ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?

ದಕ್ಷಿಣ ಏಷ್ಯಾದ ಪ್ರಮುಖ ಸುದ್ದಿಸಂಸ್ಥೆಗಳಲ್ಲಿ ಒಂದಾದ ಎಎನ್ಐ ವರದಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಳುವ ಪಕ್ಷ ಮತ್ತು ಸರ್ಕಾರದ ಪರ ಹಾಗೂ ವಿಪಕ್ಷಗಳಿಗೆ ಮಸಿ ಬಳಿಯುವಂಥ ಎಡವಟ್ಟು ಮತ್ತೆ-ಮತ್ತೆ ಸಂಭವಿಸುತ್ತಲೇ ಇದೆ. ಇತ್ತೀಚಿನ ಅಮೃತಸರ ರೈಲು ದುರಂತದ ವರದಿಯಲ್ಲೂ ಅದೇ ಆಗಿದೆ

ದೇಶದಲ್ಲಿ ಸುಳ್ಳು ಸುದ್ದಿ (ಫೇಕ್ ನ್ಯೂಸ್) ಉತ್ಪಾದನೆ ಮತ್ತು ಪ್ರಸರಣವು ರಾಜಕೀಯ ಪಕ್ಷಗಳ ವಿಶೇಷ ಟ್ರೋಲ್ ಪಡೆಗಳು, ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿಲ್ಲ. ಮುಖ್ಯವಾಹಿನಿ ಮಾಧ್ಯಮಗಳೂ ಅಂತಹ ಮೂರ್ಖತನದಲ್ಲಿ ಮುಳುಗಿವೆ ಎಂಬುದಕ್ಕೆ ಆಗಾಗ ನಿದರ್ಶನಗಳು ಸಿಗುತ್ತಲೇ ಇವೆ. ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳವರೆಗೆ ಮತ್ತು ಸುದ್ದಿವಾಹಿನಿಗಳವರೆಗೆ, ಅಂತರ್ಜಾಲ ಸುದ್ದಿತಾಣಗಳವರೆಗೆ ಈ ಪ್ರವೃತ್ತಿ ವ್ಯಾಪಿಸಿದೆ.

ಮಾಧ್ಯಮಗಳ ವಿಶ್ವಾಸಾರ್ಹತೆ ಎಂಬುದನ್ನೇ ಹರಾಜಿಗಿಟ್ಟಿರುವ ಇಂತಹ ಪ್ರವೃತ್ತಿಯ ಹಿಂದೆ ಮಾಧ್ಯಮಗಳ ಹಣಕಾಸು ಆದಾಯ ಕ್ರೋಡೀಕರಣ, ಆಳುವ ಸರ್ಕಾರ ಮತ್ತು ಪಕ್ಷದ ಪರ ನಿಲ್ಲುವ ಮೂಲಕ ತಮ್ಮ ಆಡಳಿತಾತ್ಮಕ ಮತ್ತು ಜಾಹಿರಾತು ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರದ ಕೃಪಾಕಟಾಕ್ಷ ಗಳಿಸುವ ಅನಿವಾರ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಕೆಲವೊಮ್ಮೆ ಮಾಧ್ಯಮಗಳ ಒಳಗೇ, ಸಂಪಾದಕೀಯ ತಂಡಗಳಲ್ಲೇ ಸರ್ಕಾರ ಮತ್ತು ಆಳುವ ಪಕ್ಷದ ಸಿದ್ಧಾಂತ ಮತ್ತು ನಡೆಯನ್ನು ಮೆಚ್ಚುವ, ಅಭಿಮಾನದಿಂದ ಕಾಣುವ ಹಾಗೂ ಅದೇ ಹೊತ್ತಿಗೆ ಪ್ರತಿಪಕ್ಷವೂ ಸೇರಿದಂತೆ ಆಳುವ ಪಕ್ಷ, ಸರ್ಕಾರದ ವಿರುದ್ಧದ ಧೋರಣೆ, ನಿಲುವು ಹೊಂದಿರುವವರನ್ನು ಅವಮಾನಿಸುವ, ದ್ವೇಷಿಸುವ ಮತ್ತು ಸಂದರ್ಭ ಸಿಕ್ಕರೆ ಅಂಥವರ ಮೇಲೆ ವ್ಯವಸ್ಥಿತ ಅಪಪ್ರಚಾರದ (ಕೆಲವೊಮ್ಮೆ ದೈಹಿಕ ದಾಳಿ ಕೂಡ) ಮೂಲಕ ದಾಳಿ ನಡೆಸಿ ಬಾಯಿ ಮುಚ್ಚಿಸುವ ಮನಸ್ಥಿತಿಯ ವ್ಯಕ್ತಿಗಳ ಬಲವರ್ಧನೆಯಾಗಿದೆ. ಹಾಗಾಗಿ, ಆಡಳಿತ ವ್ಯವಸ್ಥೆಯನ್ನು ಮೆಚ್ಚಿಸುವ ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕ ಮಾಧ್ಯಮಗಳಲ್ಲೂ ಢಾಳಾಗಿ ಕಾಣುತ್ತಿವೆ ಎಂಬ ವಾದಗಳೂ ಇವೆ.

