ಸಿಬಿಐ ನಿರ್ದೇಶಕರಿಗೆ ಕಡ್ಡಾಯ ರಜೆ ಕೊಟ್ಟು ಹಂಗಾಮಿ ನಿರ್ದೇಶಕರ ನೇಮಿಸಿದ ಕೇಂದ್ರ

ತಮ್ಮನ್ನು ರಜೆಗೆ ತೆರಳುವಂತೆ ಸೂಚಿಸಿ, ತಮ್ಮ ಸ್ಥಾನಕ್ಕೆ ಹೊಸ ಅಧಿಕಾರಿಯನ್ನು ನೇಮಿಸಿದ ಕೇಂದ್ರದ ಕ್ರಮ ಪ್ರಶ್ನಿಸಿ ಅಲೋಕ್‌ ವರ್ಮಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ತಮ್ಮನ್ನು ಏಕಾಏಕಿ ಸರ್ಕಾರ ಬದಲಿಸಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ

ಸಿಬಿಐ ಸಂಸ್ಥೆಯ ವಿಶ್ವಾರ್ಹತೆ ಕಾಪಾಡುವ ನಿಟ್ಟಿನಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳಾದ ಅಲೋಕ್‌ ವರ್ಮಾ ಹಾಗೂ ರಾಕೇಶ್‌ ಅಸ್ತಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದೇ ವೇಳೆ, ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ಎಂ ನಾಗೇಶ್ವರ್‌ ರಾವ್‌ ಅವರನ್ನು ನೇಮಿಸಿ ಪ್ರಧಾನಮಂತ್ರಿ ಕಾರ್ಯಾಲಯ ಆದೇಶ ಹೊರಡಿಸಿದ್ದನ್ನು ಕೇಂದ್ರ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, “ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರ ಮೇಲೆ ಕೇಳಿಬಂದಿರುವ ಆರೋಪದ ತನಿಖೆ ಪಾರದರ್ಶಕವಾಗಿ ನಡೆಯಬೇಕಿದೆ. ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆಯಾದ ಸಿಬಿಐನ ವಿಶ್ವಾರ್ಹತೆ ಕಾಪಾಡುವ ನಿಟ್ಟಿನಲ್ಲಿ ಈ ಇಬ್ಬರು ಉನ್ನತ ಅಧಿಕಾರಿಗಳಿಗೆ ರಜೆ ನೀಡಿ ಕಳುಹಿಸಲಾಗಿದೆ. ಸಿಬಿಐ ನಿರ್ದೇಶಕರ ಜಾಗಕ್ಕೆ ಎಂ ನಾಗೇಶ್ವರ ರಾವ್‌ ಅವರನ್ನು ನೇಮಕ ಮಾಡಲಾಗಿದ್ದು, ಆರೋಪ ಎದುರಿಸುತ್ತಿರುವ ಅಲೋಕ್‌ ವರ್ಮಾ ಹಾಗೂ ರಾಕೇಶ್‌ ಅಸ್ತಾನಾ ವಿಚಾರಣೆಯನ್ನು ನಾಗೇಶ್ವರ್‌ ರಾವ್‌ ಅವರು ಕೈಗೊಳ್ಳಲಿದ್ದಾರೆ,” ಎಂದು ತಿಳಿಸಿದ್ದಾರೆ. ಮುಂದುವರಿದು, “ಅಲೋಕ್‌ ವರ್ಮಾ ಹಾಗೂ ರಾಕೇಶ್‌ ಅಸ್ತಾನಾ ಉನ್ನತ ಅಧಿಕಾರಿಗಳಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ವಿಚಾರಣೆ ನಡೆಯಲಿದೆ. ಒಂದು ವೇಳೆ ಈ ಇಬ್ಬರು ಅಧಿಕಾರಿಗಳು ದೋಷಮುಕ್ತರಾಗಿ ಹೊರಬಂದಲ್ಲಿ ಅವರು ಮತ್ತೆ ತಮ್ಮ ಸ್ಥಾನಗಳಲ್ಲಿ ಮುಂದುವರಿಯುತ್ತಾರೆ,” ಎಂದು ಹೇಳಿದ್ದಾರೆ.

