ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ

ಜಮ್ಮು ಮತ್ತು ಕಾಶ್ಮೀರದ ಶಾಲೆಗಳ ಗ್ರಂಥಾಲಯಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣ ಗ್ರಂಥಗಳನ್ನು ಲಭ್ಯವಿರುವಂತೆ ಮಾಡಲು ರಾಜ್ಯಪಾಲರ ನೇತೃತ್ವದ ಸರ್ಕಾರ ಆದೇಶ ನೀಡಿ ನಂತರ ವಿವಾದಕ್ಕೆ ಎಡೆಯಾಗುತ್ತಲೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದು, ಬಿಸಿ ಚರ್ಚೆಗೆ ಕಾರಣವಾಗಿದೆ

ಸದ್ಯ ರಾಜ್ಯಪಾಲರ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ರಾಜ್ಯದ ಶಾಲೆಗಳಲ್ಲಿ ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣ ಪರಿಚಯಿಸಲು ನೀಡಿದ ಆದೇಶವನ್ನು ಅಷ್ಟೇ ವೇಗವಾಗಿ ಹಿಂತೆಗೆದುಕೊಂಡಿದೆ. ಸರ್ಕಾರಿ ಆದೇಶ ವಿವಾದಕ್ಕೆಡೆ ಮಾಡುವ ಸುಳಿವು ಸಿಗುತ್ತಲೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮುಖ್ಯ ಕಾರ್ಯದರ್ಶಿ ಕಚೇರಿಯನ್ನು ಸಂಪರ್ಕಿಸಿದ್ದರು. ಆ ನಂತರ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಇಂತಹ ಆದೇಶ ನೀಡಿರುವ ಬಗ್ಗೆ ತಮಗೆ ಅರಿವೇ ಇಲ್ಲ ಎಂದು ಹೇಳುತ್ತಿದ್ದರೆ, ಟೀಕಾಕಾರರು ಈ ನಡೆಯನ್ನು ಕೇಂದ್ರ ಸರ್ಕಾರದ ಹಿಂದುತ್ವ ಉದ್ದೇಶದ ಕ್ರಮ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಮಾಧ್ಯಮ ವಿವರಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರ ಸಲಹೆಗಾರ ಬಿ ಬಿ ವ್ಯಾಸ್ ಅವರ ಅಧ್ಯಕ್ಷತೆಯಲ್ಲಿ ಅ.೪ರಂದು ನಡೆದ ಸಭೆಯಲ್ಲಿ ಭಗವದ್ಗೀತೆಯ ಉರ್ದು ಆವೃತ್ತಿ ಮತ್ತು ರಾಮಾಯಣದ ಕಾಶ್ಮೀರಿ ಆವೃತ್ತಿಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪರಿಚಯಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆ ಆದೇಶವನ್ನು ಅ.೨೨ರಂದು ನೀಡಲಾಗಿತ್ತು. “ಶಾಲಾ ಶಿಕ್ಷಣ ಇಲಾಖೆಯು ಶ್ರೀ ಸರ್ವಾನಂದ ಪ್ರೇಮಿ ಬರೆದ ಭಗವದ್ಗೀತೆಯ ಉರ್ದು ಆವೃತ್ತಿ ಮತ್ತು ರಾಮಾಯಣದ ಕಾಶ್ಮೀರಿ ಆವೃತ್ತಿಗಳ ಸಾಕಷ್ಟು ಸಂಖ್ಯೆಯ ಪುಸ್ತಕಗಳು ಶಾಲೆಗಳಲ್ಲಿ ಲಭ್ಯವಿರುವಂತೆ ಗಮನ ಹರಿಸಬೇಕು,” ಎಂಬ ಆದೇಶವನ್ನು ಕಾಶ್ಮೀರ ಮತ್ತು ಜಮ್ಮು ಪ್ರಾಂತ್ಯಗಳ ಶಾಲೆಗಳಿಗೆ ನಿರ್ದೇಶನಗಳನ್ನು ಕಳುಹಿಸಲಾಗಿತ್ತು. ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಂಥಾಲಯ ಮತ್ತು ಸಂಸ್ಕೃತಿ ವಿಭಾಗದ ನಿರ್ದೇಶಕರು ರಾಜ್ಯದಲ್ಲಿ ಸಾಧ್ಯವಾದಷ್ಟು ಶೀಘ್ರ ಈ ಆದೇಶವನ್ನು ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನಗಳನ್ನು ಕಳುಹಿಸಲಾಗಿತ್ತು.

