ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?

ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಸಿಬಿಐನ ಹಿರಿಯ ಅಧಿಕಾರಿ ರಾಕೇಶ್ ಅಸ್ತಾನಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಅದರ ವಿವರ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದ್ದು, ರಾಕೇಶ್ ಅಸ್ತಾನಾ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಗುರುತರ ಆರೋಪ ಹೊರಿಸಲಾಗಿದೆ

ಲಂಚ ಸ್ವೀಕರಿಸಿದ ಆರೋಪದ ಮೇಲೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ಸಿಬಿಐ ಸಲ್ಲಿಸಿರುವ ಎಫ್‌ಐಆರ್ ಪೂರ್ಣ ವಿವರ ಮಾಧ್ಯಮಗಳಿಗೆ ಲಭ್ಯವಾಗಿದೆ. ಸಿಬಿಐನ ಎರಡನೇ ಉನ್ನತ ಅಧಿಕಾರಿಯಾಗಿರುವ ಅಸ್ತಾನಾ ಅವರು ಉದ್ಯಮಿ ಮೊಯಿನ್ ಖುರೇಶಿ ಅವರಿಂದ ಸುಮಾರು ೨ ಕೋಟಿ ರುಪಾಯಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಬಂಧನದ ಬಳಿಕ ತನ್ನದೇ ಸಂಸ್ಥೆಯ ಹಿರಿಯ ಅಧಿಕಾರಿ ಅಸ್ತಾನಾ ವಿರುದ್ಧ ಸಿಬಿಐ ಬೊಟ್ಟು ಮಾಡಿತ್ತು. ಹೈದರಾಬಾದಿನ ಉದ್ಯಮಿ ಸನಾ ಸತೀಶ್ ನೀಡಿದ ದೂರನ್ನು ಆಧರಿಸಿ ಅ.15ರಂದು ಎಫ್‌ಐಆರ್ ದಾಖಲಿಸಲಾಗಿದೆ. ಅದರ ಪ್ರಮುಖ ಅಂಶಗಳು ಹೀಗಿವೆ:

  • ಸತೀಶ್ ಸನಾ ಅವರು ದೂರಿನಲ್ಲಿ ಮಾಡಲಾದ ಆರೋಪದಂತೆ ಸಾರ್ವಜನಿಕ ಸೇವೆಯ ಹುದ್ದೆಯಲ್ಲಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತೊಬ್ಬ ಅಧಿಕಾರಿ ದೇವೇಂದರ್ ಅವರು ಪ್ರಕರಣದಿಂದ ಮುಕ್ತಿ ನೀಡುವ ಸಲುವಾಗಿ ಮನೋಜ್ ಮತ್ತು ಸೋಮೇಶ್ ಪ್ರಸಾದ್ ಅವರಿಂದ ಅಕ್ರಮವಾಗಿ ಲಾಭ ಮಾಡಿಕೊಂಡಿದ್ದಾರೆ.
  • ಮೊಯಿನ್ ಖುರೇಶಿ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸನಾ ಸತೀಶ್ ಸಾಕ್ಷಿಯಾಗಿದ್ದಾರೆ.
  • ಸನಾ ಅವರನ್ನು ವಿಚಾರಣೆಗೆಂದು 2017ರ ಅಕ್ಟೋಬರ್ ಮತ್ತು ನವೆಂಬರ್ ನಡುವೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆ ಎರಡು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ಸನಾ ಅವರಿಗೆ ನೋಟಿಸ್ ನೀಡಲಾಗಿತ್ತು. ಪದೇಪದೇ ನೋಟಿಸ್ ಪಡೆಯುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸನಾ ಅವರು 2017ರ ಡಿಸೆಂಬರ್‌ನಲ್ಲಿ ದುಬೈ ಮೂಲದ ಉದ್ಯಮಿ ಮನೋಜ್ ಪ್ರಸಾದ್ ಅವರನ್ನು ಸಂಪರ್ಕಿಸಿದ್ದರು. ಖುರೇಶಿ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಸನಾ ಅವರು ಮನೋಜ್ ಮತ್ತು ಸೋಮೇಶ್ ಪ್ರಸಾದ್ ಮೂಲಕ ಅಧಿಕಾರಿಗಳಿಗೆ 2.95 ಕೋಟಿ ರುಪಾಯಿ ತಲುಪಿಸಿದ್ದರು. ಅದರಂತೆ, 2018ರ ಫೆಬ್ರವರಿವರೆಗೆ ಸನಾ ಅವರಿಗೆ ಸಿಬಿಐನಿಂದ ಯಾವುದೇ ನೋಟಿಸ್ ಬಂದಿರಲಿಲ್ಲ.
  • 2018ರ ಫೆ.19ರಂದು ಸನಾ ಅವರಿಗೆ ಸಿಬಿಐನಿಂದ ನೋಟಿಸ್ ಬಂತು. ಸನಾ ಅವರು ಮನೋಜ್ ಅವರನ್ನು ಭೇಟಿಯಾಗಲು ದುಬೈಗೆ ತೆರಳಿದರು. ಬಳಿಕ 2018ರ ಮೇ ಕೊನೆಯ ವಾರ ಮತ್ತು ಜೂನ್ ಮೊದಲ ವಾರದವರೆಗೆ ಯಾವುದೇ ನೋಟಿಸ್ ನೀಡಿರಲಿಲ್ಲ.
  • 2018ರ ಮೇ 16ರಂದು ಮತ್ತೊಮ್ಮೆ ಸನಾ ಅವರಿಗೆ ಲುಕೌಟ್ ನೋಟಿಸ್ ಬಂತು. ಕಳೆದ ತಿಂಗಳು ಸನಾ ವಿದೇಶಕ್ಕೆ ತೆರಳುತ್ತಿದ್ದಾಗ ಹೈದರಾಬಾದ್ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಅವರನ್ನು ತಡೆದರು. ಅಕ್ಟೋಬರ್ 1 ಮತ್ತು 3ರಂದು ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಅವರಿಗೆ ಸೂಚಿಸಿದರು. ನಿರಂತರ ಶೋಷಣೆಯಿಂದ ನಲುಗಿದ ನಂತರ ಇಡೀ ವ್ಯವಹಾರ ಕುರಿತಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸನಾ ತಮ್ಮ ಹೇಳಿಕೆ ದಾಖಲಿಸಿದರು.
  • ಅಕ್ಟೋಬರ್ 9ರಂದು ನಡೆಯಲಿರುವ ವಿಚಾರಣೆಯಿಂದ ವಿನಾಯಿತಿ ಪಡೆಯುವ ಉದ್ದೇಶದಿಂದ ಮತ್ತೆ ಮನೋಜ್ ಅವರನ್ನು ಸಂಪರ್ಕಿಸಿದರು. ಮನೋಜ್ ಅವರು ಭರವಸೆ ನೀಡಿದಂತೆ ಇದೇ ತಿಂಗಳ 25ರವರೆಗೆ ಅವರಿಗೆ ನೋಟಿಸ್ ಬರದಂತೆ ನೋಡಿಕೊಳ್ಳಲಾಗಿತ್ತು. 2 ಕೋಟಿ ರು. ಪಡೆಯುವ ಒಪ್ಪಂದದಂತೆ 25ರವರೆಗೆ ಈ ವಿನಾಯಿತಿ ನೀಡಲಾಗಿತ್ತು. ಅದರಲ್ಲಿ 25 ಲಕ್ಷ ರುಪಾಯಿಗಳನ್ನು 10ರಂದು ಸಲ್ಲಿಸಲಾಗಿತ್ತು.
  • ಉಳಿದ 1.75 ಕೋಟಿ ರುಪಾಯಿಗಳನ್ನು ಪಡೆಯಲು ಮನೋಜ್ ಪ್ರಸಾದ್ ಅ.16ರಂದು ಭಾರತಕ್ಕೆ ಬಂದಾಗ ಆತನನ್ನು ಬಂಧಿಸಲಾಯಿತು.
  • ದೂರನ್ನು ಆಧರಿಸಿ ಅಕ್ಟೋಬರ್ 15ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಅ.20ರಂದು ಸಂಬಂಧಪಟ್ಟ ಕೋರ್ಟಿನಲ್ಲಿ ದೂರಿಗೆ ಸಂಬಂಧಿಸಿದಂತೆ ಸನಾ ಮತ್ತೊಮ್ಮೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
  • ಸನಾ ಅವರಿಗೆ ಲುಕೌಟ್ ನೋಟಿಸ್ ನೀಡಿರುವುದು ಸಿಬಿಐ ನಿರ್ದೇಶಕರ ಗಮನಕ್ಕೆ ಬಂದಿರಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಮೇ 21ರಂದು ನಿರ್ದೇಶಕರ ಎದುರು ನೋಟಿಸ್ ನೀಡುವ ಪ್ರಸ್ತಾವನೆ ಸಲ್ಲಿಸಲಾಗಿತ್ತು.
  • ಸನಾ ಅವರ ಬಂಧನ ತಡೆಯಲು ಸಿಬಿಐ ನಿರ್ದೇಶಕರು ಯತ್ನಿಸಿದ್ದರು ಎಂಬ ಆರೋಪ ಸುಳ್ಳು ಮತ್ತು ದುರುದ್ದೇಶಪೂರಿತ. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತು ಇತರ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ವಿರುದ್ಧ ಲಂಚ ಸ್ವೀಕರಿಸಿದ ಆರೋಪ ದೂರಿನಲ್ಲಿದೆ. 2017ರ ಡಿಸೆಂಬರ್‌ನಲ್ಲಿ ಆರಂಭವಾದ ವ್ಯವಹಾರಕ್ಕೆ ಸಂಬಂಧಿಸಿದ ದೂರು ಇದು. 2017ರ ಫೆಬ್ರವರಿಯಲ್ಲಿ ದೂರು ದಾಖಲಾಗಿದ್ದು, 2018ರ ಸೆ.12ರಂದು ಬಂಧನ ಕುರಿತ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More