ಮಾಧ್ಯಮ ಮತ್ತು ಪತ್ರಕರ್ತರ ವೃತ್ತಿಬದುಕಿನ ಕಿಂಚಿತ್ತು ಗೌರವವನ್ನೂ ಮಣ್ಣುಪಾಲು ಮಾಡುವ ಅಂತಹ ಒಂದು ಘಟನೆ ಇತ್ತೀಚಿನ ಅಮೃತಸರ ರೈಲು ಅವಘಡದ ವರದಿಯ ವಿಷಯದಲ್ಲಿ ಏಷಿಯನ್ ನ್ಯೂಸ್ ಇಂಟರ್ನ್ಯಾಷನಲ್‌ನಲ್ಲೂ (ಎಎನ್ಐ) ನಡೆದಿದೆ.

ಎಲ್ಲರಿಗೂ ತಿಳಿದಿರುವಂತೆ, ಕಳೆದ ವಾರಾಂತ್ಯದ ಅಮೃತಸರ ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಸಾವಿಗೀಡಾದರು. ದಸರಾ ಉತ್ಸವದ ಅಂತಿಮ ದಿನ ಕಾರ್ಯಕ್ರಮ ವೀಕ್ಷಿಸಲು ನೆರೆದ ಜನಸಮೂಹ ಈ ದುರಂತಕ್ಕೆ ಈಡಾಗಿತ್ತು. ಆ ಘಟನೆ ನಡೆಯುತ್ತಲೇ ಪ್ರತ್ಯಕ್ಷದರ್ಶಿಗಳ ಮೊಬೈಲ್ ವೀಡಿಯೋಗಳು ವಿವಿಧ ಸುದ್ದಿಸಂಸ್ಥೆಗಳಿಗೆ ಮೊದಲ ಸುದ್ದಿಯ ಮೂಲವಾದವು. ಎಎನ್ಐ ಕೂಡ ಇಂತಹ ವೀಡಿಯೋ ಮತ್ತು ಮಾಹಿತಿಯ ತುಣುಕುಗಳನ್ನು ಜೋಡಿಸಿ ಸುದ್ದಿ ಪ್ರಕಟಿಸಿತು. ಜೊತೆಗೆ, ಪ್ರತ್ಯಕ್ಷದರ್ಶಿಗಳ ಕೆಲವು ಹೇಳಿಕೆಗಳನ್ನೂ ಸುದ್ದಿಯೊಂದಿಗೆ ಪ್ರಸಾರ ಮಾಡಿತು. ಆ ಪೈಕಿ, ಬಹುತೇಕ ಪ್ರತ್ಯಕ್ಷದರ್ಶಿಗಳು ಈ ದುರಂತಕ್ಕೆ ಕಾಂಗ್ರೆಸ್ಸೇ ಕಾರಣ ಎಂದೂ ಹೇಳಿದ್ದರು. ಅಂತಹ ಹೇಳಿಕೆಯೊಂದನ್ನು ಉಲ್ಲೇಖಿಸಿ ಅಕ್ಟೋಬರ್ ೧೯ರ ರಾತ್ರಿ ೮.೩೯ಕ್ಕೆ ವೀಡಿಯೋ ಸಹಿತ ಟ್ವೀಟ್ ಮಾಡಿದ ಎಎನ್ಐ, “ಅಮೃತಸರ ದುರಂತ ಸ್ಥಳದಿಂದ ಘಟನೆಯ ಪ್ರತ್ಯಕ್ಷದರ್ಶಿಗಳು ಏನು ಹೇಳುತ್ತಾರೆ ನೋಡಿ; ‘ಕಾಂಗ್ರೆಸ್ ಅನುಮತಿ ಪಡೆಯದೆ ಇಲ್ಲಿ ದಸರಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನವಜೋತ್ ಸಿಂಗ್ ಸಿಧು ಅವರ ಪತ್ನಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಜನರ ಮೇಲೆ ರೈಲು ಹಾಯುತ್ತಿದ್ದರೂ ಅವರು ತಮ್ಮ ಭಾಷಣ ನಿಲ್ಲಿಸಲಿಲ್ಲ’ ಎನ್ನುತ್ತಿದ್ದಾರೆ,” ಎಂದಿತ್ತು.

