#MeToo | ಲೈಂಗಿಕ ದೌರ್ಜನ್ಯ ಆರೋಪಗಳು ಆಧಾರರಹಿತ ಎಂದ ಸಚಿವ ಎಂ ಜೆ ಅಕ್ಬರ್

ಕೇಂದ್ರ ಸಚಿವ ಎಂ ಜೆ ಅಕ್ಬರ್ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ವರ್ಚಸ್ಸನ್ನು ಹಾಳುಗೆಡವಲು ರಂಜನೆ ಬೆರೆಸಿ ಸಾಮಾಜಿಕ ತಾಣಗಳಲ್ಲಿ ಬರೆಯಲಾಗುತ್ತಿದೆ ಎಂಬ ಅಕ್ಬರ್ ಅಭಿಪ್ರಾಯಕ್ಕೆ ಸಂಬಂಧಿಸಿದ ‘ಸ್ಕ್ರಾಲ್’ ವರದಿಯ ಭಾವಾನುವಾದ ಇಲ್ಲಿದೆ

ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಕೇಂದ್ರ ಸಚಿವ ಎಂ ಜೆ ಅಕ್ಬರ್ ಆರೋಪ ನಿರಾಕರಿಸಿದ್ದು, ಆರೋಪ ಹೊರಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. “ದುರ್ನಡತೆಯ ಆರೋಪಗಳು ಸುಳ್ಳು ಮತ್ತು ತಮ್ಮ ವರ್ಚಸ್ಸನ್ನು ಹಾಳುಗೆಡವಲು ರಂಜನೆ ಬೆರೆಸಿ ಸಾಮಾಜಿಕ ತಾಣಗಳಲ್ಲಿ ಬರೆಯಲಾಗುತ್ತಿದೆ,” ಎಂದು ಹೇಳಿದ ಅವರು, ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಆಫ್ರಿಕಾ ಪ್ರವಾಸದಿಂದ ದೇಶಕ್ಕೆ ಮರಳಿದ ಅಕ್ಬರ್ ಮಾಧ್ಯಮಗಳೊಂದಿಗೆ ಮಾತನಾಡುತ್ತ, ತಮ್ಮ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಅಕ್ಬರ್ ಈ ಹಿಂದೆ ‘ದಿ ಟೆಲಿಗ್ರಾಪ್‌’, ‘ಏಷ್ಯನ್ ಏಜ್‌’ ಮತ್ತು ‘ದಿ ಸಂಡೆ ಗಾರ್ಡಿಯನ್‌’ ಮೊದಲಾದ ಸುದ್ದಿಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಈಗ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರೂ ಆಗಿದ್ದಾರೆ. “ಸಾಕ್ಷ್ಯಗಳಿಲ್ಲದೆಯೇ ಆರೋಪ ಹೊರಿಸುವುದು ಕೆಲವರ ನಡುವೆ ವೈರಲ್ ಜ್ವರವಾಗಿ ಪರಿಣಮಿಸಿದೆ. ಪ್ರಕರಣ ಏನೇ ಇದ್ದರೂ, ನಾನೀಗ ಮರಳಿರುವ ಕಾರಣದಿಂದ ವಕೀಲರು ಈ ಆಧಾರವಿಲ್ಲದ ಆರೋಪಗಳ ಬಗ್ಗೆ ಗಮನ ಹರಿಸಿ, ಭವಿಷ್ಯದಲ್ಲಿ ಯಾವ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಿದ್ದಾರೆ,” ಎಂದು ಅಕ್ಬರ್ ಹೇಳಿದ್ದಾರೆ.

ಅಕ್ಬರ್ ಅವರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ರಾಜಕೀಯ ನಂಟಿದೆ ಎಂದು ಸಮರ್ಥಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ೨೦೧೯ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಈ ಆರೋಪಗಳು ಏಕೆ ಬಂದಿವೆ ಎಂದು ಅವರು ಪ್ರಶ್ನಿಸಿದ್ದಾರೆ. “ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಈ ಬಿರುಗಾಳಿ ಏಕೆ ಎದ್ದಿದೆ? ನೀವೇ ನಿರ್ಧರಿಸಬಹುದು. ಈ ಸುಳ್ಳು, ಆಧಾರರಹಿತ ಮತ್ತು ಕಾಲ್ಪನಿಕ ಆರೋಪಗಳು ನನ್ನ ಘನತೆ ಮತ್ತು ಗೌರವಗಳಿಗೆ ಸಾಕಷ್ಟು ನಷ್ಟ ಉಂಟುಮಾಡಿದೆ,” ಎಂದು ಅವರು ಹೇಳಿದ್ದಾರೆ.

