ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?

ಐಎಲ್ & ಎಫ್ಎಸ್ ಸಾಲ ಮರುಪಾವತಿ ವೈಫಲ್ಯ ಸೃಷ್ಟಿಸಿದ ತಲ್ಲಣದಿಂದ ಪೇಟೆ ಚೇತರಿಸಿಕೊಳ್ಳುವ ಮುನ್ನವೇ ಸೂಪರ್ಟೆಕ್ ಆಘಾತ ನೀಡಿದೆ. 600 ಕೋಟಿ ರುಪಾಯಿಗಳ ಸಾಲ ಮರುಪಾವತಿ ವೈಫಲ್ಯವು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮುಂದಿನ ಸಂಕಷ್ಟಗಳಿಗೆ ಮುನ್ನುಡಿ ಆಗಲಿದೆಯೇ?

ರಾಷ್ಟ್ರದ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ನಾಲ್ಕು ರಾಜ್ಯಗಳ ಗಡಿಭಾಗಗಳನ್ನು ಒಳಗೊಂಡ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್ಸಿಆರ್) ಪ್ರದೇಶದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾಗಿರುವ ಸೂಪರ್ಟೆಕ್ 600 ಕೋಟಿ ರುಪಾಯಿಗಳನ್ನು ಸಕಾಲದಲ್ಲಿ ಪಾವತಿಸಲಾಗದೆ ಸುಸ್ತಿಯಾಗಿದೆ. ಕಂಪನಿ ಕೇವಲ 600 ಕೋಟಿ ರುಪಾಯಿಗಳಿಗೆ ಮಾತ್ರ ಸುಸ್ತಿಯಾಗಿದ್ದರೂ ಈ ಕಂಪನಿಗೆ ಸಾಲ ಒದಗಿಸಿರುವ ಇಂಡಿಯಾ ಬುಲ್ ಹೌಸಿಂಗ್, ಡಿಎಚ್ಎಫ್ಎಲ್ ಮತ್ತು ರೆಪ್ಕೊ ಹೋಮ್ ಫೈನಾನ್ಸ್ ಕಂಪನಿಗಳ ಷೇರುಗಳ ಶೇ.20ರಿಂದ 30ರಷ್ಟು ಕುಸಿದಿವೆ.

ವಾರಾಂತ್ಯದ ವಹಿವಾಟಿನಲ್ಲಿ ಈ ಮೂರು ಕಂಪನಿಗಳ ಷೇರುಗಳು ಶೇ.10-15ರಷ್ಟು ಕುಸಿದಿವೆ. ಈಗಾಗಲೇ ಐಎಲ್ & ಎಫ್ಎಸ್ ಕಂಪನಿ ಸಕಾಲದಲ್ಲಿ ಸಾಲ ಪಾವತಿ ಮಾಡದೆ ಇದ್ದ ಪರಿಣಾಮ ತೀವ್ರ ಸಂಕಷ್ಟಕ್ಕೀಡಾಗಿದ್ದ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಮತ್ತು ಗೃಹಸಾಲ ಕಂಪನಿಗಳು (ಎಚ್ಎಫ್ಸಿ) ಮತ್ತೊಂದು ಸುತ್ತು ಸಂಕಷ್ಟಕ್ಕೀಡಾಗಿವೆ. ಬಹುತೇಕ ಹೂಡಿಕೆದಾರರು ಈ ಕಂಪನಿಗಳ ಷೇರುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಕಂಪನಿಗಳ ಷೇರುಗಳು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿವೆ.

