ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ

ದೇಶದ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯಲು ಕಾರಣವಾಗಿರುವ ಬೃಹತ್ ನಿಷ್ಕ್ರಿಯ ಸಾಲ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕಿನ ಉತ್ತರದಾಯಿತ್ವ ಏನು ಎಂದು ಸಿಜಿಎ ರಾಜೀವ್ ಮಹರ್ಷಿ ಪ್ರಶ್ನಿಸಿದ್ದಾರೆ. ಇದೇ ಮೊದಲ ಬಾರಿಗೆ ಸಿಎಜಿ ಆರ್ಬಿಐ ವಿರುದ್ಧ ದನಿ ಎತ್ತಿದ್ದು, ಮತ್ತಷ್ಟು ಸಂಘರ್ಷಗಳಿಗೆ ಕಾರಣವಾಗಲಿದೆ

ದೇಶದ ಬ್ಯಾಂಕಿಂಗ್ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪಾತ್ರವನ್ನು ಪ್ರಸ್ನಿಸಿರುವ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಮಹಾಲೇಖಪಾಲ ಮತ್ತು ಮಹಾ ಲೆಕ್ಕಪರಿಶೋಧಕ) ರಾಜೀವ್ ಮಹರ್ಷಿ, “ಬ್ಯಾಂಕುಗಳು ಮನಸೋ ಇಚ್ಛೆ ಸಾಲ ನೀಡುವ ಹೊತ್ತಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದ ನಿಯಂತ್ರಕ (ಆರ್ಬಿಐ) ಏನು ಮಾಡುತ್ತಿತ್ತು?” ಎಂದು ಪ್ರಶ್ನಿಸಿದ್ದಾರೆ.

“ಈಗ ಭುಗಿಲೆದ್ದಿರುವ ನಿಷ್ಕ್ರಿಯ ಸಾಲದ ಬಿಕ್ಕಟ್ಟಿಗೆ ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡಿದ್ದು, ಆಸ್ತಿ ಮತ್ತು ಜವಾಬ್ದಾರಿಗಳ ನಡುವಿನ ಅಸಮತೋಲ ಸೃಷ್ಟಿಯಾಗಿದ್ದು, ನಿಷ್ಕ್ರಿಯ ಸಾಲ ಬೃಹತ್ತಾಗಿ ಬೆಳೆಯಲು ಕಾರಣವಾಗಿದೆ,” ಎಂದು ಮಹರ್ಷಿ ಹೇಳಿದ್ದಾರೆ.

ಭಾರತ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2017-18ರ ಸಾಲಿನ ಅಂತ್ಯದಲ್ಲಿ ನಿಷ್ಕ್ರಿಯ ಸಾಲಗಳ ಪ್ರಮಾಣ 9.61 ಲಕ್ಷ ಕೋಟಿ ರುಪಾಯಿಗೆ ಏರಿದೆ. ನಿಷ್ಕ್ರಿಯ ಸಾಲಗಳನ್ನು ಬ್ಯಾಲೆನ್ಸ್ ಶೀಟ್‌ನಿಂದ ತೊಡೆದುಹಾಕಲು ಸಾರ್ವಜನಿಕ ವಲಯದ ಬ್ಯಾಂಕುಗಳು ಮುಂದಾಗಿವೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ 21 ಬ್ಯಾಂಕುಗಳ ಪೈಕಿ 19 ಬ್ಯಾಂಕುಗಳು ಒಟ್ಟು 43,000 ಕೋಟಿ ರುಪಾಯಿಗಳ ನಷ್ಟ ಘೋಷಣೆ ಮಾಡಿವೆ.

“ಪ್ರಸಕ್ತ ಬ್ಯಾಂಕಿಂಗ್ ವಲಯದ ಬಿಕ್ಕಟ್ಟನ್ನು ಹೇಗೆ ಬಗೆಹರಿಸಬಹುದು ಎಂಬ ಬಗ್ಗೆ ನಾವೆಲ್ಲ ಮಾತನಾಡುತ್ತಲೇ ಬಂಡವಾಳ ಮರುಪೂರಣದ ಬಗ್ಗೆ ಪ್ರಸ್ತಾಪಿಸುತ್ತೇವೆ, ಖಂಡಿತವಾಗಿಯೂ ಇದು ಸಬ್ಸಿಡಿಗೆ ಪರ್ಯಾಯವಾಗಿ ಬಳಸುವ ವಿಚಿತ್ರವಾದ ಪದ. ಆದರೆ, ಬ್ಯಾಂಕುಗಳ ನಿಯಂತ್ರಕನಾಗಿರುವ ಆರ್ಬಿಐ ಏನು ಮಾಡುತ್ತಿತ್ತು? ಇದರ ಪಾತ್ರವೇನು? ಇದರ ಜವಾಬ್ದಾರಿ ಏನು? ಎಂಬ ನಿಜವಾದ ಪ್ರಶ್ನೆಗಳನ್ನು ಯಾರೂ ಎತ್ತುತ್ತಿಲ್ಲ,” ಎಂದು ರಾಜೀವ್ ಹೇಳಿದ್ದಾರೆ.

