ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ

ಸಿಬಿಐನ ಹಿರಿಯ ನಿರ್ದೇಶಕರಾದ ಅಲೋಕ್ ವರ್ಮಾ ಮತ್ತು ರಾಕೇಶ್ ಆಸ್ತಾನ ಅವರ ನಡುವಿನ ಜಗಳ ಸಿಬಿಐ ಅಧಿಕಾರಿಗಳ ಮೇಲೆಯೇ ಸಿಬಿಐ ಎಫ್‌ಐಆರ್ ದಾಖಲಿಸುವ ಮಟ್ಟಿಗೆ ಬೆಳೆದಿದೆ. ಈಗ ಪ್ರಧಾನಿ ನರೇಂದ್ರ ಮೋದಿಯವರೇ ಈ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯ ಪ್ರವೇಶಿಸಿದ್ದಾರೆ

ಭಾರತದ ಅತ್ಯುಚ್ಛ ತನಿಖಾ ಸಂಸ್ಥೆಯಾಗಿರುವ ಸಿಬಿಐ ಹಿಂದಿನಿಂದಲೇ ಸರ್ಕಾರದ ಕೈಗೊಂಬೆಯಾಗಿರುವ ಆರೋಪ ಎದುರಿಸುತ್ತ ಬಂದಿದೆ. ಆದರೆ, ಈಗ ಸಿಬಿಐ ಒಳಗೇ ಅಧಿಕಾರದ ಯುದ್ಧ ಬಹಿರಂಗ ಕಾಳಗವಾಗಿ ಬದಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಮೊಯ್ನ್‌ ಖುರೇಶಿ ಪ್ರಕರಣದಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಸಿಬಿಐನ ಎರಡನೇ ಹಂತದ ವಿಶೇಷ ನಿರ್ದೇಶಕರಾದ ರಾಕೇಶ್ ಆಸ್ತಾನ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆರೋಪಿಸಿದ್ದರು. ಸೆಪ್ಟೆಂಬರ್ ೨೦ರಂದು ಆಸ್ತಾನ ನೇತೃತ್ವದ ವಿಶೇಷ ತನಿಖಾ ತಂಡ ಸತೀಶ್ ಬಾಬು ಸಾನಾ ವಿಚಾರಣೆಗೆ ಅವಕಾಶ ಕೋರಿತ್ತು. ನಂತರ ಅಕ್ಟೋಬರ್ ಮೊದಲ ವಾರದಲ್ಲಿ ಸಾನಾ ವಿಚಾರಣೆಯೂ ನಡೆಯಿತು. ಅಕ್ಟೋಬರ್ ೧೫ರಂದು ದುಬೈ ಮೂಲದ ಮಧ್ಯವರ್ತಿ ಮತ್ತು ಆಸ್ತಾನ ಮೇಲೆ ಲಂಚ ಕೇಳಿರುವ ಆರೋಪವನ್ನು ಸಾನಾ ಹೊರಿಸಿದರು. ಅಕ್ಟೋಬರ್ ೧೯ರಂದು ಖುರೇಶಿ ತನಿಖೆಯನ್ನು ಅಸ್ತಾನ ನೇತೃತ್ವದ ವಿಶೇಷ ತನಿಖಾ ತಂಡದಿಂದ ವಾಪಸು ಪಡೆದುಕೊಳ್ಳಲಾಯಿತು.

ಇದೀಗ ಸಿಬಿಐ, ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ತನಿಖಾಧಿಕಾರಿ ಉಪ ಎಸ್‌ಪಿ ದೇವೇಂದರ್ ಕುಮಾರ್‌ರನ್ನು ಬಂಧಿಸಿದೆ. ರಾಕೇಶ್‌ ಆಸ್ತಾನ ಮತ್ತು ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಮತ್ತು ಅವರ ಸಹೋದರ ಸೋಮೇಶ್ ಪ್ರಸಾದ್ ಮತ್ತು ದೇವೇಂದರ್ ಕುಮಾರ್ ಮೇಲೆ ಸಿಬಿಐ ಲಂಚ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದೆ. ಪ್ರಕರಣದ ಆರೋಪ ಪಟ್ಟಿಯಲ್ಲಿ ರಾ ಸಂಸ್ಥೆಯ ವಿಶೇಷ ಕಾರ್ಯದರ್ಶಿ ಸಮಂತ್ ಕುಮಾರ್ ಗೋಯೆಲ್ ಹೆಸರು ಉಲ್ಲೇಖವಾಗಿದ್ದರೂ, ಆರೋಪಿ ಎಂದು ದಾಖಲಾಗಿಲ್ಲ. ಹೈದರಾಬಾದ್ ಉದ್ಯಮಿ ಸಾನಾ ಸತೀಶ್‌ರನ್ನು ಆರೋಪ ಮುಕ್ತಗೊಳಿಸಲು ೩ ಕೋಟಿ ಲಂಚ ಪಡೆದಿರುವ ಆರೋಪ ರಾಕೇಶ್ ಆಸ್ತಾನ ಮೇಲಿದೆ. ಕಳೆದ ವಾರ ಸಿಬಿಐ ಆಸ್ತಾನರನ್ನು ಸಾನಾರಿಂದ ಲಂಚ ಪಡೆದ ಪ್ರಕರಣದ ಪ್ರಥಮ ಆರೋಪಿ ಎಂದು ಹೇಳಿದೆ. ಖುರೇಶಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದ ದೂರವಿರಲು ೨೦೧೭ ಡಿಸೆಂಬರ್‌ನಿಂದ ೧೦ ತಿಂಗಳ ಅವಧಿಯಲ್ಲಿ ಒಟ್ಟು ೩ ಕೋಟಿ ಲಂಚ ನೀಡಿರುವುದಾಗಿ ಸಾನಾ ಹೇಳಿದ್ದಾರೆ. ಆದರೆ ಸಾನಾ ಸಿಬಿಐ ತನಿಖೆಯಿಂದ ದೂರವಿರಲು ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ ೨ ಕೋಟಿ ಲಂಚ ನೀಡಿದ್ದಾರೆ ಎಂದು ಆಸ್ತಾನಾ ಅವರು ದೂರು ಕೊಟ್ಟಿದ್ದಾರೆ.

