ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ರಾಮ ಮಂದಿರ ನಿರ್ಮಾಣ ಕುರಿತ ಹೇಳಿಕೆ ವಿವಾದ; ಮಾಧ್ಯಮಗಳ ವರದಿ ಖಂಡಿಸಿದ ಶಶಿ ತರೂರ್‌

ರಾಮ ಮಂದಿರ ನಿರ್ಮಾಣ ಕುರಿತ ಹೇಳಿಕೆಯನ್ನು ಕೆಲ ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ತಿರುಚಿವೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಬಹುಸಂಖ್ಯಾತ ಹಿಂದೂಗಳು ಅಯೋದ್ಯೆಯನ್ನು ರಾಮನ ಜನ್ಮಸ್ಥಳವೆಂದು ನಂಬಿದ್ದಾರೆ. ಆದರೆ, ಉತ್ತಮ ಹಿಂದೂ ಎನ್ನಿಸಿಕೊಳ್ಳುವವನು ಬೇರೆಯವರ ಪೂಜಾ ಸ್ಥಳವೊಂದನ್ನು ನಾಶ ಮಾಡಿ ರಾಮಮಂದಿರ ಕಟ್ಟುವುದನ್ನು ಒಪ್ಪಿಕೊಳ್ಳಲಾರ,” ಎಂದು ಶಶಿ ತರೂರ್ ಚನ್ನೈನ ಸಾಹಿತ್ಯ ಸಮ್ಮೇಳನದಲ್ಲಿ‌ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದಕ್ಕೆ ಸ್ಪಷ್ಟಿಕರಣ ನೀಡಿರುವ ತರೂರ್‌, “ಕೆಲ ಮಾಧ್ಯಮಗಳು ರಾಜಕೀಯ ನಾಯಕರ ಆಣತಿಯಂತೆ ಕೆಲಸ ಮಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ. ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗುವುದನ್ನು ಹೆಚ್ಚಿನ ಹಿಂದೂಗಳು ಬಯಸುತ್ತಾರೆ. ಆದರೆ, ಮತ್ತೊಬ್ಬರ ಪೂಜಾ ಸ್ಥಳವನ್ನು ನಾಶ ಮಾಡಿ ರಾಮ ಮಂದಿರ ನಿರ್ಮಾಣವಾಗುವುದು ಯಾವುದೇ ಉತ್ತಮ ಹಿಂದೂವಿಗೆ ಬೇಕಿಲ್ಲ ಎಂದು ನಾನು ಹೇಳಿದ್ದೆ,” ಎಂಬುದಾಗಿ ಟ್ವೀಟ್‌‌ ಮೂಲಕ ತಿಳಿಸಿದ್ದಾರೆ.

ಪ್ರಿಯಾ ರಮಣಿ ವಿರುದ್ಧ ಕೇಂದ್ರ ಸಚಿವ ಎಂ ಜೆ ಅಕ್ಬರ್‌ ಮಾನನಷ್ಟ ಮೊಕದ್ದಮೆ

ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರ ಸಚಿವ ಎಂ ಜೆ ಅಕ್ಬರ್‌ ಅವರು ಸೋಮವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಿಯಾ ರಮಣಿ ಅವರು ತಮ್ಮ ವಿರುದ್ಧ ದುರದ್ಧೇಶದಿಂದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಡಿಯಲ್ಲಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಪಟಿಯಾಲಾ ಹೌಸ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾ ರಮಣಿ ಅವರು, “ನನಗೆ ಸತ್ಯವೇ ರಕ್ಷಣೆಯಾಗಿ ನಿಲ್ಲಲಿದೆ. ಎಂ ಜೆ ಅಕ್ಬರ್‌ ವಿರುದ್ಧ ಹೋರಾಡಲು ಸಿದ್ದಳಿದ್ದೇನೆ,” ಎಂದು ತಿಳಿಸಿದ್ದಾರೆ. ಇದೇ ವೇಳೆ, ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಿರ್ದೇಶಕಿ ಮಿಂತಾ ನಂದಾ ಅವರ ವಿರುದ್ಧ ನಟ ಅಲೋಕ್‌ ನಾಥ್‌ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಅನಿತಾ, ಚಂದ್ರಶೇಖರ್‌, ಶ್ರೀಕಾಂತ್‌ ಕುಲಕರ್ಣಿ ನಾಮಪತ್ರ ಸಲ್ಲಿಕೆ

