ಸಿದ್ದರಾಮಯ್ಯ ನಿಕಟವರ್ತಿ ಎಂಜಿನಿಯರ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಸರ್ಕಾರ ಅಸ್ತು

ಕೆಲ ಪ್ರಕರಣಗಳಲ್ಲಿ ಪ್ರಭಾವಿ ಎಂಜಿನಿಯರ್‌ಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸಂಬಂಧಿತ ಇಲಾಖೆಗಳೇ ಮಂಜೂರಾತಿ ನೀಡುತ್ತಿಲ್ಲ. ಈ ಮಧ್ಯೆ, ಬಿಡಿಎ ಎಂಜಿನಿಯರ್‌ ವಿರುದ್ಧ ಪಿಡಬ್ಲ್ಯುಡಿ ಇಲಾಖೆ ಅನುಮತಿ ನೀಡಿದ್ದು, ಆ ಅಧಿಕಾರಿ ಸಿದ್ದರಾಮಯ್ಯ ಅವರ ನಿಕಟವರ್ತಿ ಎಂಬುದು ವಿಶೇಷ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್‌ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಎಲ್ ರಘು ಅವರ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ (ಪ್ರಾಸಿಕ್ಯೂಷನ್) ಸಲ್ಲಿಸಲು ಸಮ್ಮಿಶ್ರ ಸರ್ಕಾರ ಮಂಜೂರಾತಿ ನೀಡಿದೆ. ಈ ಸಂಬಂಧ ಸಕ್ಷಮ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ ೨೦೧೮ ಸೆ.೧೮ರಂದು ಆದೇಶ ಹೊರಡಿಸಿದೆ ಎಂದು ಇಲಾಖೆಯ ಮೂಲಗಳು ‘ದಿ ಸ್ಟೇಟ್‌’ಗೆ ಖಚಿತಪಡಿಸಿವೆ. ವಿಧಾನ ಪರಿಷತ್‌ ಸದಸ್ಯ ಕೆ ಗೋವಿಂದರಾಜು ಅವರ ಮನೆ ಮೇಲೆ ದಾಳಿ ನಡೆಸಿದ್ದ ಐ ಟಿ ಅಧಿಕಾರಿಗಳಿಗೆ ದೊರೆತಿದೆ ಎನ್ನಲಾಗಿದ್ದ ಡೈರಿಯಲ್ಲಿಯೂ ಎಲ್ ರಘು ಹೆಸರಿತ್ತು. ಗುತ್ತಿಗೆದಾರರೊಬ್ಬರಿಂದ ೬ ಕೋಟಿ ರುಪಾಯಿ ಲಂಚ ಪಡೆದಿದ್ದರು ಎಂಬುದು ಡೈರಿಯಲ್ಲಿ ದಾಖಲಾಗಿತ್ತೆಂದು ಹೇಳಲಾಗಿತ್ತು. ಅಲ್ಲದೆ, ಸಿದ್ದರಾಮಯ್ಯ ಅವರಿಗೆ ದುಬಾರಿ ವಾಚ್‌ ಪ್ರಕರಣದಲ್ಲಿಯೂ ಇವರ ವಿರುದ್ಧ ಟಿ ಜೆ ಅಬ್ರಾಹಂ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.

ದೋಷಾರೋಪ ಪಟ್ಟಿ ಸಲ್ಲಿಸಲು ಕಳೆದ ೫ ವರ್ಷಗಳಿಂದಲೂ ಸರ್ಕಾರ ಅನುಮತಿ ನೀಡಿರಲಿಲ್ಲ. ಲೋಕಾಯುಕ್ತ ಸಂಸ್ಥೆ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ವಿಚಾರಣೆಗೆ ಮಂಜೂರಾತಿ ನೀಡದೆ ವಿಳಂಬ ಮಾಡಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಘು ವಿರುದ್ಧ ಪ್ರಕರಣ ಮುಕ್ತಾಯಗೊಳಿಸಲು ಯತ್ನ ನಡೆದಿತ್ತಲ್ಲದೆ, ವಿಚಾರಣೆ ಕೈಬಿಡಲು ಪ್ರಭಾವ ಬೀರಲಾಗಿತ್ತು. ಅಲ್ಲದೆ, ಬಿ ರಿಪೋರ್ಟ್ ಸಲ್ಲಿಸಲು ಒತ್ತಡ ಹೇರಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ವಿಚಾರಣೆಗೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಕುರಿತು ಪರಾಮರ್ಶೆ ನಡೆಸಿದ್ದ ಹಿಂದಿನ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿಆ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಅನುಮತಿ ದೊರೆತಿರಲಿಲ್ಲ. ಆದರೀಗ ಟಿ ಎಂ ವಿಜಯಭಾಸ್ಕರ್ ಮುಖ್ಯಕಾರ್ಯದರ್ಶಿಯಾದ ೩ ತಿಂಗಳೊಳಗೆ ಅನುಮತಿ ದೊರೆತಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಎಲ್ ರಘು ಮನೆ ಮತ್ತಿತರರ ಕಡೆಗಳಲ್ಲಿ ೨೦೧೨ರಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದರು.