ಈ ಒಟ್ಟಾರೆ ಪ್ರಕರಣ ಇದೀಗ ಹಲವು ಆಯಾಮಗಳಲ್ಲಿ ಟ್ವಿಟರ್‌ ಚರ್ಚೆಗೆ ಕಾರಣವಾಗಿದೆ. ಡಿಎಸ್‌ಪಿ ದೇವಿಂದರ್ ಕುಮಾರ್‌ ಅವರನ್ನು ಸಿಬಿಐ ಬಂಧಿಸಿದೆ. “ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ಮತ್ತು ನಿರ್ದೇಶಕ ಅಲೋಕ್ ವರ್ಮಾ ನಡುವಿನ ಕದನ ಬಹಳ ಕೆಟ್ಟ ಸ್ವರೂಪ ಪಡೆದುಕೊಂಡಿದೆ,” ಎಂದು ಪತ್ರಕರ್ತ ಚೇತನ್ ಭೂತಾನಿ ಟ್ವೀಟ್ ಮಾಡಿದ್ದಾರೆ. ಪತ್ರಕರ್ತ ಸಂಜಯ್ ಯಾದವ್ ಟ್ವೀಟ್ ಮಾಡಿ, “ಸಿಬಿಐನ ನಂಬರ್ ೧ ಅಧಿಕಾರಿ ನಂಬರ್ ೨ ಅಧಿಕಾರಿ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ಇವೆಲ್ಲವೂ ಗುಜರಾತಿ ಕ್ಯಾಡರ್ ಅಧಿಕಾರಿಗಳ ಅಧಿಕಾರ ಕದನ ಎನ್ನುವುದನ್ನೂ ಇಲ್ಲಿ ಗಮನಿಸಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವರು ಇದು ಸಿಬಿಐನ ಗ್ಯಾಂಗ್ ವಾರ್ ಎಂದು ಟ್ವಿಟರ್‌ನಲ್ಲಿ ವಿಶ್ಲೇಷಿಸಿದ್ದಾರೆ. “ನರೇಂದ್ರ ಮೋದಿ ಸರ್ಕಾರ ಒಟ್ಟಾರೆಯಾಗಿ ಎಲ್ಲ ಸರ್ಕಾರಿ ಸಂಸ್ಥೆಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಮಾಡುತ್ತಿದೆ. ಹಿಂದೆ ಸರ್ಕಾರದ ಕೈಗೊಂಬೆ ಎನ್ನುವ ಟೀಕೆಗಷ್ಟೇ ಪಾತ್ರವಾಗಿದ್ದ ಸಿಬಿಐ, ಈಗ ಗ್ಯಾಂಗ್‌ ವಾರ್‌ ಮೂಲಕ ಬಹಿರಂಗ ಸುದ್ದಿಯಾಗಿದೆ. ನರೇಂದ್ರ ಮೋದಿಯವರೇ ನಿಯಮ ಮತ್ತು ಶಿಸ್ತಿಗೆ ಹೆಸರಾಗಿದ್ದ ಅಲೋಕ್ ವರ್ಮಾ ವಿರುದ್ಧ ಆಸ್ತಾನಾರನ್ನು ತಂದು ಕೂರಿಸಿದ್ದರು,” ಎಂದು ಪತ್ರಕರ್ತ ಅಭಿಸಾರ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಪತ್ರಕರ್ತೆ ಸಬಾ ನಖ್ವಿ ಟ್ವೀಟ್ ಮಾಡಿ, “ಸಿಬಿಐ ಈಗ ಅಧಿಕಾರಕ್ಕಾಗಿ ಗ್ಯಾಂಗ್‌ಗಳು ಬಹಿರಂಗ ಜಗಳಕ್ಕಿಳಿಯುವ ಸಂಸ್ಥೆಯಾಗಿದೆ,” ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಆಸ್ತಾನಾ ಮೂಲಕ ಸಿಬಿಐ ಮೇಲೆ ನಿಯಂತ್ರಣಕ್ಕೆ ಪ್ರಯತ್ನಿಸಿದ್ದೇ ಈಗಿನ ಬಿಕ್ಕಟ್ಟಿಗೆ ಮೂಲ ಕಾರಣ ಎಂದು ಕೆಲವು ಪತ್ರಕರ್ತರು ಹೇಳಿದ್ದಾರೆ. “ಸಿಬಿಐ ನಿರ್ದೇಶಕರಾದ ಅಲೋಕ್ ವರ್ಮಾ ಮತ್ತು ರಾಕೇಶ್ ಆಸ್ತಾನ ನಡುವಿನ ಜಗಳ ಅಧಿಕಾರಕ್ಕಾಗಿ ಕದನ. ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಂವಿಧಾನ ವಿರೋಧಿಯಾಗಿ ಆಸ್ತಾನಾರನ್ನು ತಮ್ಮ ವಿರೋಧಿಗಳನ್ನು ನಿಯಂತ್ರಿಸಲೆಂದು ಕೂರಿಸಿದ್ದೇ ಈಗಿನ ಬಿಕ್ಕಟ್ಟಿಗೆ ಮೂಲ ಕಾರಣ. ವರ್ಮಾ ಅವರು ಗುಜರಾತ್ ಮಾದರಿಯನ್ನು ವಿರೋಧಿಸಿದ್ದು ಈಗಿನ ಬಿಕ್ಕಟ್ಟಿನಲ್ಲಿ ಅಂತ್ಯವಾಗಿದೆ,” ಎಂದು ಸ್ವಾತಿ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಸಿಬಿಐನಲ್ಲಿ ಹಿರಿಯ ಅಧಿಕಾರಿಗಳು ಪರಸ್ಪರರ ಮೇಲೆ ಆರೋಪ ಹೊರಿಸುತ್ತಿರುವ ಬಿಕ್ಕಟ್ಟಿಗೆ ಬಹಳಷ್ಟು ಮಂದಿ ನರೇಂದ್ರ ಮೋದಿ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಂಸ್ಥೆಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಅವುಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಮಾಡಿದೆ ಎಂದು ಹಿರಿಯ ಪತ್ರಕರ್ತ ಮಿನ್ಹಾಜ್ ಮರ್ಚಂಟ್ ಟ್ವೀಟ್ ಮಾಡಿದ್ದಾರೆ.