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು, ಕಾಂಗ್ರೆಸ್‌ ಶಾಸಕ ಮುನಿರತ್ನ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಸದಾನಂದಗೌಡ, ಶಾಸಕ ಆರ್‌ ಅಶೋಕ್‌ ಹಾಗೂ ಮಾಜಿ ಶಾಸಕ ಸಿ ಪಿ ಯೋಗೀಶ್ವರ್ ಅವರ ಜೊತೆಗೆ ತೆರಳಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ಉಮೇದುವಾರಿಕೆ ಸಲ್ಲಿಸಿದರು. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಶ್ರೀಕಾಂತ್‌ ಕುಲಕರ್ಣಿ ಅವರು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ವೈರಮುತ್ತು ಮೇಲೆ ಮತ್ತೊಂದು ಲೈಂಗಿಕ ಕಿರುಕುಳ ಆರೋಪ

ತಮಿಳು ಚಿತ್ರರಂಗದ ಖ್ಯಾತ ಚಿತ್ರಸಾಹಿತಿ ವೈರಮುತ್ತು ಅವರ ಮೇಲೆ ಲೈಂಗಿಕ ಶೋಷಣೆಯ ಮತ್ತೊಂದು ಆರೋಪ ಕೇಳಿಬಂದಿದೆ. ಅನಾಮಿಕ ಮಹಿಳೆಯೊಬ್ಬರು ಈ ಕುರಿತಂತೆ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. “ನನ್ನ ಸ್ನೇಹಿತೆಯೊಂದಿಗೆ ನೀವು ಕೆಟ್ಟ ರೀತಿಯಲ್ಲಿ ನಡೆದುಕೊಂಡಿದ್ದಿರಿ. ಅದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಇದು ನಿಮಗೆ ಗೊತ್ತಿದೆ. ಒಂದೊಮ್ಮೆ ನೀವು ಸುಳ್ಳೆಂದರೆ ಅದನ್ನು ನಾನು ಸಾಬೀತು ಮಾಡಬಲ್ಲೆ,” ಎಂದಿದ್ದಾರೆ ಮಹಿಳೆ. #MeToo ಅಭಿಯಾನದ ಹಿನ್ನೆಲೆಯಲ್ಲಿ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ವೈರಮುತ್ತು ಅವರ ಮೇಲೆ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದರು. ಇದನ್ನು ವೈರಮುತ್ತು ತಳ್ಳಿಹಾಕಿದ್ದರು. ಇದೀಗ ಅವರ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ.

ಹಬ್ಬಕ್ಕೆ ಮುನ್ನ ಹೆಚ್ಚಿದ ಚಿನ್ನದ ಬೇಡಿಕೆ; ₹32,000 ಗಡಿ ದಾಟಿದ ದರ

ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ತತ್ಪರಿಣಾಮ 10 ಗ್ರಾಂ ಚಿನ್ನದ ದರ 32,000 ಗಡಿದಾಟಿ ವಹಿವಾಟು ನಡೆಸಿದೆ. ಸೋಮವಾರದ ವಹಿವಾಟಿನಲ್ಲಿ ಚಿನ್ನ 330 ರುಪಾಯಿ ಜಿಗಿದಿದೆ. ರುಪಾಯಿ ಕುಸಿತ, ಅಸ್ಥಿರ ತೈಲ ಬೆಲೆ ಮತ್ತಿತರ ಕಾರಣಗಳಿಗಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಲಿದ್ದು ವರ್ಷಾಂತ್ಯಕ್ಕೆ 35,000 ದಾಟುವ ನಿರೀಕ್ಷೆ ಇದೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರ. ದಿನದ ವಹಿವಾಟಿನಲ್ಲಿ ಗರಿಷ್ಠ 32,320 ರುಪಾಯಿಗೆ ಜಿಗಿದಿದ್ದ ಚಿನ್ನ ವಹಿವಾಟಿನ ಅಂತ್ಯಕ್ಕ 32,200ಕ್ಕೆ ಸ್ಥಿರಗೊಂಡಿದೆ. ಬರುವ ದಿನಗಳಲ್ಲಿ ಚಿನ್ನದ ದರ ತ್ವರಿತವಾಗಿ ಜಿಗಿಯುವ ನಿರೀಕ್ಷೆ ಇದೆ.

