ಎರಡೇ ವರ್ಷದಲ್ಲಿ ಇಪ್ಪತ್ತು ಕೋಟಿ ಗ್ರಾಹಕರನ್ನು ಪಡೆದ ರಿಲಯನ್ಸ್ ಜಿಯೋ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ದೇಶದ ಮೊಬೈಲ್ ಕ್ಷೇತ್ರದ ಚಿತ್ರಣ ಬದಲಾಯಿಸಿದೆ. ಅತಿ ಕಡಿಮೆ ದರದ ಡೇಟಾ ಒದಗಿಸಿ ಮೊಬೈಲ್ ಬಳಕೆಗೆ ಹೊಸ ರೂಪ ನೀಡಿದೆ. ತ್ವರಿತಗತಿಯಲ್ಲಿ 20 ಕೋಟಿ  ಗ್ರಾಹಕರನ್ನು ಪಡೆದು ವಿಶ್ವದಲ್ಲೇ ತ್ವರಿತವಾಗಿ ಬೆಳೆದ ಹೆಗ್ಗಳಿಕೆ ಪಡೆದಿದೆ. ಮುಂದೇನು?

ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ಮೂಲಕ ಭಾರತದ ಮೊಬೈಲ್ ಮತ್ತು ಡೇಟಾ ವಲಯದಲ್ಲಿ ಕ್ಷಿಪ್ರ ಕ್ರಾಂತಿ ಮಾಡಿದ್ದಾರೆ. ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶಿಸಿದ ಎರಡೇ ವರ್ಷದಲ್ಲಿ ಭಾರತದ ಮೊಬೈಲ್ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಗ್ರಾಹಕರ ಡೇಟಾ ಬಳಕೆ ಸ್ವರೂಪವೂ ಬದಲಾಗಿದೆ.

ಎಲ್ಲವನ್ನೂ ಉಚಿತವಾಗಿ ನೀಡಿ ಮಾರುಕಟ್ಟೆ ವಿಸ್ತರಿಸಿದ ಮುಖೇಶ್ ಅಂಬಾನಿ ಆಧಾರ್ ಆಧಾರಿತ ಮೊಬೈಲ್ ಗ್ರಾಹಕರ ನೋಂದಣಿ ಸೌಲಭ್ಯವನ್ನು ಬಳಸಿಕೊಂಡು ತ್ವರಿತಗತಿಯಲ್ಲಿ ಎಂಟು ಕೋಟಿ ಗ್ರಾಹಕರನ್ನು ಪಡೆದರು. ಆಧಾರ್ ಆಧಾರಿತ ಮೊಬೈಲ್ ಗ್ರಾಹಕರನ್ನು ಸೆಳೆಯುವುದು ಹೇಗೆಂದು ಉಳಿದ ಮೊಬೈಲ್ ಕಂಪನಿಗಳು ಯೋಚಿಸುವ ಹೊತ್ತಿಗೆ ರಿಲಯನ್ಸ್ ಜಿಯೋ ಐದು10 ಕೋಟಿ ಗ್ರಾಹಕರನ್ನು ಪಡೆದಿತ್ತು. ಪ್ರಸ್ತುತ ಜಿಯೋ ಗ್ರಾಹಕರ ಸಂಖ್ಯೆ 20 ಕೋಟಿ ಮೀರಿದೆ. ಎಲ್ಲಕ್ಕೂ ಮಿಗಿಲಾದ ಸಂಗತಿ ಎಂದರೆ ಪ್ರಸಕ್ತ ವರ್ಷದ ವಿತ್ತೀಯವರ್ಷದಲ್ಲಿ ರಿಲಯನ್ಸ್ ಜಿಯೋ ಇನ್ಫೊಕಾಮ್ ಕಂಪನಿ 680 ಕೋಟಿ ರುಪಾಯಿ ನಿವ್ವಳಲಾಭ ಗಳಿಸಿದೆ. ಮೊದಲ ತ್ರೈಮಾಸಿಕದಲ್ಲಿ 612 ಕೋಟಿ ನಿವ್ವಳ ಲಾಭಗಳಿಸಿತ್ತು.

