ಮೋದಿಗೆ ಮುಜುಗರ ತರಲಿರುವ ಜೋಷಿ ವರದಿ ಹಳಿ ತಪ್ಪಿಸಲು ಮುಂದಾದ ಬಿಜೆಪಿ ಸದಸ್ಯರು

ಮೋದಿ ಸರ್ಕಾರದ ಉದ್ಯೋಗ ಸೃಷ್ಟಿ ಕುರಿತಂತೆ ವಾಸ್ತವಿಕ ಚಿತ್ರಣ ನೀಡಲಿರುವ ಜಿಡಿಪಿ ಕುರಿತಾದ ಅಂದಾಜು ಸಮಿತಿ ವರದಿಯನ್ನು ಬಿಜೆಪಿ ಸದಸ್ಯರೇ ಹಳಿ ತಪ್ಪಿಸಲು ಮುಂದಾಗಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಣತಿಯಂತೆ ಇದೆಲ್ಲವೂ ನಡೆದಿದೆ. ಈ ಕುರಿತ ‘ದಿ ವೈರ್’ ವರದಿಯ ಭಾವಾನುವಾದವಿದು

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿನ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಹೊಸ-ಹೊಸ ತಂತ್ರ ಅನುಸರಿಸುತ್ತಿದೆ. ಈಗ ನಿಷ್ಠೂರ ನಡೆಯ ಹಿರಿಯ ಬಿಜೆಪಿ ಸಂಸದ ಮುರುಳಿ ಮನೋಹರ ಜೋಷಿ ಅಧ್ಯಕ್ಷರಾಗಿರುವ ಸಂಸದೀಯ ಅಂದಾಜು ಸಮಿತಿ ವರದಿ ಮಂಡನೆಗೆ ಕೊಕ್ಕೆ ಹಾಕಲು ಮುಂದಾಗಿದೆ.

ಸಂಸದೀಯ ಅಂದಾಜು ಸಮಿತಿಯು ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಕುರಿತಾದ ವರದಿ ಸಿದ್ದಪಡಿಸಿದೆ. ಈ ವರದಿಯಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿನ ಉದ್ಯೋಗ ಸೃಷ್ಟಿ ಕುರಿತಂತೆ ವಾಸ್ತವಿಕ ಚಿತ್ರಣ ಬಯಲಾಗಲಿದ್ದು, ಮೋದಿ ಸರ್ಕಾರವು ಮುಜುಗರದ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಅಂದಾಜು ಸಮಿತಿ ಸಿದ್ಧಪಡಿಸಿರುವ ಜಿಡಿಪಿ ಕುರಿತಾದ ವರದಿಗೆ ತಮ್ಮ ವಿರೋಧ ವ್ಯಕ್ತಪಡಿಸಲು ಮತ್ತು ವರದಿ ಮಂಡನೆಯಾಗದಂತೆ ನೋಡಿಕೊಳ್ಳಲು ಸಮಿತಿ ಸದಸ್ಯರಾಗಿರುವ ಬಿಜೆಪಿ ಸಂಸದರಾದ ನಿಷಿಕಾಂತ್ ದುಬೆ ಮತ್ತು ರಮೇಶ್ ಬಿದೂರಿ ವಿಫಲ ಯತ್ನ ನಡೆಸಿದ್ದಾರೆ ಎಂದು ‘ದಿ ವೈರ್’ ಜಾಲಾತಾಣ ವರದಿ ಮಾಡಿದೆ.

ಅಂದಾಜು ಸಮಿತಿ ಸಿದ್ಧಪಡಿಸಿರುವ ವರದಿಯನ್ನು ಅಂಗೀಕರಿಸಲು ಶುಕ್ರವಾರ ಸೇರಿದ್ದ ಸಭೆಯಲ್ಲಿ ಇಬ್ಬರು ಬಿಜೆಪಿ ಸಂಸದರು ವರದಿ ಬಗ್ಗೆ ತಮಗೆ ಅಸಮ್ಮತಿ ಟಿಪ್ಪಣಿ ಸೇರಿಸುವಂತೆ ಒತ್ತಾಯಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಅವರು ಹೀಗೆ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿ 2ಜಿ ಹಗರಣವನ್ನು ಬಯಲಿಗೆಳದಿದ್ದ ಮುರುಳಿ ಮನೋಹರ ಜೋಷಿ, ಸದ್ಯ ಇಬ್ಬರು ಸದಸ್ಯರ ಮನವಿಯನ್ನು ಮಾನ್ಯ ಮಾಡಿಲ್ಲ.

