ಕೇರಳದಲ್ಲಿ ನಡೆದದ್ದು ಲವ್ ಜಿಹಾದ್ ಅಲ್ಲ, ಕೇವಲ ಪ್ರೇಮ ಪ್ರಕರಣಗಳು ಎಂದ ಎನ್‌ಐಎ

ಹಾದಿಯಾ ಪ್ರಕರಣ ಸೇರಿದಂತೆ ವಿವಿಧ ಪ್ರೇಮ ಪ್ರಕರಣಗಳಿಗೆ ಲವ್ ಜಿಹಾದ್ ಎಂಬ ಹಣೆಪಟ್ಟಿ ಹಚ್ಚಲಾಗಿತ್ತು. ಆದರೆ, ಈ ಬಗ್ಗೆ ತನಿಖೆ ನಡೆಸಿರುವ ಎನ್‌ಐಎ, ದಬ್ಬಾಳಿಕೆಯ ಮತಾಂತರ ನಡೆದಿರುವ ಬಗ್ಗೆ ಯಾವ ಪುರಾವೆಗಳೂ ಇಲ್ಲ ಎಂದಿದೆ. ಈ ಕುರಿತ ‘ಹಿಂದೂಸ್ತಾನ್ ಟೈಮ್ಸ್’ ವರದಿಯ ಭಾವಾನುವಾದವಿದು

ಕೇರಳದ ಹನ್ನೊಂದು ಪ್ರೇಮ ಪ್ರಕರಣಗಳನ್ನು ತನಿಖೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಇವುಗಳಲ್ಲಿ ಯಾವುದೇ ದಬ್ಬಾಳಿಕೆ ನಡೆದಿರುವುದಕ್ಕೆ ಪುರಾವೆಗಳಿಲ್ಲ ಎಂದಿದೆ. “ಈ ಪ್ರಕರಣಗಳಲ್ಲಿ ಪುರುಷ ಅಥವಾ ಮಹಿಳೆಯನ್ನು ಮತಾಂತರಿಸಲು ಯತ್ನಗಳು ನಡೆದಿರಬಹುದಾಗಿದ್ದರೂ ಅಪರಾಧದ ಸ್ವರೂಪ ಕಂಡುಬಂದಿಲ್ಲ,” ಎಂದು ತನಿಖಾ ಸಂಸ್ಥೆಯ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

“ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎದುರು ಎನ್‌ಐಎ ಯಾವುದೇ ವರದಿ ಸಲ್ಲಿಸುವ ಪ್ರಮೇಯ ಬರುವುದಿಲ್ಲ. ಮಹಿಳೆ ಅಥವಾ ಪುರುಷನ ವಿರುದ್ಧ ದಬ್ಬಾಳಿಕೆಯ ಮತಾಂತರ ನಡೆದಿರುವುದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ,” ಎಂದು ಹೆಸರು ಹೇಳಲಿಚ್ಛಿಸಿದ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಲವ್ ಜಿಹಾದ್ ಕಲ್ಪನೆಯನ್ನು ವಿವರಿಸುವ ಉದ್ದೇಶದಿಂದ ತನಿಖಾ ಸಂಸ್ಥೆ ಕೇರಳದ 11 ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು. ಪೋಷಕರು ನೀಡಿದ ದೂರಿನ ಮೇಲೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 89 ಪ್ರಕರಣಗಳಲ್ಲಿ 11 ಪ್ರಕರಣಗಳನ್ನು ತನಿಖೆ ನಡೆಸಲು ತೀರ್ಮಾನಿಸಲಾಗಿತ್ತು. ಭಾರಿ ಸುದ್ದಿಗೆ ಗ್ರಾಸವಾಗಿದ್ದ ಹಾದಿಯಾ ಪ್ರಕರಣದ ಹಿನ್ನೆಲೆಯಲ್ಲಿ ಈ ತನಿಖೆ ನಡೆದಿತ್ತು.

ಹಾದಿಯಾ ಇಸ್ಲಾಂಗೆ ಮತಾಂತರಗೊಂಡು ತನ್ನ ಪ್ರಿಯತಮ ಶಫೀನ್ ಜಹಾನ್ ಅವರನ್ನು ಮದುವೆಯಾಗಿದ್ದರು. ಹಾದಿಯಾ ತಂದೆ ಸಲ್ಲಿಸಿದ ದೂರಿನ ಮೇರೆಗೆ ಕೇರಳ ಹೈಕೋರ್ಟ್ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಆದರೆ, ಹಾದಿಯಾ ವಿವಾಹವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿತ್ತು.

