ಟ್ವಿಟರ್ ಸ್ಟೇಟ್ | ಕಾಶ್ಮೀರ ಬಿಕ್ಕಟ್ಟಿನ ಬಗ್ಗೆ ಒಮರ್-ಗೌತಮ್ ಗಂಭೀರ ಚರ್ಚೆ

ಕಾಶ್ಮೀರದ ಇಂದಿನ ಬಿಕ್ಕಟ್ಟಿಗೆ ಎಲ್ಲ ರಾಜಕಾರಣಿಗಳು ಮತ್ತು ಪಾಕಿಸ್ತಾನ ಕಾರಣ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಆರೋಪಿಸಿ, ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾರಿಗೆ ರಾಷ್ಟ್ರೀಯವಾದದ ಪಾಠ ಮಾಡಿದ್ದಾರೆ. ಕ್ರಿಕೆಟಿಗನಿಂದ ತಮಗೆ ಪಾಠದ ಅಗತ್ಯವಿಲ್ಲ ಎಂದು ಒಮರ್ ಉತ್ತರಿಸಿದ್ದಾರೆ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರದಂದು ಮಾಜಿ ಭಾರತೀಯ ಕ್ರಿಕೆಟರ್ ಗೌತಮ್ ಗಂಭೀರ್ ಜೊತೆಗೆ ಟ್ವಿಟರ್‌ ಕಾದಾಟ ನಡೆಸಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ. ಪಿಎಚ್‌ಡಿ ಸಂಶೋಧಕನಾಗಿದ್ದ ಉಗ್ರವಾದಿ ಮನ್ನನ್ ಬಶೀರ್ ವಾನಿ ಉತ್ತರ ಕಾಶ್ಮೀರದಲ್ಲಿ ಮರಣ ಹೊಂದಿರುವ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಟ್ವೀಟ್ ಮಾಡಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾರನ್ನು ಕೆಣಕಿದ್ದರು. ವಾನಿ ಉಗ್ರವಾದಿ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ್ದಾನೆಂಬ ವಿವರ ನೀಡಿದ ಫೋಟೋ ಬಹಿರಂಗವಾದ ಮೇಲೆ ಅವರನ್ನು ಕಳೆದ ಜನವರಿಯಲ್ಲಿ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಿಂದ ಹೊರಹಾಕಲಾಗಿತ್ತು.

ಗೌತಮ್ ಗಂಭೀರ್ ಟ್ವೀಟ್ ಮಾಡಿ, “ಮನ್ನನ್ ವಾನಿ ಮರಣ: ನಾವು ಇಂದು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದೇವೆ. ತೀವ್ರವಾದಿಯಾಗಿ ಬದಲಾದ ಒಂದು ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ. ಒಬ್ಬ ಯುವಕನನ್ನು ಕಾಲೇಜು ಪುಸ್ತಕಗಳಿಂದ ಬುಲೆಟ್ ಕಡೆಗೆ ತಿರುಗಿಸಿರುವುದಕ್ಕಾಗಿ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಕಾಂಗ್ರೆಸ್, ಬಿಜೆಪಿ ಎಲ್ಲರೂ ಮುಜುಗರದಿಂದ ತಮ್ಮ ತಲೆ ತಗ್ಗಿಸಬೇಕು,” ಎಂದು ಅಭಿಪ್ರಾಯಪಟ್ಟಿದ್ದರು.

ಗೌತಮ್ ಗಂಭೀರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, “ಈ ವ್ಯಕ್ತಿ ಮನ್ನನ್‌ನ ಗ್ರಾಮ ಬಿಡಿ, ಭಾರತದ ನಕ್ಷೆಯಲ್ಲಿ ತವರು ಜಿಲ್ಲೆಯನ್ನು ಗುರುತಿಸುವಷ್ಟೂ ಈ ಪ್ರದೇಶದ ಬಗ್ಗೆ ತಿಳಿದಿರದ ವ್ಯಕ್ತಿ. ಹಾಗಿದ್ದರೂ ಕಾಶ್ಮೀರದ ಯುವಜನರು ಏಕೆ ಬಂದೂಕು ಹಿಡಿಯುತ್ತಾರೆ ಎನ್ನುವುದು ತನಗೆ ಗೊತ್ತಿದೆ ಎನ್ನುವ ಪೂರ್ವಗ್ರಹದ ಅಭಿಪ್ರಾಯ ವ್ಯಕ್ತಪಡಿಸಿಬಿಟ್ಟರು. ನಾನು ಕ್ರಿಕೆಟ್ ಬಗ್ಗೆ ತಿಳಿದಿರುವುದಕ್ಕಿಂತಲೂ ಕಡಿಮೆ ವಿಚಾರವನ್ನು ಗಂಭೀರ್ ಅವರು ಕಾಶ್ಮೀರದ ಬಗ್ಗೆ ತಿಳಿದುಕೊಂಡಿದ್ದಾರೆ. ನನಗೆ ವಾಸ್ತವದಲ್ಲಿ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ,” ಎಂದು ಟ್ವೀಟ್ ಮಾಡಿದ್ದಾರೆ.