ಮಾರುಕಟ್ಟೆ ತಜ್ಞರ ಪ್ರಕಾರ, ಈ ಕುಸಿತ ಇಷ್ಟಕ್ಕೇ ಮುಗಿಯುತ್ತಿಲ್ಲ. ಮತ್ತಷ್ಟು ರಿಯಲ್ ಎಸ್ಟೇಟ್ ಕಂಪನಿಗಳು ಸಾಲ ಸಕಾಲದಲ್ಲಿ ಮರುಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಯಾವ ಕಂಪನಿಗಳು ಯಾವಾಗ ಸುಸ್ತಿಯಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಅಂತಹ ಪರಿಸ್ಥಿತಿ ತಲೆದೋರುವುದು ನಿಚ್ಚಳವಾಗಿದೆ. ಮತ್ತೊಂದು ಸೂಪರ್ಟೆಕ್ ಪ್ರಕರಣ ನಡೆದರೆ ಈಗಾಗಲೇ ಮಾರಾಟ ಒತ್ತಡದಿಂದ ನಲುಗಿರುವ ಎನ್ಬಿಎಫ್ಸಿ, ಎಚ್ಎಫ್ಸಿ ಕಂಪನಿಗಳ ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಬಹುದು.

ಕಾರ್ಪೋರೆಷನ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ ಸೂಪರ್ಟೆಕ್ ಸುಮಾರು 600 ಕೋಟಿ ರುಪಾಯಿ ಸಾಲವನ್ನು ಸಕಾಲದಲ್ಲಿ ಪಾವತಿಸದೆ ಸುಸ್ತಿಯಾಗಿದೆ ಎಂಬ ಕಾರಣಕ್ಕೆ ಸೂಪರ್ಟೆಕ್ ಪಡೆದಿದ್ದ 1866 ಕೋಟಿ ಸಾಲವನ್ನು ಬ್ರಿಕ್ವರ್ಕ್ ರೇಟಿಂಗ್ ಏಜೆನ್ಸಿ ಕೆಳಮಟ್ಟಕ್ಕೆ ಇಳಿಸಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಮತ್ತೊಂದು ಸುತ್ತು ತಲ್ಲಣ ಆರಂಭವಾಗಿದೆ. ಸೂಪರ್ಟೆಕ್ ಕಂಪನಿಗೆ ಹೆಚ್ಚು ಸಾಲ ಒದಗಿಸಿರುವ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಡಿಎಚ್ಎಫ್ಎಲ್, ರೆಪ್ಕೊ ಹೋಮ್ ಫೈನಾನ್ಸ್ ಕಂಪನಿಗಳ ಷೇರುಗಳು ತೀವ್ರವಾಗಿ ಕುಸಿದಿವೆ. ಸೂಪರ್ಟೆಕ್ ಕಂಪನಿಗೆ ಹೌಸಿಂಗ್ ಫೈನಾನ್ಸ್ ಕಂಪನಿಗಳಲ್ಲದೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ನೀಡಿವೆ. ಹೀಗಾಗಿ, ಎಲ್ಲ ಕಂಪನಿಗಳ ಷೇರುಗಳ ಮಾರಾಟ ಒತ್ತಡ ಹೆಚ್ಚಿದೆ.

ಸಮಸ್ಯೆಗೆ ಮುಖ್ಯ ಕಾರಣ ಬಂಡವಾಳ ಪೇಟೆಯಲ್ಲಿ ನಗದು ಸಿಗುತ್ತಿಲ್ಲ. ಇರುವ ಆಸ್ತಿಗಳನ್ನು ನಗದೀಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌಸಿಂಗ್ ಫೈನಾನ್ಸ್ ಕಂಪನಿಗಳು ಮತ್ತು ಎನ್ಬಿಎಫ್ಸಿಗಳು ತಾವು ನೀಡುವ ಸಾಲಕ್ಕಾಗಿ ರಾಷ್ಟ್ರೀಯ ಬ್ಯಾಂಕುಗಳನ್ನು ಅವಲಂಬಿಸುತ್ತವೆ. ರಾಷ್ಟ್ರೀಯ ಬ್ಯಾಂಕುಗಳು ಈಗ ಸಾಲ ನೀಡಿಕೆ ಪ್ರಮಾಣ ತಗ್ಗಿಸಿವೆ. ರಿಯಲ್ ಎಸ್ಟೇಟ್ ವಲಯಕ್ಕೆ ಎಚ್ಎಫ್ಸಿ ಮತ್ತು ಎನ್ಬಿಎಫ್ಸಿ ಕಂಪನಿಗಳು ನೀಡಿರುವ ಸಾಲವು ಸುಸ್ತಿಯಾಗುವ ಆತಂಕ ಸೃಷ್ಟಿಯಾಗಿದೆ. ರಿಯಲ್ ಎಸ್ಟೇಟ್ ವಲಯದಲ್ಲಿ ತೀವ್ರ ನಗದು ಕೊರತೆ ಬಿಕ್ಕಟ್ಟು ಸೃಷ್ಟಿಯಾಗಿದೆ.

