ರಾಜೀವ್ ತಾರಾನಾಥ್ ನೆನಪಿನ ಮೂಸೆಯಿಂದ ಮೂಡಿದ ಅನ್ನಪೂರ್ಣ ದೇವಿ ಚಿತ್ರ

ಹಲವು ಕಾರಣಗಳಿಗೆ ನಿಗೂಢವಾಗೇ ಉಳಿದಿದ್ದ ಅನ್ನಪೂರ್ಣ ದೇವಿ, ಸಂಗೀತದಲ್ಲಿ ಒಂದು ದೊಡ್ಡ ಚೇತನ. ಪಂಡಿತ್ ರಾಜೀವ್ ತಾರಾನಾಥ್ ಅವರು ಅನ್ನಪೂರ್ಣ ದೇವಿ ಅವರಲ್ಲಿ ಕೆಲ ಕಾಲ ಸಂಗೀತ ಕಲಿತಿದ್ದರು. ಆ ಬಗ್ಗೆ ಅವರು ಟಿ ಎಸ್ ವೇಣುಗೋಪಾಲ್ ಜೊತೆ ಹಂಚಿಕೊಂಡಿದ್ದ ಕೆಲವು ನೆನಪು ಇಲ್ಲಿವೆ

ಅನ್ನಪೂರ್ಣ ದೀದಿ ಬಹಳ ದೊಡ್ಡ ಗುರುಗಳು. ಪಂಡಿತ್ ರವಿಶಂಕರ್ ಸ್ವಲ್ಪ ಮಟ್ಟಿಗೆ ಹಾಗಿದ್ದರು. ಪಾಠದಲ್ಲಾಗಲೀ ಅಥವಾ ನುಡಿಸಾಣಿಕೆಯಲ್ಲಾಗಲೀ ಅನ್ನಪೂರ್ಣಾಜೀ ಅವರಿಗೆ ಸ್ವಲ್ಪ ಹತ್ತಿರ ಬರುತ್ತಿದ್ದವರು ಎಂದರೆ ನನ್ನ ಪ್ರಕಾರ ಪಂಡಿತ್‌ಜಿ ಅವರೇ. ಅವರು ಒಂದೊಂದು ಅಕ್ಷರ, ಒಂದೊಂದು ಚಲನ್ ಪರಿಪೂರ್ಣವಾಗಿ, ಪಕ್ಕಾ ಬರುವವರೆಗೆ ಬಿಡ್ತಾನೇ ಇರಲಿಲ್ಲ. ಆ ಗಮಕ ಅಷ್ಟೇ ಬರಬೇಕು. ಅಲ್ಲಿ ಪ್ರತಿಯೊಂದು ಸ್ವರ ಶುದ್ಧವಾಗಿ ಬರಬೇಕು. ಅದು ಬರೋವರೆಗೆ ನುಡಿಸ್ತಾನೇ ಇರಬೇಕಿತ್ತು, ಅವರು ಸಿಕ್ಕಾಪಟ್ಟೆ ಕಟ್ಟುನಿಟ್ಟು, ಆದರೆ ಅಷ್ಟೇ ಸ್ವೀಟ್. “ಇದು ಬರದಿದ್ರೆ ನೀನು ಊಟ ಮಾಡಬೇಡ. ಆಗ ಬರುತ್ತೆ ನೋಡು. ಇದಕ್ಕೆ ಸೀರಿಯಸ್ನೆಸ್ ಇರಬೇಕು. ಆಗ ಹಸಿವಿನ ಹಾಗೆ ಬರುತ್ತೆ ನೋಡು,” ಎನ್ನೋವ್ರು. ಇವೆಲ್ಲವನ್ನೂ ನಗುನಗುತ್ತ ಹೇಳೋರು. ಆದರೆ ನಂತರ ಅದೆಂತಹ ಆರ್ದ್ರತೆ, ಮಾರ್ದವ. ಅವರಲ್ಲಿದ್ದ thoroughness of knowledge, thoroughness of involvement, thoroughness of treatment... ಇದನ್ನೇ ಅವರು ಉಳಿದವರಿಂದಲೂ ನಿರೀಕ್ಷಿಸುತ್ತಿದ್ದರು.

