ನಿಫ್ಟಿ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ; ಐಟಿಯಲ್ಲೇ ಹೆಚ್ಚು‍!

ದೇಶವ್ಯಾಪಿ #MeToo ಚಳವಳಿ ವ್ಯಾಪಕವಾಗುತ್ತಿದೆ. ಗಣ್ಯರ ಮುಖವಾಡ ಕಳಚಿಬೀಳುತ್ತಿದೆ. ಇದೇ ವೇಳೆ, ನಿಫ್ಟಿಯಲ್ಲಿ ಲಿಸ್ಟಾಗಿರುವ 50 ಕಂಪನಿಗಳಲ್ಲಿ ಪ್ರಸಕ್ತ ವರ್ಷದಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಈ ಪೈಕಿ, ಐಟಿ ಕಂಪನಿಗಳಲ್ಲೇ ಹೆಚ್ಚಿನ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿವೆ

ಲೈಂಗಿಕ ಕಿರುಕುಳ ಹಗರಣದ ವಿರುದ್ಧ ದೇಶವ್ಯಾಪಿ #MeToo ಚಳವಳಿ ವ್ಯಾಪಕವಾಗುತ್ತಿದೆ. ಕಾರ್ಪೊರೆಟ್ ವಲಯದಲ್ಲೂ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ. ಟಾಟಾ ಮೋಟಾರ್ಸ್ ಇಂತಹ ಪ್ರಕರಣಗಳ ಕುರಿತು ದೂರು ಬಂದ ಕೂಡಲೇ ತಕ್ಷಣವೇ ವಿಚಾರಣೆಗೆ ಆದೇಶ ನೀಡಿದ ಉದಾಹರಣೆ ಇದೆ. ಕಾರ್ಪೊರೆಟ್ ವಲಯದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಅಪರೂಪವೇನಲ್ಲ. ಮನಿ ಕಂಟ್ರೋಲ್ ಡಾಟ್ಕಾಮ್ ವರದಿ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ನಿಫ್ಟಿಯಲ್ಲಿ ಲಿಸ್ಟಾಗಿರುವ ಕಂಪನಿಗಳಲ್ಲಿ 588 ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿವೆ. ಅದರಲ್ಲೂ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುವ ಐಟಿ ಕಂಪನಿಗಳಲ್ಲೇ ಹೆಚ್ಚು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ.

2018ರಲ್ಲಿ ಇದುವರೆಗೆ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಪೈಕಿ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಕಂಪನಿಗಳಲ್ಲೇ ಅತಿ ಹೆಚ್ಚು, ಅಂದರೆ, 244 ಪ್ರಕರಣ ದಾಖಲಾಗಿವೆ. ಬೆಂಗಳೂರು ಮೂಲದ ವಿಪ್ರೊ ಕಂಪನಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 101. ಮಹಿಳೆಯರು ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿವೆ. ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಕೆಲಸ ಮಾಡುವ ವಲಯಗಳಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಐಟಿ ವಲಯಗಳಿಗೆ ಹೋಲಿಸಿದರೆ ಅತ್ಯಲ್ಪ. ಸಾಂಪ್ರದಾಯಿಕ ಎಂಜಿನಿಯರಿಂಗ್, ಆಯಿಲ್ ಅಂಡ್ ಗ್ಯಾಸ್‌ ವಲಯದ ಕಂಪನಿಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಈ ವಲಯಗಳಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.30ಕ್ಕಿಂತ ಕಡಿಮೆ.

ಸಮಾಧಾನಕರ ಸಂಗತಿ ಎಂದರೆ, ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಪೈಕಿ ಬಹುತೇಕ ಎಲ್ಲ ಪ್ರಕರಣಗಳನ್ನು ಕಂಪನಿಗಳು ತ್ವರಿತವಾಗಿ ಇತ್ಯರ್ಥಗೊಳಿಸಿವೆ. ಶೇ.2-4ರಷ್ಟು ಮಾತ್ರ ಬಾಕಿ ಉಳಿದಿವೆ. ಅಂದರೆ, ಈ ಕಂಪನಿಗಳು ಲೈಂಗಿಕ ಕಿರುಕುಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿವೆ. ದೂರು ನೀಡಿದವರ ಹಿತಾಸಕ್ತಿ ಕಾಪಾಡುವ ವ್ಯವಸ್ಥೆ ಇದೆ.

ಇದನ್ನೂ ಓದಿ : ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ 

ಹಿಂದೂಸ್ತಾನ್ ಯೂನಿಲಿವರ್ ಮಹಿಳೆಯರು ರಾತ್ರಿ 8.30ರ ನಂತರ ಕರ್ತವ್ಯ ನಿರ್ವಹಿಸುವುದನ್ನು ಪ್ರೋತ್ಸಾಹಿಸುವುದಿಲ್ಲ. ಮಹಿಳಾ ಉದ್ಯೋಗಿಗಳು 8.30ರ ನಂತರ ಕಾರ್ಯನಿರ್ವಹಿಸಿದರೆ ಅದನ್ನು ತನ್ನಿಂತಾನೇ ದಾಖಲಿಸುವ ವ್ಯವಸ್ಥೆ ಇದೆ. ಅಟೆಂಡೆನ್ಸ್ ಕಾರ್ಡ್ ರೀಡರ್ ತಕ್ಷಣವೇ ಎಂಪ್ಲಾಯೀಸ್ ಲೈನ್ ಮ್ಯಾನೇಜರ್‌ಗೆ ರವಾನಿಸುತ್ತದೆ. ಒಂದು ವೇಳೆ ತೀರಾ ಅನಿವಾರ್ಯ ಇದ್ದರೆ ಮಾತ್ರ, ಅಂತಹ ಮಹಿಳೆಯರಿಗೆ ಮನೆಗೆ ಕಂಪನಿಯ ವಾಹನದಲ್ಲಿ ಪುರುಷ ಸಹೋದ್ಯೋಗಿಯೊಂದಿಗೆ ಮನೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಇದೆ.

ಐಸಿಐಸಿಐ ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗಾಗಿ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯುಆರ್ಟಿ) ರಚಿಸಿದೆ. ಮಹಿಳಾ ಉದ್ಯೋಗಿಗಳು ಕಚೇರಿಯಿಂದ ಮನೆಗೆ ತೆರಳುವಾಗ ಅಥವಾ ಮನೆಯಿಂದ ಕಚೇರಿಗೆ ಬರುವಾಗ ತೊಂದರೆಗೀಡಾದರೆ ಕ್ಯುಆರ್ಟಿ ತಕ್ಷಣವೇ ಸ್ಪಂದಿಸುತ್ತದೆ. ಪ್ರತಿ ತಂಡವೂ ಸ್ಟ್ರೆಚರ್, ಅಗ್ನಿಶಾಮಕ ಪರಿಕರ ಮತ್ತಿತರ ಅಗತ್ಯ ಸೌಲಭ್ಯ ಮತ್ತು ಜಿಪಿಎಸ್ ಅಳವಡಿಸಿರುವ ವಾಹನ ಹೊಂದಿರುತ್ತದೆ. ವೈದ್ಯಕೀಯ ಮತ್ತು ಸುರಕ್ಷತಾ ತರಬೇತಿಯನ್ನು ತಂಡದ ಸದಸ್ಯರಿಗೆ ನೀಡಿರುತ್ತಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More