ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ ಇತರ ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಲು ಇಬ್ಬರು ಮಹಿಳೆಯರ ವಿಫಲ ಯತ್ನ

ಶಬರಿಮಲೈ ದೇವಾಲಯ ಪ್ರವೇಶಕ್ಕೆ ಇನ್ನು 18 ಮೆಟ್ಟಿಲುಗಳು ಇರುವ ಹಂತಕ್ಕೆ ಶುಕ್ರವಾರ ಬೆಳಗ್ಗೆ ಇಬ್ಬರು ಮಹಿಳೆಯರು ಹೋದರಾದರೂ ದೇವಾಲಯದ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ವಾಪಸ್ ಹೋದರು. ಪೊಲೀಸರ ಭದ್ರತೆಯಲ್ಲಿ ಅಲ್ಲಿಯವರೆಗೆ ಹೋಗಿ ವಾಪಸಾದವರು ಹೈದರಾಬಾದ್‍ನ ಟಿವಿ ಪತ್ರಕರ್ತೆ ಕವಿತಾ ಟೆಕ್ಕಲಿ ಮತ್ತು ಕೊಚ್ಚಿಯ ರೆಹನಾ ಫಾತಿಮಾ. ಈ ಇಬ್ಬರು ಮಹಿಳೆಯರೇನಾದರೂ ದೇವಾಲಯ ಪ್ರವೇಶಿಸಲು ಮುಂದಾದರೆ ಅದನ್ನು ತಡೆಯುವುದಾಗಿ ಮತ್ತು ದೇವಾಲಯಕ್ಕೆ ಬೀಗಹಾಕಿ ಹೋಗುವುದಾಗಿ ಮೆಟ್ಟಿಲುಗಳ ಮೇಲೆ ಕುಳಿತಿದ್ದ 20ಕ್ಕೂ ಹೆಚ್ಚು ಮಂದಿ ಪೂಜಾರಿಗಳು ಬೆದರಿಕೆ ಹಾಕಿದರು. ಈ ವಿಚಾರವನ್ನು ಆ ಮಹಿಳೆಯರಿಗೆ ತಿಳಿಸಲಾಯಿತು. ಆ ಮಹಿಳೆಯರು ಬೇರೆ ದಾರಿಯಿಲ್ಲದೆ ವಾಪಸ್ ಹೋಗಲು ಒಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರದ ಮೂರನೆಯ ದಿನವೂ ಯಾವುದೇ ಮಹಿಳೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಸಾಧ್ಯವಾಗಿಲ್ಲ.

ಸೌದಿ ಪತ್ರಕರ್ತ ಕಸೋಜಿ ದೇಹ ತುಂಡರಿಸಿ ಸೂಟ್‍ಕೇಸಿನಲ್ಲಿ ತುಂಬಿ ಹೊರಗೆ ಸಾಗಣೆ?

ಟರ್ಕಿಯ ಇಸ್ತಾಂಬುಲ್‍ನಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್ ಕಚೇರಿಗೆ ಹೋದ ಸೌದಿಯ ಭಿನ್ನಮತೀಯ ಪತ್ರಕರ್ತ ಜಮಾಲ್ ಕಸೋಜಿ ಅವರ ನಾಪತ್ತೆ ಪ್ರಕರಣ ಭಯಾನಕ ಸ್ವರೂಪ ಪಡೆಯುತ್ತಿದೆ. ಅವರನ್ನು ಕಚೇರಿಯಲ್ಲಿಯೇ ಕೊಲೆ ಮಾಡಿ, ದೇಹವನ್ನು ತುಂಡರಿಸಿ ಸೂಟ್‍ಕೇಸ್‍ನಲ್ಲಿ ತುಂಬಿ ಗೊತ್ತಾಗದಂತೆ ಹೊರಗೆ ಸಾಗಿಸಲಾಗಿದೆ ಎಂದು ಟರ್ಕಿಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಸೌದಿ ಅರೇಬಿಯಾದ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅವರ ಆಪ್ತ ಹಾಗೂ ಗುಪ್ತಚರ ಇಲಾಖೆಯ ಡೆಪ್ಯುಟ್ ಛೀಪ್ ಜನರಲ್ ಅಹಮದ್ ಅಲ್ ಅಸ್ಸಾರಿ ಅವರಿಗೆ ಕಸೋಜಿ ವಿಚಾರಣೆ ಹೊಣೆ ಹೊರಿಸಲಾಗಿತ್ತು ಎನ್ನಲಾಗಿದೆ. ಆದ್ದರಿಂದ ಈ ಸಾವಿನ ಹೊಣೆಯನ್ನು ಅವರ ಮೇಲೆ ಹೊರಿಸಲು ಸೌದಿ ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಕಸೋಜಿ ಹತ್ಯೆ ಪ್ರಕರಣ ಸೌದಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಕ್ಕಿಸಿದೆ. ಈ ಹತ್ಯೆ ಹಿನ್ನೆಲೆಯಲ್ಲಿ, ತಿಂಗಳಾಂತ್ಯಕ್ಕೆ ಸೌದಿ ಸರ್ಕಾರ ಸಂಘಟಿಸಿರುವ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಈಗಾಗಲೇ ಹಲವಾರು ಶ್ರೀಮಂತ ಕಂಪನಿಗಳು, ದೇಶಗಳು ಬಹಿಷ್ಕಾರ ಹಾಕಿವೆ. ಸೌದಿ ಜೊತೆಗಿನ ವಾಣಿಜ್ಯ ಬಾಂಧವ್ಯ ನಿರ್ಬಂಧಿಸುವ ವಿಚಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಿಶೀಲನೆಯಲ್ಲಿದೆ.