“ನೀನು ಮುಂಬೈಗೆ ಬರುವ ಮೊದಲು ನನಗೊಂದು ಪತ್ರ ಬರೆದು ಬಾ. ನಾನು ನಿನಗೆ ಪಾಠ ಹೇಳಿಕೊಡುತ್ತೇನೆ,” ಎಂದು ಹೇಳಿದ್ದರು. ನಾನು ಒಂದು ಸಲ ಹೇಳಲಿಲ್ಲ. ನಿತ್ಯಾನಂದ ಹಳ್ದೀಪುರ್ ಅವರಿಗೆ ವಿಷಯ ಮುಟ್ಟಿಸಿ, “ದೀದಿಗೆ ನನ್ನ ನಮಸ್ಕಾರ ತಿಳಿಸಿ, ನಾನು ಬರುವ ವಿಷಯವನ್ನು ಹೇಳಿ,” ಎಂದಿದ್ದೆ. ಅವರು ಅವನಿಗೆ, “ನಾನು ಹೆಚ್ಚಿಗೆ ಓದಿದವಳಲ್ಲ. ಆದರೆ, ನನಗೆ ಪತ್ರ ಓದಲು ಬರುತ್ತದೆ. ಅವನಿಗೆ ಹಿಂದಿ ಬರೆಯಲು ಬರುತ್ತದೆ. ಹಿಂದೆ ನನಗೆ ಹಲವಾರು ಪತ್ರಗಳನ್ನು ಬರೆದಿದ್ದಾನೆ. ಅವನು ಬರುವ ದಿನಾಂಕವನ್ನು ನನಗೆ ತಿಳಿಸಲು ಅವನಿಗೆ ಹೇಳಿದ್ದೆ. ಈಗ ಅವನು ದೊಡ್ಡ ಕಲಾವಿದ ಆಗಿಬಿಟ್ಟಿದ್ದಾನೆ. ಬಹಳ ಬಿಜಿ. ಹಾಗಾಗಿ ಲೆಟರ್ ಬರೆಯೋದಕ್ಕೆ ಸಮಯವೇ ಇಲ್ಲ. ದುಡ್ಡು ಖರ್ಚು ಮಾಡಿ ನಿನಗೆ ಫೋನ್ ಮಾಡಿ, ತಾನು ಬರುವ ವಿಷಯವನ್ನು ನನಗೆ ತಿಳಿಸು ಎಂದು ಹೇಳುವಷ್ಟು ದುಡ್ಡು ಅವನಿಗೆ ಇದೆಯಲ್ಲಾ; ಅವನಿಗೆ ಹೇಳು, ಇದು ತಪ್ಪು ಎಂದು. ಇದನ್ನು ತಿಳಿಸಿ, ನಂತರ ಅವನನ್ನು ಇಲ್ಲಿಗೆ ಕರೆದುಕೊಂಡು ಬಾ,” ಎಂದು ಹೇಳಿಕಳಿಸಿದ್ದರು. ಪ್ಲೇನು ಸುಮಾರು ಬೆಳಗಿನ ಝಾವ ಮೂರು ಗಂಟೆಗೆ ಮುಂಬೈ ತಲುಪಿತು. ನಾನು ಇಳಿದ ತಕ್ಷಣ ಅವರು ಈ ವಿಷಯವನ್ನು ನನಗೆ ಹೇಳಿದರು. ಅದಾದ ಮೇಲೆ ಯಾವ ಮುಖ ಇಟ್ಟುಕೊಂಡು ಹೋಗುವುದು? ನಾನು ಅಲ್ಲಿಂದ ಹಾಗೆಯೇ ವಾಪಸು ಬೆಂಗಳೂರಿಗೆ ಬಂದುಬಿಟ್ಟೆ.

