ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ವಾರೆಂಟ್‌ ಜಾರಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾರೆಂಟ್‌ ಜಾರಿಗೊಳಿಸಿದೆ. ೨೦೧೩ರ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ನಿಗದಿತ ಸಮಯ ಮುಗಿದರೂ ಪ್ರಚಾರದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಅವರಿಗೆ ಎರಡು ಬಾರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ನ್ಯಾಯಾಲಯವು ವಾರೆಂಟ್‌ ಜಾರಿಗೊಳಿಸಿದೆ.

ಮಹೇಶ್ ರಾಜಿನಾಮೆ ವೈಯಕ್ತಿಕ: ಸಚಿವ ರೇವಣ್ಣ

“ಬಿಎಸ್‌ಪಿ ಶಾಸಕ ಎನ್‌ ಮಹೇಶ್‌ ಅವರು ಪಕ್ಷ ಸಂಘಟಿಸುವ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಶಿಕ್ಷಣ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಸರ್ಕಾರದ ಬಗ್ಗೆ ಅವರಿಗೆ ಅಸಮಾಧಾನವಿಲ್ಲ,” ಎಂದು ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಹೇಳಿದ್ದಾರೆ. ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡುತ್ತಿರುವ ಮಾಧ್ಯಮಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದೂ ಹೇಳಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.೨ರಷ್ಟು ಹೆಚ್ಚಳ

ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಉಡುಗೊರೆ ನೀಡಿರುವ ರಾಜ್ಯ ಸರ್ಕಾರವು ಶುಕ್ರವಾರ ಶೇ.೨ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದೆ. ಸರ್ಕಾರಿ ನೌಕರರ ೨೦೧೮ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಜುಲೈ ೧ರಿಂದ ಪೂರ್ವಾನ್ವಯವಾಗುವಂತೆ ಮೂಲವೇತನದಲ್ಲಿ ಶೇ.೧.೭೫ರಿಂದ ಶೇ.೩.೭೫ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ನಿರ್ಧಾರದಿಂದ ಸುಮಾರು ೮.೫ ಲಕ್ಷ ನೌಕಕರಿಗೆ ಲಾಭವಾಗಲಿದೆ ಎನ್ನಲಾಗಿದೆ.

ರಾಹುಲ್ ಗಾಂಧಿ ಒಬ್ಬ ಮಹಾನ್ ಸುಳ್ಳುಗಾರ: ಪಿಯುಶ್ ಗೋಯೆಲ್

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ಸರಣಿ ಸುಳ್ಳುಗಾರ ಎಂದು ಲೇವಡಿ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯುಶ್‌ ಗೋಯೆಲ್‌, ರಫೇಲ್‌ ಡೀಲ್‌ ಕುರಿತಂತೆ ಫ್ರಾನ್ಸ್ ಮಾಧ್ಯಮಗಳ ವರದಿಯನ್ನೇ ತಿರುಚಲು ರಾಹುಲ್ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಒಂದು ಸುಳ್ಳನ್ನು ನೂರು ಬಾರಿ ಹೇಳಿದರೂ ಅದು ಸತ್ಯವಾಗದು ಎಂದಿದ್ದಾರೆ. ಇದೇ ವೇಳೆ, “2007 ಹಾಗು 2012ರಲ್ಲಿ ಅಂದಿನ ಯುಪಿಎ ಸರಕಾರ ಮಾಡಿಕೊಂಡದ್ದಕ್ಕಿಂತ ಉತ್ತಮವಾದ ಒಪ್ಪಂದವೊಂದನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿಕೊಂಡಿದೆ. ತಾವು ವೈಯಕ್ತಿಕವಾಗಿ ಫ್ರೆಂಚ್ ಅಧ್ಯಕ್ಷರನ್ನು ಭೇಟಿಯಾಗಿ ರಫೇಲ್ ಒಪ್ಪಂದದ ಕುರಿತಂತೆ ಮಾಹಿತಿ ಪಡೆದಿರುವುದಾಗಿ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಇದು ಅವರ ಜ್ಞಾನದ ಕೊರತೆಯನ್ನು ತೋರುತ್ತಿದ್ದು, 2008ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭ ಮನಮೋಹನ್ ಸಿಂಗ್ ಮಾಡಿಕೊಂಡಿರುವ ರಹಸ್ಯ ಒಪ್ಪಂದದ ಕುರಿತಂತೆ ರಾಹುಲ್ ಗಾಂಧಿಗೆ ಮಾಹಿತಿಯೇ ಇಲ್ಲ,” ಎಂದು ದೂರಿದ್ದಾರೆ.

