ಎಚ್‌ಎಎಲ್‌ ಸಂಸ್ಥೆಯ ಭವಿಷ್ಯ ನಾಶವಾಗಲು ಬಿಡುವುದಿಲ್ಲವೆಂದ ರಾಹುಲ್‌ ಗಾಂಧಿ

ಕಬ್ಬನ್‌ ಪಾರ್ಕ್‌ ಬಳಿ ಇರುವ ಮಿನ್ಸ್‌ ಸ್ಕ್ವೇರ್‌ನಲ್ಲಿ ಅ.13 (ಶನಿವಾರ) ಎಚ್‌ಎಎಲ್‌ ಸಂಸ್ಥೆಯ‌ ಹಾಲಿ ನೌಕರರು ಹಾಗೂ ಮಾಜಿ ಅಧಿಕಾರಿಗಳೊಂದಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಂವಾದ ಸಭೆ ನಡೆಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು

ದೇಶದ ರಕ್ಷಣಾ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದ ಎಚ್‌ಎಎಲ್‌ ಕಂಪನಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಕಬ್ಬನ್‌ ಪಾರ್ಕ್‌ ಬಳಿ ಇರುವ ಮಿನ್ಸ್‌ ಸ್ಕ್ವೇರ್‌ನಲ್ಲಿ ಶನಿವಾರ (ಅ.13) ಎಚ್‌ಎಎಲ್‌ ಸಂಸ್ಥೆಯ‌ ಹಾಲಿ ನೌಕರರು ಹಾಗೂ ಮಾಜಿ ಅಧಿಕಾರಿಗಳೊಂದಿಗೆ ಅವರು ಸಂವಾದ ಸಭೆ ನಡೆಸಿದರು.

ಉದ್ಯಮಿ ಅನಿಲ್‌ ಅಂಬಾನಿಯವರಿಗೆ ಸಹಾಯ ಮಾಡುವ ಉದ್ದೇಶದಿಂದ ಎಚ್‌ಎಎಲ್‌ ಕಂಪನಿಗೆ ಕೇಂದ್ರ ಸರ್ಕಾರ ವಂಚಿಸಿದೆ ಎಂದ ರಾಹುಲ್‌ ಗಾಂಧಿ ಅವರು, “ಎಚ್‌ಎಎಲ್‌ ಭಾರತದ ಪ್ರತಿಷ್ಠೆಯಾಗಿದೆ. ಎಪ್ಪತ್ತು ವರ್ಷಗಳ ಕಾಲ ದೇಶದ ರಕ್ಷಣಾ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದೆ. ಎಚ್‌ಎಎಲ್‌ನಂತಹ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಯುದ್ಧವಿಮಾನ ತಯಾರು ಮಾಡುವ ಸಾಮರ್ಥ್ಯವಿಲ್ಲ ಎಂದು ಹೇಳುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶದ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಸ್ನೇಹಿತ ಅನಿಲ್‌ ಅಂಬಾನಿ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಎಚ್‌ಎಎಲ್‌ ಕಂಪನಿಗೆ ವಂಚಿಸಿದ್ದಾರೆ. ಇದು ಬೆಂಗಳೂರಿನ ಯುವಕರಿಗೆ ಮಾಡಿದ ಮಹಾದ್ರೋಹ,” ಎಂದು ಹರಿಹಾಯ್ದರು.

ಎಚ್‌ಎಎಲ್‌ ನೌಕರರ ಪರವಾಗಿ ನಾವಿದ್ದೇವೆ ಎಂದ ರಾಹುಲ್‌, “ಕಾಂಗ್ರೆಸ್‌ ಪಕ್ಷವು ಎಚ್‌ಎಎಲ್‌ ಪರ ಇದೆ. ಈ ದೇಶದ ರಕ್ಷಣಾ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತಿರುವ ಎಚ್‌ಎಎಲ್‌ ದೇಶಪ್ರೇಮದ ಪ್ರತೀಕ. ನಾವು ಅಧಿಕಾರಕ್ಕೆ ಬಂದರೆ ಎಚ್‌ಎಎಲ್‌ ಅಭಿವೃದ್ದಿ ಪರ ಕೆಲಸ ಮಾಡಲಿದ್ದೇವೆ. ಎಚ್‌ಎಎಲ್‌ ಭವಿಷ್ಯವನ್ನು ನಾಶ ಮಾಡಲು ನಾವು ಎಂದಿಗೂ ಬಿಡುವುದಿಲ್ಲ. ಎಚ್‌ಎಎಲ್‌ನಂತಹ ನವಭಾರತದ ದೇಗುಲಗಳನ್ನು ಹಾಳು ಮಾಡಲು ಯತ್ನಿಸುತ್ತಿರುವವರ ವಿರುದ್ಧ ನಾವು ಹೋರಾಡಲಿದ್ದೇವೆ,” ಎಂದು ತಿಳಿಸಿದರು. ಮುಂದುವರಿದ ಅವರು, “ಎಚ್‌ಎಎಲ್‌ ಸಂಸ್ಥೆ ನಮ್ಮನ್ನು ರಕ್ಷಿಸಿದೆ. ಅದು ಭಾರತಾದ್ಯಂತ ವೈಜ್ಞಾನಿಕ ದೃಷ್ಟಿಕೋನವನ್ನು ಹುಟ್ಟುಹಾಕುವ ಕಾರ್ಯ ಮಾಡಿದೆ. ನಮ್ಮ ಆಂತರಿಕ್ಷ ಯಾನಕ್ಕೆ ಎಚ್‌ಎಎಲ್‌ ಕಾರ್ಯತಂತ್ರವೇ ಬಹುದೊಡ್ಡ ಆಸ್ತಿಯಾಗಿದೆ. ಇದು ಸಾಮಾನ್ಯ ಸಂಸ್ಥೆಯಲ್ಲ. ಇಂತಹ ಸಂಸ್ಥೆಗೆ ಅವಮಾನಿಸಿದ ಕೇಂದ್ರ ಸರ್ಕಾರದ ನಾಯಕರು ನಿಮ್ಮೆಲ್ಲರ ಕ್ಷಮೆ ಯಾಚಿಸಬೇಕು. ಆದರೆ, ಅವರು ಕ್ಷಮೆ ಯಾಚಿಸುವುದಿಲ್ಲ. ಅವರ ಪರವಾಗಿ ನಾನು ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ,” ಎಂದು ಎಚ್‌ಎಎಲ್‌ ನೌಕರರ ಉದ್ದೇಶಿಸಿ ಮಾತನಾಡಿದರು.

