ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ

“ಅನೇಕ ಗುರು-ಜಗದ್ಗುರುಗಳು ಮಠ, ಪೀಠಗಳ ಬೆಳವಣಿಗೆ ಜೊತೆಗೆ ತಮ್ಮ ಘಟವನ್ನೂ ಬೆಳಸಿಕೊಂಡು ಕೇವಲ ಜಾಗದ ಗುರುಗಳಾಗಿರುವುದನ್ನು ಕಾಣಬಹುದು. ಆದರೆ ಮನುಕುಲದ ಉಳಿವಿಗಾಗಿ ಗುರು ಆದವರು ತೋಂಟದಾರ್ಯ ಶ್ರೀ,” ಎನ್ನುತ್ತಾರೆ ಶ್ರೀಗಳ ಒಡನಾಡಿ ಶಿವರಂಜನ್

ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿಯವರಾದ ತೋಂಟದಾರ್ಯ ಶ್ರೀ, ಎಡೆಯೂರು ಸಂಸ್ಥಾನದ ಗದುಗಿನ ತೋಂಟದಾರ್ಯ ಮಠಕ್ಕೆ ಪೀಠಾಧಿಪತಿಗಳಾಗಿ ಜನರ ಬದುಕು ಹಸನುಗೊಳಿಸುವ ಹಲವಾರು ರಚನಾತ್ಮಕ ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡಿದರು. ಅವುಗಳಲ್ಲಿ ಮೊಟ್ಟಮೊದಲು ಅವರು ಎತ್ತಿಕೊಂಡ ಕೆಲಸವೇ ಪುಸ್ತಕ ಪ್ರಕಟಣೆ. ನಾಡಿನ ಹಿರಿಯ ಸಂಶೋಧಕ ಎಂ ಎಂ ಕಲ್ಬುರ್ಗಿ ಮುಂತಾದವರಿಂದ ಸುಮಾರು 1,000ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿ, ಕನ್ನಡದ ನಿಜವಾದ ಅಸ್ಮಿತೆ ಕಾಪಾಡುವಲ್ಲಿ ಅಹರ್ನಿಶಿ ಶ್ರಮಿಸಿದರು.  ಜನಹಿತ ಬಯಸುವ ಸರ್ಕಾರ ವ್ಯಕ್ತಿಗಳ ಬಗ್ಗೆ ಎಲ್ಲಿಲ್ಲದ ಪ್ರೀತಿ, ಗೌರವ ತೋರುತ್ತಿದ್ದರು. ಅದೇ ವೇಳೆಗೆ ಜನವಿರೋಧಿ ನಿಲುವುಗಳನ್ನು ಖಂಡತುಂಡವಾಗಿ ಟೀಕಿಸುತ್ತಿದ್ದರು. ಅಪಾರ ಔಷಧಿಯ ಸಸ್ಯರಾಶಿ ಹೊಂದಿರುವ ಕಪ್ಪತಗುಡ್ಡ ಉಳಿವಿಗಾಗಿ, ಪೋಸ್ಕೋ ಕಂಪನಿ ವಿರೋಧಿಸಿ ಸ್ವತಃ ಬೀದಿಗೆ ಬಂದು ಹೋರಾಟ ನಡೆಸಿದ್ದರು.

