ಅಯ್ಯಪ್ಪನ ಸನ್ನಿಧಾನದಲ್ಲಿ ಹಿಂಸಾಚಾರ; ಮಹಿಳೆಯರ ಪ್ರವೇಶಕ್ಕೆ ಅಡ್ಡಿ

ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ನಿಲುಕ್ಕಲ್ ಪ್ರದೇಶದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ದೇವಸ್ಥಾನ ಪ್ರವೇಶಿಸಲು ಮಹಿಳೆಯರಿಗೆ ಅಡ್ಡಿಪಡಿಸಲಾಗಿದೆ

ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಲು ಮುಂದಾಗಿದ್ದ ಮಹಿಳಾ ಭಕ್ತರಿಗೆ ಹಿನ್ನಡೆಯಾಗಿದೆ. ಅಯ್ಯಪ್ಪ ಸ್ವಾಮಿಯ ಸಂಪ್ರದಾಯ ಹಾಗೂ ನಂಬಿಕೆಗಳಿಗೆ ವಿರುದ್ಧವೆಂದು ಬಿಜೆಪಿ, ಕಾಂಗ್ರೆಸ್‌ ಪಕ್ಷಗಳೂ ಸೇರಿದಂತೆ ವಿವಿಧ ಸಂಘಟನೆಗಳು ಮಹಿಳೆಯರ ದೇಗುಲ ಪ್ರವೇಶಕ್ಕೆ ಅಡ್ಡಿ ಮಾಡಿದ್ದಾರೆ. ಹಲವು ನಾಟಕೀಯ ಬೆಳವಣಿಗಳ ನಡುವೆ ಬುಧವಾರ ಸಂಜೆ ಐದು ಗಂಟೆಗೆ ಅಯ್ಯಪ್ಪ ದೇವಸ್ಥಾನದಲ್ಲಿ ಆರಂಭವಾದ ಥುಲಂ ಪೂಜಾದಲ್ಲಿ ಭಾಗವಹಿಸಲು ಸುಪ್ರೀಂಕೋರ್ಟ್‌ ತೀರ್ಪಿನನ್ವಯ ಎಲ್ಲಾ ವಯೋಮಾನದ ಮಹಿಳೆಯರಿಗೂ ಅವಕಾಶ ಮಾಡಿಕೊಡಲಾಗಿದೆ. ಈ ನಡುವೆಯೂ ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಮಹಿಳೆಯರ ದೇವಸ್ಥಾನ ಪ್ರವೇಶದ ವಿಚಾರ ವಿವಾದದ ಸ್ವರೂಪ ಪಡೆದಿದೆ.

ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಮುಂದಾದ ಮಹಿಳಾ ಭಕ್ತರು ಮತ್ತು ಈ ವಿಶೇಷ ಸಂದರ್ಭವನ್ನು ವರದಿ ಮಾಡಲು ಮುಂದಾದ ಮಾಧ್ಯಮದವರ ಮೇಲೆ ಪ್ರತಿಭಟನಾನಿರತರು ಬುಧವಾರ ದೈಹಿಕ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕನಿಷ್ಠ ಮೂವರು ವರದಿಗಾರ್ತಿಯರ ಮೇಲೆ ಹಲ್ಲೆ ನಡೆಸಲಾಗಿದ್ದು, ಮಾಧ್ಯಮಗಳ ವಾಹನ, ಕ್ಯಾಮೆರಾಗಳಿಗೆ ಹಾನಿ ಮಾಡಲಾಗಿದೆ. ನಿಲಕ್ಕಲ್ ಮತ್ತು ಪಂಪಾ ಬೇಸ್‌ ಕ್ಯಾಂಪ್‌ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು, ದೇವಾಲಯ ಪ್ರವೇಶಿಸಲು ಮುಂದಾದ ಭಕ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಿಲಕ್ಕಲ್‌ನಿಂದ ದೇವಸ್ಥಾನದತ್ತ ಮುಖ ಮಾಡಿದ್ದ ಇಬ್ಬರು ಮಹಿಳಾ ಭಕ್ತರನ್ನು ಪ್ರತಿಭಟನಾಕಾರರು ಬೆದರಿಸಿ ಹಿಂದೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಶಬರಿಮಲೆ ದೇವಸ್ಥಾನಕ್ಕೆ 10-50 ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಕಳೆದ ತಿಂಗಳು‌ ಚಾರಿತ್ರಿಕ ತೀರ್ಪು ನೀಡಿತ್ತು. ಇದಕ್ಕೆ ಅಯ್ಯಪ್ಪ ಸೇವಾ ಸಂಘದ ನೇತೃತ್ವದಲ್ಲಿ ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು ಎಂದು ಕೆಲವರು ಬೆದರಿಕೆಯೊಡ್ಡಿದ್ದರು. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಕೋರ್ಟ್‌ ತೀರ್ಪಿನಂತೆ ನಡೆದುಕೊಳ್ಳಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಸರ್ಕಾರದ ನಿರ್ಧಾರದಿಂದ ಕುಪಿತರಾದ ಪ್ರತಿಭಟನಾಕಾರರು ಭಕ್ತರ ಮೇಲೆ ದಾಳಿ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾನಿರತರನ್ನು ಚದುರಿಸಲಾಗಿದ್ದು, ನಿಲಕ್ಕಲ್‌, ಪಂಪಾ, ಸನ್ನಿಧಾನಂ, ಎಲವಂಕಳ್ ಪ್ರದೇಶಗಳಲ್ಲಿ ಗುರುವಾರ ನಿಷೇಧಾಜ್ಞೆ ಘೋಷಿಸಲಾಗಿದೆ. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ವ್ಯಾಪ್ತಿಯಲ್ಲಿ ಅಯ್ಯಪ್ಪ ದೇವಸ್ಥಾನವಿದೆ. ದೇವಾಲಯದಿಂದ ೨೦ ಕಿ ಮೀ ಹಿಂದೆ ನಿಲುಕ್ಕಲ್‌ ಎಂಬ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಭದ್ರತೆ ಒದಗಿಸಲಾಗಿದೆ. ಆದರೆ, ದಟ್ಟಡವಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಪ್ರತಿಭಟನಾಕಾರರು ದೇವಸ್ಥಾನಕ್ಕೆ ಭಕ್ತರ ಪ್ರವೇಶ ಆರಂಭವಾಗುತ್ತಿದ್ದಂತೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಮುಟ್ಟಿನ ದೇವಿಯನ್ನೇ ಆರಾಧಿಸುವ ಕೇರಳದಲ್ಲಿ ಶಬರಿಮಲೆ ದೇಗುಲ ಪ್ರವೇಶಕ್ಕೆ ನಿಷೇಧವೇಕೆ?