ರಿಯಲ್ ಎಸ್ಟೇಟ್ ಕಂಪನಿಗಳು ಗ್ರಾಹಕರಿಂದ ಹಣ ವಸೂಲಿ ಮಾಡಿಯೂ ಯೋಜನೆ ಪೂರ್ಣಗೊಳಿಸಿ ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ನೀಡುತ್ತಿಲ್ಲ. ಇದರಿಂದಾಗಿ ಹೊಸ ಗ್ರಾಹಕರು ಫ್ಲ್ಯಾಟ್ ಖರೀದಿಗೆ ಮುಂದೆ ಬರುತ್ತಿಲ್ಲ. ನಿರ್ಮಾಣ ಮಾಡಿರುವ ಮತ್ತು ನಿರ್ಣಾಣ ಹಂತದಲ್ಲಿರುವ ಫ್ಲ್ಯಾಟ್‌ಗಳಿಗೆ ಬೇಡಿಕೆ ಕುಸಿದಿದೆ. ಹೀಗಾಗಿ, ಕಂಪನಿಗಳು ಹಣವಿಲ್ಲದೆ ತಾವು ಪಾವತಿಸಬೇಕಾದ ಸಾಲ ಪಾವತಿಸಲು ವಿಫಲವಾಗುತ್ತಿವೆ.

ರಿಯಲ್ ಎಸ್ಟೇಟ್ ಕಂಪನಿಗಳಿಗೆ ಸಾಲ ನೀಡಿರುವ ಹೌಸಿಂಗ್ ಫೈನಾನ್ಸ್ ಕಂಪನಿಗಳು ಸಹ ತಾವು ಬ್ಯಾಂಕುಗಳಿಗೆ ನೀಡಬೇಕಾದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಮಾಡದಿದ್ದರೆ ಸುಸ್ತಿ ಆಗಬೇಕಾಗುತ್ತದೆ. ಒಂದು ಬಾರಿ ಸುಸ್ತಿಯಾದರೆ ಐಎಲ್ & ಎಫ್ಎಸ್ ಕಂಪನಿಯ ದುಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಸೂಪರ್ಟೆಕ್ ನೀಡಿರುವ ಸ್ಪಷ್ಟೀಕರಣದ ಪ್ರಕಾರ, ಕಂಪನಿ ಯಾವ ಸಾಲವನ್ನು ಸುಸ್ತಿ ಮಾಡಿಲ್ಲ. ಪಾವತಿ ಮಾಡಲು ವಿಳಂಬವಾಗಿದೆ ಅಷ್ಟೇ. ಸೂಪರ್ಟೆಕ್ 2,000 ಕೋಟಿ ಸಾಲ ಪಡೆದಿದೆ. ಈ ಪೈಕಿ, 600 ಕೋಟಿ ರುಪಾಯಿಗಳನ್ನು ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಕಂಪನಿಯೇ ನೀಡಿದೆ. ಉಳಿದದ್ದು, ರೆಪ್ಕೊ, ಡಿಎಚ್ಎಫ್ಎಲ್ ಮತ್ತಿತರ ಕಂಪನಿಗಳಿಂದ ಪಡೆದದ್ದು.