ಪತ್ರಕರ್ತೆ ಪ್ರಿಯಾ ರಮಣಿ ಪತ್ರಿಕೆಯೊಂದರಲ್ಲಿ ಲೇಖನವನ್ನು ಬರೆಯುವ ಮೂಲಕ ತಮ್ಮ ವಿರುದ್ಧ ಪ್ರಚಾರಾಭಿಯಾನ ಆರಂಭಿಸಿದ್ದಾರೆ ಎಂದು ಎಂ ಜೆ ಅಕ್ಬರ್ ಹೇಳಿದ್ದಾರೆ. “ಅದು ಸರಿಯಾದ ವಿವರಗಳಲ್ಲ ಎಂದು ತಿಳಿದಿದ್ದ ಕಾರಣ ನನ್ನ ಹೆಸರನ್ನು ಆಕೆ ಪ್ರಸ್ತಾಪಿಸಿರಲಿಲ್ಲ. ಇತ್ತೀಚೆಗೆ ನನ್ನ ಹೆಸರನ್ನು ಏಕೆ ಮೊದಲೇ ಪ್ರಸ್ತಾಪಿಸಲಿಲ್ಲ ಎಂದು ಆಕೆಯನ್ನೇ ಕೇಳಿದಾಗ, 'ಆತ ಏನೂ ಮಾಡದೆ ಇದ್ದ ಕಾರಣ ಆತನ ಹೆಸರು ಪ್ರಸ್ತಾಪಿಸಿರಲಿಲ್ಲ' ಎಂದು ಆಕೆಯೇ ಉತ್ತರಿಸಿದ್ದಳು,” ಎಂದು ಅಕ್ಬರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ವರ್ಷ ‘ವೋಗ್ ಇಂಡಿಯಾ’ದಲ್ಲಿ ಪ್ರಿಯಾ ರಮಣಿ ಸಂಪಾದಕರೊಬ್ಬರ ಜೊತೆಗಿನ ತಮ್ಮ ಕೆಟ್ಟ ಅನುಭವವನ್ನು ಬರೆದುಕೊಂಡಿದ್ದರು. ಉದ್ಯೋಗ ಸಂದರ್ಶನಕ್ಕಾಗಿ ಮುಂಬೈನ ದುಬಾರಿ ಹೊಟೇಲೊಂದಕ್ಕೆ ಕರೆದ ಸಂಪಾದಕ, ಸಂದರ್ಶನ ಕೊಠಡಿಯ ಬದಲು ತನ್ನ ಕೋಣೆಗೆ ಕರೆಸಿಕೊಂಡಿದ್ದರು ಎಂದು ಪ್ರಿಯಾ ವಿವರಿಸಿದ್ದರು. “ತಾನು ೨೩ನೇ ವಯಸ್ಸಿನಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಿದಾಗ ೪೩ ವರ್ಷದ ಸಂಪಾದಕ ತನ್ನ ಹೊಟೇಲ್ ಕೋಣೆಯಲ್ಲಿ ಮದ್ಯ ಸೇವನೆಗೆ ಆಹ್ವಾನವಿತ್ತಿದ್ದರು. ಮದ್ಯ ಬೇಡ ಎಂದು ಹೇಳಿದಾಗ ತನ್ನೆದುರೇ ಸ್ವತಃ ವೋಡ್ಕಾ ಕುಡಿದಿದ್ದರು. ನನಗಾಗಿ ಹಳೇ ಹಿಂದಿ ಹಾಡುಗಳನ್ನು ಹಾಡಿದ್ದಲ್ಲದೆ, ಒಂದು ಹಂತದಲ್ಲಿ ತನ್ನ ಪಕ್ಕವೇ ಬಂದು ಕುಳಿತಿದ್ದರು,” ಎಂದು ಪ್ರಿಯಾ ರಮಣಿ ತಮ್ಮ ಲೇಖನದಲ್ಲಿ ವಿವರಿಸಿದ್ದರು.