“ಋತುಮತಿಯಾದ ಮಹಿಳೆಯರು ಅಯ್ಯಪ್ಪನ ದೇವಸ್ಥಾನ ಪ್ರವೇಶಿಸಿದರೆ ಅದು ಮೈಲಿಗೆಯಾಗಲಿದೆ ಎಂಬ ಸಾಂಪ್ರದಾಯಿಕವಾಗಿ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ೧೦-೫೦ ವಯೋಮಾನದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬಾರದು. ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು” ಎಂದು ಪಂದಳಂ ರಾಜ ಕುಟುಂಬದ ಸದಸ್ಯರು, ಅರ್ಚಕರು, ಬಿಜೆಪಿ, ಕಾಂಗ್ರೆಸ್‌ ಹಾಗೂ ಬಲಪಂಥೀಯ ಸಂಘಟನೆಗಳು ಪ್ರತಿಪಾದಿಸಿವೆ. “ಶಬರಿಮಲೆ ದೇವಸ್ಥಾನದ ಹೋರಾಟವು ಕೇರಳದ ದಿಕ್ಕು, ದಿಸೆ ಬದಲಿಸಿದೆ. ಹಿಂದೂ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಬಿಜೆಪಿಯು ರಾಜ್ಯ ಸರ್ಕಾರವನ್ನು ಎಚ್ಚರಿಸಿತ್ತು. ಆದರೆ, ಆಡಳಿತರೂಢ ಪಿಣರಾಯಿ ವಿಜಯನ್‌ ನೇತೃತ್ವದ ಸಿಪಿಎಂ ಸರ್ಕಾರವು ಸುಪ್ರೀಂಕೋರ್ಟ್‌ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಲು ಮುಂದಾಗಿದ್ದರಿಂದ ಪರ-ವಿರೋಧವು ಘರ್ಷಣೆಗೆ ನಾಂದಿ ಹಾಡಿದೆ. ರಾಜಕೀಯ ಲಾಭಗಳಿಸಲು ಬಿಜೆಪಿ ಹೋರಾಟ ಸಂಘಟಿಸಿದೆ ಎಂಬ ಆರೋಪ ಕೇಳಿಬಂದಿದೆ.

ಇದಕ್ಕೂ ಮುನ್ನ, ತಿರುವಾಂಕೂರು ದೇವಸ್ಥಾನ ಮಂಡಳಿ (ಟಿಡಿಬಿ) ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಪಂದಳಂ ರಾಜಕುಟುಂಬದ ಪ್ರತಿನಿಧಿಗಳು, ಅರ್ಚಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಲಿಲ್ಲ. ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆಯೆ ಬಿಜೆಪಿಯು ಬಹಿರಂಗವಾಗಿ ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ತೀರ್ಪಿನ ನಂತರ ಕೇರಳ ಹಾಗೂ ವಿವಿಧೆಡೆ ನಡೆದ ಹೋರಾಟಗಳಿಗೆ ಬೆಂಬಲ ನೀಡಿದೆ. ವಿಚಿತ್ರವೆಂದರೆ, ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಾಲಯ ಹಾಗೂ ಮುಂಬೈನ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶಕ್ಕೆ ಆಗ್ರಹಿಸಿ ನಡೆದಿದ್ದ ಹೋರಾಟಗಳಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More