ಸಿಬಿಐ ಉನ್ನತ ಅಧಿಕಾರಿಗಳಿಬ್ಬರ ನಡುವಿನ ಕಲಹದ ಹಿನ್ನೆಲೆಯಲ್ಲಿ ನಿರ್ದೇಶಕ ಅಲೋಕ್‌ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿ ಎಂ ನಾಗೇಶ್ವರ್‌ ರಾವ್‌ ಅವರನ್ನು ಸಿಬಿಐ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಮಂಗಳವಾರ ರಾತ್ರಿ ಆದೇಶ ಹೊರಡಿಸಿತ್ತು. ಅಲ್ಲದೆ, ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಿಯೋಜನೆಗೊಂಡಿರುವ ಎಂ ನಾಗೇಶ್ವರ ರಾವ್‌ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅಲೋಕ್‌ ಕುಮಾರ್‌ ತಂಡದಲ್ಲಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಉಳಿದ 13 ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ವಹಿಸಿ ಆದೇಶ ಹೊರಡಿಸಿದ್ದಾರೆ. ರಾಕೇಶ್‌ ಅಸ್ತಾನಾ ಮೇಲಿನ ಆರೋಪದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಎ ಕೆ ಬಸ್ಸಿ ಅವರನ್ನು ಅಂಡಮಾನಿನ ಪೊರ್ಟ್‌ಬ್ಲೇರ್‌ಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

ತಮ್ಮನ್ನು ರಜೆಗೆ ತೆರಳುವಂತೆ ಸೂಚಿಸಿ, ತಮ್ಮ ಸ್ಥಾನಕ್ಕೆ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಲೋಕ್‌ ವರ್ಮಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ತಮ್ಮನ್ನು ಏಕಾಏಕಿ ಸರ್ಕಾರ ಬದಲಿಸಿದ್ದು ಏಕೆ ಎಂದು ಅಲೋಕ್‌ ವರ್ಮಾ ತಮ್ಮ ಅರ್ಜಿಯಲ್ಲಿ ಕೇಳಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೈಗೆತ್ತಿಕೊಳ್ಳಲಿದೆ.

ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ಮಹತ್ವದ ಪ್ರಕರಣಗಳ ತನಿಖೆ ನಡೆಯುತ್ತಿರುವ ಸಮಯದಲ್ಲಿಯೇ ಅಲೋಕ್‌ ವರ್ಮಾ ಅವರನ್ನು ರಜೆ ಮೇಲೆ ಕಳುಹಿಸಿ, ನೂತನ ನಿರ್ದೇಶಕರನ್ನು ಆಯ್ಕೆ ಮಾಡಿರುವುದು ಸಂಶಯಾಸ್ಪದವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಆಪ್ತರಾಗಿರುವ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಗುಜರಾತ್‌ ಮೂಲದ ರಾಕೇಶ್‌ ಅಸ್ತಾನಾ ಅವರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಅಲೋಕ್‌ ವರ್ಮಾ ಮೇಲೆ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, “ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ರಫೇಲ್‌ ಒಪ್ಪಂದಕ್ಕೆ ಸಂಬಂಧಪಟ್ಟ ಸಾಕ್ಷಿಗಳನ್ನು ಕಲೆಹಾಕುತ್ತಿದ್ದರು. ಇದರಿಂದ ಭಯಪಟ್ಟಂತಿರುವ ಕೇಂದ್ರ ಸರ್ಕಾರ, ಅಲೋಕ್‌ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ ನೇರವಾಗಿದ್ದು, ಯಾರು ರಫೇಲ್‌ ಹತ್ತಿರ ಸುಳಿಯುತ್ತಾರೋ ಅಂಥವರನ್ನು ದೂರ ಸರಿಸಲಾಗುತ್ತದೆ. ಈ ದೇಶದ ಸಂವಿಧಾನ ಅಪಾಯದಲ್ಲಿದೆ,” ಎಂದು ಆರೋಪ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್‌, “ನಾಗಶ್ವೇರ್‌ ರಾವ್‌ಗೆ ಸಿಬಿಐ ನೇತೃತ್ವ ವಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಮೇಲೆ ಅಘೋಷಿತ ತುರ್ತುಪರಿಸ್ಥಿತಿ ಹೇರಿದೆ. ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ತನಿಖೆಯಿಂದ ತಪ್ಪಿಸಿಕೊಳ್ಳಲು ಒಡಿಶಾ ಕೇಡರ್‌ನ ೧೯೮೬ನೇ ಬ್ಯಾಚಿನ, ವಿವಾದಿತ ಅಧಿಕಾರಿ ನಾಗೇಶ್ವರ್ ರಾವ್‌ ಅವರನ್ನು ಸಿಬಿಐ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ,” ಎಂದು ಆರೋಪಿಸಿದ್ದಾರೆ.

“ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಕುಟುಂಬದವರು ಆರೋಪಿಗಳಾಗಿರುವ ಗುಟ್ಕಾ ಹಗರಣವನ್ನು ಮದ್ರಾಸ್‌ ಹೈಕೋರ್ಟ್‌ ಸೂಚನೆಯ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಪಳನಿಸ್ವಾಮಿ ಅವರನ್ನು ನಾಗೇಶ್ವರ್‌ ರಾವ್‌ ವಿಧಾನಸೌಧದಲ್ಲಿ ಭೇಟಿ ಮಾಡಿದ್ದರು. ಈ ಮಾಹಿತಿಯ ಹಿನ್ನೆಲೆಯಲ್ಲಿ ಅಲೋಕ್‌ ವರ್ಮಾ ಅವರು ನಾಗೇಶ್ವರ್‌ ರಾವ್‌ ವಿರುದ್ಧ ತನಿಖೆಗೆ ನಿರ್ಧರಿಸಿದ್ದರು ಎನ್ನಲಾಗಿದೆ. ಈಗ ಅಲೋಕ್‌ ವರ್ಮಾ ಅವರನ್ನು ಕೇಂದ್ರ ಸರ್ಕಾರವು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, “ಬಿಜೆಪಿಯ ನಾಯಕತ್ವದ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುತ್ತಿರುವ ಆಯ್ದ ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ ಅಲೋಕ್‌ ವರ್ಮಾ ಅವರನ್ನು ಕಾನೂನಿಗೆ ವಿರುದ್ಧವಾಗಿ ಸಿಬಿಐ ನಿರ್ದೇಶಕ ಸ್ಥಾನದಿಂದ ಹೊರಗಟ್ಟಲಾಗಿದೆ. ಸಿಬಿಐನ ಆರೋಪಿತ ಅಧಿಕಾರಿಗಳು ಬಿಜೆಪಿಯ ಉನ್ನತ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅವರುಗಳನ್ನು ರಕ್ಷಿಸುವುದರ ಜೊತೆಗೆ ತನ್ನ ಪ್ರಮಾದಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮುಂದಾಗಿದೆ,” ಎಂದು ದೂರಿದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, “ಪಂಜರದ ತನಿಖಾ ದಳವನ್ನು (ಸಿಬಿಐ) ಬಿಜೆಪಿಯ ಕೇಂದ್ರೀಯ ನುಸುಳುಕೋರರು (ಸಿಬಿಐ) ತಮ್ಮ ಭ್ರಷ್ಟ ಹಾದಿಗಳು ಹಾಗೂ ಅದಕ್ಷ ಅಧಿಕಾರಿಗಳ ನೆರವಿನಿಂದ ತಮ್ಮ ಭ್ರಷ್ಟ ದಳ್ಳಾಳಿಗಳನ್ನು (ಸಿಬಿಐ) ರಕ್ಷಿಸಲು ಮುಂದಾಗಿದ್ದಾರೆ,” ಎಂದು ಖಾರವಾಗಿ ಟ್ವೀಟ್‌ ಮಾಡಿದ್ದಾರೆ.

ಬಿಎಸ್‌ಪಿ ನಾಯಕಿ ಮಾಯಾವತಿ, "ಸಿಬಿಐ ಮಾತ್ರವಲ್ಲದೆ ದೇಶದ ಬಹುತೇಕ ಸಂಸ್ಥೆಗಳು ಬಿಜೆಪಿ ಆಡಳಿತದಲ್ಲಿ ಗಂಭೀರ ಸ್ಥಿತಿ ಎದುರಿಸುತ್ತಿವೆ. ಸಿಬಿಐನಲ್ಲಿ ಸದ್ಯ ನಿರ್ಮಾಣವಾಗಿರುವ ಸಮಸ್ಯೆಗೆ ಅಧಿಕಾರಿಗಳಿಗಿಂತ ಕೇಂದ್ರ ಸರ್ಕಾರ ಪ್ರಮುಖ ಕಾರಣವಾಗಿದೆ,” ಎಂದಿದ್ದಾರೆ.

ಸಿಬಿಐ ಪ್ರಕರಣದಲ್ಲಿ ಬಿಜೆಪಿಯ ಪಾತ್ರವನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಬಿಜೆಪಿಯ ತನಿಖಾ ದಳವಾಗಿ ಸಿಬಿಐ ಬದಲಾಗಿದೆ. ಇದು ದುರಂತ,” ಎಂದು ಬೇಸರಿಸಿ ಟ್ವೀಟ್‌ ಮಾಡಿದ್ದಾರೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಅಲೋಕ್‌ ವರ್ಮಾ ಅವರು ತನ್ನ‌ ತನಿಖೆಗೆ ಸಹಕರಿಸುತ್ತಿಲ್ಲವೆಂದು ಕೇಂದ್ರ ಜಾಗೃತ ಆಯೋಗ (ಸಿವಿಸಿ) ತಿಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More