ರೆಹಾನಾ ಫಾತಿಮಾ ಎಂಬ ನುಂಗಲಾಗದ, ಉಗುಳಲೂ ಆಗದ ಬಿಸಿತುಪ್ಪ!

“ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಸಂಪರ್ಕ ಹೊಂದಿರುವ ರೆಹಾನಾ ಫಾತಿಮಾ, ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದು ಆ ಪಕ್ಷದ ಕಾರ್ಯಸೂಚಿಯ ಭಾಗ,” ಎಂದು ಸಿಪಿಎಂ ಆರೋಪಿಸಿದೆ. ಈ ಕುರಿತು ಸಿಪಿಎಂ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ

ಪ್ರವಾಹದಲ್ಲಿ ಕೊಚ್ಚಿಹೋದ ಕೇರಳ ಅಷ್ಟು ಬೇಗ ಇನ್ನೊಂದು ನೆರೆಗೆ ಸಿಲುಕುತ್ತದೆ ಎಂದು ಸ್ವತಃ ಕೇರಳಿಗರು ಎಣಿಸಿರಲಿಲ್ಲ. ಆದರೆ ಇದೊಂದು ಭಾವನಾತ್ಮಕ ಪ್ರವಾಹ; ಆಚಾರ-ವಿಚಾರಗಳಿಗೆ ಸಂಬಂಧಿಸಿದ ಮಾನಸಿಕ ನೆರೆ. ಎಲ್ಲ ವಯೋಮಾನದ ಹೆಣ್ಣುಮಕ್ಕಳು ಶಬರಿಮಲೆ ದೇಗುಲ ಪ್ರವೇಶಿಸಲು ಅರ್ಹರು ಎಂದು ಸೆ.28ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕೇರಳ ಕುದಿವ ಕೊಡಪಾನವಾಗಿದೆ. ತೀರ್ಪಿನ ನಂತರ ಎದ್ದ ಪ್ರತಿಭಟನೆ ಮತ್ತು ಆ ಪ್ರತಿಭಟನೆಗೆ ಉಂಟಾದ ಪ್ರತಿರೋಧ ದೇಶದ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿಯೂ ಹೌದು. ರೆಹಾನಾ ಫಾತಿಮಾ ಅಂತಹ ಪ್ರತಿರೋಧ ಹಡೆದ ಕೂಸು.

‘ಕಿಸ್ ಆಫ್ ಲವ್’ ಎಂಬ ವಿವಾದಾತ್ಮಕ ಚಳವಳಿಯಲ್ಲಿ ಭಾಗವಹಿಸಿದ್ದ; ಕೇರಳದ ಪ್ರಾಧ್ಯಾಪಕರೊಬ್ಬರು ಸ್ತನಗಳನ್ನು ಕಲ್ಲಂಗಡಿಗೆ ಹೋಲಿಸಿದಾಗ ತನ್ನ ತೆರೆದ ಎದೆಗಳಿಗೆ ಕಲ್ಲಂಗಡಿ ಅಡ್ಡ ಹಿಡಿದು ಪ್ರತಿಭಟಿಸಿದ್ದ; ದ್ವಿಲಿಂಗಿಗಳ ಸಮಸ್ಯೆಯನ್ನು ಹೇಳುವ ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ; ಪುರುಷರೇ ಪಾಲ್ಗೊಳ್ಳುತ್ತಿದ್ದ ಹುಲಿಕುಣಿತ ‘ಪುಲಿಕಳಿ’ಯಲ್ಲಿ ಗಂಡಸರಿಗೆ ಸರಿಸಾಟಿಯಾಗಿ ನರ್ತಿಸಿದ; ಜಾತಿಯತೆ ವಿರುದ್ಧ ಸಿಡಿದೆದ್ದ; ಹೆಣ್ಣಿನ ಶೋಷಣೆ ನಡೆದಾಗಲೆಲ್ಲ ಧ್ವನಿ ಎತ್ತುತ್ತಿದ್ದ, ನಿಯಮಗಳಿರುವುದೇ ಮುರಿಯುವುದಕ್ಕೆ ಎನ್ನುತ್ತಿದ್ದ ರೆಹಾನಾ ಶಬರಿಮಲೆ ದೇಗುಲ ಪ್ರವೇಶಿಸಿ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲ, ಪ್ರಗತಿಪರರು ಎಂದು ಹೇಳಿಕೊಳ್ಳುವವರಿಗೂ ಮತ್ತೊಂದು ಬಗೆಯಲ್ಲಿ ಪ್ರಶ್ನೆಯಾಗಿ ಕಾಡುತ್ತಿದ್ದಾರೆ.