ಆದರೆ, ಈ ಆದೇಶಕ್ಕೆ ರಾಜಕಾರಣಿಗಳು ಮತ್ತು ಪತ್ರಕರ್ತ ಸಮುದಾಯದಿಂದ ತೀವ್ರ ಟೀಕೆ ವ್ಯಕ್ತವಾಯಿತು. ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಅವರು ಟ್ವಿಟರ್ ಮೂಲಕ ಈ ಆದೇಶವನ್ನು ಟೀಕಿಸಿದರು. “ಗೀತೆ ಮತ್ತು ರಾಮಾಯಣ ಮಾತ್ರವೇಕೆ? ಧಾರ್ಮಿಕ ಪಠ್ಯಗಳನ್ನು ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಗ್ರಂಥಾಲಯಗಳಲ್ಲಿ ಇಡಬೇಕೆಂದರೆ ಕೆಲವೇ ಧರ್ಮದ ಗ್ರಂಥಗಳನ್ನಷ್ಟೇ ಆರಿಸುವುದೇಕೇ? ಇತರ ಧರ್ಮಗಳನ್ನು ಏಕೆ ಅಲಕ್ಷಿಸಲಾಗಿದೆ?” ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ, ಟ್ವಿಟರ್‌ನಲ್ಲಿ ಪತ್ರಕರ್ತ ಅದಿತ್ಯ ರಾಜ್ ಕೌಲ್ ಮತ್ತು ಇಫ್ರಾ ಜನ್ ನಡುವೆ ತೀವ್ರ ಚರ್ಚೆಯೂ ನಡೆದಿದೆ. “ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶಾಲಾ ಶಿಕ್ಷಣ ಇಲಾಖೆಗೆ ಉರ್ದು ಭಾಷೆಯಲ್ಲಿ ಭಗವದ್ಗೀತೆ ಮತ್ತು ಕಾಶ್ಮೀರಿ ಭಾಷೆಯಲ್ಲಿ ರಾಮಾಯಣಗಳು ಗ್ರಂಥಾಲಯಗಳಲ್ಲಿ ಲಭ್ಯವಾಗಿರುವಂತೆ ಕ್ರಮ ಕೈಗೊಳ್ಳಲು ಆದೇಶಿಸಿದೆ,” ಎಂದು ಪತ್ರಕರ್ತ ಅದಿತ್ಯ ರಾಜ್ ಕೌಲ್ ಟ್ವೀಟ್ ಮಾಡಿದ್ದರು. ಅವರಿಗೆ ಉತ್ತರಿಸಿದ ಇಫ್ರಾ ಜಾನ್, “ಇಂತಹ ನಿರ್ಧಾರಗಳು ಸಂವಿಧಾನದ ವಿಧಿ ೨೮ರ ಉಲ್ಲಂಘನೆಯಾಗಿದೆ. ಈಗ ಧಾರ್ಮಿಕ ಪುಸ್ತಕಗಳನ್ನು ಸಣ್ಣ ಮಕ್ಕಳಿಗೆ ಕೊಡುವುದಾದರೆ ಎಲ್ಲ ಧರ್ಮಗಳ ಪುಸ್ತಕಗಳನ್ನೂ ಏಕೆ ಕೊಡಬಾರದು? ಕಾಂಗ್ರೆಸ್ ಸರ್ಕಾರ ಶಾಲಾ ಮಕ್ಕಳಿಗೆ ಕುರಾನ್ ಪುಸ್ತಕಗಳನ್ನು ಕೊಟ್ಟಿದ್ದರೆ ಎಲ್ಲರೂ ಹೇಗೆ ಪ್ರತಿಕ್ರಿಯಿಸುತ್ತಿದ್ದರು?” ಎಂದು ಅವರು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿತ್ಯರಾಜ್ ಕೌಲ್ ಮತ್ತು ಇಫ್ರಾ ಜಾನ್ ನಡುವೆ ಧೀರ್ಘ ಚರ್ಚೆಯೇ ನಡೆದಿದೆ. ಈ ಚರ್ಚೆಗೆ ಉತ್ತರಿಸಿದ ಮಾಜಿ ವಿಶ್ವವಿದ್ಯಾಲಯ ಉಪಕುಲಪತಿ ಜಫರ್ ಸರೇಶ್ವಾಲ, “ಬಹಳಷ್ಟು ಮುಖ್ಯವಾಹಿನಿ ಮದ್ರಾಸಾಗಳಲ್ಲಿ ಉರ್ದು ಮತ್ತು ಪರ್ಶಿಯನ್ ಭಾಷೆಗಳ ಅನುವಾದಿತ ರಾಮಾಯಣ, ಮಹಾಭಾರತಗಳು ಇವೆ. ವಿದ್ಯಾರ್ಥಿಗಳು ಇದನ್ನು ವಿಷಯ ಎಂದೇ ಅಧ್ಯಯನ ಮಾಡುತ್ತಿದ್ದಾರೆ. ಹಲವು ಇಸ್ಲಾಮಿಕ್ ವಿದ್ವಾಂಸರು ಈ ಪುರಾಣ ಗ್ರಂಥಗಳ ಪಂಡಿತರು. ಜ್ಞಾನ ಮತ್ತು ಕಲಿಕೆಯ ವಿಚಾರಕ್ಕೆ ಕೋಮುವಾದದ ಬಣ್ಣ ಬಳಿಯಬಾರದು,” ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ರಾಜಭವನದ ಮೂಲಕ ಜಮ್ಮು-ಕಾಶ್ಮೀರ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ

ಚಿತ್ರ: ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More