ತು,” ಎಂದು ಅದು ಹೇಳಿದೆ.

ಬುಧವಾರ ತಡರಾತ್ರಿ ಪ್ರಕಟಣೆ ಬಿಡುಗಡೆ ಮಾಡಿದ ಅದು, “ಸ್ಥಳೀಯ ಆರ್ಥಿಕತೆ ಉತ್ತೇಜಿಸುವ ಉದ್ದೇಶದಿಂದ ಶೇ.50ರಷ್ಟು ಸಹ ಪಾಲುದಾರಿಕೆಗೆ ಒಪ್ಪಿಗೆ ಸೂಚಿಸಲಾಗಿತ್ತು. ರಿಲಯನ್ಸ್ ಕಂಪನಿಯನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲ ಹಂತದಲ್ಲಿ ರಿಲಯನ್ಸ್, ಡಸಾಲ್ಟ್‌ನ ಫಾಲ್ಕನ್ 2000 ಬ್ಯುಸಿನೆಸ್ ಜೆಟ್‌ಗಳ ಬಿಡಿಭಾಗಗಳನ್ನು ತಯಾರಿಸಬೇಕಿತ್ತು. ಎರಡನೇ ಹಂತದಲ್ಲಿ ಭಾರತ ಖರೀದಿಸಲಿದ್ದ ರಫೇಲ್ ಯುದ್ಧವಿಮಾನದ ಉಪಕರಣಗಳನ್ನು ಅದು ಒದಗಿಸಬೇಕಿತ್ತು.

ಸೆಗಾಲೆನ್ ವಿವರಗಳಿಗೆ ಕೂಡ ಪ್ರತಿಕ್ರಿಯಿಸಿರುವ ಡಸಾಲ್ಟ್ ಪತ್ರಿಕಾ ಪ್ರಕಟಣೆ, “ಫ್ರಾನ್ಸ್ ನಿಯಮಾವಳಿಗಳ ಪ್ರಕಾರ ಡಸಾಲ್ಟ್-ರಿಲಯನ್ಸ್‌ನ ಕೇಂದ್ರೀಯ ಕಾರ್ಯಕಾರಿ ಮಂಡಳಿಗೆ ಮೇ 11, 2017ರಂದು ಅವರು ಮಾಹಿತಿ ನೀಡಿದ್ದಾರೆ,” ಎಂದು ಹೇಳಿದೆ.

ಸೆಗಾಲೆನ್ ಹೇಳಿರುವ ‘ರಾಜಿ’ ಪದದ ಅರ್ಥವೇನು ಎಂಬುದರ ಬಗ್ಗೆ ಅದು ಯಾವುದೇ ಸ್ಪಷ್ಟನೆ ನೀಡಿಲ್ಲ. “ಅವರು ಹೇಳಿರುವುದು ಸಾಮಾನ್ಯೀಕರಿಸಿ ಅಷ್ಟೇ. ರಿಲಯನ್ಸ್ ಅನ್ನು ಉದ್ದೇಶಿಸಿ ಅಲ್ಲ,” ಎಂದು ‘ದಿ ವೈರ್’ ಜಾಲತಾಣಕ್ಕೆ ಸೇನಾಮೂಲವೊಂದು ತಿಳಿಸಿದೆ.

‘ಲೆ ಮಾಂಡ್’ ಪತ್ರಿಕೆಯ ಜೂಲಿಯನ್ ಬೌಸ್ಸೌ ಟ್ವಿಟರ್‌ನಲ್ಲಿ ನಾಗಪುರ ಘಟಕ ಸ್ಥಾಪನೆ ಕುರಿತಂತೆ ಪ್ರಸ್ತಾಪಿಸಿದ್ದಾರೆ. “ತಮ್ಮ ಪ್ರಮುಖ ನಿರ್ಧಾರಗಳ ಬಗ್ಗೆ ಕಂಪನಿಯೊಂದರ ಉನ್ನತ ವ್ಯವಸ್ಥಾಪಕರು ಕೇಂದ್ರೀಯ ಕಾರ್ಯಕಾರಿ ಮಂಡಳಿಗೆ ವಿವರಿಸುವುದು ಫ್ರಾನ್ಸ್‌ನಲ್ಲಿ ವಾಡಿಕೆ ಎಂಬುದನ್ನು ದಯವಿಟ್ಟು ಗಮನಿಸಿ. ಆ ಸಂದರ್ಭದಲ್ಲಿ ಕೇಂದ್ರೀಯ ಕಾರ್ಯಕಾರಿ ಮಂಡಳಿಗೆ ತಲುಪಿರುವ ನಿರ್ಧಾರವೆಂದರೆ ಭಾರತದಲ್ಲಿ ಘಟಕವೊಂದು ನಿರ್ಮಾಣವಾಗುತ್ತಿದ್ದು, ಅದರಿಂದ ಫ್ರಾನ್ಸ್ ನೌಕರರಿಗೆ ಉದ್ಯೋಗವೇನೂ ಲಭಿಸುವುದಿಲ್ಲ ಎಂಬುದು. ಆಗ ಹೆಚ್ಚು ಪ್ರಸ್ತಾಪವಾಗಿದ್ದು ಫ್ರೆಂಚ್ ಕಾರ್ಮಿಕ ಕಾನೂನುಗಳ ಬಗ್ಗೆಯೇ ವಿನಾ ಅಂಬಾನಿ ಬಗ್ಗೆ ಅಲ್ಲ,” ಎಂದಿದ್ದಾರೆ.

