ಜಿಲ್ಲೆಗಳಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಕ್ಕೆ ಆರ್ಥಿಕ ಇಲಾಖೆ ಅಸಮ್ಮತಿ

ಪಂಚಾಯ್ತಿ ವ್ಯವಸ್ಥೆಯಲ್ಲಿನ ದೂರು, ಸಮಸ್ಯೆ, ಭ್ರಷ್ಟಾಚಾರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸ್ಥಾಪಿಸಿರುವ ಒಂಬುಡ್ಸ್‌ಮನ್‌ ವ್ಯವಸ್ಥೆ ಯಶಸ್ವಿಯಾಗಿಲ್ಲ. ಇದಕ್ಕೆ ಪರ್ಯಾಯವಾಗಿ ನ್ಯಾಯಾಲಯ ಸ್ವರೂಪದ ಪ್ರಾಧಿಕಾರ ರಚನೆಗೆ ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇದಕ್ಕೆ ಕಾರಣಗಳೇನು?

ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂದುಕೊರತೆ ನಿವಾರಣೆ ಪ್ರಾಧಿಕಾರಗಳನ್ನು ಉಳಿದ ಜಿಲ್ಲೆಗಳಿಗೆ ವಿಸ್ತರಿಸಲು ಆರ್ಥಿಕ ಇಲಾಖೆ ಸಹಮತ ನೀಡಿಲ್ಲ. ಪ್ರಸಕ್ತ ಆರ್ಥಿಕ ಸಾಲಿನ (೨೦೧೮-೧೯) ಆಯವ್ಯಯದಲ್ಲಿ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿರುವುದೇ ಇದಕ್ಕೆ ಕಾರಣ.

ಉದ್ಯೋಗ ಖಾತ್ರಿ (ಎಂನರೇಗಾ) ಸೇರಿದಂತೆ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ವಿವಿಧ ಸ್ವರೂಪದ ಅವ್ಯವಹಾರ, ಭ್ರಷ್ಟಾಚಾರಗಳ ಪತ್ತೆಗೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ನ್ಯಾಯಾಲಯ ಸ್ವರೂಪದ ಕುಂದುಕೊರತೆ ನಿವಾರಣಾ ಪ್ರಾಧಿಕಾರವನ್ನು ವರ್ಷದ ಹಿಂದೆ ರಾಜ್ಯ ಸರ್ಕಾರ ೨ ಜಿಲ್ಲೆಯಲ್ಲಿ ಸ್ಥಾಪಿಸಿತ್ತು.

ಉಳಿದ ಜಿಲ್ಲೆಗಳಲ್ಲಿಯೂ ಈ ಪ್ರಾಧಿಕಾರಗಳನ್ನು ಸ್ಥಾಪಿಸಲು ಅನುಮತಿ ಹಾಗೂ ಅನುದಾನಕ್ಕೆ ಆರ್ಥಿಕ ಇಲಾಖೆಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ಕೋರಿತ್ತು. ಆದರೆ, ಆರ್ಥಿಕ ಇಲಾಖೆಯು, “ಪ್ರಸ್ತುತ ೨೦೧೮-೧೯ನೇ ಸಾಲಿನ ಆಯವ್ಯಯದಲ್ಲಿ ಹೆಚ್ಚಿನ ಆರ್ಥಿಕ ಹೊರೆ ಇದೆ. ನಿರೀಕ್ಷೆಯಂತೆ ರಾಜಸ್ವ ಸಂಗ್ರಹಣೆ ಸಹ ಪರಿಣಾಮಕಾರಿಯಾಗಿಲ್ಲ. ಹೀಗಾಗಿ, ಪ್ರಸ್ತುತ ಸನ್ನಿವೇಶದಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಗಳನ್ನು ಸ್ಥಾಪಿಸಲು ತಗುಲುವ ವೆಚ್ಚಗಳಿಗಾಗಿ ಸಹಮತಿ ನೀಡಲು ಕಷ್ಟಸಾಧ್ಯವಾಗಿದೆ,” ಎಂದು ಅಭಿಪ್ರಾಯ ನೀಡಿದೆ. ಹೀಗಾಗಿ, ಉಳಿದ ಜಿಲ್ಲೆಗಳಲ್ಲಿ ಪ್ರಾಧಿಕಾರ ಆರಂಭವಾಗುವುದು ಮತ್ತಷ್ಟು ವಿಳಂಬವಾಗುವ ಲಕ್ಷಣಗಳಿವೆ.

ಏನಿದು ಪ್ರಾಧಿಕಾರ?: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂಧಿಸಿದ ಸಮಸ್ಯೆ, ದೂರುಗಳ ಇತ್ಯರ್ಥಕ್ಕೆ ಜನರು ಪರದಾಡಬಾರದು ಎಂಬ ಉದ್ದೇಶದಿಂದ ನ್ಯಾಯಾಲಯ ಸ್ವರೂಪದ 'ಕುಂದುಕೊರತೆ ನಿವಾರಣಾ ಪ್ರಾಧಿಕಾರ' ರಚಿಸಲಾಗಿತ್ತು. ಪ್ರತಿ ಜಿಲ್ಲೆಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಅಥವಾ ವಿಶೇಷ ಡೆಪ್ಯೂಟಿ ಕಮಿಷನರ್‌ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿಯನ್ನು ಈ ಪ್ರಾಧಿಕಾರಕ್ಕೆ ನೇಮಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಉದ್ದೇಶಿಸಿತ್ತು.

