#MeToo | ಭಾರತದಲ್ಲಿ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾದ ಪ್ರಮುಖರ ಪಟ್ಟಿ

ಹಾಲಿವುಡ್ ಸಿನಿಮಾ ವಲಯದಲ್ಲಿ ಹುಟ್ಟಿಕೊಂಡ #MeToo ಅಭಿಯಾನದ ಪ್ರಭಾವ ಭಾರತದಲ್ಲಿ ಮುಂದುವರಿದಿದ್ದು, ಸಿನಿಮಾ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ದಿನಕ್ಕೊಂದರಂತೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿವೆ. ಇಲ್ಲಿವರೆಗೆ ಕೇಳಿಬಂದ ಲೈಂಗಿಕ ಆರೋಪ ಹಾಗೂ ಪರಿಣಾಮಗಳ ಪಟ್ಟಿ ಇಲ್ಲಿದೆ

ಸಿನಿಮಾ

 • ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಹತ್ತು ವರ್ಷಗಳ ಹಿಂದೆ ‘ಹಾರ್ನ್ ಓಕೆ ಪ್ಲೀಸ್‌’ ಚಿತ್ರೀಕರಣದ ವೇಳೆ ಅನುಚಿತವಾಗಿ ನಡೆದುಕೊಂಡಿದ್ದರು ಎನ್ನುವುದು ಆರೋಪ. ಪರಿಣಾಮ: ನಾನಾ ಪಾಟೇಕರ್ ಜೊತೆಗೆ ಚಿತ್ರ ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಾಮಿ ಸಿದ್ದಿಖಿ ಮತ್ತು ಡ್ಯಾನ್ಸ್ ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ಎಫ್ಐಆರ್ ದಾಖಲು.
 • ಹಿಂದಿ ಕಿರುತೆರೆ ಚಿತ್ರಕತೆಗಾರ್ತಿ, ನಿರ್ಮಾಪಕಿ ವಿಂತಾ ನಂದಾ ಅವರಿಂದ ನಟ ಅಲೋಕ್‌ ನಾಥ್‌ ವಿರುದ್ಧ ಆರೋಪ. 20 ವರ್ಷಗಳ ಹಿಂದೆ ತಮ್ಮ ಮೇಲೆ ನಟ ಅತ್ಯಾಚಾರ ಎಸಗಿದ್ದರು ಎಂಬುದು ಆರೋಪ. ಪರಿಣಾಮ: ಸಿನಿಮಾ ಮತ್ತು ಟೀವಿ ಆರ್ಟಿಸ್ಟ್ಸ್‌ ಅಸೋಸಿಯೇಷನ್‌ನಿಂದ (CINTAA) ಅಲೋಕ್‌ ನಾಥ್‌ ಅವರಿಗೆ ಶೋಕಾಸ್ ನೋಟಿಸ್.‌
 • ಹಿನ್ನಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಅನಾಮಿಕ ಗಾಯಕಿಯೊಬ್ಬರ ಬರಹವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ ಕನ್ನಡದ ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್ ವಿರುದ್ಧ ಆರೋಪ ಮಾಡಿದ್ದರು. ಪರಿಣಾಮ: ಆರೋಪ ಒಪ್ಪಿಕೊಂಡ ರಘು ದೀಕ್ಷಿತ್‌ ಕ್ಷಮೆ ಯಾಚಿಸಿದ್ದಾರೆ.