ಒಮರ್ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ಗಂಭೀರ್, “ನಕ್ಷೆಗಳ ಬಗ್ಗೆ ನೀವು ಮಾತನಾಡಬೇಕಾಗಿಲ್ಲ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡುವ ಮೂಲಕ ನನ್ನ ದೇಶದ ನಕ್ಷೆಯನ್ನೇ ಬದಲಿಸಹೊರಟವರು ನೀವು! ನಿಮ್ಮ ದಂತಗೋಪುರದಿಂದ ಹೊರಗೆ ಬನ್ನಿ ಮತ್ತು ನೀವು ರಾಜಕಾರಣಿಗಳು ಕಾಶ್ಮೀರದ ಯುವಕರಿಗಾಗಿ ಏನು ಮಾಡಿದ್ದೀರಿ ಎನ್ನುವುದನ್ನು ಹೇಳಿ,” ಎಂದು ಟ್ವೀಟ್ ಮಾಡಿದ್ದಾರೆ.

ಈ ಟೀಕೆಗೆ ಉತ್ತರಿಸಿದ ಒಮರ್, “ನೀವು ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡ ದಿನ ನನ್ನ ಜೊತೆಗೆ ಚರ್ಚೆಗೆ ಬನ್ನಿ. ನಾವಿಬ್ಬರೂ ಮನರಂಜನೆಗೆ ಚರ್ಚೆ ಮಾಡುವ ಬದಲಾಗಿ, ಮಾಹಿತಿಯುಕ್ತ ಚರ್ಚೆಯನ್ನು ಮಾಡೋಣ,” ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಗಂಭೀರ್ ತಮ್ಮ ದಾಳಿಯನ್ನು ಮುಂದುವರಿಸಿ, “ನೀವೊಬ್ಬರೇ ಅಲ್ಲ, ನಿಮ್ಮಂತಹ ರಾಜಕಾರಣಿಗಳಿಗೆ ಜನರು ಕನ್ನಡಿ ಹಿಡಿದಾಗ ಇಷ್ಟವಾಗುವುದಿಲ್ಲ. ಅದೇ ಕಾರಣಕ್ಕೆ ನನ್ನ ದೇಶ ರಕ್ತ ಸುರಿಸುತ್ತಿದೆ. ರಾಷ್ಟ್ರೀಯವಾದ ಮತ್ತು ತ್ಯಾಗಕ್ಕಾಗಿ ಸಿದ್ಧವಿರುವ ನಿಜವಾದ ವ್ಯಕ್ತಿತ್ವ ಇರುವ ವ್ಯಕ್ತಿಗಳು ನಮಗೆ ಬೇಕು, ನಿಮ್ಮ ತರಹ ಉಡಾಫೆ ಮಾತನಾಡುವವರಲ್ಲ,” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಕಾಶ್ಮೀರ ಕಣಿವೆಯಲ್ಲಿ ದಿಗಿಲು ಹುಟ್ಟಿಸಿರುವ ಕದನದ ಹೊಸ ಮಜಲು

ಗೌತಮ್ ಗಂಭೀರ್ ಜೊತೆ ಚರ್ಚೆಗೆ ಮುಂದುವರಿಸದೆ ಇದ್ದರೂ ಒಮರ್ ಅಬ್ದುಲ್ಲಾ ಅವರು ಕಾಶ್ಮೀರಕ್ಕೆ ಸಂಬಂಧಿಸಿ ಇನ್ನೆರಡು ಪ್ರಮುಖ ಟ್ವೀಟ್ ಮಾಡಿದ್ದಾರೆ. “ವಾರದ ಹಿಂದೆಯಷ್ಟೇ ನನ್ನ ಸಹೋದ್ಯೋಗಿಗಳಿಬ್ಬರು ಭಯೋತ್ಪಾದಕರ ದಾಳಿಗೆ ಗುರಿಯಾಗಿದ್ದಾರೆ. ನನ್ನ ಪಕ್ಷ ೧೯೮೮ರಿಂದೀಚೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಿರಿಯ ಮತ್ತು ಕಿರಿಯ ಕಾರ್ಯಕರ್ತರನ್ನು ಕಳೆದುಕೊಂಡಿದೆ. ನನಗೆ ರಾಷ್ಟ್ರಭಕ್ತಿ ಮತ್ತು ತ್ಯಾಗದ ಬಗ್ಗೆ ಅದರ ಅರ್ಥವೇ ತಿಳಿಯದ ವ್ಯಕ್ತಿಯೊಬ್ಬರಿಂದ ಪಾಠ ಮಾಡಿಸಿಕೊಳ್ಳುವ ಅಗತ್ಯವಿಲ್ಲ,” ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, “ಪ್ರಧಾನಿ ಮೋದಿ ಕಾಶ್ಮೀರವನ್ನು ಅತಿ ಕೆಟ್ಟ ರೀತಿಯಲ್ಲಿ ನಿರ್ವಹಣೆ ಮಾಡಿರುವ ಬಗ್ಗೆ ಯಾರೂ ಪ್ರಶ್ನಿಸುವುದೇ ಇಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೌತಮ್ ಗಂಭೀರ್ ಮತ್ತು ಒಮರ್ ಅಬ್ದುಲ್ಲಾ ಅವರ ಚರ್ಚೆಗೆ ಟ್ವಿಟರ್‌ನಲ್ಲಿ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹಳಷ್ಟು ಮಂದಿ ಒಮರ್ ಅಬ್ದುಲ್ಲಾ ಅವರ ಪರ ಮಾತನಾಡಿದ್ದರೆ, ಕೆಲವರು ಗೌತಮ್ ಗಂಭೀರ್ ಅವರ ವಾದದಲ್ಲೂ ಸತ್ವವಿದೆ ಎಂದು ಹೇಳಿದ್ದಾರೆ.