ಲೋಕಾಯುಕ್ತ ಅಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಎಲ್ ರಘು ಬೆಂಗಳೂರು ವಿಭಾಗದ ರಾಷ್ಟ್ರೀಯ ಹೆದ್ದಾರಿಗಳ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯನಗರದ ಆರ್‌ಪಿಸಿ ಲೇಔಟ್ ನಿವಾಸ ಸೇರಿದಂತೆ ಇನ್ನಿತರ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು, 2.75 ಕೋಟಿ ರುಪಾಯಿ ಆಸ್ತಿಯನ್ನು ಪತ್ತೆಹಚ್ಚಿದ್ದರು.

ಎಲ್‌ ರಘು ಆಸ್ತಿ ವಿವರ (ಅಂದಾಜು ಮೌಲ್ಯ)

 1. ಆರ್‌ಪಿಸಿ ಲೇಔಟ್‌ನಲ್ಲಿ 40x75 ಮನೆ (55,00,000 ರು.)
 2. ಮಾಗಡಿ ರಸ್ತೆಯ ಚೋಳೂರುಪಾಳ್ಯದಲ್ಲಿ 40x30 ಮನೆ (1,50,000 ರು.)
 3. ಅಗ್ರಹಾರ ದಾಸರಹಳ್ಳಿಯಲ್ಲಿ 80x50 ವಾಣಿಜ್ಯ ಕಟ್ಟಡ (76,87,500 ರು.)
 4. ಬನಶಂಕರಿ 6ನೇ ಹಂತದಲ್ಲಿ 50x80 ನಿವೇಶನ (8,09,697 ರು.)
 5. ಕೆ ಜಿ ಶ್ರೀಕಂಠಪುರದಲ್ಲಿ 60x80 ಮತ್ತು 60x40 ನಿವೇಶನ (1,72,000 ರು.)
 6. ಮೈಸೂರಿನ ದತ್ತನಹಳ್ಳಿಯಲ್ಲಿ 60x40 ನಿವೇಶನ (1,00,000 ರು.)
 7. ನಗದು 7,19,380 ರು.
 8. 2.7 ಕೆಜಿ ಚಿನ್ನ (80,00,000 ರು. ಮೌಲ್ಯ)
 9. 20 ಕೆಜಿ ಬೆಳ್ಳಿ (8,00,000 ರು.)
 10. ವೋಕ್ಸ್‌ವಾಗನ್ ಜೆಟ್ ಕಾರು (14,50,000 ರು.)
 11. ವೋಕ್ಸ್‌ವಾಗನ್ ಪೋಲೋ ಕಾರು (6,30,000 ರು.)
 12. ಸ್ವಿಪ್ಟ್ ಕಾರು (7,00,000 ರು.)
 13. ಮೂರು ಬ್ಯಾಂಕ್ ಖಾತೆಗಳಲ್ಲಿರುವ ಮೊತ್ತ 5,68,426 ರು.
 14. ಕಿಸಾನ್ ವಿಕಾಸ್ ಪತ್ರಗಳ ಮೇಲಿನ ಹೂಡಿಕೆ ಮೊತ್ತ 3,00,000
ಇದನ್ನೂ ಓದಿ : 10 ವರ್ಷದ ಲೋಕಾಯುಕ್ತ ತನಿಖೆ ವಿಫಲ; ಆರೋಪಿ ಕೆಎಎಸ್ ಅಧಿಕಾರಿ ದೋಷಮುಕ್ತ!

ರಘು ಅವರ ಮನೆಯಲ್ಲಿದ್ದ 2.7 ಕೆಜಿ ಚಿನ್ನಾಭರಣ ಮತ್ತು 20 ಕೆಜಿ ಬೆಳ್ಳಿಯ ಆಭರಣಗಳನ್ನು ಕಂಡು ಲೋಕಾಯುಕ್ತ ಪೊಲೀಸರೇ ಬೆರಗಾಗಿದ್ದರು. ನಗರದ ಹಲವೆಡೆ ಅವರು 5 ನಿವೇಶನಗಳು ಮತ್ತು ಒಂದು ವಾಣಿಜ್ಯ ಕಟ್ಟಡ ಹೊಂದಿದ್ದರಲ್ಲದೆ, ಐಷಾರಾಮಿ ಕಾರುಗಳನ್ನೂ ಇಟ್ಟುಕೊಂಡಿದ್ದರು. ದಾಳಿ ವೇಳೆಯಲ್ಲಿ ದೊರೆತಿದ್ದ ಕಾಗದಪತ್ರಗಳನ್ನು ಪರಿಶೀಲನೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ರಘು ಶೇ.106.86ರಷ್ಟು ಅಕ್ರಮ ಆಸ್ತಿ ಗಳಿಸಿದ್ದರು ಎಂಬುದನ್ನು ದೃಢಪಡಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More