31ರ ಹರೆಯದ, ವೃತ್ತಿಯಿಂದ ಬಿಎಸ್‌ಎನ್‌ಎಲ್‌ ಉದ್ಯೋಗಿಯಾದ, ಇಬ್ಬರು ಮಕ್ಕಳ ತಾಯಿ ರೆಹಾನಾ, ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿ ಮೂವರು ಮಹಿಳೆಯರು ವಿಫಲವಾದ ಬಳಿಕ ರಂಗಕ್ಕಿಳಿದುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಯ್ಯಪ್ಪ ಮಾಲೆ ಧರಿಸಿ ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಜಕ್ಕಲ್ ಜೊತೆ ದೇಗುಲ ಪ್ರವೇಶಿಸಲು ಯತ್ನಿಸುತ್ತಿದ್ದಂತೆ ಆಕೆಯ ಮನೆಯ ಮೇಲೆ ಗುಂಪೊಂದು ದಾಳಿ ನಡೆಸಿದೆ. ಇತ್ತ ಪೊಲೀಸರು ಆಕೆಯನ್ನು ತಡೆಹಿಡಿದಾಗ ‘ಸೂರ್ಯ ಗಾಯಿತ್ರಿ’ ಎಂಬ ತನ್ನ ಇನ್ನೊಂದು ಹೆಸರನ್ನು ಹೇಳಿ ಪ್ರವೇಶಕ್ಕೆ ಅವಕಾಶ ಪಡೆದಿದ್ದಾರೆ. ಇರುಮುಡಿ ಹೊತ್ತು ಆಕೆ ಸಾಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಆದರೆ, ದೇಗುಲದ ಮೆಟ್ಟಿಲುಗಳನ್ನು ಸ್ಪರ್ಶಿಸಲು ಮುಂದಾಗಬೇಕೆನ್ನುವಷ್ಟರಲ್ಲಿ ಸಣ್ಣ ಮಕ್ಕಳನ್ನೂ ಹೊಂದಿದ್ದ 300 ಜನರಿದ್ದ ಗುಂಪೊಂದು ಆಕೆಯನ್ನು ತಡೆದಿದೆ. ದೇವಸ್ವಂ ಇಲಾಖೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಕೂಡ, “ಶಬರಿಮಲೆ ಪ್ರವೇಶಿಸಿ ಶಕ್ತಿ ಪ್ರದರ್ಶಿಸುವ ಹೋರಾಟಗಾರರಿಗೆ ಪ್ರವೇಶವಿಲ್ಲ,” ಎಂದಿದ್ದಾರೆ. ರೆಹಾನಾ ಯತ್ನವನ್ನು ಖಂಡಿಸಿರುವ ಹಲವರು, ಆಕೆಯ ಧಾರ್ಮಿಕ ಹಿನ್ನೆಲೆ, ವಿವಾದಗಳನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ.