“ಸಂಸದೀಯ ಸಮಿತಿ ವರದಿ ಸರ್ಕಾರವೇ ನೀಡಿದ ಅಂಕಿ-ಅಂಶಗಳನ್ನು ಆಧರಿಸಿ ತಯಾರಿಸಿದ ವರದಿಯಾದ್ದರಿಂದ ಅದಕ್ಕೆ ಸದಸ್ಯರು ಭಿನ್ನಾಭಿಪ್ರಾಯ ಅಥವಾ ಅಸಮ್ಮತಿ ವ್ಯಕ್ತಪಡಿಸಲಾಗದು. ಇಷ್ಟಾಗಿಯೂ ವರದಿ ಕುರಿತಂತೆ ನಿಮ್ಮ ಆಕ್ಷೇಪಣೆಗಳೇನಾದರೂ ಇದ್ದರೆ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿ,” ಎಂದು ಸೂಚಿಸಿರುವ ಜೋಷಿ ಅವರು, ಒಂದು ವಾರ ಕಾಲಾವಕಾಶ ನೀಡಿದ್ದಾರೆ. ರಮೇಶ್ ಬಿದೂರಿ ತಾವು ಚುನಾವಣಾ ಕಾರ್ಯದ ಒತ್ತಡದಲ್ಲಿದ್ದು, ಲಿಖಿತ ರೂಪದಲ್ಲಿ ಆಕ್ಷೇಪ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ನಿಷಿಕಾಂತ್ ದುಬೆ ಲಿಖಿತ ರೂಪದಲ್ಲಿ ತಮ್ಮ ಆಕ್ಷೇಪ ಸಲ್ಲಿಸಲು ಒಪ್ಪಿದ್ದಾರೆ.

ಜಿಡಿಪಿ ಕುರಿತಾಗಿ ಅಂದಾಜು ಸಮಿತಿ ಮಂಡಿಸಲಿರುವ ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಕುರಿತಾದ ವಾಸ್ತವಿಕ ಚಿತ್ರಣ ಬಯಲಾಗಲಿದೆ. ದೇಶದಲ್ಲಿ ವಾಸ್ತವಿಕವಾಗಿ ಉದ್ಯೋಗ ಸೃಷ್ಟಿ ಆಗದೆ ಇದ್ದರೂ ಇಪಿಎಫ್ಒ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು.

ಆದರೆ, ಇಪಿಎಫ್ಒ ಅಂಕಿ-ಅಂಶಗಳು ಉದ್ಯೋಗ ಸೃಷ್ಟಿಯ ವಾಸ್ತವಿಕ ಚಿತ್ರಣ ನೀಡುವುದಿಲ್ಲ. ಈ ಸಂಗತಿಯನ್ನು ಸಾಂಖ್ಯಿಕ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳೇ ದೃಢಪಡಿಸಿದ್ದಾರೆ. ಅಲ್ಲದೆ, ಉದ್ಯೋಗ ಸೃಷ್ಟಿ ಕುರಿತಂತೆ ರಿಯಲ್ ಟೈಮ್ ಅಂಕಿ-ಅಂಶಗಳು ಲಭ್ಯವಾಗುವುದಿಲ್ಲ ಎಂಬುದನ್ನು ಸಮಿತಿ ಮುಂದೆ ಬಹಿರಂಗಪಡಿಸಿದ್ದಾರೆ. ಇದು ಮೋದಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲಿದೆ. ಈ ಹಿನ್ನೆಲೆಯಲ್ಲೇ, ಅಂದಾಜು ಸಮಿತಿ ಸಭೆ ನಡೆಯವ ಮುನ್ನ ವಿಜಯ್ ಗೋಯಲ್ ಅವರು ಅಮಿತ್ ಶಾ ಅವರ ಸಂದೇಶವನ್ನು ನಿಷಿಕಾಂತ್ ದುಬೆ ಮತ್ತು ರಮೇಶ್ ಬಿದೂರಿ ಅವರಿಗೆ ಮುಟ್ಟಿಸಿದ್ದಾರೆ. ಅಂದಾಜು ಸಮಿತಿ ಸಿದ್ಧಪಡಿಸಿರುವ ವರದಿ ಬಗ್ಗೆ ಅಸಮ್ಮತಿ ಟಿಪ್ಪಣಿ ನೀಡುವಂತೆ ಅಮಿತ್ ಶಾ ಈ ಇಬ್ಬರಿಗೂ ಸೂಚಿಸಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.

