ನಿಷೇಧಿತ ಪೊಲಿಯೋ ಲಸಿಕೆ ಬೆಂಗಳೂರಿನಲ್ಲಿ ಬಳಕೆ? ಕಾಡಲಿದೆಯೇ ಪೊಲಿಯೋ ವೈರಸ್‌

ನಿಷೇಧಿತ ಔಷಧ ಕಂಪನಿಯು ಉತ್ಪಾದಿಸಿರುವ ಪೋಲಿಯೋ ಲಸಿಕೆಯನ್ನು ಕರ್ನಾಟಕದಲ್ಲಿ ಮಕ್ಕಳಿಗೆ ಹಾಕಿಲ್ಲ ಎಂದು ಆರೋಗ್ಯ ಇಲಾಖೆ ಕೆಲ ದಿನಗಳ ಹಿಂದೆಯಷ್ಟೇ ಸ್ಪಷ್ಟಪಡಿಸಿತ್ತು. ಆದರೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದು ನಿಷೇಧಿತ ಲಸಿಕೆಯನ್ನು ಬಳಸಿದೆ ಎಂಬುದನ್ನು ಐಎಎಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಬಯೊಮೆಡ್ ಘಟಕದಲ್ಲಿ ಉತ್ಪಾದನೆಯಾದ ಲಸಿಕೆಗಳನ್ನೇ ಅಕ್ಟೋಬರ್ ೧ರ ತನಕವೂ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಬಳಸಲಾಗಿತ್ತು ಎಂಬ ಆತಂಕದ ಸುದ್ದಿ ಹೊರಬಿದ್ದಿದೆ. ಈ ಕಂಪನಿ ಉತ್ಪಾದಿಸಿದ್ದ ಪೊಲಿಯೋ ಲಸಿಕೆಗಳಲ್ಲಿಯೇ ಟೈಪ್-2 ಪೋಲಿಯೋ ವೈರಸ್ ಪತ್ತೆಯಾಗಿತ್ತು. ಆದರೂ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾಗಲೀ, ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳಾಗಲೀ ಈವರೆಗೂ ಎಚ್ಚೆತ್ತುಕೊಂಡಿಲ್ಲ.

ಟೈಪ್-2 ಪೋಲಿಯೋ ವೈರಾಣು ಪತ್ತೆಯಾಗಿರುವ ಪೋಲಿಯೋ ಲಸಿಕೆಯನ್ನು ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗೆ ಹಾಕಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿತ್ತಾದರೂ, ಬೆಂಗಳೂರಿನ ಇಂದಿರಾ ನಗರದ ಸಿಎಂಎಚ್‌ ಆಸ್ಪತ್ರೆ ೨೦೧೮ರ ಅಕ್ಟೋಬರ್ ತನಕವೂ ಬಳಸಿತ್ತು ಎಂಬುದನ್ನು ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ ಪಲ್ಲವಿ ಅಕುರಾತಿ ಅವರು ಬೆಳಕಿಗೆ ತಂದಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ೨೦೧೮ರ ಅಕ್ಟೋಬರ್‌ ೧೬ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ "ದಿ ಸ್ಟೇಟ್‌'ಗೆ ಲಭ್ಯವಾಗಿದೆ.

ಪಲ್ಲವಿ ಅಕುರಾತಿ ಅವರ ೧೦ ವಾರದ ಮಗುವಿಗೆ ಸಿಎಂಎಚ್ ಆಸ್ಪತ್ರೆ ಸಿಬ್ಬಂದಿ ಹಾಕಿದ್ದ ಪೊಲಿಯೋ ಲಸಿಕೆ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ಅವರು ದಾಖಲಿಸಿದ್ದ ದೂರಿನ ಮೇರೆಗೆ ತನಿಖೆ ನಡೆಸುತ್ತಿರುವ ವಿಚಾರಣೆ ತಂಡದ ಮುಂದೆ, ನಿಷೇಧಿತ ಕಂಪನಿ ಉತ್ಪಾದಿಸಿರುವ ಪೊಲಿಯೋ ಲಸಿಕೆಯನ್ನು ಬಳಸಿದೆ ಎಂಬುದನ್ನು ಸಿಎಂಎಚ್‌ ಆಸ್ಪತ್ರೆ ಮೌಖಿಕವಾಗಿ ಒಪ್ಪಿಕೊಂಡಿದೆ ಎಂಬ ವಿಚಾರವನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಈ ಕುರಿತು ದೂರುದಾರರಾಗಿರುವ ಪಲ್ಲವಿ ಅಕುರಾತಿ ಅವರನ್ನು ಅ.೧೫ರಂದು ಭೇಟಿ ಮಾಡಿ ವಿವರಗಳನ್ನು ಕಲೆ ಹಾಕಿರುವುದು ಅವರ ಪತ್ರದಿಂದ ತಿಳಿದು ಬಂದಿದೆ.