ಈ ಟ್ವೀಟ್ ಮತ್ತು ಆ ಬಳಿಕ ಎಎನ್ಐ ಮಾಡಿದ ಸ್ಪಷ್ಟೀಕರಣದ ಮತ್ತೊಂದು ಟ್ವೀಟ್ ಬೆನ್ನು ಹತ್ತಿದ ‘ಆಲ್ಟ್ ನ್ಯೂಸ್’ ಜಾಲತಾಣ, ಎಎನ್ಐ ಸಂಸ್ಥೆಯ ಈ ವರದಿಯ ಎಡವಟ್ಟುಗಳ ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಈ ಸುದ್ದಿಸಂಸ್ಥೆ ಆಡಳಿತರೂಢ ಬಿಜೆಪಿ ಸರ್ಕಾರ ಮತ್ತು ಪಕ್ಷದ ವಕ್ತಾರನಂತೆ ಪ್ರತಿಪಕ್ಷಗಳು ಮತ್ತು ಅದರ ಟೀಕಾಕಾರರ ಕುರಿತು ವಿವಿಧ ಸಂದರ್ಭಗಳಲ್ಲಿ ಹೇಗೆ ಸುಳ್ಳು ಸುದ್ದಿಗಳನ್ನು ಹರಡಿದೆ ಮತ್ತು ಅಂತಹ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಲೇ ತನ್ನ ತಪ್ಪನ್ನು ತಿದ್ದಿಕೊಳ್ಳುವ ಅಮಾಯಕತೆಯನ್ನು ಹೇಗೆ ಪ್ರದರ್ಶಿಸಿದೆ ಎಂಬುದನ್ನು ಅನಾವರಣಗೊಳಿಸಿದೆ.

ಅಕ್ಟೋಬರ್ ೧೯ರ ರಾತ್ರಿ ೮.೩೯ಕ್ಕೆ ಎಎನ್ಐ ಮಾಡಿದ ಟ್ವೀಟ್ ವೀಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿಯು ಸುದ್ದಿಸಂಸ್ಥೆ ಹೇಳಿಕೊಂಡಂತೆ ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಜನಸಾಮಾನ್ಯನಲ್ಲ; ಆತ ಬಿಜೆಪಿ ಪಂಜಾಬ್ ರಾಜ್ಯ ಘಟಕದ ವಕ್ತಾರ ಹಾಗೂ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಎಂಬುದನ್ನು ರಾತ್ರಿ ೧೧.೪೯ಕ್ಕೆ ವೀಕ್ಷಕರು ಗುರುತಿಸಿ ಕಮೆಂಟ್ ಮಾಡಿದ ಬಳಿಕ ವಾಸ್ತವ ಬೆಳಕಿಗೆ ಬಂದಿತು. ಬಳಿಕ, ರಾತ್ರಿ ೧೨.೩೬ಕ್ಕೆ ತನ್ನ ತಪ್ಪು ತಿದ್ದಿಕೊಂಡ ಎಎನ್ಐ, ತಾವು ಈ ಮೊದಲು ಪ್ರತ್ಯಕ್ಷದರ್ಶಿ ಎಂದು ಹೇಳಿದ್ದ ವ್ಯಕ್ತಿಯು ಬಿಜೆಪಿ ನಾಯಕ ರಾಜೇಶ್ ಹನಿ ಎಂದು ಟ್ವೀಟ್ ಮಾಡಿತು ಎಂದು ‘ಆಲ್ಟ್ನ್ಯೂಸ್’ ಹೇಳಿದೆ.

