#MeToo | ಸಚಿವ ಅಕ್ಬರ್ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾದ ಪತ್ರಕರ್ತೆಯರು

ಐವರು ಮಹಿಳಾ ಪತ್ರಕರ್ತರು ಕೇಂದ್ರ ಸಚಿವ ಎಂ ಜೆ ಅಕ್ಬರ್ ಕುರಿತ ತಮ್ಮ ಹೇಳಿಕೆಯಿಂದ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣವನ್ನು ಅಕ್ಬರ್ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಈ ಕುರಿತ ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿಯ ಭಾವಾನುವಾದ ಇಲ್ಲಿದೆ

ಕೇಂದ್ರ ಸಚಿವ ಎಂ ಜೆ ಅಕ್ಬರ್ ಲೈಂಗಿಕ ದುರ್ನಡತೆ ಮತ್ತು ದೌರ್ಜನ್ಯ ನಡೆಸಿರುವ ಆರೋಪವನ್ನು ಭಾನುವಾರ ಮಾಧ್ಯಮ ಹೇಳಿಕೆಯ ಮೂಲಕ ನಿರಾಕರಿಸಿದ್ದರು. ಅಲ್ಲದೆ, ತಮ್ಮ ಮೇಲೆ ರಾಜಕೀಯ ಪ್ರೇರಿತವಾಗಿ #MeToo ದಾಳಿ ನಡೆಯುತ್ತಿದೆ ಎಂದೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಆರೋಪ ಹೊರಿಸಿದ್ದ ಐವರು ಮಹಿಳಾ ಪತ್ರಕರ್ತರು ತಮ್ಮ ಹೇಳಿಕೆಯಿಂದ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಕ್ಬರ್ ಅವರು ಒಟ್ಟಾರೆ ಪ್ರಕರಣವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಪತ್ರಕರ್ತರು ನಿರಾಶೆ ವ್ಯಕ್ತಪಡಿಸಿದ್ದರೂ, ಇದರಿಂದ ಅಚ್ಚರಿಯಾಗಿಲ್ಲ ಎಂದೂ ಹೇಳಿದ್ದಾರೆ.

‘ದಿ ಏಷ್ಯನ್ ಏಜ್‌’ನ ಸ್ಥಾನಿಕ ಸಂಪಾದಕರಾದ ಸುಪರ್ಣಾ ಶರ್ಮಾ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, “ಎರಡು ಪ್ರಕರಣಗಳಿಗೆ ಸಾಕ್ಷಿಯಾಗಿರುವ ನನ್ನ ಅಭಿಪ್ರಾಯವನ್ನು ನಾನು ಬದಲಿಸುವುದಿಲ್ಲ. ಒಂದು ಪ್ರಕರಣದಲ್ಲಿ ಅವರು ನನ್ನ ಒಳಉಡುಪನ್ನು ಬಿಚ್ಚಲು ಪ್ರಯತ್ನಿಸಿದ್ದರು. ಮತ್ತೊಂದು ಪ್ರಕಣದಲ್ಲಿ ನನ್ನ ಎದೆಯ ಕಡೆಗೆ ದಿಟ್ಟಿಸಿ ನೋಡಿರುವುದು. ಕಚೇರಿಯಲ್ಲಿ ಇತರ ಮಹಿಳೆಯರ ಜೊತೆಗೂ ಅವರು ಅದೇ ವರ್ತನೆ ತೋರಿಸಿರುವ ಬಗ್ಗೆಯೂ ನಾನು ಸಾಕ್ಷಿ ನುಡಿಯಬಲ್ಲೆ. ಅಕ್ಬರ್ ಅವರ ಪ್ರತಿಕ್ರಿಯೆಗೆ ನಿರಾಶೆಯಾಗಿದೆ, ಆದರೆ ಅಚ್ಚರಿಯಾಗಿಲ್ಲ. ಇದು ಬಹಳ ಧೀರ್ಘ ಹೋರಾಟವಾಗಲಿದೆ. ಬಹಳಷ್ಟು ಪ್ರಕರಣಗಳಲ್ಲಿ ಮುಂದಿನ ಹಂತ ಕಾನೂನು ಹೋರಾಟವಾಗಿರುತ್ತದೆ,” ಎಂದು ಹೇಳಿದ್ದಾರೆ.