ಅಲಹಾಬಾದ್ ಇನ್ನು ಮುಂದೆ ಪ್ರಯಾಗ್‌ರಾಜ್?

ಉತ್ತರ ಪ್ರದೇಶದ ಅಲಹಾಬಾದ್ ನಗರವನ್ನು ಮುಂದಿನ ದಿನಗಳಲ್ಲಿ ಒಮ್ಮತದ ಮೇರೆಗೆ ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಹೇಳಿದ್ದಾರೆ. ವಿರೋಧಪಕ್ಷಗಳು ಯೋಗಿ ಆದಿತ್ಯನಾಥರ ನಿರ್ಧಾರವನ್ನು ವಿರೋಧಿಸಿವೆ. ಅಲಹಾಬಾದ್ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳವಾಗಿದ್ದು, ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಪ್ರಮುಖ ಸ್ಥಳವಾಗಿ ಗುರುತಿಸಕೊಂಡಿತ್ತು.

ಜರ್ಮನಿಯ ಬವೇರಿಯಾದಲ್ಲಿ ಬಲಪಂಥ ಪಕ್ಷ ಮೇಲುಗೈ

ಜರ್ಮನಿಯ ದೊಡ್ಡ ರಾಜ್ಯಗಳಲ್ಲಿ ಒಂದಾದ ಬವೇರಿಯಾ ಸಂಸತ್ ಚುನಾವಣೆಗಳಲ್ಲಿ ೧೯೫೭ರಿಂದಲೂ ಅಧಿಕಾರದ ಮೇಲೆ ಹಿಡಿತ ಸಾಧಿಸಿದ್ದ ಕ್ರಿಶ್ಚಿಯನ್ ಸೋಷಿಯಲ್ ಯೂನಿಯನ್ ಪಕ್ಷ (ಸಿಎನ್‌ಯು) ಬಹುಮತ ಕಳೆದುಕೊಂಡಿದೆ. ಸಿಎನ್‌ಯು ಪಕ್ಷದ ಚಾನ್ಸಲರ್ ಎಂಜೆಲಾ ಮೆರ್ಕೆಲ್ ಸರ್ಕಾರದ ಮೈತ್ರಿ ಪಕ್ಷವಾಗಿದೆ. ಈ ಬೆಳವಣಿಗೆ ಮೆರ್ಕಲ್ ಅವರ ಸರ್ಕಾರಕ್ಕೆ ದೊಡ್ಡ ಆಘಾತ. ವಲಸೆ ವಿರೋಧಿ ಮತ್ತು ಕಟ್ಟಾ ಬಲಪಂಥೀಯ ಪಕ್ಷವಾದ ಆಲ್ಟರ್‌ನೇಟಿವ್ ಫಾರ್ ಡುಶ್‌ಲ್ಯಾಂಡ್ ಪಾರ್ಟಿ (ಎಎಫ್‌ಡಿ) ಶೇ ೧೦ ರಷ್ಟು ಮತಗಳಿಸುವ ಮೂಲಕ ಕನಿಷ್ಠ ೧೫ ಮಂದಿ ಬವೇರಿಯಾ ಸಂಸತ್ ಪ್ರವೇಶಿಸಲಿದ್ದಾರೆ. ಸಿಎನ್‌ಯು ಬೆಂಬಲ ಕಸಿಯಲು ಎಎಫ್‌ಡಿ ಮತ್ತು ಗ್ರೀನ್ಸ್ ಪಕ್ಷ ಹೆಚ್ಚು ಮತ ಗಳಿಸಿದ್ದೇ ಕಾರಣವಾಗಿದೆ. ಯುರೋಪಿನ ಹಲವು ಕಡೆ ಬಲಪಂಥೀಯ ಪಕ್ಷಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಅಂಥದೇ ಬೆಳವಣಿಗೆ ಇದೀಗ ಜರ್ಮನಿಯಲ್ಲಿ ಕಂಡುಬಂದಿದೆ.

