ಮಾರ್ನಿಂಗ್ ಡೈಜೆಸ್ಟ್‌ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ನಾಮಪತ್ರ ಸಲ್ಲಿಸಲಿರುವ ಪತ್ನಿ ಅನಿತಾಗೆ ಸಿಎಂ ಎಚ್ಡಿಕೆ ಸಾಥ್

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾದ ಅನಿತಾ ಕುಮಾರಸ್ವಾಮಿ ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಶಿವಮೊಗ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ‌, ಬಳ್ಳಾರಿಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಪ್ರಸಾದ್ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ;. ತೈಲ ಕಂಪನಿ ಅಧಿಕಾರಿಗಳ ಜೊತೆ ಪ್ರಧಾನಿ ಮಾತುಕತೆ

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯ ನಿರಂತರ ಏರಿಕೆಯಿಂದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸರಿದೂಗಿಸಲು ಪ್ರಧಾನಿ ನರೇಂದ್ರ ಮೋದಿಯವರು ಜಾಗತಿಕ ಹಾಗೂ ಭಾರತದ ಪ್ರಮುಖ ತೈಲ ಕಂಪನಿಗಳ ಮುಖ್ಯ ಕಾರ್ಯನಿರ್ವಾಕರ ಜೊತೆ ಸಭೆ ಸೋಮವಾರ ನಡೆಸಲಿದ್ದಾರೆ. ತೈಲ ಉತ್ಪಾದನೆಯಲ್ಲಿ ಹೂಡಿಕೆಯನ್ನು ಪುನಶ್ಚೇತನಗೊಳಿಸುವ ಮಾರ್ಗಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.

ಲುಕ್ಸೆಂಬರ್ಗ್ ಓಪನ್: ಪ್ಲಿಸ್ಕೋವಾ, ಬೌಚರ್ಡ್ ಇಂದು ಕಣಕ್ಕೆ

ಲುಕ್ಸೆಂಬರ್ಗ್ ಓಪನ್ ಪ್ರಧಾನ ಘಟ್ಟದ ಗುರಿ ಹೊತ್ತಿರುವ ಕ್ರಿಸ್ಟಿನಾ ಪ್ಲಿಸ್ಕೋವಾ ಹಾಗೂ ಯುಜೇನಿ ಬೌಚರ್ಡ್ ಇಂದು ಕಣಕ್ಕಿಳಿಯಲಿದ್ದಾರೆ. ಇಂದು ಮಧ್ಯಾಹ್ನ ಸರಿಸುಮಾರು ೨.೪೫ರ ಹೊತ್ತಿಗೆ ಆರಂಭವಾಗಲಿರುವ ಎರಡು ಪ್ರತ್ಯೇಕ ಮಹಿಳಾ ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕೆನಡಾ ಆಟಗಾರ್ತಿ ಬೌಚರ್ಡ್ ಫ್ರಾನ್ಸ್ ದೇಶದ ಜೆಸ್ಸಿಕಾ ಪಾಂಚೆಟ್ ವಿರುದ್ಧ ಸೆಣಸಲಿದ್ದರೆ, ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪ್ಲಿಸ್ಕೋವಾ ತಮ್ಮ ದೇಶದವರೇ ಆದ ತೆರೆಸಾ ಸ್ಮಿಟ್ಕೋವಾ ವಿರುದ್ಧ ಕಾದಾಡಲಿದ್ದಾರೆ. ಬೌಚರ್ಡ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ರೊಮೇನಿಯಾ ಆಟಗಾರ್ತಿ ರಲುಕಾ ಸೆರ್ಬಾನ್ ವಿರುದ್ಧ ೬-೧, ೨-೬, ೬-೧ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ೨೫೦,೦೦೦ ಡಾಲರ್ ಬಹುಮಾನ ಮೊತ್ತದ ಗಟ್ಟಿ ಅಂಕಣದ ಈ ಡಬ್ಲ್ಯೂಟಿಎ ಟೂರ್ನಿಯಲ್ಲಿ ಬೌಚರ್ಡ್ ಮತ್ತು ಪ್ಲಿಸ್ಕೋವಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳೆನಿಸಿದ್ದಾರೆ.

ಜಮಖಂಡಿ ವಿಧಾನಸಭೆ ಮರು ಚುನಾವಣೆ; ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸುಶೀಲ್ ಕುಮಾರ್?

ಜಮಖಂಡಿ ವಿಧಾನಸಭೆ ಮರು ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡ ಹೆಸರು ಅಂತಿಮವಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸುಶೀಲ್‌ ಕುಮಾರ ಬೆಳಗಲಿ ಸೋಮವಾರ ತಮ್ಮ ಚುನಾವಣೆ ನಡೆ ಕುರಿತ ನಿರ್ಣಯವನ್ನು ಹೊರಹಾಕಲಿದ್ದಾರೆ. “ಬಿಜೆಪಿ ಸೇರುವಂತೆ ಆ ಪಕ್ಷದಿಂದ ಆಹ್ವಾನ ಬಂದಿದೆ. ಆದರೆ ನಮಗೂ ಬಿಜೆಪಿಗೂ ಆಗಿ ಬರುವುದಿಲ್ಲ. ಸದ್ಯ ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಆದರೆ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಚರ್ಚಿಸುವೆ,” ಅವರು ಎಂದು ಈ ಹಿಂದೆ ಹೇಳಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More