ಹೊಸ ಸುಧಾರಣೆಗಳ ಜಾರಿಗೆ ಮುಂದಾದ ಯುಜಿಸಿ

ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಶುಕ್ರವಾರ ಕೆಲ ಸುಧಾರಣೆಗಳನ್ನು ಪರಿಚಯಿಸಿದೆ. ಕಾಲೇಜುಗಳಲ್ಲಿ ಸಂಪೂರ್ಣ ಕೋರ್ಸ್ ಮುಗಿಯುವವರೆಗೂ ಮೂಲ ಅಂಕ ಪ್ರತಿಯನ್ನು ಸಂಸ್ಥೆಯು ಇಟ್ಟುಕೊಳ್ಳುವಂತಿಲ್ಲ, ಪ್ರವೇಶಾತಿ ಸಮಯದಲ್ಲಿ ದೃಢೀಕರಿಸಿದ ಪ್ರಮಾಣಪತ್ರಗಳನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯತಕ್ಕದ್ದು. ಪ್ರವೇಶಾತಿಗೂ ಮುನ್ನ ಸಂಸ್ಥೆಯ ಕೈಪಿಡಿ (ಪ್ರಾಸ್‌ಪೆಕ್ಟಸ್) ಹೊಂದುವುದು ಕಡ್ಡಾಯವಲ್ಲ. ಮುಂಚಿತವಾಗಿ ಒಂದು ವರ್ಷ ಅಥವಾ ಒಂದು ಸೆಮಿಸ್ಟರ್‌ನ ಹಣವನ್ನು ಮಾತ್ರ ಪಡೆಯಬಹುದು. ಒಂದು ವೇಳೆ ಪ್ರವೇಶವಾದ ಬಳಿಕ ವಿದ್ಯಾರ್ಥಿಯು ಕಲಿಯಲು ಇಚ್ಚೆಪಡದೇ ಹಿಂದೆ ಸರಿದರೆ ಅಥವಾ ಕಾರಣಾಂತರಗಳಿಂದ ಕಾಲೇಜನ್ನು ಮುಂಚಿತವಾಗಿ ತೊರೆದರೆ ನಾಲ್ಕು ಹಂತದಲ್ಲಿ ವಿದ್ಯಾರ್ಥಿ ಪಾವತಿಸಿದ ಹಣವನ್ನು ಹಿಂತಿರುಗಿಸಬೇಕು. ವಿದ್ಯಾರ್ಥಿಯ ಕೊನೆಯ ಪ್ರವೇಶವನ್ನು ಅಂಗೀಕರಿಸುವ ೧೫ ದಿನ ಮುಂಚಿತವಾಗಿ ಕೋರ್ಸ್‌ನಿಂದ ಹೊರಬಂದರೆ ಪ್ರಕ್ರಿಯೆ ಶುಲ್ಕವಾಗಿ ಕೇವಲ ೧೦ ಪ್ರತಿಶತದಷ್ಟು ಹಣವನ್ನು ಮಾತ್ರ ಕಡಿತಗೊಳಿಸತಕ್ಕದ್ದು, ಉಳಿದ ಹಣವನ್ನು ವಿದ್ಯಾರ್ಥಿಗೆ ಮರುಪಾವತಿಸಬೇಕು. ಹೊಸ ನಿಯಮದ ಪ್ರಕಾರ, ಪ್ರವೇಶವಾದ ನಂತರ ವಿದ್ಯಾರ್ಥಿ ಕೋರ್ಸ್ ಹಿಂಪಡೆಯುವಂತೆ ನೋಟಿಸ್ ನೀಡಿದರೆ, ವಿದ್ಯಾರ್ಥಿಯ ಠೇವಣಿ ಶುಲ್ಕದಿಂದ ಸಂಸ್ಥೆಯು ಹಣವನ್ನು ಕಡಿತಗೊಳಿಸಬಹುದು. ಯು.ಜಿ.ಸಿ ಕುಂದುಕೊರತೆ ನಿವಾರಣಾ ನಿಯಮಗಳ ಪ್ರಕಾರ 2012 ರಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳು ದೂರು ಪರಿಹಾರ ನಿವಾರಣಾ ಸಮಿತಿಯನ್ನು ರೂಪಿಸಬೇಕು ಮತ್ತು ದೂರುಗಳನ್ನು ಪರಿಹರಿಸಲು ಮತ್ತು ಪರಿಣಾಮಕಾರಿಯಾಗಿ ಪರಿಹರಿಸಬೇಕು.

ಸೌದಿ ಪತ್ರಕರ್ತನ ಕೊಲೆ ಆಗಿದ್ದು ರಾಯಭಾರ ಕಚೇರಿಯಲ್ಲೇ?

