ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 8 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಕೇಂದ್ರ ಸಚಿವ ಎಂ ಜೆ ಅಕ್ಬರ್‌ ವಿರುದ್ಧ ರಾಹುಲ್‌ ಗಾಂಧಿ ಟೀಕಾಪ್ರಹಾರ

ಕೇಂದ್ರ ಸಚಿವ ಎಂ ಜೆ ಅಕ್ಬರ್‌ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ‌ ಟೀಕಾಪ್ರಹಾರ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂದು ಘೋಷಿಸುತ್ತಾರೆ. ‘ಬೇಟಿ ಬಚಾವೋ ಬಿಜೆಪಿ ನೇತಾಂವೋಸೆ’ ಎಂಬುದು ಆ ಘೋಷಣೆಯ ಒಳಾರ್ಥವಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಅವರು ಉತ್ತರ ಪ್ರದೇಶದ ಉನ್ನಾವ್‌ ಪ್ರಕರಣ, ಎಂ ಜೆ ಅಕ್ಬರ್‌ ಮೇಲೆ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಪ್ರಕರಣಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

‘ಅಲಹಾಬಾದ್’ ನಗರಕ್ಕೆ ‘ಪ್ರಯಾಗ್‌ ರಾಜ್‌’ ಎಂದು ಮರುನಾಮಕರಣ

ಉತ್ತರ ಪ್ರದೇಶದ ಅಲಹಾಬಾದ್‌ ನಗರವನ್ನು ಪ್ರಯಾಗ್‌ ರಾಜ್‌ ಎಂದು ಮರುನಾಮಕರಣಗೊಳಿಸುವ ಗೊತ್ತುವಳಿಗೆ ಯೋಗಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗಂಗಾ ಮತ್ತು ಯಮುನಾ ನದಿಗಳು ಸಂಗಮವಾಗುವ ಸ್ಥಳ ಅಲಹಾಬಾದ್‌. ಆ ನಗರವು ಪ್ರಯಾಗಗಳಿಗೆ ಪ್ರಸಿದ್ಧಿ ಹೊಂದಿದ್ದು, ಅದಕ್ಕೀಗ ಪ್ರಯಾಗ್‌ ರಾಜ್‌ ಎಂದು ಮರುನಾಮಕರಣ ಮಾಡಲಾಗಿದೆ. ಅಲಹಾಬಾದ್‌ ಹೆಸರು ಬದಲಾವಣೆ ಹಿನ್ನೆಲೆಯಲ್ಲಿ ಅಲಹಾಬಾದ್‌ ವಿಶ್ವವಿದ್ಯಾಲಯ ಮತ್ತು ಅಲಹಾಬಾದ್‌ ಹೈಕೋರ್ಟ್‌ ಹೆಸರುಗಳು ಸಹ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಇಂಡಿಯನ್‌ ಎಕ್ಸ್ ಪ್ರೆಸ್‌ ವರದಿ ಮಾಡಿದೆ.

ಜೆಡಿಯು ಉಪಾಧ್ಯಕ್ಷರಾಗಿ ಪ್ರಶಾಂತ್‌ ಕಿಶೋರ್‌ ನೇಮಕ

ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅವರನ್ನು ಜೆಡಿಯು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ತಿಂಗಳು ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಪ್ರಶಾಂತ್‌ ಕಿಶೋರ್‌ ಅವರನ್ನು ತಮ್ಮ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಜೆಡಿಯು ನಾಯಕ ಕೆ ಸಿ ತ್ಯಾಗಿ ತಿಳಿಸಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿಯವರ ಗೆಲುವಿನಲ್ಲಿ ಪ್ರಶಾಂತ್‌ ಕಿಶೋರ್‌ ಅವರು ಮಹತ್ವದ ಪಾತ್ರ ವಹಿಸಿದ್ದರು.