ಇದೇ ವೇಳೆ ಮಾತನಾಡಿದ ನಿವೃತ್ತ ಎಚ್‌ಎಎಲ್‌ ಅಧಿಕಾರಿ, ಎಚ್‌ಎಎಲ್‌ ನೌಕರರ ಒಕ್ಕೂಟದ ಮಾಜಿ ಮುಖ್ಯಸ್ಥ ಸಿರಾಜುದ್ದೀನ್‌, “ಎಚ್‌ಎಎಲ್‌ ಸಂಸ್ಥೆಗಾಗಿ ನಾವೆಲ್ಲ ಬದುಕನ್ನು ಸವೆಸಿದ್ದು, ಅಂತಹ ಸಂಸ್ಥೆಗೆ ಅವಮಾನ ಮಾಡಿದ್ದಕ್ಕೆ ನಮಗೆಲ್ಲ ಅಪಾರ ನೋವುಂಟಾಗಿದೆ,” ಎಂದರು. “ಎಚ್‌ಎಎಲ್‌ ಕೇವಲ ಸಂಸ್ಥೆಯಲ್ಲ. ಅದು ದೇಶದ ರಕ್ಷಣಾ ವ್ಯವಸ್ಥೆಯ ಅಡಿಪಾಯ. ದೇಶ ಕಂಡ ಮೂರು ಯುದ್ಧಗಳಲ್ಲಿ ಎಚ್ಎಎಲ್‌ ಪ್ರಮುಖ ಪಾತ್ರ ವಹಿಸಿತ್ತು. ಕೇವಲ ಭಾರತವನ್ನಷ್ಟೇ ಅಲ್ಲ. ಜಗತ್ತಿನ ಮುಂದುವರಿದ ರಾಷ್ಟ್ರಗಳಿಗೂ ಎಚ್ಎಎಲ್ ಯುದ್ಧ ವಿಮಾನಗಳನ್ನು ಪೂರೈಸಿದೆ. ಇವತ್ತು ಕೇಂದ್ರ ಸರ್ಕಾರ ಸೈಕಲ್‌ ತಯಾರಿಸಲು ಯೋಗ್ಯತೆ ಇಲ್ಲದ ಅನಿಲ್‌ ಅಂಬಾನಿ ಒಡೆತನದ ಸಂಸ್ಥೆಯೊಂದಕ್ಕೆ ರಫೇಲ್‌ ಪಾಲುದಾರಿಕೆ ಒಪ್ಪಂದ ಮಾಡಿಕೊಟ್ಟಿದೆ. ಇದೆಲ್ಲವನ್ನೂ ಫ್ರಾನ್ಸ್‌ ಮಾಧ್ಯಮಗಳು ತೆರೆದಿಟ್ಟಿವೆ. ನಲವತ್ತು ವರ್ಷಗಳ ಕಾಲ ಎಚ್‌ಎಎಲ್‌ಗೆ ದುಡಿದ ನಮಗೆ ಕೇಂದ್ರ ಸರ್ಕಾರ ಅವಮಾನ ಮಾಡುವ ಮೂಲಕ ನೋವು ನೀಡಿದೆ,” ಎಂದು ಸಿರಾಜುದ್ದೀನ್‌ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಎಚ್‌ಎಎಲ್‌ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆಗಳು ಏನನ್ನು ಸೂಚಿಸುತ್ತವೆ?

ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್‌ಎಎಲ್‌ ಸಂಸ್ಥೆಯ ನಿವೃತ್ತ ಎಂಜಿನಿಯರ್‌ ಬಿ ಟಿ ರಾಘವ್‌, “ಎಚ್‌ಎಎಲ್‌ ಎನ್ನುವುದು ಕೇವಲ ಸಂಸ್ಥೆಯಲ್ಲ. ಅದೊಂದು ಜೀವಂತ ಅಂಗ. ಕೃತಕ ಅಂಗವೊಂದನ್ನು ಜೀವಂತವಾಗಿರಿಸಲು ಜೀವಿಸುತ್ತಿರುವ ಅಂಗವನ್ನೇ ಕೊಲ್ಲವುದು ನ್ಯಾಯವಲ್ಲ. ಕೇಂದ್ರದ ನಡೆಯಿಂದ ಎಚ್‌ಎಎಲ್‌ ಸಂಸ್ಥೆಗಾಗಿ ಕೆಲಸ ಮಾಡುತ್ತಿರುವ 32 ಸಾವಿರ ನೌಕರರಿಗೆ ಅವಮಾನವಾಗಿದೆ. ಇದು ಅತ್ಯಂತ ನೋವಿನ ವಿಚಾರ,” ಎಂದರು.

ಸಂವಾದ ಸಭೆಯಲ್ಲಿ ಹಲವು ಒಕ್ಕೂಟಗಳ ಮುಖಂಡರು ಮಾತನಾಡಿ, ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಹಾಜರಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More