ಎನ್‌ಡಿಟಿವಿ ವಿರುದ್ಧ ಅನಿಲ್‌ ಅಂಬಾನಿ ಮಾನನಷ್ಟ ಮೊಕದ್ದಮೆ, ಇ.ಡಿ ನೋಟಿಸ್‌!

ರಫೇಲ್‌ ಡೀಲ್‌ ವಿವಾದದಲ್ಲಿ ಕೇಂದ್ರ ಸರ್ಕಾರ ಮುಜುಗರಕ್ಕೆ ಸಿಲುಕುತ್ತಲೇ ಇದೆ. ಫ್ರೆಂಚ್‌ ಮಾಧ್ಯಮಗಳಲ್ಲಿ ಒಪ್ಪಂದ ಕುರಿತ ಸಂಗತಿಗಳು ಬಯಲಾಗುತ್ತಿದ್ದು, ಕೇಂದ್ರ ಸರ್ಕಾರ ನೀಡುತ್ತಿರುವ ಹೇಳಿಕೆಗೆ ವ್ಯತಿರಿಕ್ತವಾಗಿವೆ. ಈ ಕುರಿತು ವರದಿ ಮಾಡಿದ ಎನ್‌ಡಿಟಿವಿ ಈಗ ಕೋಪಕ್ಕೆ ತುತ್ತಾಗಿದೆ

ಕಳೆದ ಸೆಪ್ಟೆಂಬರ್‌ ೨೯ರಂದು ಎನ್‌ಡಿಟಿವಿ ‘ಟ್ರೂತ್‌ ವರ್ಸಸ್‌ ಹೈಪ್‌’ ಹೆಸರಿನ ಶೋನಲ್ಲಿ ರಫೇಲ್‌ ವಿವಾದಕ್ಕೆ ಸಂಬಂಧಿಸಿದ ಚರ್ಚೆಯನ್ನು ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಿಲಯನ್ಸ್‌ ಸಂಸ್ಥೆ ಲಿಖಿತ ಮನವಿಗಳನ್ನು ಹಲವು ಬಾರಿ ಸಲ್ಲಿಸಿದ್ದರೂ ಯಾರೂ ಪಾಲ್ಗೊಳ್ಳಲಿಲ್ಲ. ಕಾರ್ಯಕ್ರಮ ಪ್ರಸಾರ ಎರಡು ವಾರಗಳ ಬಳಿಕ ಅನಿಲ್‌ ಅಂಬಾನಿಯವರ ರಿಲಯನ್ಸ್‌ ಸಮೂಹ ಅಲಹಾಬಾದಿನ ಕೋರ್ಟ್‌ವೊಂದರಲ್ಲಿ ೧೦,೦೦೦ ಕೋಟಿ ರು. ಮಾನನಷ್ಟ ಮೊಕದ್ದಮೆಯನ್ನು ಹೂಡಿದೆ.

ಇನ್ನೊಂದೆಡೆ, ಕೇಂದ್ರ ಸರ್ಕಾರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ೩,೦೦೦ ಕೋಟಿ ರು.ಗಳ ಹೂಡಿಕೆಯ ವಿಷಯದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ನೋಟಿಸ್‌ ಜಾರಿ ಮಾಡಿದೆ. ಮೆಲ್ನೋಟಕ್ಕೆ ಇದು ತೆರಿಗೆ ಪ್ರಕರಣದಂತೆ ಕಂಡರೂ, ರಫೇಲ್‌ ಕುರಿತು ವರದಿ ಮಾಡಿದ್ದೇ ಕಾರಣವೆಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಅಂಬಾನಿ ಅವರು ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಯು ಅ.೨೬ರಂದು ನಡೆಯಲಿದೆ. ಎನ್‌ಡಿಟಿವಿ ಈ ಕುರಿತು ಪ್ರತಿಕ್ರಿಯಿಸಿದ್ದು, “ಅನಿಲ್‌ ಅಂಬಾನಿ ಸಮೂಹವು ವಾಸ್ತವಾಂಶ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಮಾಧ್ಯಮದ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿದೆ,” ಎಂದಿದೆ.