“ಗೌತಮ್ ಗಂಭೀರ್ ಸುದ್ದಿಯಲ್ಲಿ ಇಲ್ಲ ಎಂದು ತಿಳಿದಾಗ ಹೀಗೆ ಯಾವುದೇ ವಿಚಾರದಲ್ಲಿ ಸುದ್ದಿ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ, ನಿಮ್ಮ ಪ್ರತಿಭೆ ಇರುವುದು ಕ್ರಿಕೆಟ್‌ನಲ್ಲಿ ಮಾತ್ರ. ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯವಾದದ ಬಗ್ಗೆ ಮಾತನಾಡುವ ವಿಚಾರದಲ್ಲಿ ನೀವು ಗಾಯಾಳುವಾಗಿ ನಿವೃತ್ತರಾದವರು,” ಎಂದು ಪತ್ರಕರ್ತ ಪ್ರದ್ಯೋತ್ ತ್ರಿಪುರಾ ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ಅದಿತ್ಯ ಮೆನನ್ ಟ್ವೀಟ್ ಮಾಡಿ, “ಒಮರ್ ಅಬ್ದುಲ್ಲಾ ಅವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲು ಬಯಸಿದ್ದಾರೆ ಎಂದು ಹೇಳುತ್ತಿರುವ ಗೌತಮ್ ಗಂಭೀರ್ ರಿಪೇರಿ ಮಾಡದೆ ಇರುವಷ್ಟು ತೀವ್ರವಾದಿಯಾಗಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಭಾರತ ನಿಮ್ಮಷ್ಟೇ ಅವರದ್ದೂ ಹೌದು. ನೀವು ಕನಸಿನಲ್ಲಿಯೂ ಯೋಚಿಸದಷ್ಟು ಹೆಚ್ಚು ಸೇವೆಯನ್ನು ಅವರು ಭಾರತಕ್ಕೆ ನೀಡಿದ್ದಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತೆ ಆರತಿ ಟೀಕು ಸಿಂಗ್ ಅವರೂ, ಒಮರ್ ಅಬ್ದುಲ್ಲಾ ಅವರ ಪರವಾಗಿ ಟ್ವೀಟ್ ಮಾಡಿದ್ದಾರೆ.

ಆದರೆ, ಮಾಜಿ ಮೇಜರ್ ಆಗಿರುವ ಸುರೇಂದ್ರ ಪೂನಿಯ ಗೌತಮ್ ಗಂಭೀರ್ ಅಭಿಪ್ರಾಯವನ್ನು ಪ್ರೋತ್ಸಾಹಿಸಿದ್ದಾರೆ. “ಈ ವ್ಯಕ್ತಿಯ ಆತ್ಮದಲ್ಲಿ ಭಾರತದ ನಕ್ಷೆ ಇದೆ. ನಮ್ಮನ್ನು ಕೇಳಿ. ಮನ್ನನ್ ವಾನಿಯ ಗ್ರಾಮ, ಮನೆ, ಮೊಹಲ್ಲಾ ಎಲ್ಲವನ್ನೂ ವಿವರಿಸುತ್ತೇವೆ. ಕಾಶ್ಮೀರ ರಾಜಕಾರಣಿಗಳು ಮತ್ತು ಪಾಕಿಸ್ತಾನ ಎಲ್ಲರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಬೆಳೆಯಲು ಕಾರಣಕರ್ತರು ಎಂದು ನಾನು ಖಚಿತವಾಗಿ ಹೇಳಬಲ್ಲೆ,” ಎಂದು ಟ್ವೀಟ್ ಮಾಡಿದ್ದಾರೆ ಸುರೇಂದ್ರ ಪೂನಿಯ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More