ಈ ನಡುವೆ, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುವಂತೆ 'ದಿ ವೈರ್’ ಜಾಲತಾಣ ಭಾರತದ ರಕ್ಷಣಾ ಸಚಿವಾಲಯ ಮತ್ತು ರಿಲಯನ್ಸ್ ಕಂಪನಿಗೆ ಪತ್ರ ಬರೆದಿದೆ.

ಇದನ್ನೂ ಓದಿ : ಪ್ರಧಾನಿ ವಿರುದ್ಧ ಸಿಬಿಐಗೆ ದೂರು; ದಿನೇದಿನೇ ಮೊನಚಾಗುತ್ತಿದೆ ರಫೇಲ್ ಹಕ್ಕಿ ಕೊಕ್ಕು

ಜಾಲತಾಣದ ವರದಿ ಬಗ್ಗೆ ಸೊಲ್ಲೆತ್ತದ ಬಿಜೆಪಿ

‘ಮೀಡಿಯಾ ಪಾರ್ಟ್’ ಜಾಲತಾಣದ ವರದಿಯ ಇಂಗ್ಲಿಷ್ ಅನುವಾದವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಡಸಾಲ್ಟ್ ಕಂಪನಿಯ ಸೆಗಾಲೆನ್ ಹೇಳಿರುವ ಕಾಂಪನ್ಸೇಷನ್ (ಪರಿಹಾರ) ಪದವನ್ನೇ ಒತ್ತಿ ಹೇಳಿದ್ದು, “ಅಂಬಾನಿಗೆ ಯಾಕೆ ಪರಿಹಾರ ರೂಪದಲ್ಲಿ ನೀಡಬೇಕು? ಮೋದಿಗಾಗಿ ಅಂಬಾನಿ ಏನು ಅನುಕೂಲ ಮಾಡಿಕೊಟ್ಟಿದ್ದಾರೆ? ಪ್ರಧಾನಿ ಅಂಬಾನಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಭ್ರಷ್ಟ ವ್ಯಕ್ತಿ,” ಎಂದು ಟೀಕಿಸಿದ್ದಾರೆ.

ಇತ್ತ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. “ರಾಹುಲ್ ಸುಳ್ಳು ಹೇಳುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ರಫೇಲ್ ಅಕ್ರಮ ಕುರಿತಂತೆ ಸಾಕ್ಷ್ಯಗಳು ಇದ್ದರೆ ಅವರು ಸುಪ್ರೀಂ ಕೋರ್ಟ್ ಮೊರೆಹೋಗಬಹುದು,” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ಆದರೆ, ‘ಮೀಡಿಯಾ ಪಾರ್ಟ್’ ವರದಿಯ ಕುರಿತು ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬದಲಿಗೆ, “ಕಾಂಗ್ರೆಸ್ ಸುಳ್ಳನ್ನು ಹರಡುತ್ತಿದೆ,” ಎಂದು ಟೀಕಿಸಿದ್ದಾರೆ. ರಾಹುಲ್ ಅವರನ್ನು ವಿದೂಷಕ, ಮಧ್ಯವರ್ತಿಗಳ ಕುಟುಂಬದಲ್ಲಿ ಹುಟ್ಟಿದವರು ಎಂದು ಜರಿದಿರುವ ಅವರು, “ಇದಕ್ಕೆಲ್ಲಾ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್ ಸಹ ಕಾಂಗ್ರೆಸ್ ಪ್ರಾಯೋಜಿತ ಅರ್ಜಿಯನ್ನು ಪುರಸ್ಕರಿಸಿಲ್ಲ,” ಎಂದಿದ್ದಾರೆ.

“ವಾಯುಸೇನೆ ಮುಖ್ಯಸ್ಥರು ಇದೊಂದು ನಿರ್ಣಾಯಕ ಒಪ್ಪಂದ ಎಂದಿದ್ದಾರೆ. ರಾಹುಲ್ ಅವರನ್ನು ನಂಬುವುದೋ ವಾಯುಸೇನೆ ಮುಖ್ಯಸ್ಥರನ್ನು ನಂಬುವುದೋ? ಸುಪ್ರೀಂ ಕೋರ್ಟ್ ಹೇಳಿದ್ದನ್ನು ನಂಬುವುದೋ ರಾಹುಲ್ ಹೇಳಿದ್ದನ್ನು ನಂಬುವುದೋ?” ಎಂದು ಅವರು ಪ್ರಶ್ನಿಸಿದ್ದಾರೆ.

ವಿವಾದಗಳು ಎದ್ದ ಸಂದರ್ಭದಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫ್ರಾನ್ಸಿಗೆ ಪ್ರಯಣಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದೊಂದು ಪೂರ್ವನಿಯೋಜಿತ ಭೇಟಿಯಾಗಿತ್ತು. ಕಾಂಗ್ರೆಸ್ ಇದನ್ನೂ ಟೀಕಿಸಿದರೆ ಹೇಗೆ?” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ‘ದ ಟೆಲಿಗ್ರಾಫ್’ ವರದಿ ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More