ಇತ್ತ ದೇಗುಲ ಪ್ರವೇಶ ಯತ್ನವನ್ನು ಖಂಡಿಸಿರುವ ಕೇರಳ ಮುಸ್ಲಿಂ ಜಮಾತ್, ಆಕೆಯನ್ನು ಮತ್ತು ಆಕೆಯ ಕುಟುಂಬವನ್ನು ಮುಸ್ಲಿಂ ಸಮುದಾಯದಿಂದ ಬಹಿಷ್ಕರಿಸಿದೆ. 2014ರ ‘ಕಿಸ್ ಆಫ್ ಲವ್’ ಚಳವಳಿಯಲ್ಲಿ ಭಾಗವಹಿಸಿದ್ದು ಮತ್ತು ನಗ್ನವಾಗಿ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಜಮಾತ್ ಸದಸ್ಯರು, “ಮುಸ್ಲಿಂ ಹೆಸರನ್ನು ಬಳಸಲು ಆಕೆ ಅರ್ಹಳಲ್ಲ. ಕೋಮುದ್ವೇಷಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಐಪಿಸಿ 153 ಎ ಸೆಕ್ಷನ್ ಅನ್ವಯ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ, ಧಾರ್ಮಿಕ ಕಾರಣಕ್ಕೆ ಮಾತ್ರವಲ್ಲ, ರಾಜಕೀಯವಾಗಿಯೂ ರೆಹಾನಾ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಸಿಪಿಎಂ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. “ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್ ಜೊತೆಗೆ ಸಂಪರ್ಕ ಹೊಂದಿರುವ ರೆಹಾನಾ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದು ಆ ಪಕ್ಷದ ಕಾರ್ಯಸೂಚಿಯ ಭಾಗ,” ಎಂದು ಸಿಪಿಎಂ ಆರೋಪಿಸಿದೆ. ಇದೇ ವೇಳೆ, ಆಕೆ ವಿಶ್ವ ಹಿಂದೂ ಪರಿಷತ್ ಜೊತೆ ಗುರುತಿಸಿಕೊಂಡಿದ್ದ ವಿಚಾರವೂ ಬಹಿರಂಗವಾಗಿದೆ. ಇಸ್ಲಾಂ ಧಾರ್ಮಿಕ ಕಟ್ಟುಪಾಡುಗಳನ್ನು ವಿಧಿಸಿದಾಗ ಮೂರು ವರ್ಷ ಅದ್ವೈತ ಅಧ್ಯಯನದಲ್ಲಿ ತೊಡಗಿಕೊಂಡಿದ್ದೆ ಎಂಬುದಾಗಿ ಆಕೆ ಹೇಳಿಕೊಂಡಿದ್ದಾರೆ. ಇತ್ತ ಬಿಜೆಪಿ, ಸಿಪಿಎಂ ಆರೋಪಗಳನ್ನು ಬಲವಾಗಿ ವಿರೋಧಿಸಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರನೊಂದಿಗೆ ಆಪ್ತ ಸಂಬಂಧ ಹೊಂದಿದ್ದ ರೆಹಾನಾ, ಅದೇ ಪ್ರಭಾವವನ್ನು ಬಳಸಿ ಪಟ್ಟಣಂತಿಟ್ಟ ಜಿಲ್ಲಾಡಳಿತದ ಮೇಲೆ ಪ್ರಭಾವ ಬೀರಿ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದಾರೆ ಎಂದು ದೂರಿದೆ. ಆದರೆ, ಈ ದೂರುಗಳನ್ನು ಅಲ್ಲಗಳೆದಿರುವ ರೆಹಾನಾ, “ಸಂಘಪರಿವಾರ ನನ್ನನ್ನು ಸಿಪಿಎಂಗೆ ಸೇರಿದವಳು ಎನ್ನುತ್ತಿದೆ. ಕಮ್ಯುನಿಸ್ಟರು ಈಕೆ ಸಂಘಪರಿವಾರಕ್ಕೆ ಸೇರಿದವಳು ಎನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರು ನಾನೊಬ್ಬ ಮಾವೋವಾದಿ ಎಂದು ಹೇಳುತ್ತಿದ್ದಾರೆ. ಮಾಧ್ಯಮಗಳು ನನ್ನನ್ನು ಸಾಮಾಜಿಕ ಕಾರ್ಯಕರ್ತೆ ಎಂದು ಕರೆಯುತ್ತಿವೆ. ನಾನು ಏನು ಎಂಬುದನ್ನು ನೀವು ಪ್ರಾಮಾಣಿಕವಾಗಿ ನಿರ್ಧರಿಸಿ. ಅಲ್ಲಿಯವರೆಗೂ ಒಬ್ಬ ಬಡ ಸರ್ಕಾರಿ ನೌಕರೆಯಾಗಿ, ಎರಡು ಮಕ್ಕಳ ತಾಯಿಯಾಗಿ ಮುಂದುವರಿಯುವೆ ಮತ್ತು ನನ್ನ ಮೇಲಾದ ಅನ್ಯಾಯ, ದಬ್ಬಾಳಿಕೆಯನ್ನು ಖಂಡಿಸುತ್ತ ಇರುವೆ,” ಎಂದು ಹೇಳಿದ್ದಾರೆ.