 • ನಟಿ ಸಲೋನಿ ಚೋಪ್ರಾ ಅವರು ನಿರ್ದೇಶಕ ಸಾಜಿದ್ ಖಾನ್‌ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಸಾಜಿದ್ ಮಾತ್ರವಲ್ಲದೆ, ನಟ ಝೈನ್‌ ದುರಾನಿ ಮತ್ತು ಚಿತ್ರನಿರ್ದೇಶಕ ವಿಕಾಸ್ ಬೆಹ್ಲ್‌ ಅವರ ವಿರುದ್ಧವೂ ಸಲೋನಿ ಆರೋಪ ಮಾಡಿದ್ದಾರೆ. ಪತ್ರಕರ್ತೆ ಕರಿಷ್ಮಾ ಉಪಾಧ್ಯ ಅವರೂ ಸಾಜಿದ್ ಮೇಲೆ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದಾರೆ. ಪರಿಣಾಮ: ‘ಹೌಸ್‌ಫುಲ್’ ಚಿತ್ರ ನಿರ್ದೇಶಕ ಪಟ್ಟದಿಂದ ಕೆಳಗಿಳಿದ ಸಾಜಿದ್
 • ಸಿನಿಮಾ ಬರಹಗಾರ್ತಿ ಮಹಿಮಾ ಕುಕ್ರೇಜಾ ಅವರಿಂದ ಬಾಲಿವುಡ್‌ನ ಹಿರಿಯ ಚಿತ್ರನಿರ್ದೇಶಕ ಸುಭಾಷ್‌ ಘೈ ವಿರುದ್ಧ ಆರೋಪ. ಸಂತ್ರಸ್ತೆಯ ಮಹಿಳೆಯ ಪರವಾಗಿ ಮಹಿಲಾ ಆಕೆಯ ಬರಹವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
 • ನಟಿ ಕಂಗನಾ ರನೌತ್ ಅವರು ನಿರ್ದೇಶಕ ವಿಕಾಸ್ ಬೆಹ್ಲ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರೊಸಿದ್ದರು. ಪರಿಣಾಮ: ಭಾರತೀಯ ಸಿನಿಮಾ ಮತ್ತು ಟಿವಿ ನಿರ್ದೇಶಕರ ಸಂಘಟನೆ ವಿಕಾಸ್ ಬೆಹ್ಲ್‌ಗೆ ಶೋಕಾಸ್ ನೋಟಿಸ್.
 • ಪತ್ರಕರ್ತೆ ಸಂಧ್ಯಾ ಮೆನನ್ ಮೂಲಕ ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ತಮಿಳು ಚಿತ್ರಸಾಹಿತಿ ವೈರಮುತ್ತು ವಿರುದ್ಧ ಆರೋಪ ಮಾಡಿದ್ದರು. ಅಂತೆಯೇ, ಗಾಯಕಿ ಚಿನ್ಮಯಿ ಶ್ರೀಪಾದ ಕೂಡ ಆರೋಪ ಹೊರಿಸಿದ್ದಾರೆ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
 • ನಟಿ ತೆಸ್‌ ಜೋಸೆಫ್‌ ಅವರಿಂದ ಮಲಯಾಳಂ ನಟ ಹಾಗೂ ಆಡಳಿತಾರೂಢ ಸಿಪಿಐ (ಎಂ) ಶಾಸಕ ಮುಕೇಶ್‌ ಕುಮಾರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಮಾಧ್ಯಮ

 • ಪತ್ರಕರ್ತೆ ಶೀನಾ, ಜನಪ್ರಿಯ ಲೇಖಕ ಚೇತನ್ ಭಗತ್ ಮಹಿಳೆಯೊಬ್ಬರ ಜೊತೆಗೆ ಅನುಚಿತವಾಗಿ ಮಾತುಕತೆ ನಡೆಸಿರುವ ಸ್ಕ್ರೀನ್‌ ಶಾಟ್ ಟ್ವೀಟ್ ಮಾಡಿ ಅನುಚಿತ ವರ್ತನೆ ಆರೋಪ ಮಾಡಿದ್ದರು. ಪರಿಣಾಮ: ಮಾತುಕತೆ ನಡೆದದ್ದನ್ನು ಒಪ್ಪಿಕೊಂಡ ಚೇತನ್ ಭಗತ್ ಕ್ಷಮೆ ಯಾಚಿಸಿದ್ದಾರೆ.