ಆಸ್ತಾನ ಗೋಧ್ರಾ ಪ್ರಕರಣದಲ್ಲಿ ನರೇಂದ್ರ ಮೋದಿ ಅವರನ್ನು ಆರೋಪ ಮುಕ್ತಗೊಳಿಸಿವ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು ಎನ್ನುವ ವಿಚಾರವೂ ಚರ್ಚೆಗೆ ಬಂದಿದೆ. ಪತ್ರಕರ್ತ ಅರವಿಂದ ಝಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇಂತಹ ವ್ಯಕ್ತಿ ಹಣ ಮತ್ತು ತಾರತಮ್ಯ ವಿಚಾರದಲ್ಲಿ ಎಂತಹ ಅಗ್ಗದ ಕೆಲಸಕ್ಕೂ ಇಳಿಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತೆ ಗಾರ್ಗಿ ರಾವತ್ ಟ್ವೀಟ್ ಮಾಡಿ, ಪ್ರಮುಖ ಪ್ರಕರಣಗಳನ್ನು ಮುಚ್ಚಿ ಹಾಕಲು ಕೋಟಿಗಟ್ಟಲೆ ಹಣ ಕೈ ಬದಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಸ್ಥಿತಿ ಇಷ್ಟೊಂದು ಅಧೋಗತಿಗೆ ಇಳಿದಿರುವ ಬಗ್ಗೆ ಅವರು ಖೇದ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಬಹಳಷ್ಟು ಪತ್ರಕರ್ತರು ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಬಿಕ್ಕಟ್ಟನ್ನು ನಿಭಾಯಿಸಬೇಕು ಎಂದು ಹೇಳಿದ್ದಾರೆ. ಹಲವರು ನರೇಂದ್ರ ಮೋದಿ ಸರ್ಕಾರವೇ ಪ್ರಸ್ತುತ ಬಿಕ್ಕಟ್ಟಿಗೆ ಕಾರಣ ಎಂದು ಧೂಷಿಸಿದರೂ, ಕೇಂದ್ರ ಸರ್ಕಾರದ ಮಧ್ಯಪ್ರವೇಶ ಅನಿವಾರ್ಯ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಬ್ಬರೂ ನಿರ್ದೇಶಕರನ್ನು ಕರೆದು ಚರ್ಚೆ ನಡೆಸಿರುವುದನ್ನೂ ಕೆಲವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ದಾಭೋಲ್ಕರ್ ಹತ್ಯೆ ಪ್ರಕರಣ: ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ ಸಿಬಿಐ ನಡೆ
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More