ಇಂಡಿಯನ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ (ಐಎಸ್ಪಿಪಿ) ಉದ್ಘಾಟಿಸಿ ಮಾತನಾಡಿದ ರಾಜೀವ್ ಅವರು, “ಬ್ಯಾಂಕಿಂಗ್ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿರುವುದು ಆಸ್ತಿ ಮತ್ತು ಜವಾಬ್ದಾರಿಗಳ ನಡುವಿನ ತಪ್ಪು ಹೊಂದಾಣಿಕೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ, ಸಾರ್ವಜನಿಕ ನೀತಿಗಳ ಬಗ್ಗೆ ಹೆಚ್ಚಿನ ಚರ್ಚೆಯೇ ಆಗುತ್ತಿಲ್ಲ. ಬ್ಯಾಂಕುಗಳು ಮನಸೋಇಚ್ಛೆ ಸಾಲ ವಿತರಿಸುವಾಗ ನಿಯಂತ್ರಕನಾದ ಆರ್ಬಿಐ ಏನು ಮಾಡುತ್ತಿತ್ತು? ಈ ಬಿಕ್ಕಟ್ಟಿಗೆ ಆರ್ಬಿಐ ಉತ್ತರಾದಾಯಿತ್ವ ಇದೆಯೇ, ಇಲ್ಲವೇ ಎಂಬುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ,” ಎಂದು ಹೇಳಿದ್ದಾರೆ.

ನಿಷ್ಕ್ರಿಯ ಸಾಲಗಳ ಬಗ್ಗೆ ವಿವರ ನೀಡುವಂತೆ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಸಂಸದೀಯ ಅಂದಾಜು ಸಮಿತಿಯು ಕರೆಸಿಕೊಂಡಿತ್ತು. ನಂತರ ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದಿತ್ತು. ಆಗ ರಾಜನ್ ಅವರು, ನಿಷ್ಕ್ರಿಯ ಸಾಲಪಡೆದು ವಂಚಿಸಿದ ಕೆಲವು ಸುಸ್ತಿದಾರರ ವಿರುದ್ಧ ತನಿಖಾ ಸಂಸ್ಥೆಗಳು ಸಮನ್ವಯತೆಯಿಂದ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪಟ್ಟಿ ಸಲ್ಲಿಸಿದ್ದಾಗಿ ತಿಳಿಸಿದ್ದರು. ಅದಾದ ನಂತರ, ಅಂದಾಜು ಸಮಿತಿಯು ರಾಜನ್ ಅವರು ಸಲ್ಲಿಸಿದ್ದ ಪಟ್ಟಿ ವಿವರವನ್ನು ಸಲ್ಲಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ತಾಕೀತು ಮಾಡಿದೆ.

ಇದನ್ನೂ ಓದಿ : ಎನ್ಪಿಎ ತ್ವರಿತ ಇತ್ಯರ್ಥಕ್ಕೆ ಆರ್ಬಿಐ ಮಾರ್ಗಸೂಚಿ, ಬ್ಯಾಂಕ್ ಷೇರುಗಳ ಕುಸಿತ

ಇದೇ ಮೊದಲ ಬಾರಿಗೆ ಆರ್ಬಿಐ ಉತ್ತರದಾಯಿತ್ವದ ಬಗ್ಗೆ ಸಿಎಜಿ ದನಿ ಎತ್ತಿದೆ. ಈ ಬಗ್ಗೆ ಆರ್ಬಿಐ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈ ಹಿಂದೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಪಂಜಾಬ್ ನ್ಯಾಷನಲ್ ಬ್ಯಾಂಕ್ 13,800 ಕೋಟಿ ರುಪಾಯಿ ಹಗರಣವಾದಾಗ ಆರ್ಬಿಐ ಸೇರಿದಂತೆ ಎಲ್ಲ ಸಾಂಸ್ಥಿಕ ಪಾಲುದಾರರು ವಿಫಲವಾಗಿದ್ದಾರೆ ಎಂದು ಟೀಕಿಸಿದ್ದರು. ಆಗ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, “ಇದರಲ್ಲಿ ಆರ್ಬಿಐ ವೈಫಲ್ಯ ಇಲ್ಲ. ಆರ್ಬಿಐಗೆ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಿಯಂತ್ರಿಸುವ ಅಧಿಕಾರ ಇಲ್ಲ. ಈ ಬ್ಯಾಂಕುಗಳನ್ನು ಹಣಕಾಸು ಸಚಿವಾಲಯವೇ ಹೆಚ್ಚು ನಿಯಂತ್ರಿಸುತ್ತಿದೆ. ಖಾಸಗಿ ಬ್ಯಾಂಕುಗಳ ಮೇಲೆ ಆರ್ಬಿಐಗೆ ಇರುವ ನಿಯಂತ್ರಣವು ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲಿಲ್ಲ. ಈ ಬ್ಯಾಂಕುಗಳ ಆರ್ಬಿಐ ಮತ್ತು ಹಣಕಾಸು ಸಚಿವಾಲಯ ದ್ವಿನಿಯಂತ್ರಣದಲ್ಲಿರುವುದು ಸಮಸ್ಯೆಗಳ ಮೂಲ,” ಎಂದು ಸಮರ್ಥಿಸಿಕೊಂಡಿದ್ದರು. ಆಗ ಆರ್ಬಿಐ ಮತ್ತು ಹಣಕಾಸು ಸಚಿವಾಲಯದ ನಡುವೆ ತಮ್ಮ-ತಮ್ಮ ಅಧಿಕಾರ ವ್ಯಾಪ್ತಿ ಮತ್ತು ನಿಯಂತ್ರಣ ಮಿತಿಗಳ ಕುರಿತಂತೆ ಕಾನೂನುಗಳ ಉಲ್ಲೇಖದ ಸಮರವೇ ನಡೆದಿತ್ತು. ಈಗ ಆರ್ಬಿಐ ಮತ್ತು ಸಿಎಜಿ ನಡುವೆ ಮತ್ತೆ ಅಂತಹದ್ದೊಂದು ಸಮರ ನಡೆಯುವ ಸಾಧ್ಯತೆ ಇದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More