ಬೆಂಗಳೂರಿಗೆ ಬಂದ ನಂತರ, “ನಾನು ಬಹಳ ತಪ್ಪು ಮಾಡಿಬಿಟ್ಟೆ. ನನ್ನನ್ನು ಕ್ಷಮಿಸಿಬಿಡಿ. ನಾನು ಬೆಂಗಳೂರಿನಿಂದಲೇ ಮತ್ತೆ ಬರ್ತೀನಿ,” ಎಂದು ಒಂದು ಪತ್ರ ಬರೆದೆ. ನಂತರ ಯಾವುದೋ ಒಂದು ಡೇಟ್ ಕೊಟ್ಟರು, ಇಂತಹ ದಿನ ಬಾ ಅಂತ. ನಾನು ಪ್ಲೇನ್‌ನಲ್ಲಿ ಹೋದೆ. “ಬಂದ್ಯಾ? ಬಾ...” ಅಂತಂದ್ರು. “ನೀನು ಬೆಂಗಳೂರಿನಿಂದ ಬಂದ್ಯಾ? ಪ್ಲೇನ್ನಲ್ಲಿ ಬಂದ್ಯಾ? ಎಷ್ಟು ಛಾರ್ಜು?” ಅಂತ ಕೇಳಿದ್ರು. ಒಂದು ಲಕೋಟೆಯಲ್ಲಿ ದುಡ್ಡು ಹಾಕಿಕೊಂಡು ಬಂದು ಕೊಟ್ಟರು. ಆಗ ನಾನು, “ತಪ್ಪು ನನ್ನದು, ನಿಮ್ಮ ಕಾಲು ಮುಟ್ಟುತ್ತೀನಿ. ನೀವು ನನ್ನ ತಾಯಿ,” ಅಂತಂದೆ. ಆಗ ಅವರು, “ಎಷ್ಟು ಕೋಪ ನಿಂಗೆ? ನಾನು ಕಟುವಾದ ಒಂದು ಮಾತು ಹೇಳಿಕಳಿಸಿದ್ರೆ ಹಾಗೇ ವಾಪಸು ಹೋಗಿಬಿಡೋದಾ? ಈಗ ಇಷ್ಟು ಖರ್ಚು ಮಾಡಿಕೊಂಡು ಮತ್ತೆ ಬಂದಿದ್ದೀಯೆ. ಮತ್ತೆ ನಾನು ಕೊಟ್ಟರೆ ತೊಗೊಳೋಲ್ಲ ಅಂತೀಯಾ,” ಅಂತ ಸುಮಾರು ನನಗೆಂತಹ ಪೊಗರಿದೆ ಅನ್ನುವ ಅರ್ಥ ಬರುವ ಹಾಗೆ ಮಾತನಾಡಿಬಿಟ್ಟರು.

ಇದನ್ನೂ ಓದಿ : ‘ಗುರು ಅಲಿ ಅಕ್ಬರ್ ಖಾನ್ ನೆನೆದು ಇಂದಿಗೂ ಬಿಕ್ಕಳಿಸುತ್ತೇನೆ’ | ರಾಜೀವ ತಾರಾನಾಥ ಸಂದರ್ಶನ

ನಂತರ, “ಬಾಗಿಲ ಹತ್ತಿರ ಹೋಗು,” ಅಂತಂದ್ರು. ಆ ಬಾಗಿಲ ಮೇಲೆ ನಿಲುವಿನಲ್ಲಿ ಒಂದು ಟ್ರಂಕ್ ಇತ್ತು. ಅದನ್ನು ಎತ್ತು ಎಂದು ಹೇಳುವುದಕ್ಕೆ ಹಾಗೆ ಹೇಳುತ್ತಿದ್ದಾರೇನೋ ಅಂತ ಅಂದುಕೊಂಡು ಬಾಗಿಲ ಬಳಿ ಹೋದೆ. “ಹೋಗು, ಇನ್ನು ಮೇಲೆ ಇಲ್ಲಿಗೆ ಬರೋದು ಬೇಡ,” ಅಂತಂದರು. ಸಿಕ್ಕಾಪಟ್ಟೆ ಸಿಟ್ಟು ಬಂದುಬಿಡ್ತು. ತಕ್ಷಣ ಸರೋದ್ ಎತ್ತಿಕೊಂಡು ಒಂದು ತಪ್ಪೂ ಮಾಡದೆ ನುಡಿಸಿದೆ. ಅದನ್ನು ಕೇಳಿ ಅವರು, “ಸರೋದ್ ಎತ್ಕೋ, ಹೋಗು, ನೀನೊಬ್ಬ ದೊಡ್ಡ ಕಲಾವಿದ, ನಮ್ಮ ಹತ್ರ ಕಲಿಯೋದು ನಿನಗೇನು ಇದೆ,” ಅಂತಂದ್ರು. ಆಗ ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್ ಮಾತಾಡ್ತಾನಲ್ಲ ಅ ತರಹ ನಾನು ಭಾಷಣ ಬಿಗಿದೆ. ಈ ಸರೋದ್ ಮಾರಿ ಬಿಡ್ತೀನಿ ಅಂತೆಲ್ಲ ಮಾತನಾಡಿದೆ. ನಾನು ಹೇಳೋದನ್ನೆಲ್ಲ ಕೇಳಿದರು. ಆಮೇಲೆ, “ಸರಿ, ಹೋಗು, ಈಗ ಕೂತ್ಕೊಂಡು ನಾನು ಹೇಳಿರೋದನ್ನು ಅಭ್ಯಾಸ ಮಾಡು,” ಅಂದರು. ನಾನು ಕಣ್ಮುಚ್ಚಿಕೊಂಡು ಅಭ್ಯಾಸ ಮಾಡುತ್ತಿದ್ದೆ. ನನ್ನನ್ನು ಎಬ್ಬಿಸಿ, “ಏಳು, ಹಲ್ವಾ ತಿನ್ನು,” ಅಂತಂದ್ರು. ಅವರ ಮನೆಯಲ್ಲಿ ಯಾವಾಗಲೂ ಸಿಹಿ ಇರ್ತಾ ಇತ್ತು. ಅದು ಸುಮಾರು ಅವರ ಅಪ್ಪನ ಗುಣ. ಅವರ ಬಗ್ಗೆ ಯೋಚ್ನೆ ಮಾಡ್ತಾ ಮಾಡ್ತಾ ಮನಸ್ಸು ಆರ್ದ್ರವಾಗುತ್ತೆ. ಒಂದು ಸಾಫಾದ ಮನಸ್ಸಿನಿಂದ ಅವರ ಬಗ್ಗೆ ಯೋಚಿಸಿದಾಗ ಈ ಹಲವಾರು ವಿಚಾರಗಳು ಓವರ್ಲ್ಯಾಪ್ ಆಗುತ್ತವೆ. ಅವರ ಮಾತು ಬಹಳ ಕಟ್ಟುನಿಟ್ಟು. ಆದರೆ, ಮನಸ್ಸು ತುಂಬಾ ಮೃದು. ದನಿ ಕೋಗಿಲೆ ಹಾಗೆ. ಹಾಡೋದೇನು, ಮಾತಾಡೋದೇನು, ಅವರ ದನಿ ಕೇಳಿದ್ರೆ ಅವರಿಗೆ ಅಷ್ಟು ವಯಸ್ಸಾಗಿದೆ ಅಂತ ಗೊತ್ತಾಗೋದಿಲ್ಲ. ಅವರು ನಮ್ಮಮ್ಮನಿಗೆ ತಂಗಿಯಾಗಿದ್ದಿರಬಹುದು.

ಕಲ್ಕತ್ತೆಯಲ್ಲಿ ನಾನು ಸರೋದ್ ಕಲಿಯುತ್ತಿದ್ದಾಗ ನನಗೆ ಒಮ್ಮೆ ಭೇದಿ, ಅಮೀಬಿಕ್ ಡೀಸೆಂಟ್ರಿ ಆಗಿಬಿಟ್ಟಿತ್ತು. ತುಂಬಾ ಸುಸ್ತಾಗಿಬಿಟ್ಟಿದ್ದೆ. ಡಾಕ್ಟರ್ ಹತ್ತಿರ ಹೋಗೋದಕ್ಕೂ ಕಾಸಿರಲಿಲ್ಲ. ಆಗ ಒಬ್ಬರು, “ಸುಮ್ಮನೆ ಊರಿಗೆ ವಾಪಸು ಹೋಗು, ನೀನು ಸರೋದು ಕಲಿತು ಮುಂದೆ ಬರೋದು ಯಾವಾಗ? ಅಲ್ಲಾದರೆ ನೀನು ಮೇಷ್ಟ್ರ ಕೆಲಸವನ್ನಾದರೂ ಮುಂದುವರಿಸಬಹುದು,” ಅಂದರು. ನಾನೂ ನನ್ನ ಸರೋದನ್ನು ಮಾರಿ ಬೆಂಗಳೂರಿಗೆ ಹೋಗಿಬಿಡೋಣ ಅಂದುಕೊಂಡೆ. ಇದನ್ನು ಪಂಡಿತ್ ನಿಖಿಲ್ ಬ್ಯಾನರ್ಜಿಯವರ ಬಳಿ ಹೇಳಿಕೊಂಡೆ. ಆಗ ಅವರು ದೀದಿಯವರ ಹತ್ತಿರ ಸಿತಾರ್ ಕಲಿಯುತ್ತಿದ್ದರು. ನಿಖಿಲ್‌ಜಿಯವರು, “ಸರೋದ್ ಕಲಿಯೋದಕ್ಕೆ ಪ್ರೊಫೆಸರ್ ಕೆಲಸ ಬಿಟ್ಟು ಬಂದು, ಈಗ ಇಷ್ಟಕ್ಕೇ ಸರೋದನ್ನೇ ಬಿಟ್ಟು ಹೋಗಿಬಿಡ್ತೀಯಾ?” ಅಂತ ಕಣ್ಣಲ್ಲಿ ನೀರು ಬರುವಷ್ಟು ಜೋರಾಗಿ ನಕ್ಕರು. ಈ ವಿಷಯವನ್ನು ಅವರು ದೀದಿಗೆ ಹೇಳಿದ್ದರೆನಿಸುತ್ತದೆ. ಹಾಗಾಗಿ ದೀದಿ ನನ್ನನ್ನು ಕರೆದು, “ಡಾಕ್ಟರಿಗೆ ಹೇಳಿದ್ದೇನೆ, ಅವರ ಹತ್ತಿರ ಹೋಗು. ಅವರು ನಿನಗೆ ಔಷಧಿ ಕೊಡ್ತಾರೆ. ಏನು ಮಾಡ್ಬೇಕು ಅಂತ ಹೇಳ್ತಾರೆ. ನೀನು ವಾಪಸು ಬೆಂಗಳೂರಿಗೆ ಹೋಗುತ್ತಿಲ್ಲ,” ಅಂತ ದೃಢವಾಗಿ ಹೇಳಿದರು. ಮೊಸರು ಬಳಸು ಅಂತ ಹಣ ಕೊಟ್ಟರು. ಆಮೇಲೂ ಮೊಸರಿಗೆ ಅಂತ ಅಕ್ಕರೆಯಿಂದ ಹಣ ಕೊಡ್ತಾ ಇದ್ರು. ನನಗೆ ಸರೋದ್ ಬಿಡದೆ ಮುಂದುವರಿಸೋದಕ್ಕೆ ಸಾಧ್ಯ ಆಗಿದ್ದು ಅವರ ಈ ಪ್ರೇರಣೆಯಿಂದಲೇ.

ಬಾಂಬೆಗೆ ನಾನು ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ಹೋಗುತ್ತಿದ್ದೆ. ಅವರಲ್ಲೇ ಒಂದೆರಡು ದಿನ ಇದ್ದು ಪಾಠ ಕಲಿಯುತ್ತಿದ್ದೆ. ಅವರು ನನಗೆ ಕೌಶೀಕಾನಡಾ ಹೇಳಿಕೊಟ್ಟರು. ಅವರ ಕೌಶೀಕಾನಡಾ ಮತ್ತು ಖಾನ್ ಸಾಹೇಬರ ಕೌಶೀಕಾನಡಾ ಎರಡೂ ಬೇರೆ ರೀತಿಯದ್ದು. ಖಾನ್ ಸಾಹೇಬರ ಕೌಶೀಕಾನಡಾ ಮಿಠಾಯಿ ಇದ್ದಂತೆ ಇರುತ್ತದೆ. ಅಲ್ಲಿ ಇಲ್ಲಿ ಆಹಾ ಆಹಾ ಅಂತ ಇರುತ್ತೆ. ನಾನು ನುಡಿಸುವುದೂ ಅದನ್ನೇ. ಆದರೆ, ಅನ್ನಪೂರ್ಣ ದೀದಿ ಅವರದ್ದು ಇನ್ನೂ ತುಂಬಾ ಶಾಸ್ತ್ರಬದ್ಧವಾಗಿ ಇರುತ್ತೆ, ತುಂಬಾ ಗಟ್ಟಿ. ಅದರ ಇಡೀ ಇಂಪ್ಯಾಕ್ಟ್ ಗೊತ್ತಾಗಬೇಕೆಂದರೆ ಅದನ್ನು ಪದೇಪದೇ ಕೇಳಬೇಕು. ಆಹಾ, ಅದು ಬೇರೆ. ಖಾನ್ ಸಾಹೇಬರದ್ದು ತಕ್ಷಣವೇ ಸುಖ ಕೊಟ್ಟುಬಿಡುತ್ತದೆ, ಗುಂಡು ಇದ್ದ ಹಾಗೆ. ಹಾಗಂತ, ಖಾನ್ ಸಾಹೇಬ್ರಿಗೆ ಹಾಗೆ ಸೀರಿಯಸ್ ಆಗಿ ನುಡಿಸೋಕ್ಕಾಗೋದಿಲ್ಲ ಅಂತಲ್ಲ, ಅವರು ತುಂಬಾ ಸೀರಿಯಸ್ ಆಗಿ ನುಡಿಸಬಲ್ಲರು. ಆದರೆ, ಅವರು ಹೆಚ್ಚಾಗಿ ತಲೆಗೆ ಹಚ್ಚಿಕೊಳ್ತಿರಲಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More