ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ ಇತರ 7 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಪಾಸ್‌ಪೋರ್ಟ್ ಹುಡುಕಿಕೊಡುವಂತೆ ಬ್ಯಾಡ್ಮಿಂಟನ್ ಪಟು ಕಶ್ಯಪ್ ಮನವಿ!

ಭಾರತದ ಮಾಜಿ ನಂ.೧ ಬ್ಯಾಡ್ಮಿಂಟನ್ ಪಟು ಪರುಪಳ್ಳಿ ಕಶ್ಯಪ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯ ಕೋರಿದ್ದಾರೆ! ಡೆನ್ಮಾರ್ಕ್ ಓಪನ್‌ನಲ್ಲಿ ಭಾಗವಹಿಸುವ ಸಲುವಾಗಿ ಆಮ್‌ಸ್ಟರ್‌ಡ್ಯಾಂಗೆ ಪ್ರಯಾಣಿಸುವಾಗ ಕಶ್ಯಪ್ ಪಾಸ್‌ಪೋರ್ಟ್ ಕಳೆದುಕೊಂಡರು. "ಗುಡ್‌ ಮಾರ್ನಿಂಗ್ ಮೇಡಮ್, ಕಳೆದ ರಾತ್ರಿ ನಾನು ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನನ್ನ ಪಾಸ್‌ಪೋರ್ಟ್ ಕಳೆದುಕೊಂಡೆ. ನಾನು ಡೆನ್ಮಾರ್ಕ್ ಓಪನ್ ಮಾತ್ರವಲ್ಲದೆ, ಫ್ರೆಂಚ್ ಓಪನ್ ಹಾಗೂ ಜರ್ಮನಿಯಲ್ಲಿನ ಸಾರ್ಲಕ್ಸ್ ಓಪನ್‌ನಲ್ಲಿ ಭಾಗವಹಿಸಬೇಕಿದೆ. ಭಾನುವಾರದಂದ (ಅ.೧೪) ಡೆನ್ಮಾರ್ಕ್ ಟಿಕೆಟ್‌ ನನ್ನ ಬಳಿ ಇದೆ. ಸದ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದು, ನನಗೆ ನೆರವಾಗಿ,'' ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕಶ್ಯಪ್, ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ್ದಾರೆ.

ಅಫ್ಘಾನಿಸ್ತಾನ ಚುನಾವಣಾ ಸಮಾವೇಶದಲ್ಲಿ ಬಾಂಬ್ ಸ್ಪೋಟ; ೧೨ ಜನರ ಸಾವು

ಅಫ್ಘಾನಿಸ್ತಾನ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿ ನಝಿಫಾ ಯೂಸೂಫಿ ಬೆಕ್ ಅವರ ಚುನಾವಣಾ ರ್ಯಾಲಿ ವೇಳೆ ಶನಿವಾರ ಬಾಂಬ್ ಸ್ಟೋಟಗೊಂಡು ೧೨ ಮಂದಿ ಸಾವನ್ನಪ್ಪಿದ್ದು, ೩೦ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಕಲೀಲ್ ಅಸಿರ್ ಹೇಳಿದ್ದಾರೆ. ಅ.೨೦ರಂದು ಅಫ್ಘಾನಿಸ್ತಾನ ಸಂಸತ್ ಚುನಾವಣಾ ದಿನಾಂಕ ನಿಗದಿಯಾಗಿದೆ.

