ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ

ನಿಷ್ಕ್ರಿಯ ಸಾಲಗಳ ಹೊರೆಯಿಂದ ತತ್ತರಿಸಿರುವ ಸಾರ್ವಜನಿಕ ವಲಯದ ಬ್ಯಾಂಕುಗಳ ಆರ್ಥಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಆರ್ಬಿಐ ರೂಪಿಸಿರುವ ಕ್ಷಿಪ್ರ ಪರಿಹಾರ ಕ್ರಮಗಳ ಮಾರ್ಗಸೂಚಿ ಮಾರ್ಪಾಡು ಮಾಡುವ ನಿರೀಕ್ಷೆ ಇದೆ. ಮಾರ್ಗಸೂಚಿಗಳು ಕಠಿಣವಾಗಿವೆ ಎಂಬುದು ಕೇಂದ್ರದ ತಕರಾರು

ಸಾರ್ವಜನಿಕ ವಲಯದ ಬ್ಯಾಂಕುಗಳ ಆರ್ಥಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಆರ್ಬಿಐ ರೂಪಿಸಿರುವ ‘ಕ್ಷಿಪ್ರ ಪರಿಹಾರ ಕ್ರಮ’ಗಳ ಮಾರ್ಗಸೂಚಿ ಮಾರ್ಪಾಡು ಮಾಡಬೇಕೆಂಬ ಕೇಂದ್ರ ಸರ್ಕಾರದ ಒತ್ತಾಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮಣಿದಂತಿದೆ. ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಸಡಿಲಗೊಳಿಸುವ ನಿರೀಕ್ಷೆ ಇದೆ.

ಮಿತಿಮೀರಿದ ನಿಷ್ಕ್ರಿಯ ಸಾಲ ಹೊಂದಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸರಿದಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಕ್ಷಿಪ್ರ ಪರಿಹಾರ ಕ್ರಮಗಳ (ಪಿಸಿಎ) ಮಾರ್ಗಸೂಚಿಯನ್ನು ರೂಪಿಸಿತ್ತು. ಆದರೆ, ಈ ಮಾರ್ಗಸೂಚಿಗಳು ಕಠಿಣವಾಗಿದ್ದು, ಬ್ಯಾಂಕುಗಳ ನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಕರಾರು ತೆಗೆದಿತ್ತು.

ಮುಂಬೈನಲ್ಲಿ ಆರ್ಬಿಐ ಕೇಂದ್ರೀಯ ಮಂಡಳಿ ಸಭೆಯಲ್ಲಿ ಮಾರ್ಗಸೂಚಿಗಳನ್ನು ಸಡಿಲಗೊಳಿಸುವ ಕುರಿತಂತೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಸಭೆಯಲ್ಲಿ ಮಂಡಳಿಯ ನಿರ್ದೇಶಕರಾಗಿರುವ ಹಣಕಾಸು ಕಾರ್ಯದರ್ಶಿ ಸುಭಾಸ್ ಚಂದ್ರ ಗಾರ್ಗ್ ಹಾಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಪಾಲ್ಗೊಂಡು, ಮಾರ್ಗಸೂಚಿಗಳನ್ನು ಸಡಿಲಗೊಳಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ, ಶೀರ್ಘದಲ್ಲೇ ಆರ್ಬಿಐ ಮಾರ್ಗಸೂಚಿ ಸಡಿಲಗೊಳಿಸುವ ನಿರೀಕ್ಷೆ ಇದೆ ಎಂದು ಮನಿ ಕಂಟ್ರೋಲ್ ಡಾಟ್ಕಾಮ್ ವರದಿ ಮಾಡಿದೆ.

ಆದರೆ, ನಿಷ್ಕ್ರಿಯ ಸಾಲದ ಸಮಸ್ಯೆಗೆ ಕಠಿಣ ಚಿಕಿತ್ಸೆ ಅಗತ್ಯವಿರುವುದರಿಂದ ಮಾರ್ಗಸೂಚಿ ಮಾರ್ಪಾಡು ಸಾಧ್ಯವಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿತ್ತು. ದೇಶದಲ್ಲಿರುವ 21 ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ 11 ಬ್ಯಾಂಕುಗಳನ್ನು ಕ್ಷಿಪ್ರ ಪರಿಹಾರ ಕ್ರಮಗಳ ವ್ಯಾಪ್ತಿಗೆ ತರಲಾಗಿದೆ.

ಮಾರ್ಗಸೂಚಿಗಳ ಪ್ರಕಾರ ಈ ಬ್ಯಾಂಕುಗಳು ತಮ್ಮ ಆರ್ಥಿಕ ಆರೋಗ್ಯ ಸುಧಾರಣೆ ಆಗುವವರೆಗೂ ಹೊಸದಾಗಿ ಸಾಲ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಹಾಲಿ ಇರುವ ನಿಷ್ಕ್ರಿಯ ಸಾಲಗಳ ವಿವರವನ್ನು ಪ್ರತಿ ತಿಂಗಳೂ ಆರ್ಬಿಐಗೆ ವರದಿ ಮಾಡಬೇಕು. ಮತ್ತು ಸಾಲ ವಸೂಲಾತಿಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಬೇಕು.

ಇದನ್ನೂ ಓದಿ : ನಿಷ್ಕ್ರಿಯ ಸಾಲ ತ್ವರಿತ ಇತ್ಯರ್ಥಕ್ಕೆ ಮಾರ್ಗಸೂಚಿ ರೂಪಿಸಿದ ಆರ್‌ಬಿಐ

ನಿಷ್ಕ್ರಿಯ ಸಾಲದ ಪ್ರಮಾಣ ಹೆಚ್ಚಿರುವ ಅಂದರೆ, ಬಂಡವಾಳ ಮತ್ತು ಹೆಚ್ಚು ರಿಸ್ಕ್ ಇರುವ ಆಸ್ತಿಯ ಅನುಪಾತ, ನಿವ್ವಳ ನಿಷ್ಕ್ರಿಯ ಸಾಲ ಮತ್ತು ಆಸ್ತಿಗಳ ಮೇಲಿನ ಗಳಿಕೆಯನ್ನು ಆಧರಿಸಿ ಕ್ಷಿಪ್ರ ಪರಿಹಾರ ಕ್ರಮಗಳಡಿ ರೂಪಿಸಿದ ಮಾರ್ಗಸೂಚಿಗಳ ವ್ಯಾಪ್ತಿಗೆ 11 ಬ್ಯಾಂಕುಗಳನ್ನು ತರಲಾಗಿತ್ತು. ಇದರ ವ್ಯಾಪ್ತಿಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ದೇನಾ ಬ್ಯಾಂಕ್, ಯುಕೊ ಬ್ಯಾಂಕುಗಳೂ ಸೇರಿವೆ.

ಒತ್ತಡದಲ್ಲಿರುವ ಸಾಲಗಳನ್ನು ದಿವಾಳಿ ಸಂಹಿತೆಯಡಿ ತ್ವರಿತ ವಿಲೇವಾರಿ ಮಾಡುವುದರಿಂದ ಮತ್ತು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೇಂದ್ರ ಸರ್ಕಾರವು 54,000 ಕೋಟಿ ರುಪಾಯಿ ಬಂಡವಾಳ ಮರುಪೂರಣ ಮಾಡುತ್ತಿರುವುದರಿಂದ ಈ 11 ಬ್ಯಾಂಕುಗಳು ಪಿಸಿಎ ಮಾರ್ಗಸೂಚಿಯಿಂದ ಹೊರಬರುವ ಸಾಧ್ಯತೆ ಇದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More