ಟ್ವಿಟರ್ ಸ್ಟೇಟ್ | ಅಮ್ನೆಸ್ಟಿ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಭಾರತ ಸರ್ಕಾರ ಸಾಮಾಜಿಕ ಕಾರ್ಯಕರ್ತರನ್ನು ಉಗ್ರವಾದಿಗಳಂತೆ ನಡೆಸಿಕೊಳ್ಳುತ್ತಿರುವ ಕುರಿತು ಅಮ್ನೆಸ್ಟಿ ಇಂಡಿಯಾ ಟೀಕಿಸಿತ್ತು. ಬೆನ್ನಲ್ಲೇ, ಗುರುವಾರ ಜಾರಿ ನಿರ್ದೇಶನಾಲಯವು ಅಮ್ನೆಸ್ಟಿ ಇಂಡಿಯಾದ ಬೆಂಗಳೂರು ಕಚೇರಿಯ ಮೇಲೆ ದಾಳಿ ನಡೆಸಿ, ಹತ್ತು ಗಂಟೆಗಳ ಕಾಲ ತಪಾಸಣೆ ನಡೆಸಿದೆ

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ನಡುವೆ ಕಳೆದ ಕೆಲವು ತಿಂಗಳಿಂದ ನಡೆಯುತ್ತಿದ್ದ ಪರೋಕ್ಷ ಯುದ್ಧ ಈಗ ಬಹಿರಂಗ ಕಾಳಗದ ರೂಪು ಪಡೆದಿದೆ. ಸಾಮಾಜಿಕ ಕಾರ್ಯಕರ್ತರನ್ನು ಭಾರತ ಸರ್ಕಾರ ಉಗ್ರವಾದಿಗಳಂತೆ ನಡೆಸಿಕೊಳ್ಳುತ್ತಿರುವ ಕುರಿತು ಅಮ್ನೆಸ್ಟಿ ಇಂಡಿಯಾ ಟೀಕಿಸಿತ್ತು. ಬೆನ್ನಲ್ಲೇ, ಗುರುವಾರ ಜಾರಿ ನಿರ್ದೇಶನಾಲಯವು ಅಮ್ನೆಸ್ಟಿ ಇಂಡಿಯಾದ ಬೆಂಗಳೂರು ಕಚೇರಿಯ ಮೇಲೆ ದಾಳಿ ನಡೆಸಿ ಹತ್ತು ಗಂಟೆಗಳ ಕಾಲ ತಪಾಸಣೆ ನಡೆಸಿದೆ. ಅಮ್ನೆಸ್ಟಿ ಇಂಡಿಯಾ ವಿದೇಶಿ ವ್ಯವಹಾರ ನಡೆಸುತ್ತಿದ್ದ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಈ ಹುಡುಕಾಟ ನಡೆದಿದೆ. ಸಂಸ್ಥೆ ಪಡೆಯುತ್ತಿರುವ ವಿದೇಶಿ ಅನುದಾನಕ್ಕೆ ಸಂಬಂಧಿಸಿದ ತನಿಖೆಯ ಹಿನ್ನೆಲೆಯಲ್ಲಿ ಈಗಿನ ದಾಳಿ ನಡೆದಿದೆ.