"ಇದೇ ಆಸ್ಪತ್ರೆಯು ಎಷ್ಟು ಮಂದಿ ಮಕ್ಕಳಿಗೆ ಲಸಿಕೆ ಹಾಕಿದೆ? ಮಕ್ಕಳವಾರು, ದಿನಾಂಕವಾರು ವಿವರಗಳನ್ನು ದಾಖಲಿಸುವಲ್ಲಿ ವಿಫಲವಾಗಿದೆ. ಬಯೋಮೆಡ್ ಕಂಪನಿ ಉತ್ಪಾದಿಸಿರುವ ಪೊಲಿಯೋ ಲಸಿಕೆಯನ್ನು ನಿಷೇಧಿಸಿದ್ದರೂ ಈ ಆಸ್ಪತ್ರೆಯು ಬಳಸುವುದರಿಂದ ಹಿಂದೆ ಸರಿದಿರಲಿಲ್ಲ. ಈ ಬಗ್ಗೆ ದಾಖಲೆಯನ್ನೂ ನಿರ್ವಹಿಸಿಲ್ಲ ಎಂಬುದು ವಿಚಾರಣೆ ಮೂಲಕ ಬಹಿರಂಗವಾಗಿದೆ. ನಾನು ಕೊಟ್ಟಿದ್ದ ದೂರನ್ನು ಈ ಅಂಶ ಎತ್ತಿ ಹಿಡಿದಿದೆಯಲ್ಲದೆ, ನನ್ನ ದೂರು ಸರಿ ಇದೆ," ಎಂದು ಪಲ್ಲವಿ ಅಕುರಾತಿ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಆದರೆ ಔಷಧ ನಿಯಂತ್ರಕರು ಈ ಕುರಿತು ೨೦೧೮ರ ಅ.೧೧ರಂದು ನೀಡಿರುವ ವರದಿ ವಸ್ತುನಿಷ್ಠತೆಯಿಂದ ಕೂಡಿಲ್ಲ. ನಿಷೇಧಿತ ಉತ್ಪನ್ನವನ್ನು ಖಾಸಗಿ ಆಸ್ಪತ್ರೆ ಬಳಸುತ್ತಿದ್ದರೂ ವಾಸ್ತವಾಂಶವನ್ನು ಮರೆ ಮಾಚಿದೆ. ಹಾಗೆಯೇ ನಿಷೇಧಿತ ಲಸಿಕೆ ಸರಬರಾಜು ಆಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ತಪಾಸಣೆಯನ್ನೂ ನಡೆಸದೆಯೇ ಕನಿಷ್ಠ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಹಾಗೆಯೇ, ಬಯೋಮೆಡ್‌ ಕಂಪನಿ ಉತ್ಪಾದಿಸಿರುವ ಪೊಲಿಯೋ ಲಸಿಕೆ ರಾಜ್ಯಕ್ಕೆ ಪ್ರಸಕ್ತ ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಆಗಿದೆ? ಈವರೆವಿಗೂ ಬಳಕೆಯಾಗಿರುವ ಮತ್ತು ಬಳಕೆಯಾಗದಿರುವ ಪ್ರಮಾಣವೆಷ್ಟು? ನಿಷೇಧಿತವಾದ ನಂತರವೂ ಬಳಸಿರುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಇಲ್ಲವೇ? ಈ ಕುರಿತು ತಪಾಸಣೆ ಎಷ್ಟು ಬಾರಿ ನಡೆದಿದೆ? ಎಂಬ ಕುರಿತು ಔಷಧ ನಿಯಂತ್ರಣ ಇಲಾಖೆ ವಿವರಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು ಎಂದು ಪಲ್ಲವಿ ಅಕುರಾತಿ ಅವರು ಪತ್ರದಲ್ಲಿ ಹೇಳಿದ್ದಾರೆ.

ಬಯೋಮೆಡ್ ಕಂಪನಿ ಉತ್ಪಾದಿಸುವ ಲಸಿಕೆಯಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ನಿರ್ಮೂಲನೆಯಾಗಿರುವ ಪೊಲೀಯೋ ಟೈಪ್ 2 ವೈರಾಣು ಪತ್ತೆಯಾಗಿತ್ತು. ಈ ಸಂಬಂಧ ಕೂಡಲೇ ಎಚ್ಚೆತ್ತಿದ್ದ ಅಧಿಕಾರಿಗಳು, ಲಸಿಕೆ ಬಳಸದಂತೆ ಉತ್ತರಪ್ರದೇಶ, ಮಹಾರಾಷ್ಟ್ರಗಳಿಗೆ ಸೂಚನೆ ನೀಡಿದ್ದರು.