ಕರೆಯಾಧಾರಿತ ಮೊಬೈಲ್ ಸೇವೆಯು ಈಗ ಡೇಟಾ ಆಧಾರಿತ ಮೊಬೈಲ್ ಸೇವೆಯಾಗಿ ಪರಿವರ್ತನೆಯಾಗಿದೆ. ರಿಲಯನ್ಸ್ ಜಿಯೋ ತಂದ ವಿಶ್ವದ ಅತಿ ಕಡಮೆ ದರದ ಡೇಟಾ ಸೇವೆಯಿಂದಾಗಿ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆ ತ್ವರಿತಗತಿಯಲ್ಲಿ ಜಿಗಿದಿದೆ. ಬೇಸಿಕ್ ಮೊಬೈಲ್ ಬಳಕೆ ದಾರರ ಸಂಖ್ಯೆ ತೀವ್ರಗತಿಯಲ್ಲಿ ಕುಸಿಯುತ್ತಿರುವಂತೆ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಅಷ್ಟೇ ತ್ವರಿತಗತಿಯಲ್ಲಿ ಜಿಗಿಯುತ್ತಿದೆ.

2013ರಲ್ಲಿ ಒಂದು ಜಿಬಿ ಡೇಟಾಗೆ 380 ರುಪಾಯಿ ಇದ್ದದ್ದು 2017ರ ವೇಳೆ ಕೇವಲ 10-15ರುಪಾಯಿಗೆ ಕುಸಿದಿದೆ. ಈಗಲೂ ಬಹುತೇಕ ಕಂಪನಿಗಳು ಒಂದು ಜಿಬಿ ಡೇಟಾವನ್ನು ಸರಾಸರಿ 10 ರುಪಾಯಿಗೆ ನೀಡುತ್ತಿವೆ. 2014 ಮತ್ತು 2015ರಲ್ಲಿ 250 ಮತ್ತು 225 ರುಪಾಯಿಗೆ ಕುಸಿದದ್ದು 2016ರಲ್ಲಿ 150ರ ಆಜುಬಾಜಿನಲ್ಲಿತ್ತು. ಆದರೆ, ಜಿಯೋ ಪ್ರವೇಶದ ನಂತರ ಡೇಟಾ ದರ ಏಕಾಏಕಿ 10ರುಪಾಯಿಗೆ ಕುಸಿದಿದೆ. ಆರಂಭದಲ್ಲಿ ಉಚಿತವಾಗಿ ಕರೆ ಡೇಟಾ ಮತ್ತಿತರ ಸೇವೆ ಒದಗಿಸಿ ಬೃಹತ್ ಪ್ರಮಾಣದಲ್ಲಿ ಗ್ರಾಹಕರನ್ನು ಗಳಸಿದ ರಿಲಯನ್ಸ್ ಜಿಯೋ ಮಾರುಕಟ್ಟೆಯಲ್ಲಿದ್ದ ಇತರ ಪ್ರತಿ ಸ್ಪರ್ಧಿ ಕಂಪನಿಗಳಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಈಗಲೂ ಏರ್ಟೆಲ್, ವೊಡಾ ಫೋನ್ ಐಡಿಯಾ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ದೊಡ್ಡ ಪ್ರಮಾಣದಲ್ಲಿ ಆದಾಯ ನಷ್ಟಮಾಡಿಕೊಂಡಿವೆ.

ಜಿಯೋ ಮಾರುಕಟ್ಟೆ ಬಂದ ನಂತರ ಮೊಬೈಲ್ ಕಂಪನಿಗಳ ಮಾರುಕಟ್ಟೆ ಪಾಲೂ ಬದಲಾಗಿದೆ. 2018ರಲ್ಲಿ ಉಳಿದಿರುವ ಪ್ರಮುಖ ಸ್ಪರ್ಧಿಗಳು ಮೂರು ಮಾತ್ರ. ಏರ್ಟೆಲ್, ವೋಡಾಫೋನ್-ಐಡಿಯಾ ಮತ್ತು ಜಿಯೋ. ಎಂಟಿಎನ್ಎಲ್- ಬಿಎಸ್ಎನ್ಎಲ್ ಮಾರುಕಟ್ಟೆ ಪಾಲು ಗಣನೀಯವಾಗಿ ತಗ್ಗಿದೆ. ಏರ್ಸೆಲ್ ಮತ್ತು ಇತರ ಐದು ಕಂಪನಿಗಳು ತಮ್ಮ ವಹಿವಾಟು ಬಂದ್ ಮಾಡುವ ಹಂತಕ್ಕೆ ಬಂದಿವೆ. ಜಿಯೋ ಜತೆ ಸೆಣಸುವ ಸಲುವಾಗಿಯೇ ವೊಡಾಫೋನ್- ಐಡಿಯಾ ವಿಲೀನಗೊಂಡಿವೆ. ವಿಲಿನೋತ್ತರದಲ್ಲಿ ವೋಡಾಫೋನ್-ಐಡಿಯಾ (38.4%) ಅಗ್ರಸ್ಥಾನದಲ್ಲಿದ್ದರೆ, ಇದುವರೆಗೆ ಅಗ್ರಸ್ಥಾನದಲ್ಲಿದ್ದ ಏರ್ಟೆಲ್ (29.8%) ಎರಡನೇ ಸ್ಥಾನಕ್ಕೆ ಇಳಿದಿದೆ. ರಿಲಯನ್ಸ್ ಜಿಯೋ(19.6%) ಎರಡೇ ವರ್ಷದಲ್ಲಿ ಮೂರನೇ ಸ್ಥಾನದಲ್ಲಿದೆ. ಉಳಿದ ಕಂಪನಿಗಳ ಪಾಲು ಕೇವಲ ಶೇ.12.2ರಷ್ಟಿದೆ.