 • ಪತ್ರಕರ್ತೆ ಸಂಧ್ಯಾ ಮೆನನ್ ಸೇರಿದಂತೆ ಏಳು ಮಹಿಳೆಯರಿಂದ ‘ಟೈಮ್ಸ್ ಆಫ್ ಇಂಡಿಯಾ’ದ ಹೈದರಾಬಾದ್‌ನ ಸ್ಥಾನಿಕ ಸಂಪಾದಕ ಕೆ ಆರ್ ಶ್ರೀನಿವಾಸ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ. ಪರಿಣಾಮ: ಕೆ ಆರ್ ಶ್ರೀನಿವಾಸ್, “ಟೈಮ್ಸ್ ಆಫ್ ಇಂಡಿಯಾ ನನ್ನ ಮೇಲಿನ ಆರೋಪಗಳ ವಿಚಾರಣೆ ನಡೆಸುವುದಾಗಿ ಹೇಳಿದೆ. ಇದಕ್ಕಾಗಿ ಒಂದು ಸಮಿತಿಯನ್ನೂ ರಚಿಸಿದೆ. ನಾನು ವಿಚಾರಣೆಗೆ ಸಿದ್ಧ,” ಎಂದಿದ್ದು, ಆರೋಪ ಮುಕ್ತನಾಗುವವರೆಗೂ ಶ್ರೀನಿವಾಸ್ ಅವರಿಗೆ ಆಡಳಿತಾತ್ಮಕ ರಜೆ ನೀಡಲಾಗಿದೆ.
 • ಪತ್ರಕರ್ತೆ ಸಂಧ್ಯಾ ಅವರು ಸರಣಿ ಆರೋಪ ಮಾಡಿದ್ದು, ‘ಡಿಎನ್‌ಎ’ ಮಾಜಿ ಸಂಪಾದಕ ಗೌತಮ್ ಅಧಿಕಾರಿ ಹಾಗೂ ‘ಹಿಂದೂಸ್ತಾನ್ ಟೈಮ್ಸ್’ ಸಹಾಯಕ ಸಂಪಾದಕರಾಗಿದ್ದ ಮನೋಜನ್ ರಾಮಚಂದ್ರನ್ ಅವರೂ ಅಹಿತಕರವಾಗಿ ನಡೆದುಕೊಂಡಿರುವುದಾಗಿ ಆರೋಪಿಸಿದ್ದಾರೆ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
 • ಪತ್ರಕರ್ತೆ ಪೂರ್ವ ಜೋಶಿ ಅವರು ಲೇಖಕ ಹಾಗೂ ಪತ್ರಕರ್ತ ಕಿರಣ್ ನಗರ್‌ಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
 • ಪತ್ರಕರ್ತೆ ಅನೂ ಭುಯಾನ್ ಅವರು ‘ಬಿಸಿನೆಸ್ ಸ್ಟಾಂಡರ್ಡ್’ ವರದಿಗಾರ ಮಾಯಾಂಕ್ ಜೈನ್ ವಿರುದ್ಧ ಆರೋಪ ಹೊರಿಸಿದ್ದಾರೆ. ಅಲ್ಲದೆ, ಪತ್ರಕರ್ತೆ ಪ್ರಿಯಾಂಕಾ ಬನ್ಸಲ್ ಅವರೂ ಮಾಯಾಂಕ್ ಜೈನ್ ವಿರುದ್ಧ ಅದೇ ಆರೋಪ ಹೊರಿಸಿದ್ದಾರೆ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
 • ‘ಹಿಂದೂಸ್ತಾನ್ ಟೈಮ್ಸ್’ ರಾಜಕೀಯ ಸಂಪಾದಕ ಪ್ರಶಾಂತ್ ಝಾ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ. ಪರಿಣಾಮ: ರಾಜಿನಾಮೆ.
 • ಕೇಂದ್ರ ಸಚಿವ ಎಂ ಜೆ ಅಕ್ಬರ್ ಮೇಲೆ ಹತ್ತು ಮಂದಿ ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು, ಪ್ರಮುಖವಾಗಿ ‘ಫೋರ್ಸ್‌’ ಮ್ಯಾಗಜೀನ್‌ನ ಕಾರ್ಯಕಾರಿ ಸಂಪಾದಕಿ ಗಜಾಲಾ ವಹಾಬ್ ಗಂಭೀರ ಆರೋಪ ಮಾಡಿದ್ದಾರೆ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
 • ಲೇಖಕ ಸುಹೇಲ್‌ ಸೇಠ್ ವಿರುದ್ಧ ಲೇಖಕಿ ಹಾಗೂ ಯೋಗಪಟು ಇರಾ ತ್ರಿವೇದಿ ಲೈಂಗಿಕ ದೌರ್ಜನ್ಯ ಆರೋಪ ಹೊರಸಿದ್ದಾರೆ. ಪರಿಣಾಮ: ಅಧಿಕೃತ ದೂರುಗಳು ಬಾರದ ಕಾರಣ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More