“ಸರ್ಕಾರಿ ಅಧಿಕಾರಿಗಳು ಮಾನವ ಹಕ್ಕು ಸಂಘಟನೆಗಳನ್ನು ಕ್ರಿಮಿನಲ್ ಸಂಸ್ಥೆಗಳಂತೆ ನೋಡುತ್ತಿದೆ,” ಎಂದು ಅಮ್ನೆಸ್ಟಿ ಇಂಡಿಯಾ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ಹೇಳಿಕೆ ನೀಡಿದ್ದಾರೆ. “ಯಾವುದೇ ಸಂಸ್ಥೆ ಆ ದೇಶದ ನಿಯಮಗಳಿಗೆ ಬದ್ಧವಾಗಿರಬೇಕು. ನಮ್ಮ ಸಂಸ್ಥೆಯ ಭಾರತೀಯ ಕಾರ್ಯಕಾರಿಯೂ ದೇಶದ ನಿಯಮಗಳಿಗೆ ಬದ್ಧವಾಗಿ ಕೆಲಸ ಮಾಡಿದೆ. ಪಾರದರ್ಶಕತೆ ಮತ್ತು ಬದ್ಧತೆ ನಮ್ಮ ಕೆಲಸದ ಹೃದಯ ಭಾಗವಾಗಿದೆ,” ಎಂದು ಆಕಾರ್ ಪಟೇಲ್ ಟ್ವಿಟರ್ ಮೂಲಕ ತಮ್ಮ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಮೇಲ್ವರ್ಗದ ಹಿಡಿತದಲ್ಲಿ ಅಮ್ನೆಸ್ಟಿ ಇಂಡಿಯಾ; ಮಾಜಿ ಉದ್ಯೋಗಿ ತೆರೆದಿಟ್ಟ ಸತ್ಯ

ಈ ಮೊದಲು ಜಾರಿ ನಿರ್ದೇಶನಾಲಯವು ಬೆಂಗಳೂರಿನ ಗ್ರೀನ್‌ಪೀಸ್ ಕಚೇರಿಯ ಮೇಲೂ ದಾಳಿ ನಡೆಸಿ, ಸಂಸ್ಥೆಯ ೧೨ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದೆ.

ಅಮ್ನೆಸ್ಟಿ ಇಂಡಿಯಾ ನೀಡಿರುವ ಹೇಳಿಕೆಯ ಪ್ರಕಾರ, ಜಾರಿ ನಿರ್ದೇಶನಾಲಯವು ದಾಳಿಯ ಸಂದರ್ಭ ಕೇಳಿರುವ ಬಹುತೇಕ ದಾಖಲೆಗಳು ಸಾರ್ವಜನಿಕವಾಗಿಯೇ ಲಭ್ಯವಾಗಿದ್ದವು. ಸಂಸ್ಥೆಯ ಈಗಿನ ರಚನೆಯ ಬಗ್ಗೆಯೂ ಪ್ರಶ್ನೆ ಮಾಡಲಾಗಿತ್ತು. ಆದರೆ, ಆ ವಿವರಗಳು ಅಮ್ನೆಸ್ಟಿ ಇಂಡಿಯಾದ ವೆಬ್‌ತಾಣದಲ್ಲಿ ೨೦೧೪ರಿಂದಲೇ ಇದೆ ಎಂದು ಸಂಸ್ಥೆಯ ಪತ್ರಿಕಾ ಹೇಳಿಕೆ ತಿಳಿಸಿದೆ. “ವಾಸ್ತವದಲ್ಲಿ ದಾಳಿಗೆ ಮೊದಲು ಅಮ್ನೆಸ್ಟಿಯ ಕೆಲವು ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ ಸರ್ಕಾರಿ ಅಧಿಕಾರಿಗಳು ಸಂಸ್ಥೆಗೆ ಮತ್ತೊಂದು ಕರಾಳ ಮುಖವಿದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಭಾರತದಲ್ಲಿ ಅಮ್ನೆಸ್ಟಿ ಸಾರ್ವತ್ರಿಕ ಮಾನವ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನಷ್ಟೇ ಹೊಂದಿದೆ,” ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

“ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶ ಎದುರಿಸಿದ ಕರಾಳ ದಿನಗಳ ನೆರಳು ದೇಶದಲ್ಲಿ ಮತ್ತೆ ಬಂದಿದೆ. ಮಾನವ ಹಕ್ಕುಗಳನ್ನು ರಕ್ಷಿಸುವ ಬದಲಾಗಿ ಸರ್ಕಾರ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಸ್ಥೆಗಳನ್ನೇ ಗುರಿಯಾಗಿಸಿ ಕ್ರಮ ಕೈಗೊಳ್ಳುತ್ತಿದೆ,” ಎಂದು ಆಕಾರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲೂ ಸಾಕಷ್ಟು ಚರ್ಚೆಯಾಗಿದೆ. ಬಹುತೇಕ ಟ್ವೀಟಿಗರು ಸರ್ಕಾರ ಮಾನವ ಹಕ್ಕು ಸಂಘಟನೆಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ವಿರೋಧಿಸಿದ್ದಾರೆ. “ರಾಘವ್ ಬೆಹ್ಲ್‌, ಗ್ರೀನ್‌ಪೀಸ್ ಮತ್ತು ಈಗ ಅಮ್ನೆಸ್ಟಿ ಇಂಟರ್ನ್ಯಾಷನಲ್; ಮೋದಿ ಸರ್ಕಾರವನ್ನು ಟೀಕಿಸಿದವರ ವಿರುದ್ಧ ಐಟಿ, ಇಡಿ ಮತ್ತು ಸಿಬಿಐಗಳನ್ನು ಬಳಸಿ ದೌರ್ಜನ್ಯ ನಡೆಸಲಾಗುತ್ತಿದೆ. ಭಾರತದಲ್ಲಿ ಸರ್ಕಾರಿ ಸಂಸ್ಥೆಗಳನ್ನು ಈ ರೀತಿಯಾಗಿ ದುರ್ಬಳಕೆ ಮಾಡಿಕೊಂಡಿರುವುದು ಇದೇ ಮೊದಲು,” ಎಂದು ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಸ್ವರಾಜ್ ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರೂ ಟ್ವಿಟರ್ ಮೂಲಕ ಜಾರಿ ನಿರ್ದೇಶನಾಲಯ ಅಮ್ನೆಸ್ಟಿ ಇಂಡಿಯಾದ ಕಚೇರಿ ಮೇಲೆ ದಾಳಿ ನಡೆಸಿರುವುದನ್ನು ಟೀಕಿಸಿದ್ದಾರೆ. ಪತ್ರಕರ್ತ ವಿನೋದ್ ಕೆ ಜೋಸ್ ಟ್ವೀಟ್ ಮಾಡಿ, “ಜಾರಿ ನಿರ್ದೇಶನಾಲಯ ಲಾಭವಿಲ್ಲದ ಸಂಸ್ಥೆಯೊಂದರ ಬೆಂಗಳೂರು ಕಚೇರಿ ಮೇಲೆ ಏಕೆ ದಾಳಿ ನಡೆಸಿದೆ. ಗ್ರೀನ್‌ ಪೀಸ್ ಮೇಲೂ ಇಂತಹುದೇ ದಾಳಿ ನಡೆದಿದೆ. ಆದರೆ, ಮಲ್ಯ ಮತ್ತು ಮೋದಿಯಂಥವರು ತಪ್ಪಿಸಿಕೊಂಡಿದ್ದಾರೆ. ಲಾಭಯೇತರ ಸಂಸ್ಥೆಗಳನ್ನು ರಾಷ್ಟ್ರದ ಶತ್ರುಗಳೆಂದು ಕಾಣಲಾಗುತ್ತಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ, ಬಲಪಂಥೀಯ ಟ್ವೀಟಿಗರು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸರ್ಕಾರೇತರ ಸಂಘಟನೆಗಳು ವಿದೇಶಿ ಹಣವನ್ನು ನಿಯಮ ಉಲ್ಲಂಘಿಸಿ ಭಾರತಕ್ಕೆ ತರುತ್ತಿವೆ ಎಂದು ಈ ಟ್ವೀಟಿಗರು ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರು ನಿರಂತರ ಹೋರಾಟ ನಡೆಸುತ್ತಿರುವ ಕಾರಣ ಭಾರತೀಯರು ಅವರ ಜೊತೆಗಿರಬೇಕು ಎನ್ನುವ ಸಂದೇಶವನ್ನು ಹಾಕುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More