ಕಳೆದ ದಶಕದಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ನಿಧಾನಗತಿಯಲ್ಲಿದ್ದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ ಜಾರಿ ಮಾಡಿದ ನಂತರ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿದೆ. ಅಸಂಘಟಿತ ವಲಯದಲ್ಲಿನ ಉದ್ಯೋಗ ನಷ್ಟವು ಒಟ್ಟು ಆರ್ಥಿಕ ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ ಸಂಶೋಧನೆ ಪ್ರಕಾರ, ನರೇಂದ್ರ ಮೋದಿ ಸರ್ಕಾರದ ಮೊದಲ ಎರಡು ವರ್ಷಗಳ ಅವಧಿಯಲ್ಲಿ 27 ವಲಯಗಳಲ್ಲಿ ಕ್ರಮವಾಗಿ ಶೇ.0.2 ಮತ್ತು ಶೇ.0.1ರಷ್ಟು ಉದ್ಯೋಗ ನಷ್ಟವಾಗಿದೆ. 2014-15 ಮತ್ತು 2015-16ರಲ್ಲಿ ಜಿಡಿಪಿ ಶೇ.7.4 ಮತ್ತು ಶೇ.8.2ರಷ್ಟಿದ್ದಾಗಲೂ ಸುಮಾರು 10 ಲಕ್ಷ ಉದ್ಯೋಗ ನಷ್ಟವಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸೇರಿದಂತೆ ವಿವಿಧ ಸಮೀಕ್ಷೆಗಳ ಪ್ರಕಾರವೂ ಉದ್ಯೋಗ ಸೃಷ್ಟಿ ಚಿತ್ರಣ ಭಿನ್ನವಾಗೇನೂ ಇಲ್ಲ.

ಕಳೆದ ವರ್ಷ ಪ್ರಧಾನಿ ಮೋದಿ ತಮ್ಮ ಆಪ್ತ ಮಾಧ್ಯಮ ಸಮೂಹಗಳಿಗೆ ನೀಡಿದ ಸಂದರ್ಶನಗಳಲ್ಲಿ, “ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಆದರೆ, ಅಂಕಿ-ಅಂಶಗಳು ಲಭ್ಯವಿಲ್ಲ,” ಎಂದು ಹೇಳಿದ್ದರು. ಅಲ್ಲದೆ, “ಪಕೋಡ ಮಾಡುವುದು ಸಹ ಉತ್ಪಾದಕ ಉದ್ಯೋಗವೇ. ಅದು ಅಧಿಕೃತ ದಾಖಲೆಗೆ ಸೇರುತ್ತಿಲ್ಲ,” ಎಂದು ಹೇಳಿ ಲೇವಡಿಗೀಡಾಗಿದ್ದರು.

ಮೋದಿ ಸರ್ಕಾರ ಬಂದ ನಂತರ ಸಂಸದೀಯ ಸಮಿತಿಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಸಂಸದೀಯ ರಕ್ಷಣಾ ಸಮಿತಿಯು ರಕ್ಷಣಾ ಇಲಾಖೆ ಸಿದ್ಧತೆ ಕುರಿತಂತೆ ವ್ಯತಿರಿಕ್ತ ವರದಿ ನೀಡಿದ ಕಾರಣಕ್ಕೆ ಸಮಿತಿ ಅಧ್ಯಕ್ಷ ಬಿ ಸಿ ಖಂಡೂರಿ ಅವರನ್ನು ಕಿತ್ತೊಗೆದು, ಆ ಸ್ಥಾನಕ್ಕೆ ಕಲ್ರಾಜ್ ಮಿಶ್ರಾ ಅವರನ್ನು ನಿಯೋಜಿಸಿತ್ತು. ಚೀನಾದೊಂದಿಗೆ ಡೊಕ್ಲಾಮ್ ಬಿಕ್ಕಟ್ಟು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ವೈಫಲ್ಯತೆ ಎದ್ದುಕಾಣುತ್ತದೆ ಎಂದು ಶಶಿ ತರೂರ್ ನೇತೃತ್ವದ ಸಂಸದೀಯ ವಿದೇಶಾಂಗ ಸಮಿತಿ ನೀಡಿದ ವರದಿಯನ್ನು ಬಿಜೆಪಿ ಸದಸ್ಯರು ಹಳಿ ತಪ್ಪಿಸಿದ್ದರು.