ರಾಮಮಂದಿರ ನಿರ್ಮಾಣಕ್ಕಾಗಿ ವಿಶೇಷ ಆದೇಶ ಹೊರಡಿಸಲು ಭಾಗವತ್ ಆಗ್ರಹ

ಸುಗ್ರೀವಾಜ್ಞೆ ಅಥವಾ ವಿಶೇಷ ಕಾನೂನು ಜಾರಿಗೊಳಿಸುವ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. “ಕೆಲವು ಮೂಲಭೂತವಾದಿಗಳ ಕೋಮು ರಾಜಕಾರಣದಿಂದಾಗಿ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ. ಈ ವಿಳಂಬ ಅಂತ್ಯವಾಗಬೇಕು,” ಎಂದು ಅವರು ಹೇಳಿದ್ದಾರೆ. ಬಾಬರಿ ಮಸೀದಿ ರಾಮಮಂದಿರ ಜಮೀನು ಯಾರಿಗೆ ಸೇರಿದ್ದು ಎಂಬ ಪ್ರಕರಣ ಇದೇ ತಿಂಗಳಾಂತ್ಯದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ಅಂತಿಮ ವಿಚಾರಣೆ ಆರಂಭವಾಗಲಿರುವ ಮತ್ತು ಕೆಲವೇ ತಿಂಗಳಲ್ಲಿ ಸಂಸತ್ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಭಾಗವತ್ ಅವರ ಈ ಆಗ್ರಹ ವಿವಿಧ ರೀತಿಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಲೈಂಗಿಕ ಕಿರುಕುಳ ಆರೋಪ; ಸ್ಥಾನ ಕಳೆದುಕೊಂಡ ನಿರ್ದೇಶಕ ಮುಖೇಶ್ ಛಬ್ರ

ಸಹನಿರ್ದೇಶಕರಾಗಿ ಗುರುತಿಸಿಕೊಂಡು ಇದೀಗ ನಿರ್ದೇಶಕನಾಗಿ ಬಡ್ತಿ ಪಡೆಯಲಿದ್ದ ಮುಖೇಶ್ ಛಬ್ರ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಪರಿಣಾಮವಾಗಿ, 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್' ಹಾಲಿವುಡ್ ಸಿನಿಮಾದ ಹಿಂದಿ ಅವತರಣಿಕೆಯ ನಿರ್ದೇಶಕನ ಸ್ಥಾನದಿಂದ ಅವರನ್ನು ಕೆಳಗಿಳಿಸಲಾಗಿದೆ. ಚಿತ್ರವನ್ನು ನಿರ್ಮಿಸುತ್ತಿರುವ ಫಾಕ್ಸ್ ಸ್ಟಾರ್ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. “ಜವಾಬ್ದಾರಿಯುತ ಸಂಸ್ಥೆಯೊಂದು ಇಂಥಹ ಆರೋಪಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ನಿರ್ದೇಶಕನ ಸ್ಥಾನದಿಂದ ಅವರನ್ನು ಕಿತ್ತೊಗೆಯಲಾಗಿದೆ,” ಎಂದು ಫಾಕ್ಸ್ ಸ್ಟಾರ್ ಸಂಸ್ಥೆ ಹೇಳಿಕೊಂಡಿದೆ.

ಚತ್ತೀಸ್‌ಗಢ ಚುನಾವಣೆಯಲ್ಲಿ ಮಾಜಿ ಸಿಎಂ ಅಜಿತ್ ಜೋಗಿ ಸ್ಪರ್ಧೆ ಇಲ್ಲವೆಂದ ಪುತ್ರ

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಚತ್ತೀಸ್‌ಗಢದಿಂದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಚತ್ತೀಸ್‌ಗಢ ಜನತಾ ಕಾಂಗ್ರೆಸ್ (ಸಿಜೆಸಿ) ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ ಅವರ ಪುತ್ರ ಅಮಿತ್ ಜೋಗಿ. ಚುನಾವಣಾ ಪ್ರಚಾರ ಮತ್ತಿತರ ಕೆಲಸಗಳ ಕಾರಣದಿಂದ ತಮ್ಮ ತಂದೆಗೆ ಕ್ಷೇತ್ರದತ್ತ ಗಮನ ಹರಿಸಲು ಸಾಧ್ಯವಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮಿತ್ ಹೇಳಿಕೊಂಡಿದ್ದಾರೆ. ಸದ್ಯ ಸಿಜೆಸಿ ಪಕ್ಷವು ಬಿಎಸ್‌ಪಿ ಮತ್ತು ಸಿಪಿಐ ಜೊತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದೆ.

ಯೆಸ್ ಬ್ಯಾಂಕ್ ಸಿಇಒ ರಾಣಾ ಕಪೂರ್ ಮುಂದುವರಿಕೆಗೆ ನೋ ಎಂದ ಆರ್ಬಿಐ

ಯೆಸ್ ಬ್ಯಾಂಕ್ ಸಿಇಒ ರಾಣಾ ಕಪೂರ್ ಅವಧಿಯನ್ನು ಮುಂದುವರೆಸಬೇಕೆಂಬ ಬ್ಯಾಂಕ್ ಆಡಳಿತ ಮಂಡಳಿ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಿರಸ್ಕರಿಸಿದೆ. ಜನವರಿ 31ರವರೆಗೆ ಮಾತ್ರ ವಿಸ್ತರಣೆ ನೀಡಿರುವ ಆರ್ಬಿಐ ಫೆಬ್ರವರಿ 1ರಿಂದ ಹೊಸ ಸಿಇಒ ನೇಮಕ ಮಾಡುವಂತೆ ಸೂಚಿಸಿದೆ. ಸೆಪ್ಟೆಂಬರ್ 25ರಂದು ನಡೆದಿದ್ದ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯು ಸಿಇಒ ರಾಣಾ ಕಪೂರ್ ಅವಧಿಯನ್ನು 2019 ಏಪ್ರಿಲ್ ವರೆಗೆ ವಿಸ್ತರಿಸಿ, ಅದಕ್ಕೆ ಆರ್ಬಿಐ ಅನುಮತಿ ಕೋರಿತ್ತು. ಆರ್ಬಿಐ ಅನುಮತಿ ನಿರಾಕರಿಸಿ ಜನವರಿ 31ರವರೆಗೆ ಮಾತ್ರ ವಿಸ್ತರಣೆ ನೀಡಿದೆ. 2004ರಿಂದಲೂ ರಾಣಾ ಕಪೂರ್ ಯೆಸ್ ಬ್ಯಾಂಕ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಧಿ 2018 ಆಗಸ್ಟ್ 31ಕ್ಕೆ ಮುಗಿದಿದೆ.

ಪಿಎನ್ಬಿ ಹಗರಣ; 218 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದ ಇ.ಡಿ

13,800 ಕೋಟಿ ರುಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 218 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಈ ಆಸ್ತಿಯು ಹಗರಣದ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿಗೆ ಸೇರಿದೆ. ಅಕ್ರಮ ಹಣ ಸಾಗಾಣಿಕೆ ನಿರ್ಬಂಧ (ಪಿಎಂಎಲ್ಎ) ಕಾಯ್ದೆಯಡಿ ಈ ಆಸ್ತಿಗಳನ್ನು ಭಾರತ ಮತ್ತು ವಿದೇಶಗಳಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. 13,800 ಕೋಟಿ ಹಗರಣದ ತನಿಖೆಯನ್ನು ಸಿಬಿಐ ಜತೆಗೆ ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಪ್ರಮುಖ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ತನಿಖಾ ಸಂಸ್ಥೆಗಳು ಇದುವರೆಗೆ 5,000 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More