ಜನರಲ್ ಪ್ರಾವಿಡೆಂಟ್ ಫಂಡ್ ಬಡ್ಡಿದರ ಶೇ.8ಕ್ಕೆ ಹೆಚ್ಚಳ

ಕೇಂದ್ರ ಸರ್ಕಾರ 2018ರ ಅಕ್ಟೋಬರ್ 1ರಿಂದ ಡಿಸೆಂಬರ್ 31ರ ತ್ರೈಮಾಸಿಕದ ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್) ಬಡ್ಡಿದರವನ್ನು ಶೇ.8ಕ್ಕೆ ಏರಿಸಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಬಡ್ಡಿದರಕ್ಕೆ ಸರಿಸಮನಾಗಿ ಏರಿಕೆ ಮಾಡಲಾಗಿದೆ. 2018 ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಪಿಎಫ್ ಬಡ್ಡಿದರವು ಶೇ.7.6ರಷ್ಟಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಸತತ ಎರಡು ಬಾರಿ ತಲಾ 25 ಅಂಶಗಳಷ್ಟು ಬಡ್ಡಿದರ ಏರಿಕೆ ಮಾಡಿತ್ತು. ಅದಕ್ಕೆ ಅನುಗಣವಾಗಿ ಮಾರುಕಟ್ಟೆಯಲ್ಲಿನ ವಿವಿಧ ಸಾಲಗಳ ಮೇಲಿನ ಬಡ್ಡಿದರವೂ ಏರಿಕೆಯಾಗಿತ್ತು. ಹಾಗೆಯೇ ಠೇವಣಿಗಳ ಮೇಲಿನ ಬಡ್ಡಿದರವನ್ನು ಏರಿಸಲಾಗಿತ್ತು.

ಇನ್ಫೊಸಿಸ್ 2ನೇ ತ್ರೈಮಾಸಿಕ ನಿವ್ವಳ ಲಾಭ ಶೇ.10ರಷ್ಟು ಹೆಚ್ಚಳ

ಟೆಕ್ ದೈತ್ಯ, ಬೆಂಗಳೂರು ಮೂಲದ ಇನ್ಫೊಸಿಸ್ ಕಂಪನಿಯ ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದ ನಿವ್ವಳ ಲಾಭ ಶೇ.10ರಷ್ಟು ಹೆಚ್ಚಳವಾಗಿದೆ. 4,110 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಪೇಟೆಯಲ್ಲಿ 4048 ಕೋಟಿ ರುಪಾಯಿ ನಿವ್ವಳ ಲಾಭ ನಿರೀಕ್ಷಿಸಲಾಗಿತ್ತು. ಕಳೆದ ವರ್ಷ ಈ ಅವಧಿಯಲ್ಲಿ 3,726 ಕೋಟಿ ನಿವ್ವಳಲಾಭ ಗಳಿಸಿತ್ತು. ಒಟ್ಟು ಆದಾಯ 20,609 ಕೋಟಿಗೆ ಏರಿದ್ದು ಶೇ.17ರಷ್ಟು ಹೆಚ್ಚಳ ಸಾಧಿಸಿದೆ. ಪ್ರಸಕ್ತ ವಿತ್ತೀಯ ವರ್ಷದ ಮುಂಬರುವ ತ್ರೈಮಾಸಿಕಗಳಲ್ಲೂ ಶೇ.6-8ರಷ್ಟು ಆದಾಯ ಹೆಚ್ಚಳದ ಮುನ್ನೋಟ ನೀಡಿದೆ. ಈ ಅವಧಿಯಲ್ಲಿ 2 ಬಿಲಿಯನ್ ಡಾಲರ್ ಮೊತ್ತದ ವಹಿವಾಟು ಪಡೆಯಲಾಗಿದೆ ಎಂದು ಸಿಇಒ ಸಲೀಲ್ ಪಾರಿಖ್ ತಿಳಿಸಿದ್ದಾರೆ.

ಐಸಿಸಿ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಜಯಸೂರ್ಯ

ತನ್ನ ಮೇಲಿನ ಐಸಿಸಿಯ ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘನೆ ಆರೋಪದ ಕುರಿತಾಗಿ ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ತಾನು ಸದಾ ಪಾರದರ್ಶಕಮತ್ತು ಸಮಗ್ರತೆಯನ್ನು ಪರಿಪಾಲಿಸಿಕೊಂಡು ಬಂದಿರುವ ಮನುಷ್ಯ ಎಂದು ಜಯಸೂರ್ಯ ಹೇಳಿದ್ದಾರೆ. ಐಸಿಸಿಯ ಭ್ರಷ್ಟಾಚಾರ ತಡೆ ನಿಗ್ರಹ ದಳದ ತನಿಖೆಗೆ ಜಯಸೂರ್ಯ ಸಹಕರಿಸುತ್ತಿಲ್ಲ ಎಂಬ ದಿಸೆಯಲ್ಲಿ ಹದಿನಾಲ್ಕು ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಐಸಿಸಿ ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ದಿನದ ಹಿಂದಷ್ಟೇ ಸೂಚಿಸಿತ್ತು. "ಐಸಿಸಿ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ನಾನು ಆ ನಿಯಮದ ಗೌರವ ಕಾಯುವ ಸಲುವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ, ಗಡುವಿನೊಳಗೆ ಐಸಿಸಿಗೆ ಉತ್ತರಿಸುವುದಾಗಿ,'' ೪೯ರ ಹರೆಯದ ಜಯಸೂರ್ಯ ಇಂದು ಸ್ಪಷ್ಟಪಡಿಸಿದ್ದಾರೆ.

ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್ ಶುಭಾರಂಭ

ಮೊದಲ ಸುತ್ತಲ್ಲೇ ಸೋತು ತಲ್ಲಣ ಸೃಷ್ಟಿಸಿದ ಪಿ ವಿ ಸಿಂಧುವಿನ ಸೋಲಿನ ಬೇಗುದಿಯನ್ನು ಸೈನಾ ನೆಹ್ವಾಲ್ ಮೆಟ್ಟಿನಿಂತರು. ಇಂದಿನಿಂದ ಶುರುವಾಗಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪಿ ವಿ ಸಿಂಧು, ಅಮೆರಿಕದ ಶ್ರೇಯಾಂಕರಹಿತ ಆಟಗಾರ್ತಿ ಬಿವೆನ್ ಝಾಂಗ್ ವಿರುದ್ಧ ಮೂರು ಗೇಮ್‌ಗಳ ಆಟದಲ್ಲಿ ಸೋತರು. ಬಳಿಕ ನಡೆದ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್, ಹಾಂಕಾಂಗ್ ಆಟಗಾರ್ತಿ ಚೆಯುಂಗ್ ನಾನ್ ಯಿ ಒಡ್ಡಿದ ಕಠಿಣ ಪ್ರತಿರೋಧವನ್ನು ೨೦-೨೨, ೨೧-೧೭, ೨೪-೨೨ ಗೇಮ್‌ಗಳಿಂದ ಹತ್ತಿಕ್ಕಿ ಮುಂದಿನ ಹಂತಕ್ಕೆ ಧಾವಿಸಿದರು. ಅತ್ಯಂತ ರೋಚಕವಾಗಿದ್ದ ಪಂದ್ಯದಲ್ಲಿ ಸೈನಾ, ಹಾಂಕಾಂಗ್ ಆಟಗಾರ್ತಿ ಎದುರಿನ ಒತ್ತಡ ಮೆಟ್ಟಿನಿಂತು ಜಯಶಾಲಿಯಾದರು.

ಪಾಕ್ ಎದುರು ಆರಂಭಿಕ ಆಘಾತ ಅನುಭವಿಸಿದ ಆಸ್ಟ್ರೇಲಿಯಾ

ಅಬುಧಾಬಿಯಲ್ಲಿ ಇಂದಿನಿಂದ ಶುರುವಾದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಆರಂಭಿಕ ಫಖಾರ್ ಜಮಾನ್ (೯೪: ೧೯೮ ಎಸೆತ, ೮ ಬೌಂಡರಿ, ೧ ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದಲ್ಲಿ ನಾಯಕ ಸರ್ಫರಾಜ್ ಅಹಮದ್ (೯೪: ೧೨೯ ಎಸೆತ, ೭ ಬೌಂಡರಿ) ದಾಖಲಿಸಿದ ಅರ್ಧಶತಕಗಳ ನೆರವಿನಿಂದ ೮೧ ಓವರ್‌ಗಳಲ್ಲಿ ೨೮೨ ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಹೋರಾಟ ಮುಗಿಸಿತು.ಸ್ಪಿನ್ನರ್‌ಗಳಾದ ನಾಥನ್ ಲಿಯೊನ್ (೭೮ಕ್ಕೆ ೪), ಮಾರ್ನುಸ್ (೪೫ಕ್ಕೆ ೩) ಮತ್ತು ಮಿಚೆಲ್ ಸ್ಟಾರ್ಕ್ (೩೭ಕ್ಕೆ ೨) ಸಾಧ್ಯವಾದಷ್ಟೂ ಪಾಕ್ ಇನ್ನಿಂಗ್ಸ್ ಅನ್ನು ನಿಯಂತ್ರಿಸಿದರು. ಕೇವಲ ಆರು ರನ್ ಅಂತರದಲ್ಲಿ ಜಮಾನ್ ಮತ್ತು ಸರ್ಫರಾಜ್ ಶತಕ ವಂಚಿತರಾಗುವಂತೆ ಮಾಡಿದ್ದು ಲೆಗ್‌ಸ್ಪಿನ್ನರ್ ಮಾರ್ನುಸ್ ಬೌಲಿಂಗ್ ವಿಶೇಷ. ಬಳಿಕ ಇನ್ನಿಂಗ್ಸ್ ಆರಂಭಿಸಿದ ಆಸೀಸ್, ಉಸ್ಮಾನ್ ಖವಾಜ (೩) ಮತ್ತು ಪೀಟರ್ ಸಿಡಲ್ (೪) ಮೊಹಮದ್ ಅಬ್ಬಾಸ್‌ಗೆ ವಿಕೆಟ್ ಒಪ್ಪಿಸಿ ತಂಡದ ಹಿನ್ನಡೆಗೆ ಕಾರಣರಾದರು. ದಿನಾಟದ ಅಂತ್ಯಕ್ಕೆ ಆಸೀಸ್ ೭ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೦ ರನ್ ಮಾಡಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More