ಇದನ್ನೂ ಓದಿ : ಆರು ತಿಂಗಳಲ್ಲಿ 31 ಲಕ್ಷ ಉದ್ಯೋಗ; ಇಪಿಎಫ್ಒ ಮಾಹಿತಿ ಎಷ್ಟು ಸತ್ಯ?

ಮುರುಳಿ ಮನೋಹರ ಜೋಷಿ ಅವರು ನರೇಂದ್ರ ಮೋದಿ ಸರ್ಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ನಿಷ್ಕ್ರಿಯ ಸಾಲ ಕುರಿತಂತೆ ವಿವರಣೆ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘರಾಮ್ ರಾಜನ್ ಅವರಿಗೆ ಸೂಚಿಸಿದ್ದರು. ರಘುರಾಮ್ ರಾಜನ್ ಅವರು ನೀಡಿದ್ದ 17 ಪುಟಗಳ ಲಿಖಿತ ವಿವರಣೆಯಲ್ಲಿ ಸಾಲ ಪಡೆದು ಪಾವತಿಸದೆ ವಂಚಿಸುತ್ತಿರುವ ಉದ್ಯಮಿಗಳ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಿ, ಕೆಲವರನ್ನು ಕಾನೂನು ಪ್ರಕಾರ ಶಿಕ್ಷಿಸಲು ತನಿಖಾ ಸಂಸ್ಥೆಗಳು ಸಮನ್ವಯತೆಯೊಂದಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾಗಿಯೂ, ನಂತರ ಪಿಎಂಒ ಏನು ಕ್ರಮ ಕೈಗೊಂಡಿತೆಂಬುದು ತಮಗೆ ಮಾಹಿತಿ ಇಲ್ಲವೆಂದೂ ತಿಳಿಸಿದ್ದರು. ಈಗ ಅಂದಾಜು ಸಮಿತಿ ಅಧ್ಯಕ್ಷ ಮುರುಳಿ ಮನೋಹರ ಜೋಷಿ ಅವರು ಆರ್ಬಿಐ ಗವರ್ನರ್ ಸಲ್ಲಿಸಿದ್ದ ಸಾಲ ವಂಚಿಸಿದ್ದವರ ಪಟ್ಟಿಯನ್ನು ಹಾಜರುಪಡಿಸುವಂತೆ ಪ್ರಧಾನಿ ಕಾರ್ಯಲಯಕ್ಕೆ ಸೂಚಿಸಿದ್ದಾರೆ. ಇದು ಪ್ರಧಾನಿ ಮೋದಿಗೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಇರುಸುಮುರುಸು ಉಂಟುಮಾಡಿದೆ.

ಬೇರೆ ಯಾರೇ ಆಗಿದ್ದರೂ ಮೋದಿ ಸರ್ಕಾರ ಸಂಸದೀಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯುತ್ತಿತ್ತು. ಆದರೆ, ಮುರುಳಿ ಮನೋಹರ ಜೋಷಿ ಅವರು ಬಿಜೆಪಿಯಲ್ಲಿ ಮಾತ್ರವಲ್ಲ, ಸಂಘಪರಿವಾರದಲ್ಲೂ ಪ್ರಭಾವಿ ನಾಯಕ. ಅವರನ್ನು ಕೆಣಕುವುದು ಸಂಘಪರಿವಾರವನ್ನೇ ಕೆಣಕಿದಂತಾಗುತ್ತದೆ ಎಂಬ ಕಾರಣಕ್ಕೆ ಮೌನವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More