ಪ್ರಿಯಾ ರಮಣಿ ಇತ್ತೀಚೆಗೆ ಆ ಸಂಪಾದಕ ಎಂ ಜೆ ಅಕ್ಬರ್ ಎಂದು ಟ್ವೀಟ್‌ ಮಾಡಿದ ನಂತರ ಇತರ ಹಲವು ಪತ್ರಕರ್ತೆಯರು ಅವರ ಜೊತೆಗಿನ ತಮ್ಮ ಕಹಿ ಅನುಭವವನ್ನು ಮಾಧ್ಯಮಗಳು ಮತ್ತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಶುಮಾ ರಹಾ, ಗಜಾಲಾ ವಹಾಬದ್ ಮತ್ತು ಶುತಪ ಪೌಲ್ ಮೊದಲಾದವರು ಎಂ ಜೆ ಅಕ್ಬರ್ ಹೊಟೇಲ್‌ ಕೋಣೆಗಳಲ್ಲಿ ಸಂದರ್ಶನಗಳನ್ನು ಮಾಡುವುದು ಅಥವಾ ತಮ್ಮ ಕೋಣೆಗೆ ಏಕಾಂತದಲ್ಲಿ ಮಹಿಳಾ ಪತ್ರಕರ್ತೆಯರನ್ನು ಕರೆದು ಅಸಭ್ಯವಾಗಿ ವರ್ತಿಸಿರುವ ವಿವರಗಳನ್ನು ನೀಡಿದ್ದರು. “ಈ ಪತ್ರಕರ್ತೆಯರೆಲ್ಲರೂ ಏನೂ ಆಗದೆ ಇದ್ದರೂ ಬಹಳ ಅನ್ಯಾಯವಾಗಿದೆ ಎಂದು ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ,” ಎಂದು ಎಂ ಜೆ ಅಕ್ಬರ್ ಹೇಳಿದ್ದಾರೆ. “ಶುತಪಾ ಪೌಲ್ 'ವ್ಯಕ್ತಿ ನನ್ನ ದೇಹವನ್ನು ಎಂದೂ ಮುಟ್ಟಿಲ್ಲ' ಎನ್ನುತ್ತಾಳೆ. ಶುಮಾ ರಹಾ 'ವಾಸ್ತವದಲ್ಲಿ ಆತ ಏನೂ ಮಾಡಿಲ್ಲ' ಎನ್ನುತ್ತಾಳೆ. ಅಂಜು ಭಾರ್ತಿ ‘ನಾನು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪಾರ್ಟಿ ಮಾಡಿದ್ದೇನೆ’ ಎನ್ನುತ್ತಾಳೆ. ನನಗೆ ಈಜಲೇ ಬರುವುದಿಲ್ಲ,” ಎಂದು ಅಕ್ಬರ್ ಸಮರ್ಥನೆ ನೀಡಿದ್ದಾರೆ.

ಗಜಾಲಾ ವಹಾಬ್ ಅವರ ಮೇಲೆ ೨೧ ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ತೋರಿದ ಆರೋಪದ ಬಗ್ಗೆಯೂ ಅಕ್ಬರ್‌, ತಮ್ಮ ವರ್ಚಸ್ಸನ್ನು ಹಾಳುಗೆಡವುವ ಪ್ರಯತ್ನ ಎಂದು ಸ್ಪಷ್ಟನೆ ನೀಡಿದ್ದಾರೆ. “ನಾನು ಗಜಾಲಾ ವಹಾಬ್ ಜೊತೆ ‘ದಿ ಏಷ್ಯನ್‌ ಏಜ್‌’ನಲ್ಲಷ್ಟೇ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಸಂಪಾದಕೀಯ ಮಂಡಳಿ ಸಣ್ಣ ಹಾಲ್‌ವೊಂದರಲ್ಲಿ ಕೆಲಸ ಮಾಡುತ್ತಿತ್ತು. ಆ ಸಂದರ್ಭದಲ್ಲಿ ನಾನು ಸಣ್ಣ ಕೋಣೆಯೊಳಗೆ ಕುಳಿತಿರುತ್ತಿದ್ದೆ. ಆ ಕೋಣೆಗೆ ಪ್ಲೈವುಡ್ ಮತ್ತು ಗ್ಲಾಸ್‌ಗಳ ಗೋಡೆಗಳಷ್ಟೇ ಇದ್ದವು. ಎರಡು ಅಡಿಗಳಲ್ಲೇ ಇತರರ ಮೇಜು ಮತ್ತು ಕುರ್ಚಿಗಳಿದ್ದವು. ಆ ಸಣ್ಣ ಜಾಗದಲ್ಲಿ ಏನೋ ಆಗಿದೆ ಎಂದು ನಂಬುವುದೂ ಸಾಧ್ಯವಿಲ್ಲ. ಈ ಎಲ್ಲ ಆರೋಪಗಳು ಪ್ರಚೋದಿತ ಮತ್ತು ಆಧಾರರಹಿತ,” ಎಂದು ಅಕ್ಬರ್ ಹೇಳಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಕೇಂದ್ರ ಸಚಿವ ಅಕ್ಬರ್ ಕುತ್ತಿಗೆ ಬಿಗಿಯುತ್ತಿದೆ #MeToo ಕುಣಿಕೆ

“ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದರೂ ವಹಾಬ್ ಮತ್ತು ರಮಣಿ ನನ್ನ ಜೊತೆ ದೀರ್ಘಕಾಲ ಕೆಲಸ ಮಾಡಿದ್ದಾರೆ. ಹಾಗೆ ಕೆಲಸ ಮಾಡಿದ್ದರೆಂದರೆ, ಅವರಿಗೆ ಯಾವುದೇ ಅಹಿತಕರ ಅನುಭವ ಅಥವಾ ಅನನುಕೂಲ ಆಗಿರಲಿಲ್ಲ,” ಎಂದು ಅಕ್ಬರ್ ಹೇಳಿದ್ದಾರೆ. “ದಶಕಗಳ ಕಾಲ ಅವರು ಸುಮ್ಮನೆ ಇರಲು ಮುಖ್ಯ ಕಾರಣವೆಂದರೆ ನಾನು ಅವರಿಗೆ ಏನೂ ಮಾಡಿರಲಿಲ್ಲ,” ಎಂಬುದು ಅಕ್ಬರ್ ಸಮರ್ಥನೆ.

ಈ ನಡುವೆ ಕಾಂಗ್ರೆಸ್, ಸಿಪಿಐ (ಎಂ), ಸಮಾಜವಾದಿ ಪಕ್ಷಗಳು, ಎಂ ಜೆ ಅಕ್ಬರ್ ತಮ್ಮ ಮೇಲಿನ ಆರೋಪಗಳಿಗೆ ವಿವರಣೆ ನೀಡಬೇಕು ಮತ್ತು ರಾಜಿನಾಮೆ ಕೊಡಬೇಕು ಎಂದು ಹೇಳಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಅಕ್ಬರ್‌ರನ್ನು ತಮ್ಮ ಸ್ಥಾನದಿಂದ ತೆಗೆದುಹಾಕುವಂತೆ ಕೇಳಿಕೊಂಡಿದ್ದಾರೆ. ತಮ್ಮ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿ ಅಕ್ಬರ್ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲಿಲ್ಲ.

ಅಕ್ಬರ್ ಮೇಲೆ ಕಳೆದೊಂದು ವಾರದಿಂದ ಹಲವು ಆರೋಪಗಳು ಕೇಳಿಬಂದರೂ ಬಿಜೆಪಿ ಮೌನವಾಗಿತ್ತು. ಬಿಜೆಪಿಯ ಮಹಿಳಾ ಸಚಿವರು, “ಈ ಆರೋಪಗಳ ಬಗ್ಗೆ ಸ್ವತಃ ಅಕ್ಬರ್ ಅವರೇ ಉತ್ತರಿಸಲಿದ್ದಾರೆ,” ಎಂದು ಹೇಳುವ ಮೂಲಕ ಪ್ರತಿಕ್ರಿಯೆ ನೀಡುವುದರಿಂದ ತಪ್ಪಿಸಿಕೊಂಡಿದ್ದರು.

ಈ ನಡುವೆ, ಅಕ್ಬರ್ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಹಲವು ಪತ್ರಕರ್ತರು ಮತ್ತು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಟ್ವೀಟ್ ಮಾಡಿ, “ಎಂ ಜೆ ಅಕ್ಬರ್ ಅವರ ಮೇಲೆ ಕ್ರಿಮಿನಲ್ ಸ್ವರೂಪದ ಆರೋಪಗಳು ಬಂದಿವೆ. ಮಹಿಳೆಯ ಆಕ್ರೋಶವನ್ನು ಭಯ ಮತ್ತು ಸಂಶಯದ ಅಡಿಯಲ್ಲಿ ಕಟ್ಟಿಹಾಕಲು ಸಾಧ್ಯವಾಗದು. ಎಂ ಜೆ ಅಕ್ಬರ್‌ರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಇಲ್ಲದೆ ಇದ್ದಲ್ಲಿ ರಕ್ಷಣೆ, ವಿದೇಶಾಂಗ ಸಚಿವೆಯರಾಗಿ ಮಹಿಳೆಯರನ್ನು ನೇಮಿಸಿರುವುದು ಅರ್ಥಹೀನವಾಗಲಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಜೆಎನ್‌ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್, ಪತ್ರಕರ್ತೆ ಸಾಗರಿಕಾ ಘೋಷ್ ಮೊದಲಾದವರು ಎಂ ಜೆ ಅಕ್ಬರ್‌ರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More