ಎಂ ಜೆ ಅಕ್ಬರ್ ಭಾನುವಾರ ನೀಡಿದ ಹೇಳಿಕೆಯಲ್ಲಿ, ತಮ್ಮ ವಕೀಲರು ಈ ಆರೋಪಗಳನ್ನು ನಿಭಾಯಿಸಲಿದ್ದಾರೆ ಎಂದು ಹೇಳಿದ್ದರು. ಸುಪರ್ಣಾ ಶರ್ಮಾ ಅವರೂ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತಮ್ಮ ಸ್ನೇಹಿತರ ಜೊತೆಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. “ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಈ ಬಿರುಗಾಳಿ ಏಕೆ ಎದ್ದಿದೆ? ಏನಾದರೂ ಕಾರ್ಯೋದ್ದೇಶ ಇದರ ಹಿಂದೆ ಇದೆಯೇ?” ಎಂಬ ಅಕ್ಬರ್ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ಮೂಲದ ಪತ್ರಕರ್ತೆ ಮಾಜ್ಲೀ ಡೆ ಪು ಕ್ಯಾಂಪ್ (೩೦ ವರ್ಷ), “ನಾನು ಭಾರತೀಯ ಪ್ರಜೆಯಲ್ಲ. ನನಗೆ ಮತದಾನದ ಹಕ್ಕೂ ಇಲ್ಲ. ನನ್ನ ಬಳಿ ರಾಜಕೀಯ ಉದ್ದೇಶವೂ ಇಲ್ಲ. ಅಲ್ಲದೆ, ನನ್ನ ಬಳಿ ಪತ್ರದ ಸಾಕ್ಷ್ಯವೂ ಇದೆ. ನನ್ನ ತಂದೆ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಅಕ್ಬರ್‌ಗೆ ಇಮೇಲ್ ಮಾಡಿ ಪ್ರಶ್ನಿಸಿದ್ದರು. ಅದಕ್ಕೆ ಅಕ್ಬರ್ ಪ್ರತಿಕ್ರಿಯಿಸಿದ್ದರು. ಆ ಸಾಕ್ಷಿ ನನ್ನ ಬಳಿ ಇದೆ. ಅವರ ಹೇಳಿಕೆಯಿಂದ ನಿರಾಶೆಯಾಗಿದ್ದರೂ, ಅಚ್ಚರಿಯಾಗಿಲ್ಲ. ಆದರೆ, ನಾನು ಹೇಳಿದ ವಿವರಗಳು ನಿಜ ಎನ್ನುವ ಸಮಾಧಾನ ನನಗೆ ಇದೆ,” ಎಂದು ಹೇಳಿದ್ದಾರೆ. ೨೦೦೭ರಲ್ಲಿ ‘ದಿ ಏಷ್ಯನ್ ಏಜ್‌’ನಲ್ಲಿ ಇಂಟರ್ನಿಯಾಗಿದ್ದಾಗ ಎಂ ಜೆ ಅಕ್ಬರ್ ಒತ್ತಡಪೂರ್ವಕ ಆಕೆಯನ್ನು ಚುಂಬಿಸಿದ್ದಾಗಿ ಪು ಕ್ಯಾಂಪ್ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ : #MeToo | ಲೈಂಗಿಕ ದೌರ್ಜನ್ಯ ಆರೋಪಗಳು ಆಧಾರರಹಿತ ಎಂದ ಸಚಿವ ಎಂ ಜೆ ಅಕ್ಬರ್