ಆದರೆ, ಹಾಗೆ ಆತನ ಗುರುತು ಸ್ಪಷ್ಟಪಡಿಸುವ ಮೂಲಕ ತನ್ನ ತಪ್ಪು ಸರಿಪಡಿಸಿಕೊಂಡ ಎಎನ್ಐ, ಆ ಟ್ವೀಟ್‌ನಲ್ಲಿ ಮತ್ತೊಂದು ಪ್ರಮಾದ ಎಸಗಿತು. “ಅಮೃತಸರದ ದಸರಾ ಆಚರಣೆ ವೀಕ್ಷಿಸುತ್ತಿದ್ದವರ ಮೇಲೆ ಡಿಎಂಯು ರೈಲು ಹಾಯ್ದ ಹೊತ್ತಲ್ಲಿ ಸ್ಥಳದಲ್ಲಿದ್ದ ವ್ಯಕ್ತಿ ಬಿಜೆಪಿ ವಕ್ತಾರ ರಾಜೇಶ್ ಹನಿ,” ಎಂದು ಎಎನ್ಐ ಟ್ವೀಟ್ ಮಾಡಿತು. ಆದರೆ, ಆ ಮುನ್ನ ರಾಜೇಶ್ ಹನಿ ಸ್ವತಃ ಟ್ವೀಟ್ ಮಾಡಿ, “ದುರಂತ ಸಂಭವಿಸಿದ ೨೦ ನಿಮಿಷಗಳ ತರುವಾಯ ತಾನು ಸ್ಥಳಕ್ಕೆ ತಲುಪಿದೆ,” ಎಂದು ಹೇಳಿದ್ದರು. ಆ ಮೂಲಕ, ಎಎನ್ಐ ಸುದ್ದಿ ಸಂಪಾದಕಿ ಸ್ಮಿತಾ ಪ್ರಕಾಶ್ ಅವರ, “ರಾಜೇಶ್ ಹನಿ ಘಟನೆಯ ಪ್ರತ್ಯಕ್ಷದರ್ಶಿ,” ಎಂಬ ಟ್ವೀಟ್ ಹೇಳಿಕೆಗೂ, ಸ್ವತಃ ರಾಜೇಶ್ ಹನಿಯ ಹೇಳಿಕೆಗೂ ವೈರುಧ್ಯವಿತ್ತು. ಆ ಮೂಲಕ, ಎಎನ್ಐ ಸುದ್ದಿಸಂಸ್ಥೆಯ ವಿಶ್ವಾಸಾರ್ಹತೆ ಅಮೃತಸರ ದುರಂತದ ವರದಿಯ ವಿಷಯದಲ್ಲಿ ಮತ್ತೆ-ಮತ್ತೆ ಮುಕ್ಕಾಯಿತು.

ಈ ಎಡವಟ್ಟು, ಸ್ಥಳದಿಂದ ವರದಿ ಮಾಡಿದ ವರದಿಗಾರರ ತಪ್ಪೇ ಅಥವಾ ಸುದ್ದಿಯನ್ನು ಸಂಪಾದಿಸಿ ಅಂತಿಮಗೊಳಿಸಿದ ಸುದ್ದಿ ಸಂಪಾದಕಿಯ ಪ್ರಮಾದವೇ ಅಥವಾ ಇಡಿಯಾಗಿ ಸುದ್ದಿಸಂಸ್ಥೆಯ ಉದ್ದೇಶಿತ ಕೃತ್ಯವೇ ಎಂಬ ಪ್ರಶ್ನೆಗಳನ್ನು ಹುಟ್ಟಿಸುವ ಜೊತೆಗೇ, ಒಬ್ಬ ಅಮಾಯಕ ಪ್ರತ್ಯಕ್ಷದರ್ಶಿಯು ಘಟನೆಗೆ ಕಾಂಗ್ರೆಸ್ ಕಾರಣ ಎನ್ನುವ ಮೂಲಕ ಸಾರ್ವಜನಿಕರಲ್ಲಿ ಆ ಘಟನೆಯ ಬಗ್ಗೆ ಹುಟ್ಟಿಸುವ ಭಾವನೆಗೂ, ಬಿಜೆಪಿಯ ವಕ್ತಾರನೊಬ್ಬ ತನ್ನ ಪ್ರತಿಪಕ್ಷದ ಮೇಲೆ ಗೂಬೆ ಕೂರಿಸುವುದರಿಂದ ಸಾರ್ವಜನಿಕರ ಮೇಲೆ ಆಗುವ ಪರಿಣಾಮಕ್ಕೂ ಇರುವ ವ್ಯತ್ಯಾಸದ ಲಾಭ ಬಿಜೆಪಿಗೆ ದಕ್ಕಿಸಿಕೊಡಲಾಯಿತು. ಅದಕ್ಕೆ ಸಾಕ್ಷಿ, ಎಎನ್ಐನ ಮೊದಲ ಟ್ವೀಟ್ ಅನ್ನು (ರಾತ್ರಿ ೮.