ರೆಹಾನಾರ ಹಿನ್ನೆಲೆ ಮತ್ತು ಇತ್ತೀಚಿನ ನಡವಳಿಕೆಗಳಿಂದಾಗಿ ಕೆಲವು ಪ್ರಗತಿಪರರು ಆಕೆಯನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ರೆಹಾನಾ ಸಂಪ್ರದಾಯ ವಿರೋಧಿಯೋ ಅಥವಾ ಧಾರ್ಮಿಕ ಅಂಧಶ್ರದ್ಧೆಗಳನ್ನು ಹೆಚ್ಚಿಸುತ್ತಿದ್ದಾರೆಯೋ ಎಂದು ಒಂದು ಬಣ ಆಕೆಯ ನಡವಳಿಕೆಗಳನ್ನು ಪ್ರಶ್ನಿಸುತ್ತಿದೆ. ಇದೇ ಕಾರಣಕ್ಕೆ ಸಿಪಿಎಂ ಆಕೆಯ ದೇಗುಲ ಪ್ರವೇಶವನ್ನು ನಿರ್ಬಂಧಿಸಿತು ಎಂಬ ಮಾತುಗಳೂ ಕೇಳಿ ಬರುತ್ತಿವೆ. ರೆಹಾನಾ ಅಯ್ಯಪ್ಪ ಮಾಲೆ ವೇಷಧಾರಿಯಾಗಿ ಕುಳಿತಿರುವ ಭಂಗಿಯೊಂದನ್ನು ಪ್ರಶ್ನಿಸಿ ಕೆಲವರು, “ಪ್ರತಿಭಟಿಸುವ ವಿಧಾನ ಇದಲ್ಲ,” ಎನ್ನುತ್ತಿದ್ದಾರೆ. ಅಲ್ಲದೆ, ಸೆಲಿಬ್ರಿಟಿ ಸ್ತ್ರೀವಾದಿ ಎಂಬ ಆರೋಪಿತ ನೆಲೆಯಲ್ಲಿ ಆಕೆಯನ್ನು ನೋಡಲಾಗುತ್ತಿದೆ.

ಇದನ್ನೂ ಓದಿ : ಶಬರಿಮಲೆ ತೀರ್ಪು; ವೋಟ್ ಬ್ಯಾಂಕ್ ಗಾಗಿ ಹೆಣಗುತ್ತಿರುವ ಕೇರಳದ ರಾಜಕಾರಣ

ರೆಹಾನಾ ನಿಲುವುಗಳನ್ನು ಹೇಗೆ ಸ್ವೀಕರಿಸಬೇಕು ಎಂಬ ಗೊಂದಲದಲ್ಲಿ ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರು, ಚಿಂತಕರು ಹಾಗೂ ಸಂಘಟನೆಗಳು ಇವೆ. ಒಂದು ಸಮುದಾಯವನ್ನು ಈ ಹಿಂದೆ ಎದುರುಹಾಕಿಕೊಂಡದ್ದಕ್ಕೆ ಪರಿಹಾರ ರೂಪದಲ್ಲಿ ಆಕೆಯ ದೇಗುಲ ಪ್ರವೇಶದ ನಿರ್ಧಾರವಿತ್ತೇ ಅಥವಾ ಎಲ್ಲ ಧರ್ಮಗಳಲ್ಲಿರುವ ಅಂಧಶ್ರದ್ಧೆಗಳನ್ನೂ, ಕಟ್ಟುಪಾಡುಗಳನ್ನೂ ಅವರು ವಿರೋಧಿಸುತ್ತಿದ್ದಾರೆಯೇ? ದೇಗುಲ ಪ್ರವೇಶವೂ ಸಂಪ್ರದಾಯವಲ್ಲವೇ? ಸಿಪಿಎಂ ಮತ್ತು ಬಿಜೆಪಿಯ ರಾಜಕೀಯ ದಾಳವಾಗಿ ಆಕೆ ಉಳಿದು ಹೋದರೆ? ಪ್ರಗತಿಪರರು ರೆಹಾನಾ ಜೊತೆಗೆ ಯಾಕೆ ನಿಲ್ಲುತ್ತಿಲ್ಲ? ಇತ್ಯಾದಿ ಪ್ರಶ್ನೆಗಳ ನಡುವೆ ಆಕೆ ಹೇಳಿದ ಮಾತೊಂದು ಮತ್ತೆ ಮತ್ತೆ ಅನುರಣಿಸುತ್ತಿದೆ: “ನಾನು ಏನು ಎಂಬುದನ್ನು ನೀವು ಪ್ರಾಮಾಣಿಕವಾಗಿ ನಿರ್ಧರಿಸಿ. ಅಲ್ಲಿಯವರೆಗೂ ಒಬ್ಬ ಬಡ ಸರ್ಕಾರಿ ನೌಕರೆಯಾಗಿ, ಎರಡು ಮಕ್ಕಳ ತಾಯಿಯಾಗಿ ಮುಂದುವರಿಯುವೆ ಮತ್ತು ನನ್ನ ಮೇಲಾದ ಅನ್ಯಾಯ, ದಬ್ಬಾಳಿಕೆಯನ್ನು ಖಂಡಿಸುತ್ತ ಇರುವೆ.”

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More