ಇದನ್ನೂ ಓದಿ : ವೊಡಾ-ಐಡಿಯಾ ವಿಲೀನಕ್ಕೆ ಅಸ್ತು; ಮೊಬೈಲ್ ಉದ್ಯಮದಲ್ಲಿ ಏನೆಲ್ಲ ಬದಲಾಗಲಿದೆ?

ರಿಲಯನ್ಸ್ ಜಿಯೋ ನೇರವಾಗಿ 4ಜಿ ಸೇವೆ ಒದಗಿಸಿದ್ದರಿಂದ ಸ್ಮಾರ್ಟ್ ಫೋನ್ ಬಳಕೆ ಮಾಡುವ ಹೊಸ ತಲೆಮಾರಿನ ಗ್ರಾಹಕರನ್ನು ತ್ವರಿತವಾಗಿ ಸೆಳೆಯಿತು. ಮಾರುಕಟ್ಟೆ ಪಾಲನ್ನು ವಿಸ್ತರಿಸುತ್ತಲೇ ಇದೆ. ಆರಂಭದಲ್ಲಿ ನಗರಕೇಂದ್ರಿತವಾಗಿದ್ದ ಜಿಯೋ ಈಗ ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಿದೆ. ರಿಲಯನ್ಸ್ ಪ್ರವೇಶದಿಂದ ಮತ್ತು ಒಡ್ಡಿದ ತೀವ್ರ ಸ್ಪರ್ಧೆಯಿಂದ ನಿಜವಾಗಿ ಗೆದ್ದದ್ದು ಕೋಟ್ಯಾಂತರ ಗ್ರಾಹಕರು. ಡೇಟಾ ದರ ಕುಸಿದ ಪರಿಣಾಮ ದೇಶದಲ್ಲಿ ಡೇಟಾ ಬಳಕೆ ತ್ವರಿತವಾಗಿ ಜಿಗಿದಿದೆ. 2017ರಲ್ಲೇ ಡೇಟಾ ಬಳಕೆ ಪ್ರತಿ ತಿಂಗಳಲ್ಲಿ 1.5 ಬಿಲಿಯನ್ ಗಿಗಾ ಬೈಟ್ ಗೆ ಏರಿದೆ. ಅಮೆರಿಕ ಮತ್ತು ಚೀನಾ ಉಭಯ ದೇಶಗಳ ಒಟ್ಟು ಡೇಟಾ ಬಳಕೆಗಿಂತಲೂ ಭಾರತದ ಡೇಟಾ ಬಳಕೆ ಹೆಚ್ಚಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಮೊಬೈಲ್ ಕ್ಷೇತ್ರದಲ್ಲೀಗ ಕ್ರೋಢೀಕರಣವಾಗಿದೆ. ಪ್ರಮುಖ ಮೂವರು ಸ್ಪರ್ಧಿಗಳಿದ್ದಾರೆ. ಬರುವ ದಿನಗಳಲ್ಲೂ ಈ ಕಂಪನಿಗಳು ಕಡಮೆದರದಲ್ಲೇ ಡೇಟಾ ಮತ್ತು ಕರೆ ಸೇವೆ ಒದಗಿಸುತ್ತಾರಾ ಎಂಬುದು ಮುಖ್ಯ ಪ್ರಶ್ನೆ. ಎಲ್ಲಿಯವರೆಗೆ ಜಿಯೋ ಕಡಮೆ ದರದ ಸೇವೆ ವಿಸ್ತರಿಸುತ್ತದೋ ಅಲ್ಲಿಯವರೆಗೂ ಗ್ರಾಹಕರೇ ವಿಜೇತರು. ಆದರೆ, ಎಲ್ಲಿಯವರೆಗೆ ಜಿಯೋ ಕಡಮೆ ದರ ಸೇವೆ ನೀಡುತ್ತದೆ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More