ಅಂಬಾನಿಯವರ ಸಮೂಹವು ಮಾಡಿರುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ವಾಹಿನಿಯೂ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದೆ. ಇದೇ ವೇಳೆ, ಎನ್‌ಡಿಟಿವಿ ಕೇಂದ್ರ ಸರ್ಕಾರದಿಂದ ಭಾರಿ ಮೊತ್ತದ ನೋಟಿಸ್‌ ಅನ್ನು ಎದುರಿಸಿದೆ. ಜಾರಿ ನಿರ್ದೇಶನಾಲಯವು, "ಎನ್‌ಡಿಟಿವಿಯು ೫೮೨ ಕೋಟಿ ರು.ಗಳಷ್ಟು ಸಾಗರೋತ್ತರ ಹೂಡಿಕೆ ವಿಷಯದಲ್ಲಿ ಕಾನೂನು ಉಲ್ಲಂಘಿಸಿದ್ದು, ಆರ್‌ಬಿಐಗೆ ೨,೪೧೪ ಕೋಟಿ ರು.ಗಳ ಮೊತ್ತದ ವರದಿ ಹಾಗೂ ಇತರ ಮಾಹಿತಿ ಸಲ್ಲಿಕೆಯಲ್ಲಿ ವಿಳಂಬಿಸಿದೆ,' ಎಂದು ನೋಟಿಸ್‌ ನೀಡಿದೆ.

ಇದನ್ನೂ ಓದಿ : ಪ್ರಧಾನಿ ವಿರುದ್ಧ ಸಿಬಿಐಗೆ ದೂರು; ದಿನೇದಿನೇ ಮೊನಚಾಗುತ್ತಿದೆ ರಫೇಲ್ ಹಕ್ಕಿ ಕೊಕ್ಕು

ಖಾಸಗಿ ಸಂಸ್ಥೆ ಮತ್ತು ಸರ್ಕಾರ ಎರಡೂ ಕಡೆಯಿಂದ ಈ ರೀತಿಯ ಒತ್ತಡ ನಿರ್ಮಾಣವಾಗಿದ್ದರ ಕುರಿತು ಎನ್‌ಡಿಟಿವಿ ದಿಟ್ಟವಾಗಿ ಉತ್ತರಿಸಿದ್ದು, “ಎನ್‌ಡಿಟಿವಿ ಮೇಲೆ ಇರುವ ಫೆಮಾ ನಿಯಂತ್ರಣ ಉಲ್ಲಂಘನೆ ಆಧಾರರಹಿತವಾದದ್ದು. ಎನ್‌ಡಿಟಿವಿಯ ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವು ಈಗ ಕಿರುಕುಳವನ್ನು ಎದುರಿಸುತ್ತಿದೆ. ಈ ರೀತಿಯ ಕಿರುಕುಳ ಇತರೆ ಮಾಧ್ಯಮ ಸಂಸ್ಥೆಗಳಿಗೆ ನೀಡುತ್ತಿರುವ ಸೂಚನೆಯಾಗಿದ್ದು, ನಮ್ಮ ಅಣತಿಯನ್ನು ಮೀರಿದರೆ ಇದೇ ಪರಿಣಾಮ ಎದುರಿಸಬೇಕಾಗುತ್ತಿದೆ ಎಂಬ ಸಂದೇಶವನ್ನು ನೀಡುವ ಯತ್ನವನ್ನು ಸರ್ಕಾರ ಮಾಡುತ್ತಿದೆ,'' ಎಂದು ಹೇಳಿದೆ.

ಎನ್‌ಡಿಟಿವಿ ಮೇಲೆ ಈ ಆರೋಪ ಬಂದಿದ್ದು ಇದೇ ಮೊದಲೇನಲ್ಲ. ೨೦೧೫ರಲ್ಲಿ ಇದೇ ರೀತಿ ವಿವರಣೆ ಕೋರಿ ನೋಟಿಸ್‌ ನೀಡಿದಾಗ, ಅದನ್ನು ತಿರಸ್ಕರಿಸಲಾಗಿತ್ತು. ಸಂಸ್ಥೆಯ ಕಾರ್ಯಕಾರಿ ಸಹ ಅಧ್ಯಕ್ಷರುಗಳಾದ ಪ್ರಣಯ್‌ ರಾಯ್‌ ಮತ್ತು ರಾಧಿಕಾರ ರಾಯ್‌, ಕಾರ್ಯಕಾರಿ ಉಪಾಧ್ಯಕ್ಷರಾದ ಕೆ ವಿ ಎಲ್ ನಾರಾಯಣ್‌ ರಾವ್‌ ಅವರಿಗೆ ನೋಟಿಸ್‌ ನೀಡಲಾಗಿತ್ತು.

ಇತ್ತೀಚೆಗೆ ‘ದಿ ಕ್ವಿಂಟ್‌’ ಸಂಪಾದಕ ರಾಘವ್‌ ಬೆಹಲ್‌ ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More