“ಈ ಹನ್ನೊಂದು ಪ್ರಕರಣಗಳಲ್ಲಿ ಒಂದು ಜೋಡಿಯ ಸಂಬಂಧ ಮಾತ್ರ ಹಳಸಿತ್ತು. ಉಳಿದ ಪ್ರಕರಣಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ನಂಟು ಹೊಂದಿರುವ ವ್ಯಕ್ತಿಗಳು ಮಹಿಳೆ ಅಥವಾ ಪುರುಷನನ್ನು ಇಸ್ಲಾಂಗೆ ಮತಾಂತರಿಸಲು ಯತ್ನಿಸಿರುವುದನ್ನು ಕಂಡುಕೊಂಡಿದ್ದೇವೆ. ಆದರೆ, ನ್ಯಾಯಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಬರುವಂತಹ ಅಪರಾಧ ಚಟುವಟಿಕೆಗಳ ಬಗೆಗಿನ ಪುರಾವೆಗಳು ಎನ್‌ಐಎಗೆ ದೊರೆತಿಲ್ಲ,” ಎಂದು ಆ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇರಳದ ಹಾದಿಯಾ-ಶಫೀನ್ ಜೋಡಿ ಹೇಳಿದ್ದೇನು?

ಶಾಂತಿಯುತ ರೀತಿಯಲ್ಲಿ ತಾನು ಇಚ್ಛೆಪಟ್ಟ ಧರ್ಮವನ್ನು ಅನುಸರಿಸುವ ಮೂಲಭೂತ ಹಕ್ಕನ್ನು ಭಾರತದ ಸಂವಿಧಾನ ಎಲ್ಲ ಪ್ರಜೆಗಳಿಗೆ ನೀಡಿದೆ. “ಕೇರಳದಲ್ಲಿ ಮತಾಂತರ ಅಪರಾಧವಲ್ಲ. ಅಲ್ಲದೆ, ಹೀಗೆ ಪುರುಷ ಅಥವಾ ಮಹಿಳೆಯನ್ನು ಮತಾಂತರಗೊಳಿಸುವುದು ಸಹ ಸಂವಿಧಾನದ ವ್ಯಾಪ್ತಿಯಡಿ ಬರುತ್ತದೆ,” ಎಂದು ಅವರು ತಿಳಿಸಿದ್ದಾರೆ.

ಪಿಎಫ್‌ಐ ಕಾನೂನು ಸಲಹೆಗಾರ ಮುಹಮ್ಮರ್ ಶರೀಫ್ ಅವರು ‘ಲವ್ ಜಿಹಾದ್’ ಎಂಬ ಪರಿಕಲ್ಪನೆಯನ್ನು ವಿವರಿಸುವುದು ಹೀಗೆ: “ಮುಸ್ಲಿಂ ಸಮುದಾಯವನ್ನು ದೊಡ್ಡ ಮಟ್ಟದಲ್ಲಿ ಗುರಿ ಆಗಿರಿಸಿಕೊಂಡ ಬಲಪಂಥೀಯರು ರೂಪಿಸಿದ ದುಷ್ಟ ವಿನ್ಯಾಸ ಇದಾಗಿದ್ದು, ಪಿಎಫ್‌ಐ ಮತ್ತು ಅದರ ರಾಜಕೀಯ ಅಂಗವಾದ ಸೋಷಿಯಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಇಂಡಿಯಾ (ಎಸ್‌ಡಿಪಿಐ) ಲವ್ ಜಿಹಾದ್‌ಗೆ ಬೆಂಬಲ ನೀಡುತ್ತಿವೆ ಎಂದು ಬಿಂಬಿಸುವ ಉದ್ದೇಶ ಇದರ ಹಿಂದಿದೆ.”

“ಲವ್ ಜಿಹಾದ್ ಎಂಬುದು ಹತಾಶೆಯ, ಕೇವಲ ಕಾಲ್ಪನಿಕವಾದ, ಯಾವುದೇ ಆಧಾರಗಳಿಲ್ಲದ ಆರೋಪ ಎಂದು ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯಿಂದ ತಿಳಿದುಬಂದಿದೆ,” ಎನ್ನುತ್ತಾರೆ ಶರೀಫ್. “ಇಷ್ಟಾದರೂ ಇದು ಪಿಎಫ್‌ಐಗೆ ನೀಡಿದ ಕ್ಲೀನ್‌ಚಿಟ್ ಎಂದು ಭಾವಿಸಬಾರದು," ಎನ್ನುತ್ತಾರೆ ತನಿಖಾಧಿಕಾರಿಯೊಬ್ಬರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More