ಐಸಿಸಿ ತನಿಖೆಗೆ ಸಹಕರಿಸದ ಸನತ್ ಜಯಸೂರ್ಯ

ಶ್ರೀಲಂಕಾ ಬ್ಯಾಟಿಂಗ್ ದಿಗ್ಗಜ ಸನತ್ ಜಯಸೂರ್ಯ ಅವರ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘನೆಯ ಆರೋಪ ಹೊರಿಸಿದೆ. ಶ್ರೀಲಂಕಾ ತಂಡದ ಮಾಜಿ ನಾಯಕ ಹಾಗೂ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಸನತ್, ಐಸಿಸಿ ಭ್ರಷ್ಟಾಚಾರ ತಡೆ ಘಟಕ (ಎಸಿಯು) ನಡೆಸುವ ಯಾವುದೇ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಐಸಿಸಿ ದೂರಿದೆ. "೨೦೧೮ರ ಅಕ್ಟೋಬರ್ ೧೫ರಿಂದ ಮುಂದಿನ ಹದಿನಾಲ್ಕು ದಿನಗಳೊಳಗೆ ನಿಮ್ಮ ಮೇಲಿನ ಆರೋಪಗಳಿಗೆ ನೀವು ಉತ್ತರಿಸಬೇಕಿದೆ. ಈ ಸಂದರ್ಭದಲ್ಲಿ ಇದಕ್ಕಿಂತಲೂ ಹೆಚ್ಚಿಗೇನೂ ಹೇಳಲು ಬಯಸುವುದಿಲ್ಲ,'' ಎಂದು ಐಸಿಸಿ ಜಯಸೂರ್ಯ ಅವರಿಗೆ ತಿಳಿಸಿದೆ. ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಎದ್ದ ಪ್ರತಿಭಟೆನೆಯಿಂದಾಗಿ ಕಳೆದ ವರ್ಷ ಸನತ್ ಜಯಸೂರ್ಯ ನೇತೃತ್ವದ ಶ್ರೀಲಂಕಾ ಆಯ್ಕೆಸಮಿತಿ ರಾಜೀನಾಮೆ ಸಲ್ಲಿಸಿತ್ತು.

ಲುಕ್ಸೆಂಬರ್ಗ್ ಓಪನ್‌ ಪ್ರಧಾನ ಘಟ್ಟಕ್ಕೆ ಬೌಚರ್ಡ್

ಕೆನಡಾದ ಯುವ ಟೆನಿಸ್ ಆಟಗಾರ್ತಿ ಯುಜೇನಿ ಬೌಚರ್ಡ್ ಲುಕ್ಸೆಂಬರ್ಗ್ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಧಾನ ಘಟ್ಟಕ್ಕೆ ಅರ್ಹತೆ ಗಳಿಸಿದ್ದಾರೆ. ಇಂದು ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಆಕೆ ಫ್ರಾನ್ಸ್ ಆಟಗಾರ್ತಿ ಜೆಸ್ಸಿಕಾ ಪಾಂಚೆಟ್ ವಿರುದ್ಧ ೬-೨, ೭-೫ ಎರಡು ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇತ್ತ, ವನಿತೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ತಮ್ಮ ದೇಶದವರೇ ಆದ ತೆರೆಸಾ ಸ್ಮಿಟ್ಕೋವಾ ವಿರುದ್ಧ ೬-೨, ೬-೨ ನೇರ ಹಾಗೂ ಸುಲಭ ಸೆಟ್‌ಗಳ ಗೆಲುವಿನೊಂದಿಗೆ ಪ್ರಧಾನ ಸುತ್ತಿಗೆ ಅರ್ಹತೆ ಗಳಿಸಿದರು. ನಾಳೆ ನಡೆಯಲಿರುವ ಪ್ರಧಾನ ಸುತ್ತಿನ ಮೊದಲ ಹಂತದ ಸ್ಪರ್ಧೆಯಲ್ಲಿ ಪ್ಲಿಸ್ಕೋವಾ ಸ್ಪೇನ್ ಆಟಗಾರ್ತಿ ಸುವಾರೆಜ್ ನವಾರೊ ವಿರುದ್ಧ ಸೆಣಸಲಿದ್ದರೆ, ಬೌಚರ್ಡ್ ಹಂಗೇರಿಯ ಆಟಗಾರ್ತಿ ಟಿಮಿಯಾ ಬಾಬೊಸ್ ವಿರುದ್ಧ ಕಾದಾಡಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More