ಅಕ್ಬರ್ ಅವರು ಸಂದರ್ಶನಕ್ಕೆ ಕರೆದು ಅನುಚಿತವಾಗಿ ನಡೆದುಕೊಂಡಿರುವ ಬಗ್ಗೆ ಪ್ರಿಯಾ ರಮಣಿ ೨೦೧೭ರ ಅಕ್ಟೋಬರ್‌ನಲ್ಲಿ ‘ವೋಗ್ ಇಂಡಿಯಾ’ದಲ್ಲಿ ಬರೆದುಕೊಂಡಿದ್ದರು. ಇದೀಗ ಎಂ ಜೆ ಅಕ್ಬರ್ ಅವರು ತಾವು ನಿರ್ದೋಷಿ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾ ರಮಣಿ, “ಅಕ್ಬರ್ ತಮ್ಮ ಮೇಲಿನ ಎಲ್ಲ ಆರೋಪಗಳನ್ನೂ ಪಕ್ಕಕ್ಕೆ ತಳ್ಳುವ ಪ್ರಯತ್ನದಲ್ಲಿದ್ದಾರೆ. ಅಕ್ಬರ್ ವಿರುದ್ಧ ಯಾವುದೇ ಪಿತೂರಿ ಇಲ್ಲ. ನಮ್ಮಲ್ಲಿ ಯಾರೂ ಅವರಂತೆ ರಾಜಕೀಯ ಉದ್ದೇಶಗಳನ್ನು ಹೊಂದಿಲ್ಲ. ನಾವು ನಮ್ಮ ಖಾಸಗಿ ಮತ್ತು ವೃತ್ತಿಪರ ಜೀವನವನ್ನು ಪಣಕ್ಕಿಟ್ಟು ಸತ್ಯವನ್ನು ಬಹಿರಂಗಪಡಿಸುತ್ತಿದ್ದೇವೆ. ಯಾವುದೇ ಮಾನನಷ್ಟ ಮೊಕದ್ದಮೆಯ ವಿರುದ್ಧ ಸತ್ಯವೇ ಅತ್ಯುತ್ತಮ ರಕ್ಷಣೆಯಾಗಿರುತ್ತದೆ. ಅವರ ಕಾನೂನು ಕ್ರಮದ ಬಗ್ಗೆ ಚಿಂತೆಯಾಗಿಲ್ಲ,” ಎಂದು ಹೇಳಿದ್ದಾರೆ.

ಅಕ್ಬರ್ ಜೊತೆಗೆ ೧೯೯೫-೧೯೯೭ವರೆಗೆ ಕೆಲಸ ಮಾಡಿರುವ ಹವ್ಯಾಸಿ ಪತ್ರಕರ್ತ ಕನಿಕಾ ಗೆಹ್ಲಾಟ್‌ ಅವರೂ ಒಟ್ಟಾರೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ನಾನು ಹೇಳಿರುವ ವಿವರಗಳಿಂದ ಹಿಂಜರಿಯುವುದಿಲ್ಲ,” ಎಂದು ಹೇಳಿದ್ದಾರೆ ಕನಿಕಾ. ಶುತಪಾ ಪೌಲ್ ಅವರೂ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, “ಒತ್ತಡಗಳಿಗೆ ಬಗ್ಗುವುದಿಲ್ಲ. ಅಕ್ಬರ್ ಪ್ರತಿಕ್ರಿಯೆಯಿಂದ ಆಘಾತವಾಗಿದೆ ಮತ್ತು ನಿರಾಶೆಯಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ನಮ್ಮೆಲ್ಲರನ್ನೂ ಬಳಸಿಕೊಳ್ಳುವ ಪ್ರಯತ್ನವನ್ನು ಅವರು ನಡೆಸಿರುವ ಬಗ್ಗೆ ಸಾಕಷ್ಟು ಸಾಕ್ಷಗಳಿವೆ. ನಮ್ಮ ಹೋರಾಟ ಪ್ರತೀ ಮಹಿಳೆಯ ಹೋರಾಟ, ನ್ಯಾಯಕ್ಕಾಗಿನ ಹೋರಾಟ. ಕಚೇರಿ ಪರಿಸರದಲ್ಲಿ ಮತ್ತು ನಿತ್ಯಜೀವನದಲ್ಲಿ ನಮ್ಮ ಘನತೆಗೆ ಧಕ್ಕೆ ತಂದಿರುವ ವಿರುದ್ಧ ಹೋರಾಟ,” ಎಂದು ಶುತಪ ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More