೩೯) ಸುಮಾರು ಆರೂವರೆ ಸಾವಿರ ಮಂದಿ ಲೈಕ್ ಮಾಡಿ ರೀಟ್ವೀಟ್ ಮಾಡಿದ್ದರೆ, ಆ ಬಳಿಕ ೧೧ ತಾಸು ನಂತರ ಅದು ನೀಡಿದ ಸ್ಪಷ್ಟನೆಯ ಟ್ವೀಟ್ನ್ನು ಕೇವಲ ೭೭೦ ಮಂದಿ ಮಾತ್ರ ಲೈಕ್ ಮಾಡಿ, ೪೬೦ ಮಂದಿ ಮಾತ್ರ ರೀಟ್ವೀಟ್ ಮಾಡಿದ್ದರು. ಅಂದರೆ, ಆಗಿರುವ ತಪ್ಪನ್ನು ಸರಿಪಡಿಸುವ ಹೊತ್ತಿಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಆಗಬಹುದಾದ ಹಾನಿ ಆಗಿಹೋಗಿತ್ತು!

ಹಾಗೇ, ಇದೇ ಘಟನೆಗೆ ಸಂಬಂಧಿಸಿದಂತೆ ಎಎನ್ಐ ಉಲ್ಲೇಖಿಸಿದ ಮತ್ತೊಬ್ಬ ಪ್ರತ್ಯಕ್ಷದರ್ಶಿಯ ವಿಷಯದಲ್ಲಿಯೂ ಇಂತಹದ್ದೇ ಪ್ರಮಾದ ಆಗಿತ್ತು. ಆ ವ್ಯಕ್ತಿಯನ್ನೂ ಎಎನ್ಐ ‘ಪ್ರತ್ಯಕ್ಷದರ್ಶಿ’ ಎಂದೇ ಹೇಳಿ, ಆತನ ಹೇಳಿಕೆಯ ವೀಡಿಯೋ ಟ್ವೀಟ್ ಮಾಡಿತ್ತು. ಆದರೆ, ವಾಸ್ತವವಾಗಿ ಆತ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಮಂದೀಪ್ ಸಿಂಗ್ ಮನ್ನಾ ಆಗಿದ್ದರು ಎಂದು 'ಆಲ್ಟ್ ನ್ಯೂಸ್’ ಉಲ್ಲೇಖಿಸಿದೆ!

ಎಎನ್ಐ ಸುದ್ದಿಸಂಸ್ಥೆಯ ಇಂತಹ ಎಡವಟ್ಟುಗಳು ಇದೇ ಮೊದಲೇನಲ್ಲ! ಬಿಜೆಪಿ ಪಕ್ಷ ಮತ್ತು ಸರ್ಕಾರಕ್ಕೆ ಪೂರಕವಾಗಿ ಮತ್ತು ಅದರ ವಿರೋಧಿ ಪಕ್ಷ ಮತ್ತು ವ್ಯಕ್ತಿಗಳಿಗೆ ವ್ಯತಿರಿಕ್ತವಾಗಿ ಸುಳ್ಳು ಸುದ್ದಿಗಳನ್ನು ಭಿತ್ತರಿಸುವ ಒಂದು ಪರಂಪರೆಯೇ ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿದೆ ಎಂಬುದಕ್ಕೆ ಆಲ್ಟ್ ನ್ಯೂಸ್ ಹಲವು ಉದಾಹರಣಗಳನ್ನು ನೀಡಿದೆ.

  • ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಬಣ್ಣಿಸಲು ಬೆಂಗಳೂರಿನ ನಾಗರಿಕ ಎಂದು ಅಂದಿನ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಅವರ ವಿಡಿಯೋ ಹೇಳಿಕೆಯನ್ನು ಎಎನ್ಐ ಟ್ವೀಟರ್ ಮೂಲಕ ಪ್ರಚುರಪಡಿಸಿತ್ತು. ಆದರೆ, ಅದನ್ನು ಗಮಿಸಿದವರು, ಮೋದಿ ಮನ್ ಕಿ ಬಾತ್ ಪರ ಹೇಳಿಕೆ ನೀಡಿದ ವ್ಯಕ್ತಿ ಬೆಂಗಳೂರಿನ ಜನಸಾಮಾನ್ಯನಲ್ಲ, ಅವರು ಮೋದಿಯವರ ಪಕ್ಷದ ಶಾಸಕರೇ ಎಂದು ಎತ್ತಿ ತೋರಿಸಿದ ಬಳಿಕ, ಆ ಟ್ವೀಟ್ ಡಿಲೀಟ್ ಮಾಡಿ, ಬಿಜೆಪಿ ಶಾಸಕ ಅಶ್ಚತ್ಥ್ ನಾರಾಯಣ ಎಂದು ಅವರ ಸ್ಥಾನಮಾನ, ಹೆಸರು ಉಲ್ಲೇಖಿಸಿ ಮರು ಟ್ವೀಟ್ ಮಾಡಲಾಗಿತ್ತು.
  • ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕೂಡ ಎಎನ್ಐ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ದ ಜನಾಭಿಪ್ರಾಯ ಮೂಡಿಸುವ ಅಂತಹದ್ದೇ ಮೊತ್ತೊಂದು ಟ್ವೀಟ್ ಮಾಡಿತ್ತು. ಕಳೆದ ಏಪ್ರಿಲ್‌ನಲ್ಲಿ ಮಂಗಳೂರಿನ ಜನಸಾಮಾನ್ಯ ಎಂದು ಒಬ್ಬರನ್ನು ತೋರಿಸಿ, “ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಿಂದೂ, ಮುಸ್ಲಿಮರನ್ನು ಒಡೆದದ್ದು ಬಿಟ್ಟು ಇನ್ನೇನೂ ಮಾಡಿಲ್ಲ,” ಎಂಬ ಅವರ ಹೇಳಿಕೆಯ ವಿಡಿಯೋ ಪ್ರಕಟಿಸಿತ್ತು. ಆದರೆ, ಆ ವ್ಯಕ್ತಿ ಮಂಗಳೂರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಫಜಲ್ ಎಂಬುದನ್ನು ವೀಕ್ಷಕರು ಗುರುತಿಸಿದ ಬಳಿಕ ಆ ಟ್ವೀಟ್ ಡಿಲೀಟ್ ಮಾಡಿದ್ದ ಎಎನ್ಐ, ಬಳಿಕ ತನ್ನ ತಪ್ಪು ಸರಿಪಡಿಸಿಕೊಂಡು ಹೊಸ ಟ್ವೀಟ್ ಮಾಡಿತ್ತು.
  • ಇನ್ನೊಂದು ಸಂದರ್ಭದಲ್ಲಿ ಮೋದಿಯವರ ಬಹುಪ್ರಚಾರಿತ ನೋಟು ಅಮಾನ್ಯೀಕರಣದ ಪರವಾದ ವರದಿಯಲ್ಲಿ, ತನ್ನದೇ ವರದಿಗಾರ ನೋಟು ಅಮಾನ್ಯೀಕರಣದಿಂದ ಡಿಜಿಟಲ್ ಪಾವತಿ ಹೇಗೆ ಜನರಿಗೆ ಅನುಕೂಲಕರವಾಗಿದೆ ಎಂದು ವಿವರಿಸುವ ವೀಡಿಯೋವನ್ನು ಟೀ ಸ್ಟಾಲ್ ಗ್ರಾಹಕ ಎಂದು ಟ್ವೀಟ್ ಮಾಡಿತ್ತು! ಆ ಬಳಿಕ ಆ ಎಡವಟ್ಟಿಗೆ ಸ್ಪಷ್ಟನೆಯನ್ನೂ ನೀಡದೆ ಆ ಟ್ವೀಟನ್ನೇ ಡಿಲೀಟ್ ಮಾಡಲಾಗಿತ್ತು.
  • ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಟೋಲ್ ಗೇಟ್ ಮೇಲೆ ನಡೆಸಿದ ದಾಳಿಯನ್ನು ಬಸ್ ಪ್ರಯಾಣಿಕರು ನಡೆಸಿದ ದಾಳಿ ಎಂದು ವರದಿ ಮಾಡಿದ್ದ ಎಎನ್ಐ ಧೋರಣೆ ೨೦೧೭ರ ಮಾರ್ಚ್‌ನಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ‘ಎಬಿಪಿ ನ್ಯೂಸ್’ ವಾಹಿನಿ ವಾಸ್ತವಾಂಶಗಳನ್ನು ತನ್ನ ವರದಿಯ ಮೂಲಕ ಜನರ ಮುಂದಿಡುತ್ತಲೇ ಎಎನ್ಐ ವಿಶ್ವಾಸಾರ್ಹತೆ ಬೆತ್ತಲಾಗಿತ್ತು.
  • ಹಾಗೇ, ವಾರಣಾಸಿಯ ಮುಸ್ಲಿಂ ಮಹಿಳೆಯರ ಹಿಂದೂ ಪರ ನಿಲವು ಹಾಗೂ ಮೋದಿ ಪರ ಹೇಳಿಕೆಗಳ ಕುರಿತ ಸರಣಿ ವರದಿಗಳ ಸತ್ಯಾಸತ್ಯತೆ ಬಯಲಾಗಲು ‘ಟೈಮ್ ಆಫ್ ಇಂಡಿಯಾ’ದ ವರದಿ ಬರಬೇಕಾಯಿತು. ಆರೆಸ್ಸೆಸ್ ಅಂಗಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್‌ಗೆ ಸೇರಿದ ವ್ಯಕ್ತಿಗಳ ಮೋದಿ ಮತ್ತು ಬಿಜೆಪಿ ಪರ ಹೇಳಿಕೆಗಳನ್ನು ಎಎನ್ಐ ಸಾಮಾನ್ಯ ಮುಸ್ಲಿಂ ವ್ಯಕ್ತಿಗಳ ನಿಲುವು ಎಂಬಂತೆ ಬಿಂಬಿಸಿತ್ತು. ೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಪರ ಅಲೆಯ ಕುರಿತ ವರದಿಗಳಲ್ಲಿ ಈ ಎಡವಟ್ಟುಗಳನ್ನು ಮಾಡಲಾಗಿತ್ತು. ಅದು ಉದ್ದೇಶಪೂರ್ವಕವೇ ಅಲ್ಲವೇ ಎಂಬುದು ಯಾರಿಗಾದರೂ ಮೇಲ್ನೋಟಕ್ಕೇ ಗೊತ್ತಾಗದೇ ಇರದು!
  • ಆಡಳಿತ ಪಕ್ಷದ ಪರವಷ್ಟೇ ಅಲ್ಲದೆ, ಪ್ರತಿಪಕ್ಷಗಳಿಗೆ ಮಸಿ ಬಳಿಯುವಂತ ಎಡವಟ್ಟುಗಳನ್ನೂ ಎಎನ್ಐ ಮಾಡಿದೆ. ೨೦೧೭ರಲ್ಲಿ ಗಗನ ಧವನ್ ಎಂಬ ವ್ಯಕ್ತಿಯನ್ನು ಇ.ಡಿ (ಜಾರಿ ನಿರ್ದೇಶನಾಲಯ) ಬಂಧಿಸಿದಾಗ, ದಕ್ಷಿಣ ಏಷ್ಯಾದ ಪ್ರಭಾವಿ ಮಾಧ್ಯಮ ಸಂಸ್ಥೆ ಹೇಳಿದ್ದು, “ಕಾಂಗ್ರೆಸ್ ಮಾಜಿ ಶಾಸಕ ಗಗನ್ ಧವನ್‌ನನ್ನು ಇ.ಡಿ ಐದು ಸಾವಿರ ಕೋಟಿ ರು. ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿಸಿದೆ,” ಎಂದು ಟ್ವೀಟ್ ಮಾಡಿತ್ತು. ಆದರೆ, ಬಳಿಕ ತನ್ನ ಎಡವಟ್ಟು ಟ್ವೀಟ್ ಡಿಲೀಟ್ ಮಾಡಿದ ಎಎನ್ಐ, “ಗಗನ್ ಧವನ್ ಕಾಂಗ್ರೆಸ್ ಶಾಸಕರಲ್ಲ; ಅವರೊಬ್ಬ ಉದ್ಯಮಿ ಅಷ್ಟೇ,” ಎಂದು ಸಮಜಾಯಿಷಿ ನೀಡಿ ರೀಟ್ವೀಟ್ ಮಾಡಿತ್ತು!