ಕರೆನ್ಸಿಯನ್ನು ವ್ಯಾಪಾರ ಆಯುಧವಾಗಿ ಬಳಸದಿರಲು ಐಎಂಎಫ್ ಸದಸ್ಯರ ವಾಗ್ದಾನ

ತಮ್ಮ ತಮ್ಮ ದೇಶಗಳ ಕರೆನ್ಸಿಯನ್ನು ವ್ಯಾಪಾರ ಆಯುಧವಾಗಿ ಬಳಸದಿರಲು ಐಎಂಎಫ್ ಸದಸ್ಯರು ವಾಗ್ದಾನ ಮಾಡಿದ್ದಾರೆ. ರಫ್ತು ಪ್ರಮಾಣ ಹೆಚ್ಚಿರುವ ದೇಶಗಳು ಹೆಚ್ಚಿನ ಲಾಭ ಮಾಡುವ ಉದ್ದೇಶದಿಂದ ತಮ್ಮ ಕರೆನ್ಸಿ ಮೌಲ್ಯ ತಗ್ಗಿಸುವ ಪ್ರವೃತ್ತಿ ಬಗ್ಗೆ ಅಮೆರಿಕ ಟ್ರೆಷರಿ ಸೆಕ್ರೆಟರಿ ಸ್ಟೀವ್ ನುಚಿನ್ ಆತಂಕ ವ್ಯಕ್ತಪಡಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಈ ಸಂಬಂಧ ಐಎಂಎಫ್ ಸಂಚಾಲನಾ ಸಮಿತಿ ಪ್ರಕಟಣೆ ಹೊರಡಿಸಿದೆ. ಇನ್ನು ಮುಂದೆ ಯಾವುದೇ ವ್ಯಾಪಾರ ತಗಾದೆಗಳನ್ನು ಮಾತುಕತೆ ಮೂಲಕವೇ ಇತ್ಯರ್ಥ ಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ ವಿಶ್ವ ವ್ಯಾಪಾರ ಸಂಘಟನೆಯನ್ನು ಬಲಪಡಿಸಲಾಗುತ್ತದೆ. ಈ ಕ್ರಮಗಳಿಂದ ಸಾಲದ ಮೇಲಿನ ವೆಚ್ಚವು ಗಣನೀಯವಾಗಿ ತಗ್ಗಲಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಐಎಂಎಫ್ ತಿಳಿಸಿದೆ.

ಒಡಿಶಾ ಚಂಡಮಾರುತ: ಗುಹೆಯಲ್ಲಿ ಕಲ್ಲು ಕುಸಿದು 12 ಮಂದಿ ಸಾವು

ತಿತ್ಲಿ ಚಂಡಮಾರುತಕ್ಕೆ ಸಿಲುಕಿರುವ ಒಡಿಶಾದಲ್ಲಿ, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ಗುಹೆಯೊಂದರಲ್ಲಿ ಆಶ್ರಯ ಪಡೆದಿದ್ದವರ ಪೈಕಿ 12 ಮಂದಿ ಬಲಿಯಾಗಿದ್ದಾರೆ. ಚಂಡಮಾರುತದ ತೀವ್ರತೆಗೆ ಮನೆಯ ಚಾವಣಿ ಹಾರಿಹೋದ ಕಾರಣ, ಗಜಪತಿ ಜಿಲ್ಲೆಯಲ್ಲಿರುವ ಗುಹೆಯೊಂದರಲ್ಲಿ ಕೆಲವು ಕುಟುಂಬಗಳು ಆಶ್ರಯ ಪಡೆದಿದ್ದವು. ಆದರೆ ಮಳೆಯ ತೀವ್ರತೆಗೆ ಗುಹೆಯ ಕಲ್ಲು ಕುಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ 12 ಮಂದಿ ಸಾವನಪ್ಪಿದ್ದು, ರಕ್ಷಣಾ ಕಾರ್ಯ ಬಿರುಸಿನಿಂದ ಸಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಬದುಕುಳಿದ 6 ಮಂದಿ ಸುರಕ್ಷಿತವಾಗಿ ತಮ್ಮ ಹಳ್ಳಿಗೆ ವಾಪಸಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಳೆಪೀಡಿತ ಪ್ರದೇಶಗಳಲ್ಲಿ ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿ, ಶೀಘ್ರದಲ್ಲೇ ಪರಿಹಾರ ಮೊತ್ತವನ್ನು ಘೋಷಿಸುವುದಾಗಿ ತಿಳಿಸಿದರು.

‘ಹೌಸ್‌ಫುಲ್‌ 4’ ಚಿತ್ರದಿಂದ ಹೊರನಡೆದ ನಾನಾ

ಲೈಂಗಿಕ ಶೋಷಣೆಯ ಆರೋಪದ ಹಿನ್ನೆಲೆಯಲ್ಲಿ ನಿರ್ದೇಶಕ ಸಾಜಿದ್ ಖಾನ್‌ ‘ಹೌಸ್‌ಫುಲ್‌ 4’ ಚಿತ್ರದ ನಿರ್ದೇಶನದಿಂದ ಹಿಂದೆ ಸರಿದಿದ್ದರು. ಇದೀಗ ಅದೇ ಆರೋಪ ಹೊತ್ತಿರುವ ನಟ ನಾನಾ ಪಾಟೇಕರ್ ಚಿತ್ರತಂಡದಿಂದ ಹೊರನಡೆದಿದ್ದಾರೆ. “ತಮ್ಮಿಂದ ಚಿತ್ರತಂಡಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಎದುರಾಗದಿರಲಿ ಎನ್ನುವುದು ನಾನಾ ಅವರ ನಿಲುವು. ಹಾಗಾಗಿ ಅವರು ಚಿತ್ರದಿಂದ ಹೊರನಡೆದಿದ್ದಾರೆ,” ಎಂದು ಚಿತ್ರದ ನಿರ್ಮಾಪಕರ ಕಚೇರಿ ಮೂಲಗಳು ಹೇಳುತ್ತವೆ. ಈ ಚಿತ್ರದ ಮತ್ತೊಬ್ಬ ನಟ ಅಕ್ಷಯ್ ಕುಮಾರ್, “ಸೂಕ್ತ ತನಿಖೆ ನಡೆದು ಆರೋಪದಲ್ಲಿ ಹುರುಳಿಲ್ಲವೆಂದು ಸಾಬೀತಾಗುವವರೆಗೂ ಸಿನಿಮಾ ಚಿತ್ರೀಕರಣ ಸ್ಥಗಿತಗೊಳಿಸಿ,” ಎಂದಿದ್ದರು.