“ರಿಯಲ್ ಎಸ್ಟೇಟ್ ಬಿಲ್ಡರ್ ಸಕಾಲದಲ್ಲಿ ಸಾಲ ಪಾವತಿಸದಿದ್ದರೆ, ಅದನ್ನು ದೊಡ್ಡ ವಿಷಯನ್ನಾಗಿ ಮಾಡಿ ಆಂತಕ ಪಡಬೇಕಿಲ್ಲ. ನಗದು ಕೊರತೆಯಿಂದಾಗಿ ಸಾಲ ಪಾವತಿಸಲು ಸಾಧ್ಯವಾಗಿರುವುದಿಲ್ಲ. ಬಿಲ್ಡರ್ ಸಕಾಲದಲ್ಲಿ ಸಾಲ ಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ ಉತ್ತಮ ವಸತಿ ಯೋಜನೆಗಳಿರುವ ಕಂಪನಿಗಳ ಬಗ್ಗೆ ಅನವಶ್ಯಕವಾಗಿ ಯೋಚನೆ ಮಾಡಬಾರದು,” ಎನ್ನುತ್ತಾರೆ ಎಚ್ಡಿಎಫ್ಸಿ ಸಿಇಒ ಕೆಕಿ ಮಿಸ್ತ್ರಿ.

ದೇಶದಲ್ಲಿ ಅತಿ ಹೆಚ್ಚು ಗೃಹಸಾಲ ಒದಗಿಸುತ್ತಿರುವ ಕಂಪನಿ ಎಚ್ಡಿಎಫ್ಸಿ. ಅದರ ಸಿಇಒ ಕೆಕಿ ಮಿಸ್ತ್ರಿ ಹೇಳುವುದರಲ್ಲಿ ಅರ್ಥ ಇದೆ. ಆದರೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನೀಡುವ ಸಾಲದ ಷರತ್ತುಗಳು ಮತ್ತು ಗೃಹಸಾಲ ಕಂಪನಿಗಳು ನೀಡುವ ಸಾಲದ ಷರತ್ತುಗಳು ಬೇರೆಯಾಗಿರುತ್ತವೆ. ಬ್ಯಾಂತೇತರ ಹಣಕಾಸು ಸಂಸ್ಥೆಗಳ ಮೂಲ ಉದ್ದೇಶವೆ ಹೆಚ್ಚಿನ ಬಡ್ಡಿ ಗಳಿಸುವುದಾಗಿರುತ್ತದೆ.

2016-18ರ ಅವಧಿಯಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಎನ್ಬಿಎಫ್ಸಿಗಳ ಸಾಲ ನೀಡಿಕೆ ಪ್ರಮಾಣ ಶೇ.35ರಷ್ಟು ಹೆಚ್ಚಳವಾಗಿದೆ ಎಂದು ಜೆಎಂಫೈನಾನ್ಷಿಯಲ್ ನೀಡಿರುವ ಅಂಕಿಅಂಶಗಳು ಹೇಳುತ್ತಿವೆ. ಒಂದು ಕಡೆ ಬಿಕರಿಯಾಗ ಫ್ಲ್ಯಾಟ್ ಗಳು ಮತ್ತೊಂದು ಕಡೆ ಏರುತ್ತಿರುವ ನಿರ್ಮಾಣ ವೆಚ್ಚದಿಂದಾಗಿ ರಿಯಲ್ ಎಸ್ಟೇಟ್ ಕಂಪನಿಗಳು ಸಕಾಲದಲ್ಲಿ ಸಾಲ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಸಾಲವೂ ಲಭ್ಯವಾಗುತ್ತಿಲ್ಲ.