ಆದರೆ, ಅರೆಕ್ಷಣದಲ್ಲಿ ನೂರಾರು ಮಾಧ್ಯಮ ಸಂಸ್ಥೆಗಳ ಮೂಲಕ ಮೂಲೆಮೂಲೆಗೆ ಸುದ್ದಿ ರವಾನೆಯಾಗುವ ತಂತ್ರಜ್ಞಾನ ಮತ್ತು ವೇಗದ ಜಗತ್ತಿನಲ್ಲಿ ಒಂದು ಸುದ್ದಿ ಹಂಚಿಕೆಯ ಏಜೆನ್ಸಿಯಾಗಿ ಎಎನ್ಐ ಎಸಗುವ ಇಂತಹ ಎಡವಟ್ಟುಗಳ ಪರಿಣಾಮ ಅಗಾಧ. ಆ ಅರಿವು ಮತ್ತು ತನ್ನ ಎಡವಟ್ಟುಗಳ ಪರಿಣಾಮದ ಫಲದ ಅರಿವು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಜನಪ್ರಿಯ ಸುದ್ದಿಸಂಸ್ಥೆಗಳಲ್ಲಿ ಒಂದಾದ ಎಎನ್ಐಗೆ ಇರದೆ ಇರದು. ಪತ್ರಿಕೋದ್ಯಮದ ಮೂಲ ಆಶಯಕ್ಕೆ, ವೃತ್ತಿ ಧರ್ಮಕ್ಕೆ ತದ್ವಿರುದ್ಧವಾದ ಇಂತಹ ಸುಳ್ಳು ಸುದ್ದಿಗಳನ್ನು ಭಿತ್ತರಿಸುವ ಈ ಯಡವಟ್ಟುಗಳ ಹಿಂದಿನ ಮರ್ಮವೇನು? ಒಂದಲ್ಲಾ ಎರಡಲ್ಲಾ ಪ್ರತಿ ಬಾರಿಯೂ ಆಳುವ ಪಕ್ಷ ಮತ್ತು ಸರ್ಕಾರದ ಪರ ಹಾಗೂ ಪ್ರತಿಪಕ್ಷ ಮತ್ತು ಟೀಕಾಕಾರರ ವಿರುದ್ಧವೇ ಇಂತಹ ತಪ್ಪು ಸುದ್ದಿಗಳ, ಮಾಹಿತಿಗಳ ಸೋಗಿನ ಎಡವಟ್ಟುಗಳು ಘಟಿಸುತ್ತಿರುವುದು ಏಕೆ ಮತ್ತು ಹೇಗೆ? ಎಂಬುದನ್ನು ಬಹುಶಃ ಇವತ್ತಿನ ಭಾರತೀಯ ಮುಖ್ಯವಾಹಿನಿ ಮಾಧ್ಯಮಗಳ ವರಸೆಯನ್ನು ಗಮನಿಸಿದರೆ ಉತ್ತರ ಸಿಗಲಿದೆ.

ಹಾಗೇ, ಎಎನ್ಐ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಸರ್ಕಾರಿ ಸ್ವಾಮ್ಯದ ತೈಲಸಂಸ್ಥೆಗಳ ಜಾಹೀರಾತು ಮತ್ತು ತೈಲಸಂಸ್ಥೆಗಳ ಮಾತೃಸಂಸ್ಥೆ ಒಎನ್‌ಜಿಸಿಯಲ್ಲಿ ಬಿಜೆಪಿ ಪಕ್ಷ ಮತ್ತು ಆ ಪಕ್ಷದ ವಕ್ತಾರ ಸಂಬಿತ್ ಪಾತ್ರ ಹೊಂದಿರುವ ಆಯಕಟ್ಟಿನ ಸ್ಥಾನ ಮತ್ತು ಪ್ರಭಾವವನ್ನು ಗಮನಿಸಿದರೂ ಈ ತಥಾಕಥಿತ ‘ಯಡವಟ್ಟು’ಗಳ ಮರ್ಮ ತಿಳಿಯದೆ ಇರದು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More