ಸೌದಿ ಅರೇಬಿಯಾದ ಪ್ರಖ್ಯಾತ ಪತ್ರಕರ್ತ ಜಮಾಲ್ ಖಸ್ಸೋಗ್ಗಿ ಅವರನ್ನು ಇಸ್ತಾನ್‌ಬುಲ್‍ನಲ್ಲಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿಯಲ್ಲೇ ಕೊಲೆ ಮಾಡಲಾಗಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳು ದೊರಕಿವೆ ಎಂದು ಟರ್ಕಿಯ ಮೂಲಗಳು ತಿಳಿಸಿವೆ. ಆದರೆ, ಸೌದಿ ಅರೇಬಿಯಾ ಈ ಆರೋಪವನ್ನು ತಳ್ಳಿಹಾಕಿದೆ. ಸೌದಿಯ ದೊರೆ ಕುಟುಂಬಕ್ಕೆ ತೀರಾ ಹತ್ತಿರವಾಗಿದ್ದ ಖಸ್ಸೋಗಿ ಅವರು ಇತ್ತೀಚಿನ ತಿಂಗಳುಗಳಲ್ಲಿ ದೊರೆ ಕುಟುಂಬದ ಕೆಲವು ನಿರ್ಧಾರಗಳ ಕಟು ಟೀಕಾಕಾರರಾಗಿದ್ದರು. ಮುಖ್ಯವಾಗಿ, ಇಸ್ಲಾಮಿಕ್ ಬ್ರದರ್‌ಹುಹುಡ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಮತ್ತು ಇಸ್ಲಾಂ ಧಾರ್ಮಿಕ ನಾಯಕ ಯುಸೋಪ್ ಅಲ್ ಕರ್ದಾವಿ ಅವರನ್ನು ಉಗ್ರಗಾಮಿ ಎಂದು ಘೋಷಿಸಿದ್ದನ್ನು ಬಲವಾಗಿ ಖಂಡಿಸಿ ಅಂಕಣಗಳನ್ನು ಬರೆದಿದ್ದರು. ಖಸ್ಸೋಗಿ ಹತ್ಯೆಯಲ್ಲಿ ಸೌದಿ ಅರೇಬಿಯಾ ಆಡಳಿತವೇ ಭಾಗಿಯಾಗಿದೆ ಎಂಬ ವದಂತಿ ಹಬ್ಬಿದ ನಂತರ ಬ್ರಿಟನ್‍ನ ಬ್ರಸ್ಸಾನ್ ತಮ್ಮ ಉದ್ದೇಶಿತ ಒಂದು ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯನ್ನು ರದ್ದು ಮಾಡಿದ್ದಾರೆ. ಅಮೆರಿಕದ ಜೊತೆಗಿನ 110 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ರದ್ದು ಮಾಡಬೇಕೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಒತ್ತಡ ಬರುತ್ತಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ ಗಣನೀಯ ಕುಸಿತ

ಇದೇ ಮೊದಲ ಬಾರಿಗೆ ಪ್ರಯಾಣಿಕರ ವಾಹನಗಳ (ಪ್ಯಾಸೆಂಜರ್ ವಹಿಕಲ್) ಮಾರಾಟವು ಶೇ.5.6ರಷ್ಟು ಕುಸಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಇಂಧನ ದರ ಮತ್ತು ಕುಸಿಯುತ್ತಿರುವ ರುಪಾಯಿ ಮೌಲ್ಯವು ಪ್ರಯಾಣಿಕರ ವಾಹನಗಳ ಮಾರಾಟ ಕುಸಿತಕ್ಕೆ ಕಾರಣವಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) ನೀಡಿರುವ ಅಂಕಿ-ಅಂಶಗಳ ಪ್ರಕಾರ, ವಾಹನಗಳ ಮಾರಾಟವು 2,92,658 ಕ್ಕೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,10,041 ವಾಹನಗಳ ಮಾರಾಟವಾಗಿದ್ದವು. 2014ರಿಂದೀಚೆಗೆ ಇದೇ ಮೊದಲ ಬಾರಿಗೆ ಸತತ ಮೂರು ತಿಂಗಳು ವಾಹನಗಳ ಮಾರಾಟ ಸಂಖ್ಯೆ ತಗ್ಗಿದೆ ಎಂದು ಎಐಎಎಂ ತಿಳಿಸಿದೆ.

ವಿರಾಟ್ ಕೊಹ್ಲಿ ಅಗ್ರಸ್ಥಾನ ಅಬಾಧಿತ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧದ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ೧೩೯ ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ಶ್ರೇಯಾಂಕ ಪಟ್ಟಿಯಲ್ಲಿ ೯೩೭ ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ. ಇನ್ನು, ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಕೂಡ ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ೫೭ ರನ್‌ಗಳಿಗೆ ಐದು ವಿಕೆಟ್ ಗಳಿಸಿದ್ದರು. ೧೬ ಸ್ಥಾನಗಳ ಜಿಗಿತದೊಂದಿಗೆ ೫೨ನೇ ಸ್ಥಾನದಲ್ಲಿದ್ದಾರೆ.

