ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಐಎಎಸ್‌, ಐಎಫ್‌ಎಸ್‌ ಅಧಿಕಾರಿಗಳ ವಿರುದ್ಧ ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಎಸಿಬಿ ಕೂಡ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದೆ. ಅಲ್ಲದೆ, ಉನ್ನತ ಅಧಿಕಾರಿಗಳನ್ನು ಪ್ರಕರಣದಿಂದಲೇ ಕೈಬಿಡುತ್ತಿದೆ. ಇದಕ್ಕೊಂದು ನಿದರ್ಶನ ಇಲ್ಲಿದೆ

ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲು ಲಂಚ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಅರಣ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ನಿವೃತ್ತ ಐಎಎಸ್‌ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣದಿಂದಲೇ ಕೈಬಿಟ್ಟಿದೆ. ಆದರೆ, ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಗಣಿ ಇಲಾಖೆಯ ಉಪ ನಿರ್ದೇಶಕರೊಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಏರಂದಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ ೨೦೫/೨ರಲ್ಲಿನ ೩ ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಐಎಫ್‌ಎಸ್‌ ಅಧಿಕಾರಿ ರಾಮಚಂದ್ರ, ರಾಮನಗರದ ಜಿಲ್ಲಾಧಿಕಾರಿಯಾಗಿದ್ದ ಎಫ್‌ ಆರ್‌ ಜಮಾದಾರ್‌ (ಈಗ ನಿವೃತ್ತ), ಉಪನಿರ್ದೇಶಕ ರಾಮಲಿಂಗಯ್ಯ ಅವರ ವಿರುದ್ಧ ೨೦೧೬ರ ಮೇ ೨ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಎಸಿಬಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಅರಣ್ಯ ಇಲಾಖೆಯ ದಾಖಲಾತಿಗಳನ್ನು ಮುಚ್ಚಿಟ್ಟು, ಗಣಿ ಮಾಲೀಕ ಎಚ್ ವಿ ಸರ್ದಾರ್‌ ಅಹ್ಮದ್‌ರೊಂದಿಗೆ ಈ ಅಧಿಕಾರಿಗಳು ಶಾಮೀಲಾಗಿ ಅಪಾರ ಮೊತ್ತದ ಲಂಚ ಪಡೆದು ಗಣಿಗಾರಿಕೆಗೆ ಅನುಮತಿ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಪ್ರಕರಣ ಕುರಿತು ತನಿಖೆ ನಡೆಸಿದ್ದ ಎಸಿಬಿ ಅಧಿಕಾರಿಗಳು, ೨ ವರ್ಷದ ಬಳಿಕ ಅಂದರೆ, ೨೦೧೮ರ ಅಕ್ಟೋಬರ್‌ ೧೫ರಂದು ಗಣಿ ಇಲಾಖೆಯ ಉಪನಿರ್ದೇಶಕರೊಬ್ಬರ ಮಾತ್ರ ಎಫ್‌ಐಆರ್‌ ದಾಖಲಿಸಿ, ಇನ್ನುಳಿದ ಐಎಫ್‌ಎಸ್‌ ಮತ್ತು ನಿವೃತ್ತ ಐಎಎಸ್‌ ಅಧಿಕಾರಿಗಳನ್ನು ಪ್ರಕರಣದಿಂದ ಕೈಬಿಟ್ಟಿರುವುದು ಎಫ್‌ಐಆರ್‌ನಿಂದ ಗೊತ್ತಾಗಿದೆ.

"ಗಣಿಗಾರಿಕೆ ನಡೆಸಲು ಪರಿಸರ ವಿಮೋಚನಾ ಪತ್ರ ಪಡೆಯುವ ಮುನ್ನ ಪರಿಸರ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಂದ ಎನ್‌ಒಸಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಆದರೆ, ಐಎಫ್‌ಎಸ್‌ ಅಧಿಕಾರಿ ರಾಮಚಂದ್ರ ಮತ್ತು ಪರಿಸರ ವಿಮೋಚನಾ ಸಮಿತಿಯ ಸದಸ್ಯರು ಸ್ಥಳೀಯ ಅರಣ್ಯ ಅಧಿಕಾರಿಗಳಿಂದ ಯಾವುದೇ ಎನ್‌ಓಸಿ ಪಡೆಯದೆ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ," ಎಂದು ದೂರಿನಲ್ಲಿ ದಿನೇಶ್‌ ಕಲ್ಲಹಳ್ಳಿ ವಿವರಿಸಿದ್ದಾರೆ.

ಇದನ್ನೂ ಓದಿ : ಅಕ್ರಮ ಕಲ್ಲು ಗಣಿಗಾರಿಕೆ; ಮಾಲೂರು ಕಾಂಗ್ರೆಸ್‌ ಶಾಸಕರಿಗೆ ೧೫ ಕೋಟಿ ರು. ದಂಡ

ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರದೇಶ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರದೇಶದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿದೆ. ಹೀಗಾಗಿ, ಅರಣ್ಯ ಇಲಾಖೆಯಿಂದ ಮತ್ತೊಮ್ಮೆ ಅಭಿಪ್ರಾಯ ಪಡೆಯಬೇಕು ಎಂದು ಗಣಿ ಇಲಾಖೆಯ ಕಚೇರಿ ಅಧೀಕ್ಷಕರು ಟಿಪ್ಪಣಿ ಹಾಕಿದ್ದರು. ಆದರೂ, ರಾಮನಗರದ ಅಂದಿನ ಜಿಲ್ಲಾಧಿಕಾರಿ ಎಫ್‌ ಆರ್‌ ಜಮಾದಾರ್‌ ಅವರು ಈ ಪ್ರಕರಣದಲ್ಲಿ ವಿಶೇಷ ಆಸಕ್ತಿ ವಹಿಸಿ ಗಣಿಗಾರಿಕೆ ಮುಂದುವರಿಸಲು ಅನುಮತಿ ನೀಡಲು ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದರು ಎಂಬ ಅಂಶ ದೂರಿನಿಂದ ತಿಳಿದುಬಂದಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವಿಭಾಗ, ಕೋಡಿಹಳ್ಳಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಆನೆ ಹಾಗೂ ಮಾನವ ಸಂಘರ್ಷ ವಿಪರೀತವಾಗಿದೆ. ಅರಣ್ಯ ಪ್ರದೇಶದಿಂದ ೬೫೦ ಮೀಟರ್‌ ಅಂತರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯೇ ಇದಕ್ಕೆ ಕಾರಣ. ಈ ಸಂಗತಿ ಗೊತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಗಣಿ ಮಾಲೀಕರೊಂದಿಗೆ ಶಾಮೀಲಾಗಿ ಪರಿಸರ ವಿಮೋಚನಾ ಪತ್ರ ನೀಡಲು ನೆರವಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಟ್ವಿಟರ್ ಸ್ಟೇಟ್ | ಅಮ್ನೆಸ್ಟಿ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ
Editor’s Pick More