#MeToo ಅಭಿಯಾನ ಅತಿಯಾಯ್ತು: ಉಷಾ ಉತ್ತುಪ್‌

ಭಾರತದಲ್ಲಿ ನಟಿ ತನುಶ್ರೀ ದತ್ತಾ ಲೈಂಗಿಕ ಆರೋಪದ ಹಿನ್ನಲೆಯಲ್ಲಿ ಚುರುಕುಗೊಂಡ #MeToo ಅಭಿಯಾನ ದೇಶದ ಖ್ಯಾತನಾಮರ ಮುಖವಾಡಗಳನ್ನು ಬಯಲಿಗೆಳೆಯುತ್ತಿರುವ ಹೊತ್ತಿನಲ್ಲಿ ಖ್ಯಾತ ಗಾಯಕಿ ಉಷಾ ಉತ್ತುಪ್‌, ಅಭಿಯಾನ ಅತಿರೇಕಕ್ಕೆ ತಿರುಗಿದೆ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಎಂಟಿವಿ ಇಂಡಿಯಾ ಮ್ಯೂಸಿಕ್‌ನ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಉತ್ತುಪ್‌, ಐಎಎನ್ಎಸ್ ಸಂದರ್ಶನದ ವೇಳೆ ಅಭಿಯಾನದ ಬಗ್ಗೆ ತಮಗಿರುವ ಬೇಸರವನ್ನು ಹೊರಹಾಕಿದ್ದಾರೆ. “ಈ ಅಭಿಯಾನದಲ್ಲಿ ಭಾಗಿಯಾಗಿರುವ ಮಹಿಳೆಯರಿಗೆ ಮಾತ್ರ ನೋವುಂಟಾಗಿಲ್ಲ. ಈ ಅಭಿಯಾನ ಅತಿಯಾಗುತ್ತದೆಂದು ನಾನು ತಿಳಿದಿರಲಿಲ್ಲ,” ಎಂದಿದ್ದಾರೆ.

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದರು. ಪಂದ್ಯದ ಎರಡನೇ ದಿನವಾದ ಇಂದು ಅವರು ಪಾಕಿಸ್ತಾನ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಕೇವಲ ಐದು ರನ್‌ಗಳಿಂದ ಅರ್ಧಶತಕ ವಂಚಿತವಾದ ಕೊಹ್ಲಿ, ಆ ಮೂಲಕ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯಾದ ಕ್ರಿಕೆಟಿಗ ಎನಿಸಿದರು. ೨೭ ರನ್ ಗಳಿಸುತ್ತಿದ್ದಂತೆ ಕೊಹ್ಲಿ ಈ ಸಾಧನೆ ಮಾಡಿದರು. ೨೯ರ ಹರೆಯದ ಕೊಹ್ಲಿ, ೪೨ ಪಂದ್ಯಗಳಿಂದ ೬೯ ಇನ್ನಿಂಗ್ಸ್‌ಗಳಲ್ಲಿ ೬೫.೧೨ರ ಸರಾಸರಿಯಲ್ಲಿ ೪,೨೩೩ ರನ್ ಗಳಿಸಿದ್ದು, ೧೭ ಶತಕ ಮತ್ತು ೯ ಅರ್ಧಶತಕ ಗಳಿಸಿದ್ದಾರೆ. ಮಿಸ್ಬಾ ಉಲ್ ಹಕ್ ೫೬ ಪಂದ್ಯಗಳಿಂದ ೫೧.೩೯ರ ಸರಾಸರಿಯಲ್ಲಿ ೪೨೧೪ ರನ್ ಗಳಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More