ಪೋಲೀಯೋ ಟೈಪ್ 2 ವೈರಾಣು ನಿರ್ಮೂಲನೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಉತ್ತರಪ್ರದೇಶದ ಕೆಲವೊಂದು ಮಕ್ಕಳ ಮಲದ ಮಾದರಿಯಲ್ಲಿ ಆ ವೈರಾಣುವಿನ ಲಕ್ಷಣ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೋಲಿಯೋ ಲಸಿಕೆಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಕೆಲವೊಂದು ಲಸಿಕೆಗಳಲ್ಲಿ ಪೋಲಿಯೋ ಟೈಪ್ 2 ವೈರಾಣು ಇರುವುದು ಪತ್ತೆಯಾಗಿತ್ತು. ಕೂಡಲೇ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪೋಲಿಯೋ ಟೈಪ್ 2 ವೈರಾಣುವನ್ನು 2016ರ ಏಪ್ರಿಲ್ 25 ರೊಳಗೆ ಸಂಪೂರ್ಣ ನಾಶಗೊಳಿಸುವಂತೆ ಕೇಂದ್ರ ಔಷಧ ನಿಯಂತ್ರಕ ಸಂಸ್ಥೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರೂ ಆ ವೈರಾಣುವನ್ನು ಬಯೋಮೆಡ್ ಕಂಪನಿ ಕಾಪಿಟ್ಟುಕೊಂಡಿದ್ದು ಹೇಗೆ ಎಂಬ ಕುರಿತು ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು.

ಇದನ್ನೂ ಓದಿ : ಐಎಎಸ್‌ ಅಧಿಕಾರಿ ಮಗುವಿಗೆ ನಿಷೇಧಿತ ಪೊಲಿಯೋ ಲಸಿಕೆ ಆರೋಪ; ಇಬ್ಬರ ವಿರುದ್ಧ ಎಫ್‌ಐಆರ್‌

ಪೊಲಿಯೋ ಲಸಿಕೆಯಲ್ಲಿ ಪೋಲಿಯೋಕಾರಕ ವೈರಾಣು ಪತ್ತೆಯಾದ ಪ್ರಕರಣದ ಹಿಂದೆ ಗಾಜಿಯಾಬಾದ್ ಮೂಲದ ಬಯೋಮೆಡ್ ಕಂಪನಿಯ ದುರುದ್ದೇಶ ಅಡಗಿರುವಂತಿದೆ. ಪೋಲಿಯೋ ನಿರ್ಮೂಲನೆಯಾದರೆ ಕಂಪನಿಯ ವ್ಯವಹಾರ ಕಡಿಮೆಯಾಗುತ್ತದೆ. ಪೊಲೀಯೋ ಹೆಚ್ಚಾದರೆ ಉದ್ಯಮ ಬೆಳೆಯುತ್ತದೆ, ಲಸಿಕೆಗೆ ಬೇಡಿಕೆ ಹೆಚ್ಚುತ್ತದೆ. ಆದ ಕಾರಣ ಪೋಲಿಯೋ ಹರಡಲು ಕಂಪನಿ ಯತ್ನಿಸಿರಬಹುದು ಎಂದು ಕೇಂದ್ರ ಔಷಧ ನಿಯಂತ್ರಕ ಸಂಸ್ಥೆಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು.

ಸಮರ್ಪಕವಾಗಿ ತೊಲಗದ ಟೈಪ್-2 ಪೋಲಿಯೋ ನಿವಾರಣೆಗಾಗಿ 2016ರ ಏಪ್ರಿಲ್ ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಹೊಸ ಲಸಿಕೆ ಪ್ರಾರಂಭಿಸಲಾಗಿತ್ತು. ಪೋಲಿಯೋ ಹನಿಗಳಲ್ಲಿ ಎರಡು ವಿಧಗಳಿವೆ. ಟ್ರಿವೆಲೆಂಟ್ ಹಾಗೂ ಬಿವಲೆಂಟ್ ಒಪಿವಿ ಎಂದು ಅದನ್ನು ಕರೆಯಲಾಗುತ್ತದೆ.

ಬ್ರಿವಲೆಂಟ್ ಲಸಿಕೆಯನ್ನು 2016ರ ಏಪ್ರಿಲ್ ನಲ್ಲಿ ಭಾರತ ಸರ್ಕಾರವು ಪೂರೈಸಿದ್ದು, ಈ ಬ್ಯಾಚ್ ನ ಒಪಿವಿ ಉತ್ತರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಪೂರೈಕೆಯಾಗಿದೆ. ಆದರೆ ಈ ಬ್ಯಾಚ್ ನ ಔಷಧ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯವು ಸುರಕ್ಷಿತವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹಿರಿಯ ಆರೋಗ್ಯಾಧಿಕಾರಿ ರಜನಿ ನಾಗೇಶ್ ರಾವ್ ಸ್ಪಷ್ಟಪಡಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More