ಇದನ್ನೂ ಓದಿ : ೧೩೮೮ ಕೋಟಿ ರೂ. ಅಕ್ರಮವಾಗಿ ಬ್ಯಾಂಕ್‌ನಲ್ಲಿ ಹೂಡಿದ ಆರ್‌ಡಿಪಿಆರ್‌; ಸಿಎಜಿ

ಉದ್ಯೋಗ ಖಾತ್ರಿ ಯೋಜನೆಗಳಲ್ಲಿನ ಅಕ್ರಮ, ಅವ್ಯವಹಾರಗಳನ್ನು ಪತ್ತೆಹಚ್ಚುವ ಸಲುವಾಗಿ ಸ್ಥಾಪಿಸಲಾಗಿದ್ದ ಈ ಮುಂಚಿನ ಒಂಬುಡ್ಸ್‌ಮನ್‌ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದವಲ್ಲದೆ, ಕಾರ್ಯವೈಖರಿ ಕುರಿತು ಅಪಸ್ವರಗಳು ಕೇಳಿಬಂದಿದ್ದವು. ಅಲ್ಲದೆ, ಈ ವ್ಯವಸ್ಥೆ ಕೇವಲ ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳಿಗಷ್ಟೇ ಸೀಮಿತವಾಗಿತ್ತು.

ಈ ಹಿನ್ನೆಲೆಯಲ್ಲಿ, ಎಂನರೇಗಾ ಸೇರಿದಂತೆ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿನ ಎಲ್ಲ ಬಗೆಯ ಅವ್ಯವಹಾರ, ಭ್ರಷ್ಟಾಚಾರಗಳ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಕುಂದುಕೊರತೆ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿತ್ತು. ೩೦ ಜಿಲ್ಲಾ ಪಂಚಾಯ್ತಿಗಳಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರ ರಚನೆಗೆ ವಾರ್ಷಿಕ ೪.೮೬ ಕೋಟಿ ರು. ವೆಚ್ಚವಾಗಲಿತ್ತು. ಕುಂದುಕೊರತೆ ನಿವಾರಣೆ ಮಾಡಲು ಪ್ರಾಧಿಕಾರಕ್ಕೆ ಮ್ಯಾಜಿಸ್ಪ್ರೇಟ್‌ ಅಧಿಕಾರ ನೀಡಲಾಗಿತ್ತು. ಅರ್ಜಿ ವಿಚಾರಣೆ ನಂತರ ತೀರ್ಪು ನೀಡಿ ಕಾನೂನು ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಶಿಫಾರಸು ಮಾಡುವ ಅಧಿಕಾರವೂ ಇತ್ತು.

ಪ್ರಾಧಿಕಾರಕ್ಕಿದ್ದ ಅಧಿಕಾರಗಳೇನು?: ಅರ್ಜಿ ವಿಚಾರಣೆ ಸಂದರ್ಭದಲ್ಲಿ ಆರೋಪಕ್ಕೆ ಗುರಿಯಾದ ಅಧಿಕಾರಿ ಅಥವಾ ವ್ಯಕ್ತಿಯಿಂದ ನಿಯಮ ಉಲ್ಲಂಘನೆ ಅಥವಾ ದುರ್ನಡತೆ ಸಾಬೀತಾದಲ್ಲಿ ಕುಂದುಕೊರತೆ ಪರಿಹಾರ ಆಗುವವರೆಗೆ ಪ್ರತಿ ದಿನಕ್ಕೆ 250 ರು.ನಿಂದ 25 ಸಾವಿರ ರು.ವರೆಗೆ ದಂಡ ವಿಧಿಸಲು ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿತ್ತು. ನೀರು ಪೂರೈಕೆ, ಆರೋಗ್ಯ ನಿರ್ವಹಣೆ, ರಸ್ತೆ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ಪಂಚಾಯಿತಿ ವ್ಯವಸ್ಥೆಯಲ್ಲಿ ತೊಂದರೆಗೊಳಗಾದ ನಾಗರಿಕರು, ಗ್ರಾಮಸ್ಥರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿತ್ತು.

ಆದರೀಗ ಆರ್ಥಿಕ ಇಲಾಖೆ ಸಹಮತಿ ನೀಡದ ಕಾರಣ ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆ ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರ ವ್ಯಾಪ್ತಿಯಲ್ಲಿ ಕೇಳಿಬರುವ ಸಾರ್ವಜನಿಕರ ಕುಂದುಕೊರತೆ ಮತ್ತು ದೂರು ದಾಖಲಿಸಿಕೊಳ್ಳಲು ಪ್ರತ್ಯೇಕ ವಿಭಾಗವಿಲ್ಲ. ಹೀಗಾಗಿಯೇ, ಸಾರ್ವಜನಿಕರ ಅಹವಾಲುಗಳು ದಾಖಲೆ ಆಗುತ್ತವೆಯೇ ವಿನಾ ಇತ್ಯರ್ಥಗೊಳ್ಳುತ್ತಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರು. ವೆಚ್ಚದಲ್ಲಿ ಯೋಜನೆ, ಕಾಮಗಾರಿಗಳು ಅನುಷ್ಠಾನಗೊಳ್ಳುತ್ತವೆ. ಆದರೆ, ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಕೈಗೊಳ್ಳುತ್ತಿರುವ ಹಲವು ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿವೆ. ಅದರಲ್ಲೂ ಬಹುಮುಖ್ಯವಾಗಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಈ ಸಂಬಂಧ ಲೋಕಾಯುಕ್ತದಲ್ಲೂ ಹಲವು ದೂರುಗಳು ದಾಖಲಾಗಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More