ಅಲಂಕೃತಾ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕೊಂಕಣ, ಭೂಮಿ

ಅಲಂಕೃತಾ ಶ್ರೀವಾಸ್ತವ್‌ ನಿರ್ದೇಶನದ ನೂತನ ಹಿಂದಿ ಚಿತ್ರದಲ್ಲಿ ಕೊಂಕಣ ಸೇನ್ ಶರ್ಮಾ ಮತ್ತು ಭೂಮಿ ಪೆಡ್ನೇಕರ್‌ ನಟಿಸಲಿದ್ದಾರೆ. ಚಿತ್ರದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಏಕ್ತಾ ಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್‌ನಿಂದ ತಯಾರಾಗಲಿರುವ ಸಿನಿಮಾಗೆ ಗ್ರೇಟರ್ ನೋಯ್ಡಾದಲ್ಲಿ ಚಿತ್ರೀಕರಣ ನಡೆಯಲಿದೆ. 2017ರಲ್ಲಿ ತಯಾರಾಗಿದ್ದ ಅಲಂಕೃತಾ ಶ್ರೀವಾಸ್ತವ್‌ ನಿರ್ದೇಶನದ ‘ಲಿಪ್‌ಸ್ಟಿಕ್‌ ಅಂಡರ್ ಮೈ ಬುರ್ಕಾ’ ಡಾರ್ಕ್ ಕಾಮಿಡಿ ಚಿತ್ರದಲ್ಲಿ ಕೊಂಕಣ ಸೇನ್ ಶರ್ಮಾ ನಟಿಸಿದ್ದರು. ನೆಟ್‌ಫ್ಲಿಕ್ಸ್‌ನ ‘ಲಸ್ಟ್‌ ಸ್ಟೋರೀಸ್‌’ ವೆಬ್ ಸರಣಿಯಲ್ಲಿ ಅಭಿನಯಿಸಿದ್ದ ಭೂಮಿ ಪೆಡ್ನೇಕರ್‌ ಅವರು ಅಲಂಕೃತಾರ ನೂತನ ಚಿತ್ರದೊಂದಿಗೆ ಹಿರಿತೆರೆಗೆ ಮರಳುತ್ತಿದ್ದಾರೆ.

ಪ್ಯಾರಾ ಏಷ್ಯಾಡ್: ದೀಪಾ ಮಲಿಕ್‌ಗೆ ಕಂಚಿನ ಪದಕ

ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತದ ದೀಪಾ ಮಲಿಕ್ ಕಂಚಿನ ಪದಕ ಜಯಿಸಿದರು. ಮಹಿಳೆಯರ ಡಿಸ್ಕ್ ಎಸೆತದ ಎಫ್‌೫೧/೫೩ಎಸ್ ವಿಭಾಗದಲ್ಲಿಂದು ದೀಪಾ ಎರಡನೇ ಪದಕ ಜಯಿಸಿದರು. ೯.೬೭ ಮೀಟರ್ ಸಾಧನೆಯೊಂದಿಗೆ ದೀಪಾ ವೈಯಕ್ತಿಕ ಶ್ರೇಷ್ಠ ಪ್ರದರ್ಶನದೊಂದಿಗೆ ಮೂರನೇ ಸ್ಥಾನ ಪಡೆದರು. ಇನ್ನು ಇದಕ್ಕೂ ಮುನ್ನ ಜಾವೆಲಿನ್ ಎಸೆತದ ಎಫ್ ೫೩/೫೪ ವಿಭಾಗದಲ್ಲಿ ಕೂಡ ದೀಪಾ ಕಂಚಿನ ಪದಕ ಗೆದ್ದುಕೊಂಡರು. ಇನ್ನುಳಿದಂತೆ ಡಿಸ್ಕ್ ಎಸೆತದಲ್ಲಿದ್ದ ಭಾರತದ ಏಕ್ತಾ ಭ್ಯಾನ್ ೬.೫೨ ಮೀಟರ್ ದೂರ ಎಸೆದು ಆರನೇ ಸ್ಥಾನಕ್ಕೆ ತೃಪ್ತರಾದರು. ಈ ವಿಭಾಗದಲ್ಲಿ ಇರಾನ್‌ನ ಎಲ್ನಾಜ್ ಡರಾಬಿಯನ್ (೧೦.೭೧ ಮೀಟರ್) ಮತ್ತು ಬಹ್ರೇನ್‌ನ ಫಾತೆಮಾ ನೆದಾಮ್ (೯.೮೭ ಮೀಟರ್) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More