ಈಗ ಪೇಟೆಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಲು ಕಾರಣವೆಂದರೆ ಬರುವ ದಿನಗಳಲ್ಲಿ ಮತ್ತಷ್ಟು ರಿಯಲ್ ಎಸ್ಟೇಟ್ ಕಂಪನಿಗಳು ಸುಸ್ತಿಯಾಗುವ ನಿರೀಕ್ಷೆ ಇದೆ. ಸುಸ್ತಿಯಾದ ಸಾಲವು ನಿಷ್ಕ್ರಿಯ ಸಾಲವಾಗಿ ಪರಿವರ್ತನೆಗೊಳ್ಳುವುದರಿಂದ ಅದನ್ನು ವಸೂಲು ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಬಹಳ ಕಾಲ ನಿಷ್ಕ್ರಿಯ ಸಾಲವನ್ನು ಮರುಹೊಂದಾಣಿಕೆ ಮಾಡುವಂತಿಲ್ಲ. ಅಂತಹ ಸಾಲಗಳನ್ನು ಲಾಭಾಂಶಕ್ಕೆ ಹೊಂದಾಣಿಕೆ ಮಾಡಿ ಬ್ಯಾಲೆನ್ಸ್ ಷೀಟ್ ನಿಂದ ತೆಗೆದುಹಾಕಬೇಕಾಗುತ್ತದೆ. ಅಂದರೆ, ಸುಸ್ತಿಯಾದ ಸಾಲಗಳು ಸಾಲಕೊಟ್ಟ ಕಂಪನಿಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ.

ಇದನ್ನೂ ಓದಿ : ಪೇಟೆಯಲ್ಲಿ ತಲ್ಲಣ ಮೂಡಿಸಿರುವ ಐಎಲ್ & ಎಫ್ಎಸ್ ಬಿಕ್ಕಟ್ಟಿಗೆ ಕಾರಣಗಳೇನು?

ರಿಯಲ್ ಎಸ್ಟೇಟ್ ಉದ್ಯಮ ಈಗ ವಂಚನೆ, ಸಾಲ ಸುಸ್ತಿ, ಸಕಾಲದಲ್ಲಿ ಯೋಜನೆ ಜಾರಿ ವೈಫಲ್ಯ, ಬ್ಯಾಂಕುಗಳಿಗೆ ವಂಚನೆ ಮತ್ತಿತರ ಆರೋಪಗಳನ್ನು ಎದುರಿಸುತ್ತಿದೆ. ಹೀಗಾಗಿ ರಾಷ್ಟ್ರೀಯ ಬ್ಯಾಂಕುಗಳು ರಿಯಲ್ ಎಸ್ಟೇಟ್ ವಲಯಕ್ಕೆ ಬಹುತೇಕ ಸಾಲ ನೀಡುವುದನ್ನು ನಿಲ್ಲಿಸಿವೆ. ಹೆಚ್ಚಿನ ಬಡ್ಡಿ ಗಳಿಸುವ ಸಲುವಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ರಿಯಲ್ ಎಸ್ಟೇಟ್ ವಲಯಕ್ಕೆ ಹೆಚ್ಚಿನ ಸಾಲ ಒದಗಿಸುತ್ತಿವೆ. ಈಗ ಸಾಲ ಸುಸ್ತಿಯಾಗುವ ಹಂತಕ್ಕೆ ಬಂದಿದೆ. ಸೂಪರ್ಟೆಕ್ ಮೂಲಕ ಮತ್ತೊಂದು ಸಂಕಷ್ಟದ ಹೆಬ್ಬಾಗಿಲು ತೆರೆದಂತಾಗಿದೆ.

ಮುಂಬರುವ ದಿನಗಳು ರಿಯಲ್ ಎಸ್ಟೇಟ್ ವಲಯಕ್ಕೆ ಮಾತ್ರವಲ್ಲ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮತ್ತು ಗೃಹ ಸಾಲ ಸಂಸ್ಥೆಗಳ ವಲಯಕ್ಕೂ ದೊಡ್ಡ ಸಂಕಷ್ಟಗಳನ್ನು ತರಲಿವೆ. ಇದೊಂದು ವಿಷವೃತ್ತವಾಗಿ ಪರಿಣಮಿಸಿದ್ದು, ಯಾವ ಹಂತದಲ್ಲೂ ಸಂಕಷ್ಟಗಳಿಂದ ಬಿಡುಗಡೆ ಹೊಂದುವ ಮಾರ್ಗವೇ ಇಲ್ಲದಂತಾಗಿದೆ. ಇದರಿಂದ ಅಂತಿಮವಾಗಿ ಹೂಡಿಕೆದಾರರು ತಮ್ಮ ಸಂಪತ್ತು ನಾಶ ಮಾಡಿಕೊಳ್ಳುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More