ಅಪಾರ ಓದಾಳಿಗಳಾಗಿದ್ದ ಅವರು, ಬಸವಾದಿ ಶರಣರ ಬದುಕು ಹಾಗೂ ಬೋಧನೆಗೆ ಮಾರುಹೋಗಿದ್ದರು. ಕನ್ನಡಿಗರು ಸ್ಥಾಪಿಸಿದ ಕನ್ನಡದ ಮೊಟ್ಟಮೊದಲ ಧರ್ಮ ಲಿಂಗಾಯತ ಧರ್ಮ ಎಂಬುದನ್ನು ಮನಗಂಡಿದ್ದ ಅವರು, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ತೀರಾ ಮುಂಚೂಣಿಯಲ್ಲಿದ್ದು, ಮಾರ್ಗದರ್ಶನ ನೀಡುತ್ತಿದ್ದರು. ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಸ್ವಾಮೀಜಿ, ನಮ್ಮ ನಡುವಿನ ಸಮತಾವಾದಿಗಳಾಗಿದ್ದರು. ಪುರಾಣ-ಪ್ರವಚನಗಳು ಜನರ ಮನಸ್ಸನ್ನು ಬೇಗ ಸೆಳೆಯಬಲ್ಲವು. ಈ ಕಾರಣದಿಂದಾಗಿಯೇ ಇಂದು ಜನಮಾನಸದಲ್ಲಿ ಬೌದ್ಧಿಕ ದಿವಾಳಿತನ ಉಂಟಾಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದನ್ನರಿತ ಅವರು, ಬಸವ ಪುರಾಣದಂತೆ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಪುರಾಣ ಬರೆಸಲು ಮುಂದಾಗಿದ್ದರು.

ಇದನ್ನೂ ಓದಿ : ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ

ನಮ್ಮ ತಂದೆ ಲಿಂಗಣ್ಣ ಸತ್ಯಂಪೇಟೆಯವರ ನಿಷ್ಠುರ ಬರಹವನ್ನು ತುಂಬಾ ಇಷ್ಟಪಡುತ್ತಿದ್ದ ಅವರು, ಹೂವಿನ ಜೊತೆ ನಾರು ಸ್ವರ್ಗಕ್ಕೇರಿತು ಎನ್ನುವಂತೆ ನಮ್ಮ ಇಡೀ ಕುಟುಂಬವನ್ನು ತುಂಬಾ ಪ್ರೀತಿಸುತ್ತಿದ್ದರು. ಅವರನ್ನು ತೀರಾ ಹತ್ತಿರದಿಂದ ಕಂಡಿದ್ದ ನಮಗೆಲ್ಲರಿಗೆ ಅವರ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅಪ್ಪನ ನಿಗೂಢ ಸಾವಿನ ತನಿಖೆ ನಡೆಸುವ ಕುರಿತು ಬಹಳ ಗಟ್ಟಿಯಾಗಿ ಮಾತನಾಡಿದ್ದ ಅವರು, ನಾನು ‘ಶರಣ ಮಾರ್ಗ’ ಪತ್ರಿಕೆ ಪ್ರಾರಂಭ ಮಾಡಿದಾಗ, “ಇದು ಬಸವ ಮಾರ್ಗಕ್ಕಿಂತ ವಿಸ್ಕೃತವಾದ ಹೆಸರು. ನಿಮ್ಮಪ್ಪನ ಹಾದಿಯಲ್ಲಿ ನೀವು ಸಾಗಿರುವುದು ನನಗೆ ಖುಷಿ ತಂದಿದೆ,” ಎಂದು ಪತ್ರ ಬರೆದು ಬೆನ್ನು ತಟ್ಟಿದ್ದರು.

ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು

ಸಾವೆಂಬುದು ಸಯವಲ್ಲ

ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ

ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ

ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು

ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ

ಉಪಮಿಸಬಲ್ಲವರ ಕಾಣೆನು

-ಎಂಬ ವಚನದ ಸಾಲುಗಳನ್ನು ನೆನೆದು, ಅವರ ನೇರ, ದಿಟ್ಟ ವ್ಯಕ್ತಿತ್ವ ಹಾಗೂ ಅವರೊಂದಿಗೆ ಕಳೆದ ಗಳಿಗೆಗಳನ್ನು ಸ್ಮರಣೆಗೆ ತಂದುಕೊಳ್ಳುತ್ತ ಕಣ್ಣಂಚಿನಲ್ಲಿ ನೀರು ತಂದುಕೊಳ್ಳುಕೊಳ್ಳುವ ಸರದಿ ನನ್ನದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More